ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿದಿರಿನ ಪೀಠೋಪಕರಣ ಹಜಾರಕ್ಕೆ ಆಭರಣ

Last Updated 7 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಸರ್ವಜ್ಞ ಕವಿ ‘ಬಿದಿರು ಅಂದಣವಕ್ಕು ಬಿದಿರು ಸತ್ತಿಗೆಯಕ್ಕು ಅಂದವಿಹ ಮನೆಗೆ ಸಿಂಗಾರವಕ್ಕು’ ಎಂದು ಬಹುಕಾಲದ ಹಿಂದೆಯೇ ಹೊಗಳಿದ್ದಾನೆ. ಒಂದು ಕಾಲದಲ್ಲಿ ಬಡವರ ಮನೆಗಳ ಚಾವಣಿಗಳನ್ನು ಬಿದಿರಿನಿಂದಲೇ ಕಟ್ಟುತ್ತಿದ್ದರು. ಕನಿಷ್ಠವೆಂದರೆ ಕಟ್ಟಿಗೆಯ ಹೊಗೆ ತಾಗುವ ಮನೆಗಳಲ್ಲಿ ಅದು ನೂರಾರು ವರ್ಷ ಮುಕ್ಕಾಗದೆ ಸುಭದ್ರವಾಗಿರುತ್ತಿತ್ತು. ಮನೆಗಳಿಗೆ ಮರದ ಸಾಮಗ್ರಿಗಳ ಬಳಕೆ ಹೆಚ್ಚುತ್ತ ಹೋದಂತೆ, ಕಾಂಕ್ರೀಟಿನ ತಾರಸಿ ಮನೆಗಳು ಅಧಿಕವಾಗುತ್ತಿದ್ದಂತೆ ಬಿದಿರಿನ ಬಳಕೆ ಕ್ರಮಶಃ ದೂರ ಸರಿಯಿತು. ಮಲೆನಾಡಿನ ಸಂರಕ್ಷಿತ ಅರಣ್ಯಗಳಲ್ಲಿ ಯಾವುದಕ್ಕೂ ಬಳಸದೆ ಹಾಳಾಗುವ ಸಾಲು ಸಾಲು ಬಿದಿರಿನ ಲೆಕ್ಕ ಹಾಕಿದರೆ ಕೋಟ್ಯಂತರ ಮೌಲ್ಯದ ಲಾಭವನ್ನು ತಿರಸ್ಕರಿಸಿರುವುದು ಸ್ಪಷ್ಟವಾಗಿ ಕಾಣುತ್ತದೆ.

ಏಕೆಂದರೆ ಚೀನಾ, ಜಪಾನ್, ಇಂಡೊನೇಷ್ಯಾ, ಬಾಲಿ ಮೊದಲಾದೆಡೆ ತಾನಾಗಿ ಬೆಳೆಯುವ ನಿಸರ್ಗದ ಬಿದಿರು ಎಂಬ ಕೊಡುಗೆ ಅಗಣಿತ ಸಂಪತ್ತನ್ನೇ ತಂದು ಕೊಡುತ್ತಿದೆ. ಒಂದಿಂಚು ಬಿದಿರೂ ಅಲ್ಲಿ ವ್ಯರ್ಥವಾಗದು. ಮರ ನೆಟ್ಟು ಬೆಳೆಸಿ ಬಳಕೆ ಮಾಡಬೇಕಿದ್ದರೆ ಹತ್ತಾರು ವರ್ಷ ಕಾಯಬೇಕು. ಬಿದಿರು ಹಾಗಲ್ಲ. ಕೃಷಿ ಉಪಚಾರಗಳಿಲ್ಲದೆ ಬೆಳೆಯುತ್ತದೆ. ಬಹು ಬೇಗನೆ ಉಪಯೋಗಕ್ಕೆ ಸಿದ್ಧವಾಗುತ್ತದೆ. ಬಿದಿರು ಈ ದೇಶಗಳಲ್ಲಿ ಈಗ ಹೆಚ್ಚು ಬಳಕೆಯಾಗುತ್ತಿರುವುದು ಮನೆ ಬಳಕೆಯ ವೈವಿಧ್ಯಮಯ ಪೀಠೋಪಕರಣಗಳಿಗಾಗಿ.

ಇದರಿಂದ ಏನೆಲ್ಲ ಸಿದ್ಧವಾಗುತ್ತದೆ ಎಂದು ಕೇಳಿದರೆ ಪಟ್ಟಿ ದೊಡ್ಡದಿದೆ. ವರಾಂಡಾಗೆ ಶೋಭೆ ನೀಡುವ ಆರಾಮ ಕುರ್ಚಿಗಳಲ್ಲಿ ಹತ್ತಾರು ಬಗೆ. ಊಟಕ್ಕೆ ಕುಳಿತುಕೊಳ್ಳಲು, ಕಂಪ್ಯೂಟರ್ ವೀಕ್ಷಣೆಗೆ, ಬೇಕಾದೆಡೆಗೆ ತಿರುಗಿಸಲು ಅನುಕೂಲಕರವಾದ ವಿನ್ಯಾಸದಲ್ಲಿ ಒಂದಕ್ಕೊಂದು ಪೈಪೋಟಿ ನೀಡುವಂತಹ ಕುರ್ಚಿಗಳೂ ತಯಾರಾಗುತ್ತವೆ. ಬೆಡ್‌ರೂಮಿಗೆ ಕಳೆ ಕೊಡುವ ಮಂಚಗಳೂ ಪೂರ್ಣ ಬಿದಿರಿನಿಂದಲೇ ಜನ್ಮ ತಳೆಯುತ್ತಿವೆ. ಕಲಾತ್ಮಕ ದೃಷ್ಟಿಕೋನವೂ ಇರುವ ಈ ಪೀಠೋಪಕರಣಗಳನ್ನು ಬಿದಿರಿನಿಂದ ತಯಾರಿಸಿದ್ದೆಂಬ ಕಲ್ಪನೆಯೇ ಬರದೆ ಮರದ ಸಾಮಗ್ರಿಯೆಂದೇ ಭಾವಿಸುವಷ್ಟು ನಾಜೂಕಾಗಿವೆ. ಊಟದ ಮೇಜುಗಳು, ಸಲಕರಣೆ ಸಂಗ್ರಹದ ಅಲ್ಮೈರಾಗಳು, ಪುಸ್ತಕದ ಕಪಾಟುಗಳು, ಕಿಟಕಿ ಬಾಗಿಲಿನ ಚೌಕಟ್ಟು ಮತ್ತು ಬಾಗಿಲುಗಳು, ಡ್ರೆಸಿಂಗ್ ಟೇಬಲುಗಳು, ವಿರಾಮದ ಮನೆಗಳು ಬಿದಿರನ್ನೇ ಆಧಾರವಾಗಿ ಬಳಸಿ ಮನೆಗಳನ್ನು ಸೇರುತ್ತಿವೆ.

ಜಮೈಕಾದಿಂದ ಬರುವ ಮಂಚಗಳಲ್ಲಿ ನೂರಾರು ವಿಧಗಳಿವೆ. ಬಿದಿರಿನ ಹಾಸಿಗೆ, ಲಲನೆಯರಿಗಾಗಿ ಪೂರ್ಣ ಬಿದಿರಿನದೇ ಆದ ಕೊಡೆಗಳ ವೈವಿಧ್ಯ ಜಪಾನಿನ ಕೊಡುಗೆ. ಅಸ್ಸಾಮಿನ ಮೃದು ಬಿದಿರಿನ ಇಂತಹ ಸಲಕರಣೆಗಳನ್ನು ಮಾರುವ ವ್ಯಾಪಾರಿಗಳು ಬೆಂಗಳೂರಿನಲ್ಲೂ ಇದ್ದಾರೆ. ಬಲಿತ ಬಿದಿರನ್ನು ಬೇಕಾದ ಅಳತೆಗೆ ಕತ್ತರಿಸಿ, ಸಾಣೆ ಹಿಡಿದು, ಮರದಂತೆಯೇ ತೋರುವ ಬಣ್ಣ ಬಳಿದು, ಕಲಾತ್ಮಕವಾಗಿ ಜೋಡಿಸುವ ಉದ್ಯೋಗ ವಿದೇಶಗಳಲ್ಲಿ ಸಹಸ್ರಾರು ಮಂದಿಗೆ ಬದುಕು ನೀಡಿದೆ. ಇದಕ್ಕಾಗಿ ಯಂತ್ರೋಪಕರಣಗಳಿಲ್ಲದೆಯೇ ಕರಕುಶಲ ಕಲೆಯಾಗಿಯೂ ತಯಾರಿಸಬಹುದು.

ಬಿದಿರಿಗೆ ಗೆದ್ದಲು ಮತ್ತಿತರ ಕೀಟಗಳ ಕಾಟ ವಿರಳವಾದುದರಿಂದ ಮರದ ಹಾಗೆ ಕೀಟನಿರೋಧಕಗಳನ್ನು ವಿಪುಲವಾಗಿ ಲೇಪಿಸುವ ಅಗತ್ಯವಿರುವುದಿಲ್ಲ. ತಾಳಿಕೆ ಬಾಳಿಕೆಯಲ್ಲಿ ಅದು ಮರದ ಉಪಕರಣಗಳಿಗೆ ಸಡ್ಡು ಹೊಡೆಯುವಷ್ಟು ದೃಢವೂ ಆಗಿದೆ. ಮರದ ಹಾಗೆ ಸೀಳುವ ಕೆಲಸವಿಲ್ಲದ ಕಾರಣ ಕಾರ್ಮಿಕರ ಶ್ರಮ ಕಡಿಮೆಯಾಗಿದ್ದು ಮರಕ್ಕಿಂತ ಶೇ 50ರಷ್ಟು ಅಗ್ಗವಾಗಿಯೂ ಸಿಗುತ್ತದೆ. ಮರವನ್ನು ನಾಚಿಸುವಷ್ಟು ಸುಂದರವಾಗಿ ಅದರಿಂದ ಪೀಠೋಪಕರಣಗಳನ್ನು ತಯಾರು ಮಾಡುವ ಕಲೆಯು ಸಿದ್ಧಿಸಿದೆ.

ತ್ವರಿತವಾಗಿ ತಯಾರಾಗುವ ಉತ್ತಮ ಗುಣಮಟ್ಟದ ಉತ್ತಮ ವಿನ್ಯಾಸದ ಬಿದಿರಿನ ಸಾಮಗ್ರಿಗಳ ಉಪಯೋಗ ಅಧಿಕವಾದರೆ ನಮ್ಮಲ್ಲಿ ಬಳಕೆಯಾಗದೆ ಹಾಳಾಗುವ ಬಹುಮೌಲ್ಯದ ಬಿದಿರು ಬಂಗಾರದ ಮೊಟ್ಟೆಯಿಡುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT