ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಲ್‌ ಪಾವತಿಗೆ ‘ಇ–ಪೇಮೆಂಟ್‌’ ವ್ಯವಸ್ಥೆ

ಪಾಲಿಕೆ ಚಟುವಟಿಕೆಗಳ ಬಗ್ಗೆ ಟ್ವಿಟರ್‌, ಫೇಸ್‌ಬುಕ್‌ನಲ್ಲಿ ಮಾಹಿತಿ
Last Updated 22 ಡಿಸೆಂಬರ್ 2014, 19:37 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಕಾಮಗಾರಿಗಳ ಬಿಲ್‌ ಪಾವತಿಗೆ ಆನ್‌ಲೈನ್‌  (ಇ–ಪೇಮೆಂಟ್‌) ವ್ಯವಸ್ಥೆ ರೂಪಿಸ­ಲಾಗಿದ್ದು, ಬುಧವಾರ (ಡಿ.24) ಈ ನೂತನ ವ್ಯವಸ್ಥೆ ಜಾರಿಗೆ ಬರಲಿದೆ. ಬಿಲ್‌ ಪಾವತಿಗೆ ಸಂಬಂಧಿಸಿದ ಕಡತಗಳನ್ನು ಆನ್‌ಲೈನ್‌ನಲ್ಲೇ ವೀಕ್ಷಿಸಬಹುದಾಗಿದೆ.

ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಆಡಳಿತ ಪಕ್ಷದ ನಾಯಕ ಎನ್‌.ಆರ್‌.ರಮೇಶ್‌, ‘ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿ ಕಚೇರಿಯ ಆಡಳಿತ  ಪ್ರಕ್ರಿಯೆ ಇನ್ನು ಸಂಪೂರ್ಣ ಆನ್‌ಲೈನ್‌ನಲ್ಲಿ ನಡೆಯಲಿದೆ. ಕಾಮ­ಗಾರಿಗಳಿಗೆ ಸಂಬಂಧಿಸಿದಂತೆ ಬಿಲ್‌ ಪಾವತಿಯನ್ನು ಆನ್‌ಲೈನ್‌ ಮೂಲಕವೇ ಮಾಡಬೇಕು’ ಎಂದರು.

‘ಪಾರದರ್ಶಕತೆ ತರುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಿದ್ದೇವೆ. ಈ ವ್ಯವಸ್ಥೆಯಿಂದ ಹಿರಿತನದ ಆಧಾರದ ಮೇಲೆ ಬಿಲ್‌ ಪಾವತಿಸಲು ಸುಲಭ­ವಾಗುತ್ತದೆ. ಪಾಲಿಕೆಗೆ ಜಮೆಯಾಗುವ ಹಣವನ್ನು ಆದ್ಯತೆ ಮೇರೆಗೆ ಬಿಡುಗಡೆ ಮಾಡಬಹುದು. ವಿಶೇಷ ಎಲ್‌ಒಸಿ (ಸಾಲದ ಹೊಣೆಗಾರಿಕೆ ಪತ್ರ) ವಿವಾದಕ್ಕೂ ತೆರೆ ಬೀಳಲಿದೆ’ ಎಂದು ತಿಳಿಸಿದರು.

‘357 ಬಗೆಯ ಬಿಲ್‌ ಪಾವತಿಗಳನ್ನು ಈ ವ್ಯವಸ್ಥೆಯಲ್ಲಿ ನಿರ್ವಹಿಸಲಾಗುವುದು. ನೌಕರ ರಿಗೂ ಆನ್‌ಲೈನ್‌ ಮೂಲಕವೇ ವೇತನ ಪಾವತಿಸ­ಲಾಗುವುದು. ಈ ವ್ಯವಸ್ಥೆ ಅಳವಡಿಸಲು ಕಂದಾಯ ವಿಭಾಗದ ಸಿಬ್ಬಂದಿಗೆ ನಾಲ್ಕು ದಿನಗಳ ತರಬೇತಿ ನೀಡಲಾಗುವುದು’ ಎಂದು ಮಾಹಿತಿ ನೀಡಿದರು.

‘ಈ ವ್ಯವಸ್ಥೆಯಲ್ಲಿ ಸಹಾಯಕ ಎಂಜಿನಿಯರ್‌­ಗಳು ಕಾಮಗಾರಿ ಆರಂಭವಾಗುವ ಮೊದಲು, ಸ್ಥಳದ ಛಾಯಾಚಿತ್ರ ತೆಗೆದು ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಬೇಕು. ಬಳಿಕ ಕೆಲಸ ಮಾಡುವಾಗಿನ ಅವಧಿಯ ಛಾಯಾಚಿತ್ರ ಹಾಕ­ಬೇಕು. ಆ ನಂತರ ಕಾಮಗಾರಿ ಮುಗಿದ ಚಿತ್ರ ಹಾಗೂ ಇತರ ಮಾಹಿತಿಗಳನ್ನು ಅಪ್‌ಲೋಡ್‌ ಮಾಡಬೇಕು. ಈ ಪ್ರಕ್ರಿಯೆ ಆಧರಿಸಿ  ಹಣ ಬಿಡು­ಗಡೆ ಮಾಡಲಾಗುವುದು’ ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ ಪಾಲಿಕೆಯ ಫೇಸ್‌ಬುಕ್‌, ಟ್ವಿಟರ್‌ ಖಾತೆಗಳಿಗೂ ಚಾಲನೆ ನೀಡಲಾಯಿತು.
‘ಪಾಲಿಕೆಯ ಎಲ್ಲಾ ವಿಭಾಗಗಳಿಗೆ ಸಂಬಂಧ­ಪಟ್ಟ ದೂರುಗಳು, ಅಭಿಪ್ರಾಯಗಳು, ಸಲಹೆಗ­ಳನ್ನು ಸಾರ್ವಜನಿಕರರು ಫೇಸ್‌ಬುಕ್‌ ಹಾಗೂ ಟ್ವಿಟರ್‌ನಲ್ಲಿ ದಾಖಲಿಸಬಹುದು. ಅಲ್ಲದೇ, ಪಾಲಿಕೆ ಚಟುವಟಿಕೆಗಳ ಬಗ್ಗೆಯೂ ಈ ಖಾತೆಗಳ ಮೂಲಕ ಮಾಹಿತಿ ನೀಡಲಾಗುವುದು’ ಎಂದು ಮೇಯರ್‌ ಎನ್‌.ಶಾಂತಕುಮಾರಿ ತಿಳಿಸಿದರು.

ಪಾಲಿಕೆಯ ತಾಂತ್ರಿಕ ಸಲಹೆಗಾರ ಶೇಷಾದ್ರಿ ಅವರು ಪ್ರಾತ್ಯಕ್ಷಿಕೆ ತೋರಿಸಿದರು. ಆಯುಕ್ತ ಎಂ. ಲಕ್ಷ್ಮಿನಾರಾಯಣ,  ಬೃಹತ್‌ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾ ವಿವೇಕಾನಂದ ಹಾಗೂ ಇತರ ಸದಸ್ಯರು ಇದ್ದರು.

‘ವಾಜಪೇಯಿ ಛಾಯಾಚಿತ್ರ’ ಪದರ್ಶನ
ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜ­ಪೇಯಿ ಅವರ ಹುಟ್ಟುಹಬ್ಬ (ಡಿ.25) ಅಂಗ ವಾಗಿ ಪಾಲಿಕೆಯು ಡಿ.24ರಂದು ಡಾ.ರಾಜ್‌ ಕುಮಾರ್‌ ಗಾಜಿನ ಮನೆಯಲ್ಲಿ ‘ವಾಜಪೇಯಿ ಛಾಯಾಚಿತ್ರ’ ಪ್ರದರ್ಶನ ಏರ್ಪಡಿಸಿದೆ.

‘ವಾಜಪೇಯಿ ಅವರು 1957ರಲ್ಲಿ ಪ್ರಥಮ ಬಾರಿ ಲೋಕಸಭೆ ಪ್ರವೇಶಿಸಿದಾಗಿ ನಿಂದ ಹಿಡಿದು ಇದುವರೆಗಿನ ಛಾಯಾಚಿತ್ರ ಗಳನ್ನು ಪ್ರದರ್ಶಿಸಲಾಗುವುದು. ಅಲ್ಲದೇ, ಅವರು ಮಾಡಿದ ಭಾಷಣಗಳು, ನೀಡಿದ ಸಂದರ್ಶನದ ವಿಡಿಯೊ ದೃಶ್ಯಗಳನ್ನು ಎಲ್‌.ಇ.ಡಿ ಪರದೆ ಮೇಲೆ ತೋರಿಸಲಾ ಗುವುದು’ ಎಂದು ಮೇಯರ್‌ ಶಾಂತಕುಮಾರಿ ತಿಳಿಸಿದರು.

ಟ್ವಿಟರ್‌ ವಿಳಾಸ: @mayor_bangalore

ಫೇಸ್‌ಬುಕ್‌ ವಿಳಾಸ: Worshipful Mayor-BBMP

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT