ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ವಿಭಜನೆಯಲ್ಲ; ಆಡಳಿತದ ಪುನರ್‌ರಚನೆ

ರಾಜ್ಯ ಸರ್ಕಾರ ನೇಮಕ ಮಾಡಿರುವ ತಜ್ಞರ ಸಮಿತಿಯೊಂದಿಗೆ ಸಂವಾದ
Last Updated 1 ಮಾರ್ಚ್ 2015, 19:42 IST
ಅಕ್ಷರ ಗಾತ್ರ

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ಎರಡೋ, ಮೂರೋ ಹೋಳು ಮಾಡುವಂತಹ ಸಂಕುಚಿತ ಗುರಿಯನ್ನೇನೂ ನಾವು ಹೊಂದಿಲ್ಲ; ಬಿಬಿಎಂಪಿ ಆಡಳಿತವನ್ನೇ ಪುನರ್‌ರಚನೆ ಮಾಡುವಂತಹ ವಿಶಾಲ ದೃಷ್ಟಿಕೋನ ಇಟ್ಟುಕೊಂಡು ಅಧ್ಯಯನ ನಡೆಸುತ್ತಿದ್ದೇವೆ. ಈ ಸಂಬಂಧ ಎಲ್ಲ ರಾಜಕೀಯ ಪಕ್ಷಗಳು, ಒಕ್ಕೂಟಗಳು ಹಾಗೂ ಸಂಘ–ಸಂಸ್ಥೆಗಳು ಸೇರಿದಂತೆ ನಾಲ್ಕೂ ನಿಟ್ಟಿನ ಸಲಹೆಗಳನ್ನು ತುಂಬಾ ಮುಕ್ತವಾಗಿ ಸ್ವೀಕರಿಸುತ್ತೇವೆ’

ಬಿಬಿಎಂಪಿ ಪುನರ್‌ರಚನೆ ಕುರಿತಂತೆ ಅಧ್ಯಯನ ನಡೆಸಲು ರಾಜ್ಯ ಸರ್ಕಾರ ನೇಮಕ ಮಾಡಿರುವ ತಜ್ಞರ ಸಮಿತಿಯ ಅಧ್ಯಕ್ಷ ಬಿ.ಎಸ್‌. ಪಾಟೀಲ್‌, ಸದಸ್ಯರಾದ ಸಿದ್ದಯ್ಯ ಹಾಗೂ ವಿ.ರವಿಚಂದರ್‌ ಅವರ ಸ್ಪಷ್ಟವಾದ ಅಭಿಪ್ರಾಯ ಇದಾಗಿದೆ. ಸಮಿತಿಯ ಕಾರ್ಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅವರು ‘ಪ್ರಜಾವಾಣಿ’ ಜತೆ ಸುದೀರ್ಘವಾಗಿ ಚರ್ಚೆ ನಡೆಸಿದರು. ಅದರ ಆಯ್ದಭಾಗ ಇಲ್ಲಿದೆ:

* ಯಾಕಾಗಿ ಈ ಅಧ್ಯಯನ? ಬಿಬಿಎಂಪಿ ಚುನಾವಣೆ ಮುಂದೂಡಲು ಈ ಸಮಿತಿಯನ್ನು ರಚಿಸಲಾಗಿದೆಯೇ?
ಕೇಂದ್ರೀಕೃತ ವ್ಯವಸ್ಥೆಯಲ್ಲಿ ಸಂಪನ್ಮೂಲಗಳ ಲಭ್ಯತೆಯಿಂದ ಸೇವೆಯಲ್ಲಿ ಕ್ಷಮತೆ ತರಬಹುದು ಎನ್ನುವ ಆಶಯದಿಂದ 2007ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಗೆ ಹೊಸದಾಗಿ 98 ವಾರ್ಡ್‌ಗಳನ್ನು ಸೇರ್ಪಡೆ ಮಾಡಿ, ನಗರದ ಭೌತಿಕ ಗಡಿಯನ್ನು ವಿಸ್ತರಿಸಲಾಗಿದೆ.
ಹೊಸ ವ್ಯವಸ್ಥೆ ಬಂದು ಏಳು ವರ್ಷಗಳ ತರುವಾಯ ಹಿಂದಿರುಗಿ ನೋಡಿದಾಗ ನಿರೀಕ್ಷೆ ಹಾಗೂ ವಾಸ್ತವದ ನಡುವೆ ಅಂತರವಿರುವುದು ಸ್ಪಷ್ಟವಾಗಿದೆ.

ಪಾಲಿಕೆಗೆ ಸೇರಿದ ಹೊಸ ಪ್ರದೇಶಗಳು, ಅದರಲ್ಲೂ ವಿಶೇಷವಾಗಿ ಗ್ರಾಮಗಳು ಇಂದಿಗೂ ಮೂಲಸೌಕರ್ಯಗಳಿಗಾಗಿ ಹಂಬಲಿಸುತ್ತಿವೆ. ಬಿಬಿಎಂಪಿ ರಚನೆಯಾದ ಬಳಿಕ ಆಡಳಿತ ಇಲ್ಲವೆ ಸೇವಾ ವ್ಯವಸ್ಥೆಯಲ್ಲಿ ಸುಧಾರಣೆಯೇನೂ ಗೋಚರಿಸುತ್ತಿಲ್ಲ. ವಾರ್ಡ್‌ಗಳ ಜನಸಂಖ್ಯೆ ಕನಿಷ್ಠ 21 ಸಾವಿರದಿಂದ, ಗರಿಷ್ಠ 95 ಸಾವಿರವರೆಗೆ ಇದ್ದರೆ, ಅವುಗಳ ವಿಸ್ತೀರ್ಣ ಕನಿಷ್ಠ 0.31 ಚದರ ಕಿ.ಮೀ.ದಿಂದ ಗರಿಷ್ಠ 28.4 ಚದರ ಕಿ.ಮೀ.ವರೆಗೆ ವ್ಯಾಪಿಸಿದೆ. ಹೀಗಾಗಿ ಸೇವೆ ಹಾಗೂ ಸೌಲಭ್ಯಗಳು ಸಮಾನವಾಗಿ ಹಂಚಿಕೆ ಆಗುತ್ತಿಲ್ಲ.

ಬಿಬಿಎಂಪಿ ಆಡಳಿತ ವ್ಯವಸ್ಥೆ ಬಗೆಗೆ ಮೊದಲಿನಿಂದಲೂ ಒಳ್ಳೆಯ ಅಭಿಪ್ರಾಯದ ಕೊರತೆ ಇದೆ. ವಿಸ್ತೀರ್ಣದಲ್ಲಿ ವಿಶಾಲವಾಗಿರುವ ಕಾರಣ ಆಡಳಿತದ ಹತೋಟಿ ಕಷ್ಟವಾಗಿದೆ. ಆರ್ಥಿಕ ಸಂಪನ್ಮೂಲದ ಕೊರತೆಯಿಂದಲೂ ಬಿಬಿಎಂಪಿ ಬಳಲಿದೆ. ಕೇಂದ್ರೀಕೃತ ವ್ಯವಸ್ಥೆಯಿಂದ ಜನರಿಗೆ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚಾಗಿದೆ. ಕೇಂದ್ರ ಸ್ಥಾನದಿಂದ ದೂರವಿರುವ ಪ್ರದೇಶಗಳು ಉಪೇಕ್ಷೆಗೆ ಒಳಗಾಗಿವೆ. ರಾಜ್ಯ ಸರ್ಕಾರ ಇದನ್ನೆಲ್ಲ ಗಣನೆಗೆ ತೆಗೆದುಕೊಂಡು ಆಡಳಿತದ ಪುನರ್‌ರಚನೆಗೆ ಅಧ್ಯಯನ ನಡೆಸಲು ನಮ್ಮ ಸಮಿತಿಯನ್ನು ರಚಿಸಿದೆ. ಚುನಾವಣೆಗೂ ನಮ್ಮ ಅಧ್ಯಯನಕ್ಕೂ ಸಂಬಂಧವಿಲ್ಲ.

* ಸಮಿತಿ ಇದುವರೆಗೆ ಏನು ಮಾಡಿದೆ?
ಡಾ. ಕಸ್ತೂರಿರಂಗನ್‌ ವರದಿಯೂ ಸೇರಿದಂತೆ ಬೆಂಗಳೂರು ನಗರ ಆಡಳಿತದ ಕುರಿತಂತೆ ಇದುವರೆಗೆ ಬಂದಿರುವ ಎಲ್ಲ  ವರದಿಗಳನ್ನು

ಸಮಿತಿ ಅಧ್ಯಯನ ಮಾಡಿದೆ. ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ, ಕೆಪಿಟಿಸಿಎಲ್‌, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಬೆಂಗಳೂರು ಮಹಾನಗರ ಸಾರಿಗೆ (ಬಿಎಂಟಿಸಿ) ಸೇರಿದಂತೆ ಎಲ್ಲ ಸಾರ್ವಜನಿಕ ಸಂಸ್ಥೆಗಳ ಪ್ರತಿನಿಧಿಗಳ ಜತೆ ಚರ್ಚಿಸಲಾಗಿದೆ.

ಚುನಾಯಿತ ಪ್ರತಿನಿಧಿಗಳ ಜತೆ ಚರ್ಚೆ ನಡೆದಿದೆ. ಬೆಂಗಳೂರು ರಾಜಕೀಯ ಕಾರ್ಯಪಡೆ (ಬಿ–ಪ್ಯಾಕ್‌), ಕರ್ನಾಟಕ ರಾಜ್ಯ ವಾಣಿಜ್ಯ ಹಾಗೂ ಕೈಗಾರಿಕಾ ಮಹಾಸಂಘ (ಎಫ್‌ಕೆಸಿಸಿಐ) ಸೇರಿದಂತೆ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳೊಂದಿಗೂ ಮಾತುಕತೆ ನಡೆಸಲಾಗಿದೆ. ಇದುವರೆಗಿನ ಮೇಯರ್‌ ಹಾಗೂ ಕಮಿಷನರ್‌ ಅವರನ್ನೂ ಭೇಟಿ ಮಾಡುವ ಉದ್ದೇಶವಿದೆ.

ನಾಗರಿಕರ ಜತೆ ನೇರವಾಗಿ ಸಂವಾದ ನಡೆಸಲು ವೆಬ್‌ಸೈಟ್‌ ಆರಂಭಿಸಲಾಗಿದೆ. ಸರ್ಕಾರಕ್ಕೆ ಈಗಾಗಲೇ ಪ್ರಾಥಮಿಕ ವರದಿಯನ್ನೂ ನೀಡಲಾಗಿದೆ. ಎಲ್ಲ ಚರ್ಚೆಗಳ ಒಟ್ಟಾಂಶಗಳನ್ನು ಕ್ರೋಡೀಕರಿಸಿ, ಜಗತ್ತಿನ ಅತ್ಯುತ್ತಮ ಮಾದರಿಗಳ ಅಧ್ಯಯನ ನಡೆಸಿ ಬಿಬಿಎಂಪಿ ಆಡಳಿತದ ಪುನರ್‌ರಚನೆಗೆ ಕಾರ್ಯಸಾಧುವಾದ ಶಿಫಾರಸುಗಳನ್ನು ಮಾಡುವ ಇರಾದೆ ನಮ್ಮದಾಗಿದೆ.

* ಸದ್ಯದ ಆಡಳಿತ ವ್ಯವಸ್ಥೆ ಬಗೆಗೆ ಜನರ ಅಭಿಪ್ರಾಯವೇನು? ಪುನರ್‌ರಚನೆಯಿಂದ ಅವರು ಏನನ್ನು ನಿರೀಕ್ಷಿಸುತ್ತಾರೆ?
ಬಿಬಿಎಂಪಿ 800 ಚದರ ಕಿ.ಮೀ.ಯಷ್ಟು ವಿಶಾಲವಾದ ವಿಸ್ತೀರ್ಣವನ್ನು ಹೊಂದಿದೆ. ಹಣದ ಬಳಕೆ ದೊಡ್ಡ ಪ್ರಮಾಣದಲ್ಲೇ ಆಗಿದೆ. ಆದರೆ, ಅದು ಅಭಿವೃದ್ಧಿ ಕಾರ್ಯದಲ್ಲಿ ಗೋಚರವಾಗುತ್ತಿಲ್ಲ. ಅದರ ಲಾಭ ನಾಗರಿಕರಿಗೆ ಅಷ್ಟಾಗಿ ದಕ್ಕಿಲ್ಲ. ಸೇವಾ ಸಂಸ್ಥೆಗಳ ಮಧ್ಯೆ ಸಮನ್ವಯವೂ ಇಲ್ಲ. 

ಫುಟ್‌ಪಾತ್‌–ಉದ್ಯಾನಗಳ ಅಸಮರ್ಪಕ ನಿರ್ವಹಣೆ, ಒಂದೇ ಕಾಮಗಾರಿಗೆ ಎರಡು ಬಿಲ್‌, ಬೋಗಸ್‌ ವೆಚ್ಚ, ವಿಶ್ವಾಸಾರ್ಹತೆ ಕೊರತೆ, ಕಳಪೆ ಸಾಧನೆ... ಹೀಗೆ ಆಡಳಿತ ವ್ಯವಸ್ಥೆ ಮೇಲೆ ಜನ ಹೊಂದಿರುವ ದೂರುಗಳು ಹಲವು. ವಾಸ್ತವ ಏನು, ಆಡಳಿತದ ಮೇಲೆ ಇರುವ ಒತ್ತಡ ಎಂತಹದ್ದು ಎಂಬುದನ್ನು ನಾವು ಅಧ್ಯಯನ ಮಾಡುತ್ತಿದ್ದೇವೆ.

ಆಡಳಿತದ ಪುನರ್‌ರಚನೆಯಿಂದ ಜನ ಏನನ್ನು ನಿರೀಕ್ಷಿಸಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಲು ನಮಗೂ ಹಂಬಲ. ರಸ್ತೆಗಳು ಬಳಕೆಗೆ ಯೋಗ್ಯ ಸ್ಥಿತಿಯಲ್ಲಿರಬೇಕು, ಕುಡಿಯಲು ಪರಿಶುದ್ಧ ನೀರು ಒದಗಿಸಬೇಕು, ಬೀದಿದೀಪಗಳ ನಿರ್ವಹಣೆ ಚೆನ್ನಾಗಿರಬೇಕು, ಅರ್ಜಿ ಸಲ್ಲಿಸಿದ ಕೂಡಲೇ ಮಧ್ಯವರ್ತಿಗಳ ಕಿರಿಕಿರಿ ಇಲ್ಲದೆ ಕೇಳಿದ ದಾಖಲೆಗಳು ಸಿಗಬೇಕು, ಕೊಟ್ಟ ತೆರಿಗೆಯ ಪ್ರತಿಪೈಸೆಯೂ ಸದುದ್ದೇಶಕ್ಕೆ ಬಳಕೆ ಆಗಬೇಕು, ಆ ಮೂಲಕ ಒಟ್ಟಾರೆ ಜೀವನಮಟ್ಟ ಸುಧಾರಿಸಬೇಕು ಎನ್ನುವುದು ಜನಸಾಮಾನ್ಯರ ಆಕಾಂಕ್ಷೆ. ಅವರ ಅಭಿಲಾಷೆ ಈಡೇರಿಸಲು ಏನು ಪರ್ಯಾಯಗಳಿವೆ ಎಂಬುದರ ಮೇಲೆ ನಮ್ಮ ಚಿತ್ತ.

* ಆಡಳಿತದ ಪುನರ್‌ರಚನೆಗೆ ಜನಾಭಿಪ್ರಾಯವೊಂದೇ ಸಾಕೆ?
ಅಧ್ಯಯನದ ಒಟ್ಟು ಪ್ರಕ್ರಿಯೆಯಲ್ಲಿ ಜನಾಭಿಪ್ರಾಯ ಸಂಗ್ರಹವೂ ಒಂದು ಭಾಗ. ಜಗತ್ತಿನ ಮಹಾನಗರಗಳಲ್ಲಿ ಇರುವ ವ್ಯವಸ್ಥೆ ಎಂತಹದ್ದು, ಅದರಿಂದ ಅಲ್ಲಿನ ನಾಗರಿಕರಿಗೆ ಸಿಗುತ್ತಿರುವ ಸೌಲಭ್ಯಗಳು ಯಾವುವು ಎಂಬುದನ್ನೂ ನಾವು ಗಮನಿಸುತ್ತಿದ್ದೇವೆ. ಲಂಡನ್‌, ಟೋಕಿಯೊ, ಪ್ಯಾರಿಸ್‌, ಶಾಂಘೈ, ಹಾಂಕಾಂಗ್‌ ಮೊದಲಾದ ನಗರಗಳ ವ್ಯವಸ್ಥೆಯನ್ನು ಅಧ್ಯಯನ ಮಾಡುತ್ತಿದ್ದೇವೆ. ನಗರ ವಿಷಯಗಳ ತಜ್ಞರ ಜತೆಗೂ ಚರ್ಚಿಸಲಿದ್ದೇವೆ.

* ಆಡಳಿತದ ವಿಕೇಂದ್ರೀಕರಣದ ಆಕಾಂಕ್ಷೆ ಈಡೇರುವುದು ಹೇಗೆ?
ನಾಗರಿಕರಿಗೆ ಅಗತ್ಯವಾದ ಎಲ್ಲ ಪ್ರಮಾಣಪತ್ರ ನೀಡುವುದು, ಘನತ್ಯಾಜ್ಯ ನಿರ್ವಹಣೆ ಮಾಡುವುದು, ತೆರಿಗೆ ಸಂಗ್ರಹಿಸುವುದು... ಇಂತಹ ಕಾರ್ಯಗಳಿಗೆ ವಿಕೇಂದ್ರೀಕರಣ ವ್ಯವಸ್ಥೆಯೇ ಸೂಕ್ತ. ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್‌) ಮೂಲಕ ಕೆಲವೊಂದು ನಕ್ಷೆಗಳನ್ನು ತಯಾರಿಸಲು ಯೋಚಿಸಿದ್ದೇವೆ.  ಬೇಸ್‌ಮ್ಯಾಪ್‌ ಅದರಲ್ಲಿ ಅತ್ಯಂತ ಮುಖ್ಯವಾದುದು. ಸಾರಿಗೆ ಮೂಲಸೌಲಭ್ಯ, ಜಲ ಸಂಗ್ರಹಾಗಾರ, ಕಣಿವೆ, ಬಯಲು ಹಾಗೂ ಕಟ್ಟಡ ನಿರ್ಮಿತ ಪ್ರದೇಶದ ಮೂಲ ನಕಾಶೆಯನ್ನು ಸೃಷ್ಟಿಸಲಾಗುತ್ತದೆ.

ಜನಸಂಖ್ಯೆ, ಪ್ರದೇಶಕ್ಕೆ ಅನುಗುಣವಾಗಿ ವಾರ್ಡ್‌ಗಳ ಗಡಿ ಗುರುತಿಸುವುದು ನಂತರದ ಹಂತ. ಅಭಿವೃದ್ಧಿ ಪದರ (ಕೈಗಾರಿಕೆ ಹಾಗೂ ವಾಣಿಜ್ಯ ಚಟುವಟಿಕೆ), ಕಂದಾಯ ಪದರ (ಆಸ್ತಿ ತೆರಿಗೆ, ರಾಜಸ್ವಗಳು), ಸೇವಾ ನಕಾಶೆ (ಮನೆಯ ಮಾದರಿ, ದರ, ನೀರು, ಒಳಚರಂಡಿ, ಶಿಕ್ಷಣ, ಪೊಲೀಸ್‌ ಇತ್ಯಾದಿ) ತಯಾರಿಸುವುದು ಕೊನೆಯ ಹಂತ. ಇಷ್ಟು ಕೆಲಸವಾದರೆ ಸಮರ್ಪಕ ಸೇವೆ ಒದಗಿಸಲು ಉತ್ತಮ ವ್ಯವಸ್ಥೆ ರೂಪಿಸಬಹುದು. ಈಗ ಬೇಸ್‌ಮ್ಯಾಪ್‌ ಸಿದ್ಧಪಡಿಸುವತ್ತ ಮುಂದಡಿ ಇಟ್ಟಿದ್ದೇವೆ.

* ಹಾಗಾದರೆ ಅಂತಿಮ ವರದಿಯನ್ನು ಯಾವಾಗ ನೀಡಲಿದ್ದೀರಿ?
ಅಧ್ಯಯನದ ಕೆಲಸ ಬಿಡುವಿಲ್ಲದೆ ನಡೆದಿದೆ. ನಮಗೂ ಆದಷ್ಟು ಬೇಗ ವರದಿ ನೀಡುವ ಉತ್ಸಾಹವಿದೆ. ಆದರೆ, ಮುಂದಿರುವ ಹೊಣೆ ದೊಡ್ಡದಾಗಿದೆ. ಭವಿಷ್ಯದ ದೃಷ್ಟಿಯಿಂದ ಕಾರ್ಯಸಾಧುವಾದ ವರದಿ ನೀಡಬೇಕು. ಅದಕ್ಕಾಗಿ ಎಲ್ಲ ನಿಟ್ಟಿನಿಂದಲೂ ಯೋಚಿಸಿ ನಿರ್ಣಯ ಕೈಗೊಳ್ಳಬೇಕು. ಚರ್ಚೆ, ಸಮೀಕ್ಷೆ, ವಿಶ್ಲೇಷಣೆ... ಹೀಗೆ ಬಹು ಆಯಾಮದ ಕಾರ್ಯ ನಡೆಸಿ ವರದಿಯನ್ನು ಸಿದ್ಧಪಡಿಸಬೇಕು. ಆ ಎಲ್ಲ ಕೆಲಸವನ್ನು ಗಮನದಲ್ಲಿ ಇಟ್ಟುಕೊಂಡೇ ಜೂನ್‌ನಲ್ಲಿ ಅಂತಿಮ ವರದಿ ನೀಡುವ ಗುರಿ ಇಟ್ಟುಕೊಂಡಿದ್ದೇವೆ.


ಹೇಗಿದ್ದರೆ ಚೆನ್ನ?
ಬಿಬಿಎಂಪಿ ಆಡಳಿತದ ಪುನರ್‌ರಚನೆಗೆ ಸಂಬಂಧಿ­ಸಿದಂತೆ ರಾಜ್ಯ ಸರ್ಕಾರ ನೇಮಕ ಮಾಡಿರುವ ತಜ್ಞರ ಸಮಿತಿ ವರದಿ ನೀಡಲು ಸಿದ್ಧತೆ ಮಾಡಿ­ಕೊಳ್ಳುತ್ತಿದೆ. ಈ ಪ್ರಕ್ರಿಯೆಯಲ್ಲಿ ಸಮು­ದಾ­­ಯದ ಪಾಲ್ಗೊಳ್ಳುವಿಕೆಯೂ ಅಗತ್ಯ­ವಾಗಿದೆ. ಜನರಿಗೆ ಸಮರ್ಪಕ ಸೇವೆ ಒದಗಿಸಲು ಬಿಬಿಎಂಪಿ ಆಡಳಿತ ಹೇಗಿದ್ದರೆ ಚೆನ್ನ ಎಂಬುದರ ಪರಿಕಲ್ಪನೆಯನ್ನು ಓದು­ಗರು ಹಂಚಿಕೊಳ್ಳಬಹುದು.

ಆ ಮೂಲಕ ನಗರವನ್ನು ಕಟ್ಟುವ ಪ್ರಕ್ರಿಯೆಯಲ್ಲಿ ಭಾಗಿಯಾಗಬಹುದು. ನಗರ ಆಡಳಿತ ವ್ಯವಸ್ಥೆ ಸುಧಾರಣೆಗೆ ಸಾರ್ವಜನಿಕರು ನೀಡುವ ಸಲಹೆಗಳಿಗೆ ಸ್ವಾಗತವಿದೆ. ಓದುಗರು ಮತ್ತು ಆಡಳಿತ ಪುನರ್‌ರಚನೆ ಸಮಿತಿ ಮಧ್ಯೆ ‘ಪ್ರಜಾವಾಣಿ’ ಸೇತುವೆಯಾಗಿ ಕಾರ್ಯ ನಿರ್ವಹಿಸಲಿದೆ.

ನಿಮ್ಮ ಅಭಿಪ್ರಾಯ ಕಳುಹಿಸಬೇಕಾದ ವಿಳಾಸ: bangalore@prajavani.co.in ಸಂಪರ್ಕ ಸಂಖ್ಯೆ: 080 2588 0607/643

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT