ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿದಿರಿನೊಳಗೆ ಬದುಕು ಕಟ್ಟುವ ಕಪ್ಪೆ!

ಪಶ್ಚಿಮ ಘಟ್ಟದ ಕಾಲಕ್ಕಾಡ್ - ಮುಂಡಾಂತುರೈ ಹುಲಿ ಅಭಯಾರಣ್ಯ ಪ್ರದೇಶದಲ್ಲಿ ಸಂಶೋಧನೆ

ಪಶ್ಚಿಮ ಘಟ್ಟದ ಅರಣ್ಯ ಪ್ರದೇಶ, ಮಳೆಗಾಲದ ರಾತ್ರಿಯ ಮಳೆ, ಅದರ ಸದ್ದನ್ನು ಮೀರಿಸುವಂತೆ ನಿಶಾಚರಿ ಜೀವಿಗಳು ಹೊಮ್ಮಿಸುವ ನಿರಂತರ ಶಬ್ದ... ಆ ಶಬ್ದಗಳ ನಡುವೆ ಅಲ್ಲೆಲ್ಲೋ ದೂರದಲ್ಲಿ ತನ್ನ ಸಂಗಾತಿಯನ್ನು ಕರೆಯುತ್ತಿರುವ ಕಪ್ಪೆಯ ಕೂಗು ನಮ್ಮ ಗಮನ ಸೆಳೆಯುತ್ತದೆ.

ಆ ಕೂಗಿನ ಜಾಡನ್ನು ಹಿಡಿದು ಹೊರಟರೆ ಅದು ನಮ್ಮನ್ನು ನೀಳವಾದ ಬಿದಿರಿನ ಸಮೂಹದ ಎದುರು ತಂದು ನಿಲ್ಲಿಸುತ್ತದೆ. ಅದರಲ್ಲಿನ ಒಂದು ಬಿದಿರಿನ ಗಳದ ಮೇಲೆ ಕೂತು ಕೂಗುತ್ತಿದ್ದ ಆ ಬಿಳಿ ಚುಕ್ಕಿ ಮೈಯ ಹಸಿರು ಮರಗಪ್ಪೆ (ಮರಗಳ ಆಶ್ರಯದಲ್ಲಿ ಜೀವಿಸುವ ಕಪ್ಪೆಗಳ ಒಂದು ಪ್ರಬೇಧ) ಸಾವಕಾಶವಾಗಿ ಆ ಗಳದಲ್ಲಿನ ಒಂದು ರಂಧ್ರದ ಮೂಲಕ ಬಿದಿರಿನ ಒಳಗೇ ಸೇರಿಕೊಂಡುಬಿಡುತ್ತದೆ.

ಅದರ ಕೂಗಿಗೆ ಆಕರ್ಷಿತಗೊಂಡ ಹೆಣ್ಣು ಕಪ್ಪೆಯೂ ಆ ರಂಧ್ರದ ಮೂಲಕ ಗಂಡು ಕಪ್ಪೆಯನ್ನೇ ಹಿಂಬಾಲಿಸುತ್ತದೆ. ಅವುಗಳ ಮಿಲನದ ನಂತರ ಆ ಬಿದಿರಿನ ಕೊಳವೆಯೊಳಗೇ ಮೊಟ್ಟೆಯನ್ನಿಡುವ ಹೆಣ್ಣು ಕಪ್ಪೆ ಗಂಡಿಗೆ ಅದರ ಜವಾಬ್ದಾರಿಯನ್ನು ವಹಿಸಿ ತಾನು ನಿರ್ಗಮಿಸುತ್ತದೆ. ಕಪ್ಪೆಗಳ ಜೀವನಚಕ್ರದ ಮಧ್ಯಂತರ ಹಂತವನ್ನು ಅನುಸರಿಸದ ಆ ಮೊಟ್ಟೆಗಳು ನೇರವಾಗಿ ಕಪ್ಪೆ ಮರಿಗಳಾಗಿ ಜನ್ಮ ತಾಳುತ್ತವೆ.

ವಿಜ್ಞಾನ ಜಗತ್ತಿಗೆ ಇದುವರೆಗೂ ತಿಳಿಯದೇ ಇದ್ದ ಕಪ್ಪೆಗಳ ಜೀವನ ಶೈಲಿಯ ಈ ವಿಚಿತ್ರ ಕೌತುಕವನ್ನು ಸಂಶೋಧಕರ ತಂಡವೊಂದು ವರದಿ ಮಾಡಿದೆ. ವಿನಾಶದ ಅಂಚಿನಲ್ಲಿರುವ ಜೀವಿ: ಪಶ್ಚಿಮ ಘಟ್ಟದ ಕಾಲಕ್ಕಾಡ್ - ಮುಂಡಾಂತುರೈ ಹುಲಿ ಅಭಯಾರಣ್ಯದ ಪ್ರದೇಶದಲ್ಲಿ ಸಂಶೋಧನೆ ಕೈಗೊಂಡ ಸಿಂಗಪುರ ವಿಶ್ವವಿದ್ಯಾಲಯದ ಶೇಷಾದ್ರಿ, ಮಾರ್ಗದರ್ಶಕರಾದ ಡೇವಿಡ್ ಬಿಕ್‌ಫೋರ್ಡ್ ಹಾಗೂ ಡಾ. ಕೆ.ವಿ. ಗುರುರಾಜ ಅವರ ತಂಡವು ಈ ಅಪರೂಪದ ಸಂಗತಿಯನ್ನು ಅಂತರ ರಾಷ್ಟ್ರೀಯ ಜೈವಿಕ ಸಂಶೋಧನಾ ಪತ್ರಿಕೆಯಲ್ಲಿ ಬಹಿರಂಗಪಡಿಸಿದೆ.

ಮೂರು ಸೆಂಟಿಮೀಟರ್‌ಗಿಂತಲೂ ಕಡಿಮೆ ಗಾತ್ರದ ಬಿಳಿ ಚುಕ್ಕೆ ಮೈಯ ಈ ಜಾತಿಯ ಮರಗಪ್ಪೆಗಳ ಸಂತತಿಯು ಪೂರ್ತಿಯಾಗಿ ಅಳಿದು ಹೋಗಿದೆ ಎಂದೇ ಭಾವಿಸಲಾಗಿತ್ತು. ಕೆಲವು ವರ್ಷಗಳ ಹಿಂದಷ್ಟೇ ಇದರ ಇರುವಿಕೆಯನ್ನು ಅದೇ ಅಭಯಾರಣ್ಯದಲ್ಲಿ ಪತ್ತೆ ಹಚ್ಚಿ ವರದಿ ಮಾಡಿದ್ದರಿಂದ ಪ್ರಸ್ತುತ ಈ ಕಪ್ಪೆ ಪ್ರಬೇಧವನ್ನು ‘ವಿನಾಶದ ಅಂಚಿನಲ್ಲಿರುವ ಜೀವಿ’ ಎಂದು ‘ನಿಸರ್ಗ ಮತ್ತು ನೈಸರ್ಗಿಕ ಸಂಪನ್ಮೂಲಗಳ ಒಕ್ಕೂಟ’ವು ಪಟ್ಟಿಮಾಡಿದೆ.

ವಿಶೇಷ ಜಾತಿಯ ಬಿದಿರು ಆಯ್ಕೆ: ಈ ಜಾತಿಯ ಕಪ್ಪೆಗಳು ಜೀವಂತವಾಗಿರುವ ಹಾಗೂ ಕಿರುಬೆರಳಿನಷ್ಟು ಗಾತ್ರದ ನೈಸರ್ಗಿಕ ರಂಧ್ರಗಳಿರುವಂಥ ವಿಶೇಷ ಜಾತಿಯ ಬಿದಿರನ್ನು ಆಯ್ದುಕೊಳ್ಳುತ್ತವೆ. ಕೊಳಲನ್ನು ಮಾಡಲು ಇದೇ ಜಾತಿಯ ಬಿದಿರನ್ನು ಬಳಸುತ್ತಾರೆ. ಗಂಡು ಕಪ್ಪೆಯ ಕೂಗಿನ ಸೆಳೆತಕ್ಕೆ ಬಿದಿರಿನ ಕೊಳ ವೆಯೊಳಗೆ ಬಂದು ಸೇರುವ ಹೆಣ್ಣು, ಸುಮಾರು ಐದರಿಂದ ಎಂಟು ಮೊಟ್ಟಗಳನ್ನು ಇಡುತ್ತದೆ. ನಂತರ ಅವುಗಳನ್ನು ತೇವಭರಿತ ಇರುವಂತೆ ನೋಡಿಕೊಂಡು ಇರುವೆಗಳಂಥ ವೈರಿಗಳಿಂದ ರಕ್ಷಿಸುವ ಹೊಣೆ ಗಂಡಿನದ್ದು.

ಬೇರೆ ಹೆಣ್ಣುಗಪ್ಪೆಗಳೂ ಈ ಗಂಡಿನೊಡನೆ ಕೂಡಿ ಸಂತಾನಾಭಿವೃದ್ಧಿಯಲ್ಲಿ ತೊಡಗುವ ಸಾಧ್ಯತೆಗಳೂ ಇವೆ! ಎಲ್ಲಾ ಮೊಟ್ಟೆಗಳನ್ನು ಹಾಗೂ ಮರಿಗಳನ್ನು ಜವಾಬ್ದಾರಿಯಿಂದ ಸಂರಕ್ಷಿಸುವ ಗಂಡುಕಪ್ಪೆಯು ಜೀವ ಜಗತ್ತಿಗೆ ಆದರ್ಶ ಪಾಲಕರ ಉತ್ತಮ ನಿದರ್ಶನವನ್ನು ನಮ್ಮ ಮುಂದಿಡುತ್ತದೆ.

ಅರೆಮರಿ ಹಂತ: ಕಪ್ಪೆಗಳ ಜೀವನ ಚಕ್ರದಲ್ಲಿ ಮೊಟ್ಟೆಯ ನಂತರದ ‘ಅರೆಮರಿ’ ಹಂತವನ್ನು ‘ಟ್ಯಾಡ್‌ಪೋಲ್ಸ್‌’ ಎಂದು ಕರೆಯ ಲಾಗುತ್ತದೆ. ಈ ಅರೆಮರಿಗಳು ಪೂರ್ಣ ಪ್ರಮಾಣದ ಮರಿಗಳಾಗಿ ಹೊರಬರು ವವರೆಗೂ ಅವಕ್ಕೆ ಹರಿವ ನೀರಿನ ಮೂಲಗಳು ಅತೀ ಅವಶ್ಯ. ಆದರೆ ಬಿಳಿ ಚುಕ್ಕೆ ಮರಗಪ್ಪೆಗಳ ಜೀವನಚಕ್ರದ ಆಶ್ಚರ್ಯದ ಸಂಗತಿಯೆಂದರೆ, ಮೊಟ್ಟೆಗಳು ಅರೆಮರಿಗಳ ಹಂತವಿಲ್ಲದೆಯೇ ನೇರವಾಗಿ ಮರಿಗಳಾಗುವುದು. ಆ ಮೂಲಕ ಹರಿವ ನೀರಿನ ಅವಲಂಬನೆಯಿಂದ ಮುಕ್ತವಾಗಿರುವ ಈ ಕಪ್ಪೆಗಳು ಜೀವ ವಿಕಾಸದ ಹಾದಿಯಲ್ಲಿ ಮುಂದುವರೆ ಯುತ್ತ ತಮ್ಮ ವಾಸಸ್ಥಳದ ಪರಿಧಿಯನ್ನು ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿವೆ.

ಕಪ್ಪೆಗಳು ಮೊಟ್ಟೆಯಿಡುವ ಜಾಗ, ಅವುಗಳ ಬೆಳವಣಿಗೆಯ ವಿಧಾನ ಹಾಗೂ ಅವುಗಳ ಸಂರಕ್ಷಣೆಯ ಸಂಗತಿಗಳ ಆಧಾರಗಳ ಮೇಲೆ ಕಪ್ಪೆಗಳ ಸಂತಾನೋತ್ಪತ್ತಿಯನ್ನು ವರ್ಗೀಕರಿಸ ಲಾಗುತ್ತದೆ. ಮೊಟ್ಟೆಯಿಂದ ನೇರವಾಗಿ ಮರಿಯಾಗುವ ಬಿಳಿ ಚುಕ್ಕಿ ಮರಗಪ್ಪೆಗಳ ಸಂತಾನೋತ್ಪತ್ತಿಯನ್ನು 41ನೇ ವರ್ಗ ಎಂದು ಗುರುತಿಸಲಾಗಿದೆ.

‘ಯಾವುದೇ ಜೀವ ವಿಕಸನವನ್ನು ಅರ್ಥೈಸಿಕೊಳ್ಳಬೇಕಾದರೂ ಅದರ ನೈಸರ್ಗಿಕ ಇತಿಹಾಸವನ್ನು ಗಮನಸ ಬೇಕಾದ್ದು ಅತ್ಯವಶ್ಯಕ. ಸಂತಾನೋತ್ಪ ತ್ತಿಯ ವೈವಿಧ್ಯತೆ ಹಾಗೂ  ಉಭಯ ವಾಸಿಗಳ ಇಂಥ ಅದ್ಭುತ ನಡತೆಗೆ ಕಾರಣವಾದ ಜೀವ ವಿಕಸನದ ಹಾದಿಯ ಬಗೆಗಿನ ಅನೇಕ ಕುತೂಹಲ ಭರಿತ ಪ್ರಶ್ನೆಗಳಿಗೆ ಈ ಆವಿಷ್ಕಾರವು ಸೈದ್ಧಾಂತಿಕ ವೇದಿಕೆಯನ್ನು ಒದಗಿಸಿದೆ’ ಎನ್ನುತ್ತಾರೆ ಡೇವಿಡ್ ಬಿಕ್‌ಫೋರ್ಡ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT