ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿಗೆ ಬೇಡ ಭದ್ರತೆ ಹೊಣೆ

Last Updated 6 ಜುಲೈ 2015, 6:11 IST
ಅಕ್ಷರ ಗಾತ್ರ

ಮೇಯರ್ ಆಡಳಿತ ವ್ಯವಸ್ಥೆಯಲ್ಲಿ ಪೊಲೀಸ್ ಇಲಾಖೆಯೂ ಇರಬೇಕೆಂಬ ವಾದಗಳು ಕೇಳಿ ಬಂದಿವೆ. ಆದರೆ, ಇಂಥ ಪ್ರಯತ್ನದಿಂದ ಪೊಲೀಸ್ ವ್ಯವಸ್ಥೆ ಇನ್ನೂ ವಿಕೋಪಕ್ಕೆ ಹೋಗುವುದರಲ್ಲಿ ಯಾವ ಸಂಶಯವೂ ಇಲ್ಲ. ಈಗ ಇದ್ದ ಹೊಣೆಗಳನ್ನು ಬಿಬಿಎಂಪಿ ಹೇಗೆ ನಿಭಾಯಿಸುತ್ತಿದೆ ಎಂಬುದು ಎಲ್ಲರಿಗೂ ತಿಳಿದೇ ಇದೆ.

ನಗರ ಪೊಲೀಸರು ಸದ್ಯ ಗೃಹ ಇಲಾಖೆ ಸುಪರ್ದಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.  ಅವರು ಮಾಡುವ ಪ್ರತಿ ಕೆಲಸದಲ್ಲೂ ಹಸ್ತಕ್ಷೇಪ ಎದುರಿಸುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಮೇಯರ್ ಆಡಳಿತದಲ್ಲಿ ಕಾರ್ಯ ನಿರ್ವಹಿಸುವ ಪರಿಸ್ಥಿತಿ ಬಂದರೆ, ಪೊಲೀಸರಿಂದ ಉತ್ತಮ ಸೇವೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಈ ಪ್ರಯತ್ನಕ್ಕೆ ಬದಲಾಗಿ ಬಿಬಿಎಂಪಿ ನಗರ ಪೊಲೀಸ್ ವ್ಯವಸ್ಥೆಯನ್ನು ಸುಧಾರಿಸಲು ಶ್ರಮಿಸಬೇಕು. ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಪೂರಕವಾದ ಯೋಜನೆಗಳನ್ನು ಕೈಗೊಳ್ಳಬೇಕು.

ಎಷ್ಟೋ ರಸ್ತೆಗಳಲ್ಲಿ ಬೀದಿ ದೀಪಗಳಿಲ್ಲ. ಕತ್ತಲೆಯಿಂದ ಕೂಡಿದ ಈ ರಸ್ತೆಗಳು ದುಷ್ಕರ್ಮಿಗಳ ಪಾಲಿಗೆ ವರದಾನವಾಗಿ ಪರಿಣಮಿಸಿವೆ. ಸರಗಳವು, ದರೋಡೆ, ಸುಲಿಗೆಯಂಥ ಅಪರಾಧ ಚಟುವಟಿಕೆಗಳು ಇಂಥ ರಸ್ತೆಗಳಲ್ಲೇ ಹೆಚ್ಚಾಗಿ ವರದಿಯಾಗುತ್ತಿವೆ. ಹೀಗಾಗಿ ಬೀದಿ ದೀಪಗಳ ಸಮರ್ಪಕ ನಿರ್ವಹಣೆ ಆಗಬೇಕು. ನಗರದಲ್ಲಿ ಪೊಲೀಸರು ಸ್ವಂತ ಠಾಣೆಗಳಿಲ್ಲದೆ, ಬಾಡಿಗೆ ಕಟ್ಟಡಗಳಲ್ಲಿ ಕೆಲಸ ಮಾಡುತ್ತಿದ್ದಾರೆ.  ಠಾಣೆ ನಿರ್ಮಿಸಲು ಬಿಬಿಎಂಪಿ ಕಡೆಯಿಂದ ಜಮೀನು ಸಿಗಬೇಕು. ಜತೆಗೆ, ಸಿ.ಸಿ ಟಿ.ವಿ ಕ್ಯಾಮೆರಾ, ಬ್ಯಾರಿಕೇಡ್‌ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಪಾಲಿಕೆ ಕೂಡ ತನ್ನ ಬಜೆಟ್‌ನಲ್ಲಿ ಪೊಲೀಸ್‌ ವ್ಯವಸ್ಥೆಯ ಸುಧಾರಣೆಗಾಗಿ ಹಣ ಮೀಸಲಿಡಬೇಕು.

ಕಳೆದ ಮೂರು ದಶಕಗಳಲ್ಲಿ ಬೆಂಗಳೂರು ಊಹೆಗೂ ಮೀರಿ ಬೆಳೆದಿದೆ. ಆದರೆ ಭದ್ರತೆ ವಿಚಾರದಲ್ಲಿ ರಾಜಧಾನಿ ಮತ್ತೆ ಮತ್ತೆ  ಸುದ್ದಿಯಾಗುತ್ತಿರುವುದು ವಿಪರ್ಯಾಸ. ಕೊಲೆ, ಅತ್ಯಾಚಾರ, ಸರಗಳವು ಸೇರಿದಂತೆ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು, ನಗರದ ಪೊಲೀಸ್ ವ್ಯವಸ್ಥೆಯನ್ನೇ ಪ್ರಶ್ನೆ ಮಾಡುತ್ತಿದೆ. ಹೆಚ್ಚು ಅಪರಾಧ ನಡೆಯುತ್ತಿರುವ ಮಹಾನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ನಾಗರಿಕರ ಸುರಕ್ಷತೆಗೆ ಸರ್ಕಾರ, ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ಕೆಲ ಸರಳ ಹಾಗೂ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಬೇಕಿದೆ.

ಬಿಬಿಎಂಪಿ ಹಾಗೂ ಜಲಮಂಡಳಿ ಕೈಗೊಳ್ಳುವ ಹಲವು ಕಾಮಗಾರಿಗಳಿಂದ ಸಂಚಾರ ಪೊಲೀಸರ ಮೇಲೆ ಹೊರೆ ಆಗುತ್ತಿದೆ. ಪೈಪ್ ಅಳವಡಿಕೆ, ಚರಂಡಿ ದುರಸ್ತಿ ಸೇರಿದಂತೆ ಎಲ್ಲೆಂದರಲ್ಲಿ ರಸ್ತೆ ಅಗೆದಾಗ ಸಂಚಾರ ದಟ್ಟಣೆ ಉಂಟಾಗುತ್ತದೆ. ಈ ಬಗ್ಗೆ ಮೊದಲೇ ಪೊಲೀಸರಿಂದ ಅನುಮತಿ ಪಡೆದರೆ, ಸವಾರರಿಗೆ ಪರ್ಯಾಯ ಮಾರ್ಗ ಒದಗಿಸುತ್ತಾರೆ. ಸಾಧಕ–ಬಾಧಕಗಳ ಬಗ್ಗೆ ಚಿಂತಿಸದೆ ಯೋಜನೆ ಕೈಗೊಳ್ಳುವುದು ವ್ಯರ್ಥ. ರಿಚ್ಮಂಡ್ ರಸ್ತೆಯಲ್ಲಿ ನಿರ್ಮಿಸಿರುವ ಮೇಲ್ಸೇತುವೆ ಇದಕ್ಕೆ ಉತ್ತಮ ಉದಾಹರಣೆ. ಆ ರಸ್ತೆಯಲ್ಲಿರುವ ವಾಹನ ಸಾಂದ್ರತೆ ಹಾಗೂ ಆ ರಸ್ತೆಯನ್ನು ಕೂಡುವ ರಸ್ತೆಗಳಾವುವು ಎಂಬ ಬಗ್ಗೆ ಅಧ್ಯಯನ ನಡೆಸದೆ ಮೇಲ್ಸೇತುವೆ ನಿರ್ಮಿಸಲಾಗಿದೆ. ಮೇಲ್ಸೇತುವೆ ಮೇಲೆ ವಾಹನಗಳು ನಿಲ್ಲದೆ ಸಂಚರಿಸಬೇಕು. ಈ ಮೇಲ್ಸೇತುವೆಯಲ್ಲಿ ಸುಗಮ ಸಂಚಾರವನ್ನು ಎಂದೂ ಕಂಡಿಲ್ಲ.

ಪೊಲೀಸ್ ಬಲ: ನಗರದಲ್ಲಿ ಲಕ್ಷ ಜನಸಂಖ್ಯೆಗೆ ನೂರು ಪೊಲೀಸರಿದ್ದಾರೆ. ಇದರಿಂದ ಸಿಬ್ಬಂದಿಯ ಕಾರ್ಯದೊತ್ತಡ ಹೆಚ್ಚಾಗಿದೆ. ಪೊಲೀಸರ ಸಂಖ್ಯೆ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. 2020ರ ವೇಳೆಗೆ ಲಕ್ಷ ಜನಸಂಖ್ಯೆಗೆ 200 ಪೊಲೀಸರು ಇರಬೇಕು. ಈ ಸಂಖ್ಯೆ 2025ರ ವೇಳೆಗೆ 250ಕ್ಕೆ ಹೆಚ್ಚಾಗಬೇಕು. ಕೋರ್ ಕರ್ತವ್ಯ: ನಗರದಲ್ಲಿ ಪೊಲೀಸ್ ಸಂಪನ್ಮೂಲ ವ್ಯರ್ಥವಾಗುತ್ತಿದೆ. ಅಪರಾಧ ತಡೆಗಟ್ಟುವುದು ಹಾಗೂ ಆರೋಪಿಗಳನ್ನು ಪತ್ತೆ ಮಾಡುವ ಬಗ್ಗೆ ಸೂಕ್ತ ತರಬೇತಿ ಕೊಟ್ಟು ಸಿಬ್ಬಂದಿಯನ್ನು ನೇಮಕ ಮಾಡಿಕೊಂಡು ಗಣ್ಯರ ಭದ್ರತೆಗೆ ಅವರನ್ನು ನಿಯೋಜಿಸಲಾಗುತ್ತದೆ.

ರಾಜಕಾರಣಿಗಳ ಗನ್‌ಮ್ಯಾನ್‌ಗಳಾಗಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಸಿಬ್ಬಂದಿಯನ್ನು ಇಂಥ ಕೆಲಸಗಳಿಂದ ತೆಗೆದು, ನಗರದ ಶಾಂತಿ–ಸುವ್ಯವಸ್ಥೆ ಕಾಪಾಡಲು ಬಳಸಿಕೊಳ್ಳಬೇಕು. ಅಧಿಕಾರಿಗಳ ಬದಲಾವಣೆ: ಕಾನ್‌ಸ್ಟೆಬಲ್‌ನಿಂದ ಎಎಸ್‌ಐ ದರ್ಜೆಯ ಸಿಬ್ಬಂದಿ ಕೆಲಸಕ್ಕೆ ಸೇರಿಕೊಂಡ ದಿನದಿಂದ ನಿವೃತ್ತರಾಗುವವರೆಗೂ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸಬೇಕು. ಏಕೆಂದರೆ ಸ್ಥಳದ ಪರಿಚಯ, ಅಲ್ಲಿರುವ ಕಳ್ಳರು, ರೌಡಿಗಳು ಹಾಗೂ ಅಪರಾಧ ಹಿನ್ನೆಲೆವುಳ್ಳ ವ್ಯಕ್ತಿಗಳ ಬಗ್ಗೆ ಅವರಿಗಿರುವಷ್ಟು ಮಾಹಿತಿ ಹಿರಿಯ ಅಧಿಕಾರಿಗಳಿಗೆ ಇರುವುದಿಲ್ಲ.

ಹಾಗೆಯೇ ಎಸ್‌ಐ ಹಾಗೂ ಆ ನಂತರದ ದರ್ಜೆಯ ಅಧಿಕಾರಿಗಳನ್ನು ಹೆಚ್ಚು ಕಾಲ ನಗರದಲ್ಲಿ ಇರಲು ಬಿಡಬಾರದು. ಇಲ್ಲಿ ಸಂಪರ್ಕ ಬೆಳೆದಷ್ಟು ಅವರು ಅಧಿಕಾರ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ತಂತ್ರಜ್ಞಾನ ಬಳಕೆ: ನಗರ ಪೊಲೀಸ್ ವ್ಯವಸ್ಥೆಯಲ್ಲಿ ತಂತ್ರಜ್ಞಾನಗಳ ಅಳವಡಿಕೆ ಅಗತ್ಯ. ಇತರೆ ಮಹಾನಗರಗಳಲ್ಲಿ ಇರುವಂತೆಯೇ ಇಲ್ಲಿಯೂ ಪ್ರತ್ಯೇಕ ಸಂಶೋಧನಾ ಘಟಕ ಸ್ಥಾಪಿಸಬೇಕು. ತಂತ್ರಜ್ಞಾನ ಬಳಕೆ ಬಗ್ಗೆ ಸಿಬ್ಬಂದಿಗೆ ತರಬೇತಿ ನೀಡಬೇಕು.

ಜ್ಞಾನ, ಕೌಶಲ, ಸನ್ನಡತೆ ಹಾಗೂ ಮೌಲ್ಯ ಈ ನಾಲ್ಕು ಅಂಶಗಳುಳ್ಳ ಅಧಿಕಾರಿಗಳು ಮಾತ್ರ ನಗರಕ್ಕೆ ನಿಯೋಜನೆ ಆಗಬೇಕು. ಅವರು ತೆಗೆದುಕೊಳ್ಳುವ ಕ್ರಮಗಳು ಒಳ್ಳೆಯ ಫಲಿತಾಂಶ ನೀಡಬೇಕು. ಭ್ರಷ್ಟರನ್ನು ಹಾಗೂ ಕೆಲಸಕ್ಕೆ ಬಾರದ ಅಧಿಕಾರಿಗಳನ್ನು ನಗರದಿಂದ ದೂರ ಇಡಬೇಕು.

ಹೊರಗಿನ ಹಸ್ತಕ್ಷೇಪ: ನಗರಕ್ಕೆ ವರ್ಗ ಮಾಡಿಸಿಕೊಳ್ಳಲು ಸಿಬ್ಬಂದಿ ಪ್ರಭಾವಿಗಳಿಂದ ಒತ್ತಡ ತರುವುದು ಗೊತ್ತೇ ಇದೆ. ಜತೆಗೆ ಇಲ್ಲಿ ಪೊಲೀಸ್ ಕಾರ್ಯವೈಖರಿಯಲ್ಲಿ ಹೊರಗಿನವರ ಹಸ್ತಕ್ಷೇಪ ಇರುವುದು ಸಾಮಾನ್ಯ. ಬಾಹ್ಯ ಪ್ರಭಾವವಿದ್ದರೆ ಪೊಲೀಸರಿಂದ ಉತ್ತಮ ಸೇವೆ ಸಿಗುವುದು ಅಸಾಧ್ಯ.

ಸಂಚಾರ ನಿರ್ವಹಣೆ: ವಾಹನಗಳ ಸಂಖ್ಯೆ 50 ಲಕ್ಷ ದಾಟಿದೆ. ಆದರೂ ಇತರೆ ನಗರಗಳಿಗೆ ಹೋಲಿಸಿದರೆ ಸಂಚಾರ ನಿರ್ವಹಣೆಯಲ್ಲಿ ನಗರ ಮುಂಚೂಣಿಯಲ್ಲಿದೆ. ಅತ್ಯಾಧುನಿಕ ತಂತ್ರಜ್ಞಾನಗಳುಳ್ಳ ಸಂಚಾರ ನಿರ್ವಹಣಾ ಕೇಂದ್ರ (ಟಿಎಂಸಿ) ಉಳಿಸಿಕೊಳ್ಳುವ ಹಾಗೂ ಯಶಸ್ವಿಯಾಗಿ ಬಳಸಿಕೊಳ್ಳುವ ಅಗತ್ಯವಿದೆ. ಸಿ.ಸಿ ಟಿ.ವಿ ಕ್ಯಾಮೆರಾ ಸೇರಿ ಅಗತ್ಯ ಸಾಮಗ್ರಿಗಳನ್ನು ಒದಗಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ.

ಸಮುದಾಯ ಪೊಲೀಸ್: ಪೊಲೀಸ್ ಬಲ ಕಡಿಮೆ ಇರುವುದರಿಂದ ಸಾರ್ವಜನಿಕರೇ ಪೊಲೀಸರಾಗಿ ಕರ್ತವ್ಯ ನಿರ್ವಹಿಸಬೇಕಿದೆ. ಇಂಥ ಚಿಂತನೆಯಲ್ಲಿ ಕಾರ್ಯರೂಪಕ್ಕೆ ಬಂದ ವ್ಯವಸ್ಥೆಯೇ ಸಮುದಾಯ ಪೊಲೀಸ್. ಪ್ರಸ್ತುತ ಜ್ಞಾನಭಾರತಿ, ಜೆ.ಪಿ.ನಗರ, ಮಡಿವಾಳ, ಅಶೋಕನಗರ, ಯಶವಂತಪುರ, ರಾಜಗೋಪಾಲನಗರ ಹಾಗೂ ಬಾಣಸವಾಡಿ ನಗರಗಳಲ್ಲಿ ಈ ವ್ಯವಸ್ಥೆ ಯಶಸ್ವಿಯಾಗಿ ಜಾರಿಯಲ್ಲಿದೆ. ನಗರದ ಎಲ್ಲ ಠಾಣೆಗಳಿಗೂ ಇದು ವಿಸ್ತರಣೆ ಆದರೆ, ಅಪರಾಧ ಕೃತ್ಯಗಳಿಗೆ ಕಡಿವಾಣ ಬೀಳುತ್ತದೆ.

­‘ನಿವೃತ್ತರ ಸ್ವರ್ಗ’ ಎಂಬ ಖ್ಯಾತಿಯ ಬೆಂಗಳೂರು ಈಗ ಭಯೋತ್ಪಾದನಾ ದಾಳಿಗೆ ತುತ್ತಾಗುವ ಆತಂಕವಿದೆ. ಉಗ್ರರು ಮೇಲಿಂದ ಮೇಲೆ ಇಲ್ಲಿ ತಮ್ಮ ಅಟ್ಟಹಾಸ ಮೆರೆಯುತ್ತಿದ್ದಾರೆ. ಭಯೋತ್ಪಾದನಾ ನಿಗ್ರಹ ಪಡೆ (ಎಟಿಎಫ್) ಹಾಗೂ ಆಂತರಿಕ ಭದ್ರತೆಗೆ ವಿಶೇಷ ಸವಲತ್ತುಗಳನ್ನು ಕೊಟ್ಟು ಬಲಪಡಿಸಬೇಕಿದೆ. ದಾಳಿ ಆಗಬಹುದೆಂಬ ನಿರೀಕ್ಷೆಯಲ್ಲೇ ಅಧಿಕಾರಿಗಳು ಹದ್ದಿನ ಕಣ್ಣಿನಿಂದ ನಗರವನ್ನು ಕಾಯಬೇಕಿದೆ.

ಸಂಘಟಿತ ಕೆಲಸ: ಪೊಲೀಸ್ ವ್ಯವಸ್ಥೆ ಕೂಡ ಸರ್ಕಾರದ ಒಂದು ಭಾಗ. ಹೀಗಾಗಿ ಬಿಬಿಎಂಪಿ, ಜಲಮಂಡಳಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೊದಲು ಪೊಲೀಸ್ ಅನುಮತಿ ಪಡೆಯಬೇಕು. ಸಂಚಾರ ನಿರ್ವಹಣೆ ಮತ್ತು ಜನಸಾಮಾನ್ಯರಿಗೆ ತೊಂದರೆ ಆಗದಂತೆ ಅಧ್ಯಯನ ನಡೆಸಬೇಕು. ಸಮನ್ವಯ ಸಮಿತಿ ಸಭೆಯಲ್ಲಿ ಎಲ್ಲ ಇಲಾಖೆಗಳ ಆಯುಕ್ತರು ಹಾಜರಾಗಿ ಏಕರೂಪದ ನಿರ್ಣಯ ಕೈಗೊಳ್ಳಬೇಕು. ನಂತರ ಸಂಘಟಿತರಾಗಿ ಕೆಲಸ  ಮಾಡಬೇಕು.
*
ಬಿಬಿಎಂಪಿಗೆ ಚುನಾವಣೆ 
ಬದಲಾವಣೆ ಬೇಕಾಗಿದೆಘೋಷಣೆ ಆಗಿದೆ. ಅದನ್ನೇ ನೆಪವಾಗಿಟ್ಟುಕೊಂಡು ‘ಪ್ರಜಾವಾಣಿ’ ತಜ್ಞರಿಂದ ಲೇಖನ ಆಹ್ವಾನಿಸಿ ಪ್ರಕಟಿಸುತ್ತಿದೆ. ಬಿಬಿಎಂಪಿಯಲ್ಲಿ ಬರುವ ಹೊಸ ಕೌನ್ಸಿಲ್‌ನ ಆಡಳಿತಕ್ಕೆ ಈ ಲೇಖನಮಾಲೆ ಒಂದು ದಿಕ್ಸೂಚಿ ಆಗಬೇಕು ಎನ್ನುವ ಆಶಯ ಪತ್ರಿಕೆಯದಾಗಿದೆ. ಓದುಗರು ತಮ್ಮ ಅನಿಸಿಕೆ ಹಂಚಿಕೊಳ್ಳಬಹುದು: bangalore@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT