ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಯೂಟ: ಅವಘಡ ತಪ್ಪಿಸಿ

Last Updated 21 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಶಾಲಾ ಮಕ್ಕಳಿಗೆ ಪೂರೈಸುವ ಮಧ್ಯಾಹ್ನದ ಬಿಸಿಯೂಟ ತಯಾರಿಕೆ ಮತ್ತು ವಿತರಣೆಯಲ್ಲಿ ಮತ್ತಷ್ಟು ಮುತುವರ್ಜಿ ಮತ್ತು ಎಚ್ಚರಿಕೆ ವಹಿಸುವ ಅಗತ್ಯವನ್ನು ಬೆಂಗಳೂರಿನ ದೇವರಜೀವನಹಳ್ಳಿ ಪ್ರಕರಣ ಎತ್ತಿ­ತೋರಿಸಿದೆ. ಇಲ್ಲಿನ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ  ನಂಜೇರಿದ ಆಹಾರ ಸೇವಿಸಿ 355 ಮಕ್ಕಳು ಅಸ್ವಸ್ಥರಾಗಿ ಪೋಷಕರನ್ನು ಆತಂಕಕ್ಕೆ ದೂಡಿ­ದ್ದರು.

ಅದೃಷ್ಟವಶಾತ್‌ ಮಕ್ಕಳೆಲ್ಲರೂ ಚೇತರಿಸಿಕೊಂಡಿದ್ದಾರೆ ಎಂಬುದು ಸಮಾ­ಧಾನದ ಸಂಗತಿಯಾದರೂ ಇಂತಹ ಅವಘಡಗಳು ಮರುಕಳಿಸದಂತೆ ಎಲ್ಲ ಬಗೆಯ ಮುನ್ನೆಚ್ಚರಿಕೆ ವಹಿಸಲು ಈ ಪ್ರಕರಣ ಮತ್ತೊಮ್ಮೆ ಎಚ್ಚರಿಕೆಯ ಗಂಟೆ ಬಾರಿಸಿದೆ. ಕಳೆದ ವರ್ಷ ಬಿಹಾರದ ಸರನ್‌ ಜಿಲ್ಲೆಯ ಸರ್ಕಾರಿ ಶಾಲೆ­ಯೊಂದರಲ್ಲಿ ಮಧ್ಯಾಹ್ನದ ಊಟ ಸೇವಿಸಿದ 23 ಮಕ್ಕಳು ಅಸುನೀಗಿದ್ದರು. ಈ ಅವಘಡ ದೇಶದಾದ್ಯಂತ ಆಘಾತ ಮೂಡಿಸಿತ್ತು. 

ಅದರಿಂದ ಪಾಠ ಕಲಿ­ತಿಲ್ಲ ಎಂಬುದಕ್ಕೆ ಬೆಂಗಳೂರಿನ ಪ್ರಕರಣವೇ ತಾಜಾ ನಿದರ್ಶನ. ಶಾಲಾ ಮಕ್ಕ­ಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವುದು ರಾಷ್ಟ್ರೀಯ ಕಾರ್ಯಕ್ರಮ. ಇದು,  ಮಕ್ಕಳ ಹಾಜರಾತಿ ಪ್ರಮಾಣ ಹೆಚ್ಚಿಸುವುದು, ಅಪೌಷ್ಟಿಕತೆ ಹಾಗೂ ಸಾಮಾ­ಜಿಕ ತಾರತಮ್ಯ ನಿವಾರಿಸುವಂತಹ ಉದಾತ್ತ ಧ್ಯೇಯವನ್ನು ಹೊಂದಿದೆ. ಸುಮಾರು 11 ಕೋಟಿ ಮಕ್ಕಳು ಬಿಸಿಯೂಟ ಸೇವಿಸುತ್ತಿದ್ದಾರೆ. ಇದು ವಿಶ್ವದ ಬೃಹತ್‌ ಶಾಲಾ ಊಟದ ಯೋಜನೆಯಾಗಿದೆ. ಆದರೆ ಅನು­ಷ್ಠಾನ­ದಲ್ಲಿನ ಲೋಪ­ಗಳು ಅವಘಡಗಳಿಗೆ ಎಡೆಮಾಡಿಕೊಡುತ್ತಿರುವುದು ಅತ್ಯಂತ ದುರ­ದೃಷ್ಟದ ಸಂಗತಿ. ನ್ಯೂನತೆಗಳನ್ನು ಸರಿಪಡಿಸಲು ಸರ್ಕಾರ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲೇಬೇಕು.

ಶಿಕ್ಷಣದ ಗುರಿ ಸಾಧನೆಯಲ್ಲಿ ಬಿಸಿಯೂಟ ಪ್ರಮುಖ ಪಾತ್ರವನ್ನು ವಹಿಸು­ತ್ತಿದೆ. ಕೆಲವು ರಾಜ್ಯಗಳಲ್ಲಿ ಬಿಸಿಯೂಟ ಪೂರೈಕೆ ಹೊಣೆಯನ್ನು ಸರ್ಕಾರವೇ ವಹಿಸಿಕೊಂಡಿದೆ. ಹಲವೆಡೆ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲೂ ಅನುಷ್ಠಾನಗೊಂಡಿದೆ. ನಿರ್ವಹಣೆ ಚೆನ್ನಾಗಿರುವ ಕಡೆ ಸಮರ್ಪಕವಾಗಿ ನಡೆ­ದಿದೆ. ಇಂತಹ ಸಮರ್ಪಕತೆಯನ್ನು ಎಲ್ಲ ಕಡೆ ಕಾಯ್ದುಕೊಳ್ಳುವುದು ಸರ್ಕಾ­ರದ ಆದ್ಯ ಕರ್ತವ್ಯ ಆಗಬೇಕು. ಮುಗ್ಧ ಮಕ್ಕಳ ಹಸಿವು ತಣಿಸಬೇಕಾದ ಊಟ, ಯಾರೋ ಒಂದಿಬ್ಬರ ನಿರ್ಲಕ್ಷ್ಯದಿಂದ ಆತಂಕಕ್ಕೆ ಕಾರಣವಾಗ­ಬಾರದು.

ಶಾಲೆ­ಗಳು ಮೂಲಸೌಕರ್ಯಗಳಿಂದ ವಂಚಿತವಾಗಿರುವುದೂ ಇಂತಹ ಅವಘಡ­ಗಳು ಸಂಭವಿಸಲು ಒಂದು ಕಾರಣ. ದೇವರಜೀವನಹಳ್ಳಿ ಶಾಲೆ ಅವ್ಯವಸ್ಥೆ­ಯಿಂದ ಕೂಡಿದೆ ಎಂಬುದನ್ನು ಪ್ರಾಥಮಿಕ ಮತ್ತು ಪ್ರೌಢ­ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರೇ ಒಪ್ಪಿಕೊಂಡಿದ್ದಾರೆ. ಮೂಲ ಸೌಕರ್ಯ ವೃದ್ಧಿಗೆ ₨ 1 ಕೋಟಿ ಅನುದಾನ ಬಿಡುಗಡೆ ಮಾಡುವು­ದಾ­ಗಿಯೂ ಪ್ರಕಟಿಸಿ­ದ್ದಾರೆ. ಇಂತಹ ಅವ್ಯವಸ್ಥೆ ಈ ಶಾಲೆಗಷ್ಟೇ ಸೀಮಿತ ಎಂದು ಭಾವಿಸಬೇಕಾಗಿಲ್ಲ. ಪ್ರಾಥಮಿಕ ಶಿಕ್ಷಣವನ್ನು ಕಡೆಗಣಿಸಿರುವುದರ ದ್ಯೋತಕ ಇದು.

ಶಾಲಾ ಪರಿಸರದಲ್ಲಿ ಅದರಲ್ಲೂ ಅಡುಗೆ ಕೋಣೆಯಲ್ಲಿ ನೈರ್ಮಲ್ಯ ಕಾಪಾಡುವುದು ಆದ್ಯತೆ ಆಗ­ಬೇಕು. ‘ಇಸ್ಕಾನ್’ ಸಂಸ್ಥೆಯು ತನ್ನ ಅಕ್ಷಯ ಪಾತ್ರೆ ಯೋಜನೆಯಡಿ ತಯಾ­ರಿ­ಸಿದ ಊಟವನ್ನು ಈ ಶಾಲೆಗೆ ಪೂರೈಸಿತ್ತು. ‘ಈ ಶಾಲೆಗೆ ನೀಡಿದ ಆಹಾರವನ್ನೇ ಇನ್ನೂ ಕೆಲವು ಶಾಲೆಗಳಿಗೆ ಪೂರೈ­ಸ­ಲಾಗಿತ್ತು. ಈ ಶಾಲೆ ಹೊರತುಪಡಿಸಿ ಬೇರೆ ಎಲ್ಲಿಂದಲೂ ದೂರು ಬಂದಿಲ್ಲ’ ಎಂದು ಸಂಸ್ಥೆಯ ಪ್ರತಿನಿಧಿಗಳು ಹೇಳಿದ್ದಾರೆ. ಹೀಗಾಗಿ ಆಹಾರ ನಂಜೇರಲು ಕಾರಣರಾದವರನ್ನು ಪತ್ತೆ ಹಚ್ಚಬೇಕು. ತಪ್ಪಿತಸ್ಥರ ವಿರುದ್ಧ  ಕ್ರಮ ಕೈಗೊಳ್ಳ­ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT