ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಯಾಸ್‌ ದುರಂತ: ಪೋಷಕರ ಆಕ್ರಂದನ

ನಿರ್ಲಕ್ಷ್ಯದ ಪರಮಾವಧಿ: ಹೈಕೋರ್ಟ್‌ ಛೀಮಾರಿ
Last Updated 9 ಜೂನ್ 2014, 19:30 IST
ಅಕ್ಷರ ಗಾತ್ರ

ಶಿಮ್ಲಾ:  ಹಿಮಾಚಲ ಪ್ರದೇಶದ ಥಾಲೋಟ್‌ ಸಮೀಪ ಬಿಯಾಸ್‌ ನದಿ­ಯಲ್ಲಿ ಹೈದರಾ­ಬಾದ್‌ನ ವಿಎನ್‌ಆರ್‌ ವಿಜ್ಞಾನ ಜ್ಯೋತಿ ಎಂಜಿನಿಯರಿಂಗ್‌ ಕಾಲೇಜಿನ 24 ವಿದ್ಯಾರ್ಥಿಗಳು ಕೊಚ್ಚಿ ಹೋದ ಪ್ರಕರಣವು ಲರ್ಜಿ ಜಲ ವಿದ್ಯುತ್‌ ಯೋಜನೆ ಅಧಿಕಾರಿಗಳ ‘ನಿರ್ಲಕ್ಷ್ಯದ ಪರ­ಮಾವಧಿ’ ಎಂದು ರಾಜ್ಯ ಹೈಕೋರ್ಟ್‌ ಛೀಮಾರಿ ಹಾಕಿದೆ.

ಈ ನಡುವೆ ವಿದ್ಯಾರ್ಥಿಗಳ ಪೋಷಕ­ರಲ್ಲಿ ಕೆಲವರು ಈಗಾಗಲೇ ಘಟನಾ ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ.  ತಮ್ಮ ಮಕ್ಕಳು ಬದುಕಿ ಬರುತ್ತಾರೆ ಎಂಬ ಆಸೆಯಿಂದ ಕಾಯುತ್ತಿದ್ದಾರೆ.

ಸುದ್ದಿ ತಿಳಿದ ಕೂಡಲೇ  ಕೆಲವರು ಚಂಡೀ­ಗಡಕ್ಕೆ ಪ್ರಯಾಣ ಬೆಳೆಸಿದರು. ಮತ್ತೆ ಕೆಲವರು ಹೈದರಾಬಾದ್‌ ಕಾಲೇಜು ಕ್ಯಾಂಪಸ್‌ಗೆ ತೆರಳಿ ಹೆಚ್ಚಿನ ಮಾಹಿತಿ ಪಡೆಯಲು ಪ್ರಯತ್ನಿಸಿದರು. ಆದರೆ ಅಲ್ಲಿ ಭದ್ರತಾ ಸಿಬ್ಬಂದಿ ಬಿಟ್ಟರೆ ಬೇರೆ ಯಾರೂ ಇರ­ಲಿಲ್ಲ. ಆತನ ಬಳಿ ಯಾವುದೇ ಮಾಹಿತಿ ಇರಲಿಲ್ಲ. ಮೊದಲೇ ಸಂಕಟದಲ್ಲಿದ್ದ ಪೋಷಕರು ರೊಚ್ಚಿಗೆದ್ದರು.

ಹಿಮಾಚಲಪ್ರದೇಶಕ್ಕೆ ವಿಶೇಷ  ವಿಮಾ­­ನ­­ದಲ್ಲಿ ಕರೆದೊಯ್ಯುವುದಾಗಿ  ಕಾಲೇಜು ಆಡಳಿತ ಮಂಡಳಿ ಹಾಗೂ ತೆಲಂಗಾಣ ಸರ್ಕಾರ ಪೋಷಕರಿಗೆ ಭರ­ವಸೆ ನೀಡಿದೆ. ‘ಶಂಷಾಬಾದ್‌್ ವಿಮಾನ ನಿಲ್ದಾಣ­ದಲ್ಲಿ ಕಾದಿದ್ದೇ ಬಂತು. ಕಾಲೇಜು, ಸರ್ಕಾ­ರದ ಕಡೆಯಿಂದ ಒಬ್ಬರ ಸುಳಿವೂ ಇರ­ಲಿಲ್ಲ’ ಎಂದು ವಿದ್ಯಾರ್ಥಿ­ಯೊಬ್ಬನ ತಂದೆ ಎನ್‌.­ಮಲ್ಲೇಶ್‌್ ಆಕ್ರೋಶದಿಂದ ನುಡಿದರು.

ಸಿಟ್ಟಿಗೆದ್ದ ಪೋಷಕರು ವಿಮಾನ­ನಿಲ್ದಾಣದ ಆವರಣದಲ್ಲಿಯೇ ಧರಣಿ ನಡೆಸಿ­ದರು. ಸರ್ಕಾರದ ವಿರುದ್ಧ ಘೋಷ­­ಣೆ­ಗಳನ್ನು ಕೂಗಿದರು. ಅಲ್ಲದೇ ತೆಲಂಗಾಣ ಗೃಹ ಸಚಿವ ಎನ್‌.ನರಸಿಂಹ ರೆಡ್ಡಿ ಅವರಿಗೆ ಘೇರಾವ್‌್ ಹಾಕಿದರು.

ಕಣ್ಣ ಮುಂದೆಯೇ ತೇಲಿಹೋದರು:  ‘ಸಂಜೆ 5.30ರ ಸಮಯ. ಬಂಡೆಗಳ ಮೇಲೆ ಕೂತು ಛಾಯಾಚಿತ್ರ ತೆಗೆಯು­ತ್ತಿದ್ದೆವು. ನದಿಯ ಮಧ್ಯದಲ್ಲಿ ಬೃಹತ್‌ ಬಂಡೆಗಲ್ಲು ಇದೆ.  ಆ ಬಂಡೆಗಲ್ಲು ಏರ­ಬೇಕು ಎನ್ನುವುದು ಎಲ್ಲರ ಬಯಕೆ­ಯಾಗಿತ್ತು.  ಕೆಲವರು ಸಣ್ಣ ಸಣ್ಣ ಬಂಡೆ­ಗಳ ಮೇಲೆ ಹೆಜ್ಜೆ ಇಡುತ್ತ ಅತ್ತ ಹೋಗು­ತ್ತಿದ್ದರು. ಸುಮಾರು ಹತ್ತು ನಿಮಿಷದ ಬಳಿಕ ಏಕಾಏಕಿ ನೀರಿನ ಮಟ್ಟ ಏರತೊ­ಡಗಿತು. ಕೂಡಲೇ ನಾನು ದಡ ಸೇರಿ ಎಲ್ಲರನ್ನೂ ಎಚ್ಚರಿಸಿದೆ. ನನ್ನ ಕಣ್ಣ ಮುಂದೆಯೇ 15ರಿಂದ 20 ವಿದ್ಯಾರ್ಥಿ­ಗಳು ತೇಲಿಹೋದರು. ಲಾರ್ಜಿ ಜಲಾ­ಶ­ಯದಿಂದ ನೀರು ಬಿಡುವ ಬಗ್ಗೆ ಯಾರೂ ಮುನ್ಸೂಚನೆ ನೀಡಲಿಲ್ಲ. ಅಲ್ಲದೇ ನದಿ ದಂಡೆಯಲ್ಲಿ ಅಪಾಯದ ಮಟ್ಟ ಸೂಚಿಸುವ ಫಲಕವೂ ಇರಲಿಲ್ಲ’ ಎಂದು  ವಿದ್ಯಾರ್ಥಿ ಸುಹರ್ಷ ಹೇಳಿದ್ದಾರೆ.

ಐವರ ಶವ ಪತ್ತೆ:  24 ವಿದ್ಯಾರ್ಥಿಗಳ ಪೈಕಿ ಐವರ ಮೃತದೇಹಗಳು ಪತ್ತೆಯಾಗಿವೆ. 

ಶೋಧ ಕಾರ್ಯ: ಪೊಲೀಸ್‌, ಗೃಹ ರಕ್ಷಕ ದಳ ಮತ್ತು ಸ್ಥಳೀಯ ಈಜು­ಗಾರರನ್ನು ಒಳಗೊಂಡ ಎಸ್‌ಎಸ್‌ಬಿ ತಂಡ ನಾಪತ್ತೆಯಾದವರಿಗೆ ಶೋಧ ಕಾರ್ಯ ಮುಂದುವರಿಸಿದೆ. ನೀರಿನ ಸೆಳೆತ ಹೆಚ್ಚಿರುವುದರಿಂದ ಕೊಚ್ಚಿ ಹೋಗಿರುವ ವಿದ್ಯಾರ್ಥಿ ಗಳು ಬದು­ಕುಳಿದಿರುವ ಸಾಧ್ಯತೆ
ಕಡಿಮೆ. ದೋಣಿ ಸಂಖ್ಯೆ ಕಡಿಮೆ ಇರುವು­ದರಿಂದ ಶೋಧ ಕಾರ್ಯಕ್ಕೆ ಅಡ್ಡಿಯಾ­ಗಿದೆ. ಆದರೂ ಸಿಬ್ಬಂದಿ ನದಿಯುದ್ದಕ್ಕೂ   ಶೋಧ ನಡೆಸುತ್ತಿ­ದ್ದಾರೆ’ ಎಂದು ಎಸ್‌ಎಸ್‌ಬಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಧ್ಯೆ ಕೇಂದ್ರ ಗೃಹ ಸಚಿವಾಲಯ ಘಟನೆ ಕುರಿತು ರಾಜ್ಯ ಸರ್ಕಾರದಿಂದ ವರದಿ ಕೇಳಿದೆ. 

ಅನುಮತಿ ಪಡೆಯಲಾಗಿತ್ತು: ಹಿಮಾಚಲ ಪ್ರದೇಶಕ್ಕೆ ಪ್ರವಾಸಕ್ಕೆ ತೆರಳಲು ವಿದ್ಯಾರ್ಥಿಗಳ ಪಾಲಕರಿಂದ ಅನುಮತಿ ಪಡೆಯಲಾಗಿತ್ತು ಎಂದು ಕಾಲೇಜಿನ ಆಡಳಿತ ಮಂಡಳಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT