ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿತ್ತನೆ ಯಂತ್ರ ಅನ್ನದಾತರಿಗೆ ವರದಾನ

ವೈಜ್ಞಾನಿಕ ವಿಧಾನದಡಿ ಬಿತ್ತನೆ: ಅನ್ನದಾತರಿಗೆ ಹಣ ಉಳಿತಾಯ
Last Updated 28 ಜೂನ್ 2016, 11:00 IST
ಅಕ್ಷರ ಗಾತ್ರ

ಚಾಮರಾಜನಗರ: ಕೂಲಿಯಾಳು ಸಮಸ್ಯೆ, ದುಬಾರಿ ವೆಚ್ಚದ ಸುಳಿಗೆ ಸಿಲುಕಿರುವ ರೈತರಿಗೆ ಬಿತ್ತನೆ ಯಂತ್ರ ವರದಾನವಾಗಿದೆ. ಕೃಷಿ ಇಲಾಖೆ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯಡಿ ಜಿಲ್ಲೆಯ ರೈತರಿಗೆ ಬಿತ್ತನೆ ಯಂತ್ರದ ಪ್ರಯೋಜನ ಕುರಿತು ತಿಳಿವಳಿಕೆ ಮೂಡಿಸುವ ಪ್ರಯತ್ನ ನಡೆದಿದೆ. ಈ ಯಂತ್ರದ ಮೂಲಕ ಶೇಂಗಾ, ಅಲಸಂದೆ, ಸೂರ್ಯಕಾಂತಿ, ಉದ್ದು ಸೇರಿದಂತೆ ಎಲ್ಲ ಬಿತ್ತನೆಬೀಜವನ್ನು ವೈಜ್ಞಾನಿಕ ಕ್ರಮದಲ್ಲಿ ಬಿತ್ತನೆ ಮಾಡಬಹುದು.

1 ಎಕರೆಯಲ್ಲಿ ಶೇಂಗಾ ಬಿತ್ತನೆಗೆ 2 ನೇಗಿಲು, 2 ಹೆಣ್ಣಾಳು ಅಗತ್ಯವಿದೆ. ಜತೆಗೆ, ಕುಟುಂಬದ ಸದಸ್ಯರೂ ಬಿತ್ತನೆಯಲ್ಲಿ ತೊಡಗಬೇಕಿದೆ. ದಿನ ವೊಂದಕ್ಕೆ ಕೇವಲ 1 ಎಕರೆಯಲ್ಲಿ ಬಿತ್ತನೆ ಮಾತ್ರ ಮಾಡಲು ಸಾಧ್ಯ. ಇದಕ್ಕೆ ₹ 1,500 ವೆಚ್ಚವಾಗಲಿದೆ. ಬೇಡಿಕೆಯ ದಿನಗಳಲ್ಲಿ ಈ ವೆಚ್ಚವು ₹ 1,700 ದಾಟಲಿದೆ. ಇದು ಅನ್ನದಾತರಿಗೆ ಅಕ್ಷರಶಃ ಹೊರೆ.

ಬಿತ್ತನೆ ಯಂತ್ರದ ಮೂಲಕ 1 ಗಂಟೆಯಲ್ಲಿ 1 ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಬಹುದು. ಇದಕ್ಕಾಗಿ ರೈತರು ಕೇವಲ ₹ 450 ಬಾಡಿಗೆ ಪಾವತಿಸಿದರೆ ಸಾಕು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ರೈತರಿಗೆ ಬಾಡಿಗೆ ಕೃಷಿ ಉಪಕರಣ ವಿತರಣೆಗಾಗಿ ಹನೂರು, ಬೇಗೂರು, ಹರದನಹಳ್ಳಿ ಮತ್ತು ಅಗರದಲ್ಲಿ ಕೇಂದ್ರ ತೆರೆಯಲಾಗಿದೆ.

ಈ ಕೇಂದ್ರಗಳಲ್ಲಿ 5 ಬಿತ್ತನೆ ಯಂತ್ರಗ ಳಿದ್ದು, ರೈತರ ಬೇಡಿಕೆಗೆ ಅನುಗುಣವಾಗಿ ಪೂರೈಸಲಾಗುತ್ತಿದೆ. ಪ್ರಸ್ತುತ ತಮಿಳುನಾಡಿನ ಬಿತ್ತನೆ ಯಂತ್ರಗಳು ಕೂಡ ಜಿಲ್ಲೆಗೆ ಲಗ್ಗೆ ಇಟ್ಟಿವೆ. ಈ ಯಂತ್ರದ ಮಾಲೀಕರು 1 ಗಂಟೆ ಬಿತ್ತನೆಗೆ ₹ 900 ದರ ನಿಗದಿಪಡಿಸುತ್ತಾರೆ.

ಹಾಗಾಗಿ, ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲು ಕೃಷಿ ಇಲಾಖೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಕ್ರಮವಹಿಸಲಾಗಿದೆ. ಈಗಾಗಲೇ, ಗುಂಡ್ಲುಪೇಟೆ ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಬಿತ್ತನೆ ಯಂತ್ರ ಬಳಸಿಕೊಂಡು ಸೂರ್ಯಕಾಂತಿ ಬಿತ್ತನೆ ಮಾಡಲಾಗಿದೆ. ಈಗ ಚಾಮರಾಜ ನಗರ ತಾಲ್ಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ಕೆಲವು ರೈತರು ಬಿತ್ತನೆ ಯಂತ್ರ ಬಳಸಿಕೊಂಡು ಶೇಂಗಾ ಬಿತ್ತನೆ ಮಾಡುತ್ತಿದ್ದಾರೆ.

‘ನೇಗಿಲು ಬಳಸಿಕೊಂಡು ಉಳುಮೆ ಮಾಡಿದರೆ ಹೆಚ್ಚಿನ ಸಮಯ ತೆಗೆದು ಕೊಳ್ಳುತ್ತದೆ. ಈಗ ನೇಗಿಲುದಾರರ ಸಂಖ್ಯೆಯೂ ಕಡಿಮೆಯಾಗಿದೆ. ಹಾಗಾಗಿ, ಬಿತ್ತನೆ ಯಂತ್ರ ಬಳಸಿಕೊಂಡಿದ್ದೇನೆ. ನನ್ನ ನಿರೀಕ್ಷೆಗೆ ತಕ್ಕಂತೆ ಶೇಂಗಾ ಬಿತ್ತನೆ ಆಗಿದೆ. ಸಮಯ, ಹಣವೂ ಉಳಿತಾಯವಾಗಿದೆ’ ಎಂದು ಹೆಗ್ಗೋಠಾರದ ರೈತ ಬಸವಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಸಹಾಯಧನ ಲಭ್ಯ: ‘ಬಿತ್ತನೆ ಯಂತ್ರಕ್ಕೆ ಮಾರುಕಟ್ಟೆಯಲ್ಲಿ ₹ 68 ಸಾವಿರ ಬೆಲೆಯಿದೆ. ಸಾಮಾನ್ಯವರ್ಗದ ರೈತರು ಈ ಯಂತ್ರ ಖರೀದಿಸಿದರೆ ಕೃಷಿ ಇಲಾಖೆ ಯಿಂದ ₹ 29 ಸಾವಿರ ಸಹಾಯಧನ ಲಭಿಸಲಿದೆ. ಪರಿಶಿಷ್ಟ ಜಾತಿ ಮತ್ತು ಪಂಗ ಡದ ರೈತರಿಗೆ ₹ 57,200 ಸಹಾಯಧನ ಲಭಿಸಲಿದೆ. ಆಸಕ್ತ ರೈತರಿಗೆ ಆದ್ಯತೆ ಮೇರೆಗೆ ಯಂತ್ರ ಖರೀದಿಸಿ ಕೊಡಲು ಇಲಾಖೆ ಕ್ರಮ ಕೈಗೊಂಡಿದೆ’ ಎಂದು ಕೃಷಿ ಇಲಾಖೆಯ ಉಪ ನಿರ್ದೇಶಕ ಜಿ.ಎಚ್‌. ಯೋಗೇಶ್‌ ತಿಳಿಸಿದರು.

‘ಸಾಧಾರಣವಾಗಿ 1 ಎಕರೆಗೆ ರೈತರು 40 ಕೆಜಿ ಶೇಂಗಾ ಬಿತ್ತನೆ ಮಾಡುತ್ತಾರೆ. ಈ ಯಂತ್ರ ಬಳಸಿದರೆ 1 ಎಕರೆಗೆ 25 ಕೆಜಿ ಶೇಂಗಾ ಸಾಕಾಗುತ್ತದೆ. ಮುಂಗಾರು ಹಂಗಾಮಿನಡಿ ಜಿಲ್ಲೆಯ 4 ಬಾಡಿಗೆ ಕೃಷಿ ಉಪಕರಣಗಳ ವಿತರಣಾ ಕೇಂದ್ರಗಳ ಮೂಲಕ ರೈತರಿಗೆ ಬಿತ್ತನೆ ಯಂತ್ರ ಪೂರೈಸಲು ಕ್ರಮವಹಿಸಲಾಗಿದೆ’ ಎಂದು ತಿಳಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT