ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಬೀದಿದೀಪಗಳಿಗೆ ಸೌರ ವಿದ್ಯುತ್‌

ಕಳೆದೊಂದು ವರ್ಷದಲ್ಲಿ ಈ ಯೋಜನೆ ಮೂಲಕ 2.5 ಮೆಗಾವಾಟ್‌ ಉತ್ಪಾದನೆ
Last Updated 28 ನವೆಂಬರ್ 2015, 20:04 IST
ಅಕ್ಷರ ಗಾತ್ರ

ಬೆಂಗಳೂರು: ಶಕ್ತಿ ಕೇಂದ್ರದ ಆಸುಪಾಸಿನಲ್ಲಿರುವ ಬೀದಿದೀಪಗಳಿಗೆ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿಯ ಸೌರವಿದ್ಯುತ್‌ ಸಂಪರ್ಕ ಕಲ್ಪಿಸಿದೆ.

ಮನೆಯ ಚಾವಣಿ ಮೇಲೆ ಅಳವಡಿಸಿದ ಸೌರಫಲಕಗಳ ಮೂಲಕ ಉತ್ಪಾದಿಸಿದ ವಿದ್ಯುತ್ತನ್ನು ಬಳಸಿ ಉಳಿದಿದ್ದನ್ನು ಬೆಸ್ಕಾಂಗೆ ಮಾರುವ ಸೌಲಭ್ಯಕ್ಕೆ 2014ರ ನವೆಂಬರ್‌ 7ರಂದು ಚಾಲನೆ ನೀಡಲಾಗಿತ್ತು. ಕೆ.ಆರ್‌.ವೃತ್ತದ ಬಳಿ ಇರುವ ಬೆಸ್ಕಾಂ ಕಾರ್ಪೊರೇಟ್‌ ಕಚೇರಿ ಚಾವಣಿಯಲ್ಲಿ 50 ಕಿಲೊವಾಟ್‌ ಸಾಮರ್ಥ್ಯದ ಘಟಕ ಸ್ಥಾಪಿಸಲಾಗಿತ್ತು. ಸೌರವಿದ್ಯುತ್ತನ್ನು ಕಾರ್ಪೊರೇಟ್‌ ಕಚೇರಿಗೆ ಬಳಸಿಕೊಳ್ಳಲಾಗುತ್ತಿದೆ. ಹೆಚ್ಚುವರಿ ಸೌರವಿದ್ಯುತ್‌ನಿಂದ ಸುತ್ತಮುತ್ತಲಿನ ಬೀದಿದೀಪಗಳು ಬೆಳಗುತ್ತಿವೆ.

ಕಚೇರಿಯ ಆಸುಪಾಸಿನಲ್ಲಿ ಸುಮಾರು 30ಕ್ಕೂ ಅಧಿಕ ಬೀದಿದೀಪಗಳು ಇವೆ. ಈ ಬೀದಿದೀಪಗಳನ್ನು ಬಿಬಿಎಂಪಿ ನಿರ್ವಹಣೆ ಮಾಡುತ್ತಿದೆ. ಆದರೆ, ಹೆಚ್ಚಿನ ಬೀದಿದೀಪಗಳು ಸರಿಯಾಗಿ ಉರಿಯುತ್ತಿರಲಿಲ್ಲ. ಇದೀಗ ಬೆಸ್ಕಾಂ 16 ಕಂಬಗಳಿಗೆ ಸೌರವಿದ್ಯುತ್‌ ಪೂರೈಕೆ ಮಾಡುತ್ತಿದೆ.

ಈಗ ಅಳವಡಿಸಿರುವ ಸಿಎಲ್‌ಎಫ್‌ ಬಲ್ಬ್‌ಗಳು 24 ವ್ಯಾಟ್‌ನವು. ಈ ಬಲ್ಬ್‌ಗಳು ನಾಲ್ಕು ಟ್ಯೂಬ್‌ಲೈಟ್‌ನಷ್ಟು ಪ್ರಖರ ಬೆಳಕು ಹೊಂದಿವೆ. ಪ್ರತಿ ತಿಂಗಳು 16 ಕಂಬಗಳಿಗೆ 216 ಯೂನಿಟ್‌ ವಿದ್ಯುತ್‌ ಬಳಕೆಯಾಗುತ್ತಿದೆ. ಈ ಹಿಂದೆ ತಿಂಗಳಿಗೆ 320 ಯೂನಿಟ್‌ ವಿದ್ಯುತ್‌ ಬಳಕೆಯಾಗುತ್ತಿತ್ತು.

‘ಬಿಬಿಎಂಪಿಯ ಬೀದಿದೀಪಗಳಿಗೆ ಮೊದಲ ಬಾರಿಗೆ ಬೆಸ್ಕಾಂ ಸೌರವಿದ್ಯುತ್‌ ಒದಗಿಸುತ್ತಿದೆ. ಈ ಬೀದಿ ದೀಪಗಳನ್ನು ಬಿಬಿಎಂಪಿ ನಿರ್ವಹಣೆ ಮಾಡಲಿದೆ. ಎರಡು ವಿದ್ಯುತ್ ಕಂಬಗಳಲ್ಲಿ ದೋಷ ಕಾಣಿಸಿಕೊಂಡಿದ್ದು, ಅವುಗಳನ್ನು ದುರಸ್ತಿಪಡಿಸುವಂತೆ ಬಿಬಿಎಂಪಿಯ ಕಾರ್ಯನಿರ್ವಾಹಕ ಎಂಜಿನಿಯರ್‌ (ಬೀದಿದೀಪಗಳು) ಅವರಿಗೆ ಪತ್ರ ಬರೆಯಲಾಗಿದೆ’ ಎಂದು ಬೆಸ್ಕಾಂ ಮುಖ್ಯ  ಪ್ರಧಾನ ಎಂಜಿನಿಯರ್‌ ಎಂ. ಶಾಂತಿ ‘ಪ್ರಜಾವಾಣಿ’ಗೆ ತಿಳಿಸಿದರು.

2.5 ಮೆಗಾವಾಟ್‌ ಸೌರವಿದ್ಯುತ್: ಬೆಸ್ಕಾಂ ವ್ಯಾಪ್ತಿಯಲ್ಲಿ ಕಳೆದೊಂದು ವರ್ಷದಲ್ಲಿ ಚಾವಣಿ ಸೌರವಿದ್ಯುತ್‌ ಯೋಜನೆ ಮೂಲಕ 2.5 ಮೆಗಾವಾಟ್‌ ಸೌರವಿದ್ಯುತ್‌ ಉತ್ಪಾದನೆಯಾಗಿದೆ.

ಸೌರವಿದ್ಯುತ್‌ ಉತ್ಪಾದನೆಗೆ ಆನ್‌ಲೈನ್ ಮೂಲಕ 917 ಮಂದಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 456 ಮಂದಿ ಶುಲ್ಕ ಪಾವತಿಸಿದ್ದಾರೆ. ಬೆಸ್ಕಾಂ ಜತೆಗೆ ಒಪ್ಪಂದ ಮಾಡಿಕೊಂಡು 152 ಮಂದಿ ಚಾವಣಿ ಸೌರವಿದ್ಯುತ್‌ ಘಟಕಗಳನ್ನು ಸ್ಥಾಪಿಸಿದ್ದಾರೆ. 456 ಘಟಕಗಳು ಕಾರ್ಯಾರಂಭ ಮಾಡಿದರೆ ಒಟ್ಟು 50 ಮೆಗಾವಾಟ್‌ ಸೌರವಿದ್ಯುತ್‌ ಉತ್ಪಾದನೆಯಾಗಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ವಿಕಾಸಸೌಧ, ನಗರದ ಸೇಂಟ್‌ ಜೋಸೆಫ್‌ ಕಾಲೇಜಿನಲ್ಲಿ 100 ಕಿಲೊವಾಟ್‌, ರಾಷ್ಟ್ರೀಯ ಉನ್ನತ ವೈಜ್ಞಾನಿಕ ಸಂಸ್ಥೆಯಲ್ಲಿ 100 ಕಿಲೊವಾಟ್‌, ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯಲ್ಲಿ 400 ಕಿಲೊವಾಟ್‌ನ ಘಟಕ ಸ್ಥಾಪನೆ ಮಾಡಲಾಗಿದೆ. ಬಿಎಂಟಿಸಿ ಸಹ ಸೌರವಿದ್ಯುತ್‌ ಉತ್ಪಾದನೆಗೆ ಮುಂದಡಿ ಇಟ್ಟಿದೆ.

ಪ್ರಕ್ರಿಯೆ ಹೇಗೆ: 100 ಚದರ ಅಡಿ ಪ್ರದೇಶದಲ್ಲಿ ಒಂದು ಕಿಲೊವಾಟ್‌ನ ಸೌರವಿದ್ಯುತ್‌ ಉತ್ಪಾದನಾ ಘಟಕ ಸ್ಥಾಪಿಸಬಹುದು. ಇದಕ್ಕೆ ₹1 ಲಕ್ಷ ವೆಚ್ಚ ಆಗಲಿದೆ. 2400 ಚದರ ಅಡಿಯ  ಮನೆಯಲ್ಲಿ 10 ಕಿಲೊವಾಟ್‌ನ ಘಟಕ ಸ್ಥಾಪಿಸಬಹುದು. ಇದಕ್ಕೆ ₹10 ಲಕ್ಷ ವೆಚ್ಚ ಆಗಲಿದೆ. ವಿದ್ಯುತ್‌ ಉತ್ಪಾದಕರು ಸೌರಫಲಕ, ನೆಟ್‌ ಮೀಟರ್‌, ಇನ್ವರ್ಟರ್‌, ಬ್ಯಾಟರಿಯನ್ನು ತಾವೇ ಹಾಕಿಕೊಳ್ಳಬೇಕು. ಬೆಸ್ಕಾಂ ಕಚೇರಿಯಲ್ಲಿ ಅಥವಾ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ನಗರದಲ್ಲಿ ಪ್ರಖರ ಬಿಸಿಲು ಇರುತ್ತದೆ. ಹೀಗಾಗಿ ಇಲ್ಲಿ  ಸೌರ ವಿದ್ಯುತ್‌ ಉತ್ಪಾದನೆಗೆ ಸಾಕಷ್ಟು ಅವಕಾಶ ಇದೆ.  ಒಂದು ಕಿಲೊವಾಟ್‌ ಘಟಕದಿಂದ ದಿನಕ್ಕೆ 4–5 ಯೂನಿಟ್‌ ಸೌರವಿದ್ಯುತ್‌ ಉತ್ಪಾದನೆ ಮಾಡಬಹುದು. ಜನರಲ್ಲಿ ಜಾಗೃತಿ ಮೂಡಬೇಕಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT