ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಲ್ಡರ್‌ಗಳ ಮೇಲೂ ಕ್ರಮ

ಅನಧಿಕೃತ ಬಡಾವಣೆ, ಅಪಾರ್ಟ್‌ಮೆಂಟ್‌ ನಿರ್ಮಾಣ ತಡೆಗೆ ಕಾಯ್ದೆ
Last Updated 6 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅನಧಿಕೃತ ಬಡಾವಣೆ ಮತ್ತು ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿ­ಸುವ ನಿರ್ಮಾಣದಾರರು (ಬಿಲ್ಡರ್‌ಗಳು) ಮತ್ತು ಅವರಿಗೆ ನೆರವಾಗುವ ಅಧಿಕಾರಿಗಳನ್ನು ಶಿಕ್ಷೆಗೆ ಗುರಿಪಡಿಸುವ ಹೊಸ ಕಾನೂನನ್ನು ರಾಜ್ಯದಲ್ಲಿ ಜಾರಿ ಮಾಡಲಾಗುವುದು ಎಂದು ಕಾನೂನು ಸಚಿವ ಟಿ.ಬಿ.­ಜಯಚಂದ್ರ ಶುಕ್ರವಾರ ಹೇಳಿದರು.

‘ಈಗಿನ ಕಾನೂನಿನಲ್ಲಿ ಕೇವಲ ಮನೆ ಮಾಲೀಕರಿಗೆ ದಂಡ ವಿಧಿಸುವ ಮತ್ತು ಕಾನೂನು ಕ್ರಮ ತೆಗೆದುಕೊಳ್ಳುವ ಅವಕಾಶ ಇದೆ. ಅಕ್ರಮಕ್ಕೆ ಪ್ರಮುಖ­ವಾಗಿ ಕಾರಣರಾದ ಬಿಲ್ಡರ್‌ಗಳ ಮೇಲೆ ನೇರವಾಗಿ ಕ್ರಮ ತೆಗೆದುಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಅವರನ್ನೂ ಶಿಕ್ಷೆಗೆ ಗುರಿಪಡಿಸುವ ಉದ್ದೇಶ ಇದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

‘ಅಕ್ರಮ ಬಡಾವಣೆ ಅಥವಾ ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆ ಸ್ಥಳೀಯ ಅಧಿಕಾರಿಗಳನ್ನೂ ಹೊಣೆಗಾರರನ್ನಾಗಿ ಮಾಡಲಾಗು­ವುದು. ಅವರು ಅದನ್ನು ತಡೆಯದೇ ಇದ್ದ ಪಕ್ಷದಲ್ಲಿ ಅವರು ಕೂಡ ಅಕ್ರಮಕ್ಕೆ ಸಹಕರಿಸಿದ್ದಾರೆಂದು ಭಾವಿಸಿ, ಅವರ ಮೇಲೂ ಕ್ರಮ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗುವುದು’ ಎಂದು ಹೇಳಿದರು.

ಸರ್ಕಾರದ ಪಾತ್ರ ಇಲ್ಲ: ‘ಜಿ–ಕೋಟಾ ನಿವೇಶನ ಹಂಚಿಕೆ ವಿವಾದ ಕುರಿತು ಪದ್ಮರಾಜ್‌ ಆಯೋಗವು ವಿಚಾರಣೆ ಕಾಲಕ್ಕೆ ಹೈಕೋರ್ಟ್‌ ಮಾರ್ಗ­ಸೂಚಿಗಳನ್ನು ಪಾಲಿಸಿಲ್ಲ ಎಂದು ಸ್ವತಃ ಹೈಕೋರ್ಟ್‌ ಹೇಳಿತ್ತು. ಅದನ್ನೇ ಆಧಾರವಾಗಿ ಇಟ್ಟುಕೊಂಡು ಅದು ಮತ್ತೊಂದು ಸಮಿತಿ ರಚಿಸಿದೆ. ಇದರಲ್ಲಿ ಸರ್ಕಾರದ ಪಾತ್ರ ಏನೂ ಇಲ್ಲ’ ಎಂದು ಸಚಿವ ಜಯಚಂದ್ರ ಹೇಳಿದರು.

‘ಪದ್ಮರಾಜ್‌ ಆಯೋಗದ ವರದಿಗೆ ಆದ ಗತಿಯೇ ಅರ್ಕಾವತಿ ಡಿನೋಟಿಫಿ­ಕೇಷನ್‌ ಅಕ್ರಮ ಕುರಿತ ತನಿಖೆಗೆ ನೇಮಿ­ಸಿ­ರುವ ನ್ಯಾಯಮೂರ್ತಿ ಎಚ್.ಎಸ್‌.­ಕೆಂಪಣ್ಣ ಆಯೋಗದ ವರದಿಗೂ ಆಗುತ್ತದೆ ಎನ್ನುವ ಊಹೆ ಸರಿಯಲ್ಲ’ ಎಂದರು.

‘ಆಯೋಗವನ್ನು ವಿರೋಧಿಸುತ್ತಿದ್ದ ಬಿಜೆಪಿಯೇ ಅದರ ಮುಂದೆ ದಾಖಲೆ ಸಲ್ಲಿಸಿದೆ. ಅದೇ ರೀತಿ ಜೆಡಿಎಸ್‌ ಕೂಡ ಮಾಡಬಹುದು’ ಎಂದು ಜಯಚಂದ್ರ ಹೇಳಿದರು.

ಅಕ್ರಮ– ಸಕ್ರಮ ಅವಧಿ ವಿಸ್ತರಣೆ
ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಇತರ ನಗರ, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿನ ಸರ್ಕಾರಿ ಜಮೀನುಗಳಲ್ಲಿ ಮನೆ ಕಟ್ಟಿಕೊಂಡವರು ಸಕ್ರಮಕ್ಕೆ ಅರ್ಜಿ ಸಲ್ಲಿಸುವ ಅವಧಿಯನ್ನು ಮೇ 31ರವರೆಗೆ ವಿಸ್ತರಿಸಲಾಗಿದೆ ಎಂದು ಸಚಿವ ಜಯಚಂದ್ರ ತಿಳಿಸಿದರು.

ನಗರ ಪ್ರದೇಶಗಳಲ್ಲಿ 20X30 ಅಡಿ ನಿವೇಶನದಲ್ಲಿ ಮನೆ ಕಟ್ಟಿಕೊಂಡವರು ಮಾತ್ರ ಸಕ್ರಮಕ್ಕೆ ಅರ್ಜಿ ಸಲ್ಲಿಸಬಹುದು. ನಗರಾಭಿವೃದ್ಧಿ ಪ್ರಾಧಿಕಾರಗಳ ಜಾಗಗಳಲ್ಲಿ ಮನೆ ಕಟ್ಟಿಕೊಂಡವರಿಗೆ ಇದು ಅನ್ವಯ ಆಗುವುದಿಲ್ಲ ಎಂದು ಅವರು ಹೇಳಿದರು.

ಗ್ರಾಮೀಣ ಪ್ರದೇಶದಲ್ಲಿ 60X40 ಅಳತೆವರೆಗಿನ ನಿವೇಶನಗಳಲ್ಲಿ ಕಟ್ಟಿದ ಮನೆಗಳನ್ನು ಸಕ್ರಮ ಮಾಡಲು ಈ ಮೊದಲು ತೀರ್ಮಾನಿಸಲಾಗಿತ್ತು. ಈಗ ಅದನ್ನು 50X80 ಅಳತೆವರೆಗಿನ ನಿವೇಶನಗಳಿಗೂ ವಿಸ್ತರಿಸಲಾಗಿದೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT