ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ವಿಭಜನೆಗೆ ಕಾಲಾವಕಾಶ ಬಳಕೆ?

ಮತ್ತೆ ಚುನಾವಣೆ ಮುಂದೆ ಹೋಗಿದ್ದೇಕೆ: ವಿವಿಧ ವಲಯಗಳಿಂದ ವ್ಯಕ್ತವಾದ ಪ್ರಶ್ನೆ
Last Updated 3 ಜುಲೈ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ವಾರ್ಡ್‌ಗಳ ಪುನರ್‌ವಿಂಗಡಣೆಗೂ ಅವಕಾಶ ಇಲ್ಲ. ಮೀಸಲಾತಿ ಬದಲಾವಣೆಗೂ ಅನುಮತಿ ಇಲ್ಲ. ಹಾಗಾದರೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್‌ ಎಂಟು ವಾರಗಳ ಕಾಲಾವಕಾಶ ನೀಡಿದ್ದೇಕೆ?’

–ರಾಜಕೀಯ ನಾಯಕರು, ಕಾನೂನು ತಜ್ಞರು, ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಮುಖಂಡರು ಹಾಗೂ ಬಿಬಿಎಂಪಿ ಮಾಜಿ ಸದಸ್ಯರು ಸೇರಿದಂತೆ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ ಇದು.

‘ರಾಜ್ಯ ಚುನಾವಣಾ ಆಯೋಗ ಈಗಾಗಲೇ ವೇಳಾಪಟ್ಟಿ ಪ್ರಕಟಿಸಿದೆ. ಚುನಾವಣೆಗೆ ಅಧಿಸೂಚನೆ ಪ್ರಕಟಿಸಲು ಇನ್ನು ಐದು ದಿನಗಳಷ್ಟೇ ಉಳಿದಿವೆ. ಆಯೋಗವೂ ಚುನಾವಣೆಗೆ ಅಗತ್ಯ ಸಿದ್ಧತೆ  ಮಾಡಿಕೊಂಡಿದೆ. ಹೀಗಿರುವಾಗ ಹೆಚ್ಚಿನ ಕಾಲಾವಕಾಶಕ್ಕೆ ಏನು ಕಾರಣ’ ಎನ್ನುವುದು ಅವರು ಮುಂದಿಡುವ ಪ್ರಶ್ನೆಯಾಗಿದೆ.

‘ಚುನಾವಣೆ ನಡೆಸಲು ಸರ್ಕಾರ ಸಿದ್ಧವಿದೆ. ಆದರೆ, ಸ್ವಲ್ಪ ಕಾಲಾವಕಾಶ ಅಗತ್ಯ ಎಂಬುದಷ್ಟೇ ನಮ್ಮ ನಿಲುವಾಗಿತ್ತು. ಸುಪ್ರೀಂ ಕೋರ್ಟ್‌ ಅದನ್ನು ಪುರಸ್ಕರಿಸಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸುತ್ತಾರೆ.

‘ಸುಪ್ರೀಂ ಕೋರ್ಟ್‌ ತೀರ್ಪು ನಮಗೆಲ್ಲ ಅಚ್ಚರಿ ಉಂಟುಮಾಡಿದೆ. ಸಂವಿಧಾನದ 74ನೇ ತಿದ್ದುಪಡಿ ಪ್ರಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಹೆಚ್ಚು ಕಾಲ ಮುಂದೂಡುವಂತಿಲ್ಲ. ಕೋರ್ಟ್‌ ಈ ನಿರ್ಧಾರಕ್ಕೆ ಬರಲು ಏನು ಕಾರಣ ಎಂಬುದು ತಿಳಿದಿಲ್ಲ. ಆದರೆ, ರಾಜ್ಯ ಸರ್ಕಾರ ಮಾತ್ರ ಈ ಕಾಲಾವಕಾಶವನ್ನು ದುರ್ಬಳಕೆ ಮಾಡಿಕೊಳ್ಳಲಿದೆ’ ಎನ್ನುತ್ತಾರೆ ಮಲ್ಲೇಶ್ವರ ಕ್ಷೇತ್ರದ
ಬಿಜೆಪಿ ಶಾಸಕ ಡಾ.ಸಿ.ಎನ್‌. ಅಶ್ವತ್ಥನಾರಾಯಣ.

‘ರಾಜ್ಯ ಸರ್ಕಾರಕ್ಕೆ ಬೆಂಗಳೂರು ಮಹಾನಗರವನ್ನು ಉದ್ಧಾರ ಮಾಡುವ ನೈಜ ಉದ್ದೇಶ ಇದ್ದರೆ ಮೇಯರ್‌ಗೆ ಹೆಚ್ಚಿನ ಅಧಿಕಾರ ಕೊಡಬೇಕು’ ಎಂದು ಆಗ್ರಹಿಸುತ್ತಾರೆ.

‘ಚುನಾವಣೆ ಮುಂದಕ್ಕೆ ಹಾಕಲು ರಾಜ್ಯ ಸರ್ಕಾರ ಸಫಲವಾಗಿದ್ದು, ಈ ಮೂಲಕ ಮತ್ತೊಮ್ಮೆ ತಾನು ಜನತಂತ್ರ ವ್ಯವಸ್ಥೆಯಲ್ಲಿ ಚುನಾವಣೆ ನಡೆಸಲು ತಯಾರಿಲ್ಲ ಎಂಬುದನ್ನು ಸಾಬೀತುಮಾಡಿದೆ’ ಎಂದು ಜೆಡಿಎಸ್‌ ವಕ್ತಾರ ರಮೇಶ್‌ಬಾಬು ಹೇಳುತ್ತಾರೆ.

‘ಚುನಾವಣೆ ಮುಂದೂಡಲು ಸಾಧ್ಯವಿಲ್ಲ, ಮೂರು ತಿಂಗಳೊಳಗೆ ಪ್ರಕ್ರಿಯೆ ಮುಗಿಸಬೇಕು ಎಂದಿದ್ದ ಸುಪ್ರೀಂ ಕೋರ್ಟ್‌, ಈಗೇಕೆ ಇಂತಹ ತೀರ್ಮಾನಕ್ಕೆ ಬಂತು ಎಂಬುದು ತಿಳಿಯುತ್ತಿಲ್ಲ’ ಎಂದು ವಕೀಲ ರಮೇಶ್‌ ಪುತ್ತಿಗೆ ಹೇಳುತ್ತಾರೆ. ‘ಸಂವಿಧಾನದ 74ನೇ ತಿದ್ದುಪಡಿ ಪ್ರಕಾರ ಚುನಾವಣೆ ಮುಂದೂಡಲು ಅವಕಾಶವಿಲ್ಲ’ ಎಂದು ಅವರು ವಿವರಿಸುತ್ತಾರೆ.

ವಿಭಜನೆಗೆ ವೇಗ: ಚುನಾವಣೆಗೆ ಕಾಲಾವಕಾಶ ದೊರೆತಿದ್ದರಿಂದ ಸಮಾಧಾನದ ನಿಟ್ಟುಸಿರು ಬಿಟ್ಟಿರುವ ರಾಜ್ಯ ಸರ್ಕಾರ, ಈ ಅವಕಾಶವನ್ನು ಬಿಬಿಎಂಪಿ ವಿಭಜನೆಗೆ ಬಳಕೆ ಮಾಡಿಕೊಳ್ಳಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಸಚಿವ ರಾಮಲಿಂಗಾರೆಡ್ಡಿ ಅವರ ಅಭಿಪ್ರಾಯ ಸಹ ಇದಕ್ಕೆ ಪೂರಕವಾಗಿದೆ. ‘ಬಿಬಿಎಂಪಿ ವಿಭಜನೆಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಲು ರಚಿಸಲಾಗಿದ್ದ ವಿಧಾನ ಪರಿಷತ್‌ನ ಆಯ್ಕೆ ಸಮಿತಿ ಸದ್ಯದಲ್ಲೇ ತನ್ನ ವರದಿ ನೀಡಲಿದೆ. ಪ್ರಸಕ್ತ ಅಧಿವೇಶನದಲ್ಲೇ ವಿಭಜನೆ ಮಸೂದೆಗೆ ಒಪ್ಪಿಗೆ ಸಿಗುವ ವಿಶ್ವಾಸವಿದೆ’ ಎಂದು ಅವರು ಹೇಳುತ್ತಾರೆ.

‘ಬಿಬಿಎಂಪಿ ಆಡಳಿತ ಪುನರ್‌ರಚನಾ ಸಮಿತಿ ಸಹ ಸದ್ಯದಲ್ಲೇ ಅಂತಿಮ ವರದಿ ನೀಡಲಿದೆ. ಸಾಧ್ಯವಾದಷ್ಟು ಬೇಗ ವಿಭಜನೆ ಮಾಡಿ ಸುಸೂತ್ರ ಆಡಳಿತಕ್ಕೆ ಅವಕಾಶ ಮಾಡಿಕೊಡುವುದು ನಮ್ಮ ಉದ್ದೇಶವಾಗಿದೆ’ ಎಂದು ಅವರು ತಿಳಿಸುತ್ತಾರೆ. ಸಚಿವರ ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸುವ ಅಶ್ವತ್ಥನಾರಾಯಣ, ‘ಬಿಬಿಎಂಪಿ ವಿಭಜನೆ ವಿರುದ್ಧ ಸದನದ ಒಳಗೂ ಹೊರಗೂ ಬಿಜೆಪಿ ಹೋರಾಟ ನಡೆಸಲಿದೆ. ಜನರ ಜೊತೆ ಬೀದಿಗಿಳಿದು ಹೋರಾಡಲಿದೆ’ ಎನ್ನುತ್ತಾರೆ.

ಬೆಂಗಳೂರಿಗೆ ಮೂರು ಅಥವಾ ಅದಕ್ಕಿಂತ ಹೆಚ್ಚಿನ ಪಾಲಿಕೆ ರಚನೆ ಮಾಡುವ ಮಸೂದೆಗೆ ಒಪ್ಪಿಗೆ ಸಿಕ್ಕರೆ ಆಗ ಬಿಬಿಎಂಪಿ ಅಸ್ತಿತ್ವದಲ್ಲೇ ಇರುವುದಿಲ್ಲ. ಚುನಾವಣೆ ನಡೆಸುವ ಪ್ರಶ್ನೆಯೂ ಉದ್ಭವಿಸುವುದಿಲ್ಲ ಎಂಬುದು ಸರ್ಕಾರದ ಲೆಕ್ಕಾಚಾರ. ಹೊಸ ಪಾಲಿಕಗಳ ಗಡಿ ಗುರತಿಸುವುದು, ಕಚೇರಿ ವ್ಯವಸ್ಥೆ, ಅಧಿಕಾರಿಗಳ ಹಂಚಿಕೆಗೆ ಕಾಲಾವಕಾಶ ಹಿಡಿಯುತ್ತದೆ. ಹಾಗಾದರೆ ಪಾಲಿಕೆಗೆ ಚುನಾವಣೆ ವರ್ಷಗಟ್ಟಲೆ ಮುಂದೆ ಹೋಗಲಿದೆ ಎಂದು ಹೇಳಲಾಗುತ್ತಿದೆ.

‘ರಾಜ್ಯ ಸರ್ಕಾರ ಬಿಬಿಎಂಪಿ ಚುನಾವಣೆಯನ್ನು ಫುಟ್ಬಾಲ್‌ ಮಾಡಿಕೊಂಡಿದೆ. ಚುನಾವಣೆ ನಡೆಸುವುದು ಅದಕ್ಕೆ ಇಷ್ಟವಿರಲಿಲ್ಲ ಎಂಬುದು ಈಗ ಸಾಬೀತಾಗಿದೆ. ಎರಡು ತಿಂಗಳ ನಂತರ ಚುನಾವಣೆ ನಡೆಸುವುದಾಗಿ ಸರ್ಕಾರ ಹೇಳುತ್ತಿದೆ. ಹಾಗಿದ್ದರೆ ಪುನರ್‌ರಚನೆಯನ್ನು ಕೈಬಿಡುತ್ತದೆಯೇ’ ಎಂದು ಎಎಪಿ ರಾಜ್ಯ ಸಂಚಾಲಕ ಸಿದ್ಧಾರ್ಥ ಶರ್ಮಾ ಪ್ರಶ್ನಿಸುತ್ತಾರೆ.

ಹತ್ತು ದಿನಗಳಲ್ಲಿ ಅಂತಿಮ ವರದಿ
ಬಿ.ಎಸ್‌. ಪಾಟೀಲ್‌ ನೇತೃತ್ವದ ಬಿಬಿಎಂಪಿ ಆಡಳಿತ ಪುನರ್‌ರಚನಾ ಸಮಿತಿ ಜುಲೈ 15ಕ್ಕೆ ಮುನ್ನ ತನ್ನ ಅಂತಿಮ ವರದಿ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಐದು ನಗರ ಪಾಲಿಕೆಗಳನ್ನಾಗಿ ವಿಭಜಿಸಿ

ಮೂರು ಹಂತಗಳ ಆಡಳಿತ ವ್ಯವಸ್ಥೆ ರೂಪಿಸಬೇಕು ಎಂಬ ಶಿಫಾರಸು ಮಾಡಲು ಸಮಿತಿ ಮುಂದಾಗಿದೆ.
ಮೊದಲನೇ ಹಂತದಲ್ಲಿ ವಾರ್ಡ್‌ ಮಟ್ಟದ ಸಮಿತಿಗಳು, ಎರಡನೇ ಹಂತದಲ್ಲಿ ಐದು ನಗರ ಪಾಲಿಕೆಗಳು ಮತ್ತು ಮೂರನೇ ಹಂತದಲ್ಲಿ ಬೃಹತ್‌ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ಬರಬೇಕು ಎಂಬುದು ಸಮಿತಿ ನಿಲುವಾಗಿದೆ.

ಸಮಿತಿಯ ಅಂತಿಮ ವರದಿಯನ್ನು ಸಿದ್ಧಪಡಿಸಲಾಗುತ್ತಿದ್ದು, ಇಂಗ್ಲಿಷ್‌ ಆವೃತ್ತಿಗೆ ಈಗಾಗಲೇ ಅಂತಿಮ ರೂಪ ನೀಡಲಾಗಿದೆ. ಅದನ್ನು ಕನ್ನಡಕ್ಕೆ ಅನುವಾದಿಸಿ, ಪುಸ್ತಕ ರೂಪದಲ್ಲಿ ಮುದ್ರಿಸಲು ಕನಿಷ್ಠ ಹತ್ತು ದಿನಗಳ ಅಗತ್ಯವಿದೆ ಎಂದು ಸಮಿತಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT