ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿದಿರು: ವಿನ್ಯಾಸ ಸೌಂದರ್ಯದ ಚಿಗುರು

Last Updated 2 ಜುಲೈ 2015, 19:30 IST
ಅಕ್ಷರ ಗಾತ್ರ

ಬಿದಿರಿನ ಗಿಡ ಅದೃಷ್ಟ ತರುತ್ತದೆ ಎಂದು ನಂಬಿದವರಿದ್ದಾರೆ. ಈಗ ಅದು ಒಳಾಂಗಣ ವಿನ್ಯಾಸದ ಸೌಂದರ್ಯವನ್ನು ದುಪ್ಪಟ್ಟು ಮಾಡುವ ಪರಿಕರ ಎಂದೂ ಪರಿಗಣಿತವಾಗಿದೆ. ಹಾಲ್, ಊಟದ ಮನೆ, ಅಡುಗೆ ಮನೆ, ಬೆಡ್‌ರೂಮ್ ಅಷ್ಟೇ ಅಲ್ಲದೆ ಬಚ್ಚಲುಮನೆಯನ್ನೂ ಅಲಂಕರಿಸಲು ಈ ದಿನಮಾನದಲ್ಲಿ ಬಿದಿರು ಬಳಕೆಯಾಗುತ್ತಿದೆ.

ಬಿದಿರನ್ನು ಪೀಠೋಪಕರಣ ತಯಾರಿಕೆಯಲ್ಲಿ, ಕಿಟಕಿ ಪರದೆಗಳನ್ನು ರೂಪಿಸಲು, ಸ್ತಂಭಗಳು ಹಾಗೂ ಕಲಾತ್ಮಕ ವಿನ್ಯಾಸಗಳನ್ನು ಮಾಡಲು ವ್ಯಾಪಕವಾಗಿ ಬಳಸುತ್ತಿದ್ದಾರೆ. ಹೊಸತನಕ್ಕೆ ತುಡಿಯುವ ಎಷ್ಟೋ ವಿನ್ಯಾಸಕರಿಗೆ ಅದು ಒದಗಿಬರುತ್ತಿದೆ. ಮನೆಗಳಷ್ಟೇ ಅಲ್ಲದೆ ಕಚೇರಿಗಳ ಒಳಾಂಗಣ ವಿನ್ಯಾಸದಲ್ಲಿಯೂ ಅದಕ್ಕೆ ಮನ್ನಣೆ ಸಿಗುತ್ತಿರುವ ಕಾಲವಿದು. ಹಾಗಿದ್ದೂ ಬಿದಿರಿನ ವಿಷಯದಲ್ಲಿ ಕೆಲವು ತಪ್ಪು ಕಲ್ಪನೆಗಳೂ ಇವೆ. ಏಷ್ಯಾ, ಫೆಂಗ್ ಶುಯಿ ವಿನ್ಯಾಸ ಅಥವಾ ಜೆನ್ ತತ್ವಗಳ ಪ್ರಕಾರ ‘ಬಿದಿರು ನಾನ್ಯಾರಿಗಲ್ಲದವಳು’ ಎಂಬ ಜಾನಪದ ಗೀತೆಗೆ ಅರ್ಥವಿದೆ.

ಬೆತ್ತ, ಕುರ್ಚಿ, ಸಣ್ಣಕೋಣೆಗಳ ಸಿಂಗಾರ, ಪೀಠೋಪಕರಣ ಹೀಗೆ ಬಿದಿರಿನ ಬಳಕೆ ವ್ಯಾಪಕ. ಇವತ್ತು ಬಿದಿರಿಗೆ ಸಮಕಾಲೀನ ವಿನ್ಯಾಸದ ಪ್ರಮುಖ ಪರಿಕರದ ಸ್ಥಾನ ಸಂದಿದೆ. ಸ್ಥಳ ವಿಭಜಕವಾಗಿಯೂ ಅದನ್ನು ಹಲವು ಬಗೆಗಳಲ್ಲಿ ಉಪಯೋಗಿಸುತ್ತಿದ್ದಾರೆ. ಅಷ್ಟೇ ಏಕೆ, ಬಿದಿರಿನ ಬಟ್ಟೆಗಳು, ರಗ್‌ಗಳು, ಶೀಟ್‌ಗಳೂ ತಯಾರಾಗುತ್ತಿವೆ. ಹಿಂದೆ ಬಿದಿರು ಕೆಲವು ಕೀಟಗಳನ್ನು ಆಕರ್ಷಿಸುತ್ತದೆ ಎಂಬ ಅಭಿಪ್ರಾಯವಿತ್ತು. ಆದರೀಗ ಅವುಗಳ ಬಳಿ ಯಾವ ಕೀಟವೂ ಸುಳಿಯದಂತೆ ಸಂಸ್ಕರಿಸಲಾಗುತ್ತದೆ.

ಪರಿಸರ ಸ್ನೇಹಿ ಹಾಗೂ ನಿರ್ವಹಣಾ ವೆಚ್ಚ ದುಬಾರಿ ಅಲ್ಲ ಎನ್ನುವ ಕಾರಣಕ್ಕೆ ಬಿದಿರಿಗೆ ಬೆಲೆಬಾಳುವ ಮರಗಳ ಪೀಠೋಪಕರಣಗಳಿಗಿಂತ ಬೇಡಿಕೆ ಹೆಚ್ಚಾಗಿದೆ. ಬಿದಿರು ಬೇಗ ಬೆಳೆಯುವುದರಿಂದ ಕಡಿದರೆ ನಾಶವಾದೀತು ಎಂಬ ಆತಂಕವಿಲ್ಲ. ದೀರ್ಘ ಕಾಲ ಬಾಳಿಕೆ ಬರುವ, ಎಂಥ ವಿನ್ಯಾಸಕ್ಕೂ ಒಗ್ಗಬಲ್ಲ, ಹಗುರವಾದ ಬಿದಿರು ಒಂದು ವಿಧದಲ್ಲಿ ವಿನ್ಯಾಸಕರ ಕನಸಿನ ಪರಿಕರ.

ಹೊರಾಂಗಣದಲ್ಲಿ ಯಾವುದಾದರೂ ಕುರ್ಚಿ ಸೋಫಾ ಇಟ್ಟಿರುವವರು ಮಳೆಗಾಲದಲ್ಲಿ ನೀರಿನಿಂದ ನೆಂದುಬಿಟ್ಟರೆ ಹಾಳಾಗುತ್ತದೆ ಎಂದು ಪ್ಲಾಸ್ಟಿಕ್ ಹೊದಿಕೆಗಳಿಂದ ಮುಚ್ಚುವುದುಂಟು. ಬಿದಿರಿನ ಪೀಠೋಪಕರಣ ನೆಂದರೂ ಹಾಳಾಗದೇ ಇರುವುದರಿಂದ ಸಂರಕ್ಷಣೆಯ ಉಸಾಬರಿಯೇ ಇಲ್ಲ. ಈ ಗುಣದಿಂದಾಗಿಯೇ ಬಚ್ಚಲುಮನೆಯ ಪೀಠೋಪಕರಣ ತಯಾರಿಕೆಯಲ್ಲಿ ಬಿದಿರಿಗೆ ದಿನೇದಿನೇ ಹೆಚ್ಚು ಬೇಡಿಕೆ ಕುದುರುತ್ತಿದೆ. ಶೆಲ್ಫ್‌ಗಳು, ಡೈನಿಂಗ್ ಸೆಟ್‌ಗಳು, ಮಕ್ಕಳ ಪೀಠೋಪಕರಣ, ಆರಾಮ ಕುರ್ಚಿಗಳು, ಬಾರ್ ಕೌಂಟರ್‌ಗಳು, ಡ್ರೆಸಿಂಗ್ ಟೇಬಲ್ ಎಲ್ಲವುಗಳಿಗೂ ಬಿದಿರು ಮೂಲ ಸಾಮಗ್ರಿಯಾಗುತ್ತಿರುವ ಕಾಲವಿದು.

ಅಷ್ಟೇ ಏಕೆ, ಟೈಲ್ಸ್ ಮೇಲೆ ಅಲಂಕಾರಿಕ ಪರಿಕರವಾಗಿಯೂ ಬಿದಿರಿನ ಹಾಸು ಉಪಯೋಗಕ್ಕೆ ಬರುತ್ತಿದೆ. ಸಹಜ ಬಣ್ಣದ್ದಷ್ಟೇ ಅಲ್ಲದೆ ಅದಕ್ಕೆ ಬೇರೆ ಬಣ್ಣಗಳನ್ನು ನೀಡುವ ತಂತ್ರಜ್ಞಾನ ಈಗ ಇದೆ. ಕಾರ್ಬೊನೈಸ್ಡ್ ಬಗೆಯಲ್ಲೂ ಅದು ದೊರೆಯುತ್ತಿದೆ. ಸರಿಯಾದ ರೀತಿ ನಿರ್ವಹಿಸಿದರೆ ದೀರ್ಘ ಕಾಲ ಬಾಳಿಕೆ ಬರುವುದರಿಂದ ಹಾಲ್‌ಗಳಿಗೂ ಈ ಹಾಸು ಸೂಕ್ತ ಎಂದು ವಿನ್ಯಾಸಕಾರರು ಸಲಹೆ ನೀಡುತ್ತಿದ್ದಾರೆ. ನೆಲಹಾಸಿನ ಕೆಳಗೆ ಚೆಲ್ಲಿದ ನೀರು ಉಳಿಯದಂತೆ ನಿಗಾ ಮಾಡಬೇಕಷ್ಟೆ.

ಯಾಕೆಂದರೆ, ಬಿದಿರಿನ ಮೇಲ್ಭಾಗದಲ್ಲಿ ನೀರು ಬೇಗ ಒಣಗಿಹೋಗುತ್ತದೆ. ಕೆಳಗೆ ಹಾಗೆಯೇ ಉಳಿದರೆ ನೆಲ ಶಿಥಿಲವಾಗುತ್ತದೆ. ಅಂಥ ಹಾಸಿನ ಮೇಲೆ ಭಾರವಾದ ಪೀಠೋಪಕರಣ ಇಟ್ಟರೆ ಅದರ ಕಾಲುಗಳಿರುವ ಭಾಗದಲ್ಲಿ ಕಲೆಗಳು ಮೂಡಬಹುದು. ಅದನ್ನು ತಪ್ಪಿಸುವ ರೀತಿಯಲ್ಲಿ ನೆಲಹಾಸನ್ನು ಹಾಕಿಸುವುದು ಉತ್ತಮ.

ದೀಪಾಲಂಕಾರ, ಅದೃಷ್ಟ ಇತ್ಯಾದಿ
ಬಿಳಿಬಣ್ಣದ ಗೋಡೆಗಳಿಗೆ ಅಲ್ಲಲ್ಲಿ ಬಿದಿರಿನ ಪರದೆಗಳನ್ನು ನೇತುಬಿಟ್ಟರೆ ಮನೆಯ ಅಂದ ಹೆಚ್ಚುತ್ತದೆ. ನಿಲುವುಗನ್ನಡಿಯ ಪಕ್ಕದ ಭಾಗದಲ್ಲಿ

ಅದನ್ನು ಬಳಸಿದರೆ ಅದ್ಭುತ ಪ್ರಭಾವಳಿ ಸೃಷ್ಟಿಯಾಗುತ್ತದೆ. ಅಲ್ಲಲ್ಲಿ ದೊಡ್ಡ ಕಂಟೇನರ್‌ಗಳ ಒಳಗೆ ಬಿದಿರಿನ ಸ್ತಂಭಗಳನ್ನು ಇರಿಸಿ, ಅವಕ್ಕೆ ದೀಪಗಳನ್ನು ಮುಡಿಸಿದರಂತೂ ಸ್ವರ್ಗಸದೃಶ ಅನುಭವ. ದೊಡ್ಡ ಕೋಣೆಗಳಲ್ಲಿ ವಿಭಜಕಗಳಾಗಿ ಬಳಸುವುದರಿಂದ ಖಾಸಗೀತನಕ್ಕೂ ಸೌಂದರ್ಯ ಒದಗಿಬರುತ್ತದೆ.

ಕಿಟಕಿಗಳಿಗೆ ಬಿದಿರಿನ ಅಲಂಕಾರ ಸದ್ಯಕ್ಕೆ ಹೆಚ್ಚು ಬೇಡಿಕೆಯಲ್ಲಿರುವ ಪ್ರವೃತ್ತಿ. ಮೇಲಕ್ಕೆ ಸುರುಳಿ ಸುತ್ತುವಂತೆ ಅಥವಾ ಕಿಟಕಿಯ ಎಡ ಅಥವಾ ಬಲಬದಿಗೆ ಸುತ್ತಿಕೊಳ್ಳುವಂತೆ ಕಿಟಕಿ ಪರದೆಗಳನ್ನು ಮಾಡಿಕೊಡುತ್ತಾರೆ. ಬೆಳಕಿನ ಅಗತ್ಯ ಪ್ರಮಾಣದ ಹೊಂದಾಣಿಕೆಗೆ ಇದು ಹೇಳಿಮಾಡಿಸಿದ ವ್ಯವಸ್ಥೆ. ಬಗೆಬಗೆಯ ಆಕಾರದ ರಂಧ್ರಗಳನ್ನು ಮಾಡಿದ ಮಡಿಕೆಯಂಥ ಬಿದಿರಿನ ಆಕೃತಿಗಳಲ್ಲಿ ದೀಪಗಳನ್ನು ಅಥವಾ ವಿದ್ಯುತ್ ಬಲ್ಬ್‌ಗಳನ್ನು ಇರಿಸುವ ವ್ಯವಸ್ಥೆ ಮಾಡಿಕೊಡುವ ವಿನ್ಯಾಸಕರೂ ಇದ್ದಾರೆ.

ಅವುಗಳಿಂದ ಹೊಮ್ಮುವ ಬೆಳಕು ಹಾಲ್ ಅಥವಾ ಕೋಣೆಗಳ ಮೆರುಗನ್ನು ಹೆಚ್ಚಿಸುತ್ತದೆ. ಬಿದಿರಿಗೆ ಹಲವು ಬಣ್ಣಗಳನ್ನು ಬಳಿದ ಲೈಟ್‌ಶೇಡ್‌ಗಳನ್ನು ಉಪಯೋಗಿಸುವವರೂ ಇದ್ದಾರೆ. ಕಪ್ಪು ಬಣ್ಣ ಹೊಸತನದ ಲೈಟ್‌ಶೇಡ್‌ಗಳನ್ನು ಕೊಟ್ಟಿರುವುದು ವಿಶೇಷ.  ಕಾಟನ್, ಪಾಲಿಯೆಸ್ಟರ್ ಹಾಗೂ ಲಿನಿನ್ ಬಟ್ಟೆಗಳ ಒಂದು ಪದರದ ಜೊತೆಗೆ ಬಿದಿರನ್ನು ಬಳಸಿ, ಕಣ್ಣುಕೋರೈಸುವ ಜವಳಿಗಳನ್ನು ಮಾಡುವ ವಿನ್ಯಾಸಕರು ಹೊಸತನದ ಹಲವು ಪರಿಕರಗಳನ್ನು ಸೃಷ್ಟಿಸಿದ್ದಾರೆ.

ಬಿದಿರು ಹಾಗೂ ಅದೃಷ್ಟದ ಕುರಿತು ಜಿಜ್ಞಾಸೆ ಇದ್ದರೆ ಫೆಂಗ್ ಶುಯಿ ಪರಿಣತರನ್ನು ಸಂಪರ್ಕಿಸುವುದು ಒಳಿತು. ಪ್ರೀತಿ, ಸಂಪತ್ತು, ಸಂತೋಷ ಹೀಗೆ ಬಗೆಬಗೆಯ ಅಗತ್ಯಗಳನ್ನು ಈಡೇರಿಸಿಕೊಳ್ಳಲು ಬಿದಿರನ್ನು ಯಾವ ರೀತಿ ಬಳಸಬೇಕು ಎಂದು ವಿವರವಾದ ಸಲಹೆಗಳನ್ನು ಫೆಂಗ್ ಶುಯಿ ಪರಿಣತರು ನೀಡಬಲ್ಲರು. ಅದು ನಂಬಿಕೆಯ ವಿಷಯ. ವಿನ್ಯಾಸ ವೈವಿಧ್ಯದ ದೃಷ್ಟಿಯಿಂದಲಂತೂ ಬಿದಿರಿಗೆ ಆಕರ್ಷಣೆಯ ಸಕಲೇಷ್ಟ ಗುಣಗಳೂ ಇವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT