ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲಿಗೆ ಹಸಿರೆಲೆಯ ರಕ್ಷಣೆ

Last Updated 21 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಮಳೆ, ಚಳಿ, ಬಿಸಿಲು ಎನ್ನುವ ಭೇದವಿಲ್ಲದೆ ಎಂದೆಂದಿಗೂ ಅಂದ ಚಂದದ ಗೊಂಬೆಯಂತಿರಬೇಕು, ನನ್ನನ್ನು ಇತರರು ನೋಡಿ ಹುಬ್ಬೇರಿಸಬೇಕು ಎಂದು ಮಹಿಳೆ ಬಯಸುವುದು ಸಹಜ. ಆದರೆ ಬೇಸಿಗೆಯ ಬಿಸಿಲು ಮಹಿಳೆಯರನ್ನು ಮಂಕಾಗಿಸುತ್ತದೆ. ಎಷ್ಟೇ ಮೇಕಪ್ ಮಾಡಿಕೊಂಡರೂ  ಮುಖದ ತುಂಬಾ ಬೆವರು, ಜಿಡ್ಡು ಆವರಿಸಿ ಕಳಹೀನರಾಗುತ್ತೇವೆ..  ಹಸಿರು ಎಲೆಗಳಿಂದ ನಮ್ಮ ಸೌಂದರ್ಯವನ್ನು ಕಳೆಗುಂದದಂತೆ ನೋಡಿಕೊಳ್ಳಬಹುದು. ಸೌಂದರ್ಯ ಕ್ಕೊಂದು ಹೊಸ ಚೈತನ್ಯ ನೀಡಬಹುದು.

ತುಳಸಿ ಎಲೆ
ಬಿಸಿಲಿಗೆ  ಬೆವರುವುದು, ಮುಖದ ಮೇಲೆ ಎಣ್ಣೆ ಯಂತಹ ಜಿಡ್ಡು ಕಾಣಿಸಿಕೊಳ್ಳುವುದು ಸಹಜ. ಕೆಲವರಿಗೆ ಮುಖದ ಮೇಲೆ ಕೆಂಪು ಗುಳ್ಳೆ, ಮೊಡವೆ  ಕಾಣಿಸಿಕೊಳ್ಳುತ್ತವೆ. ಅಂಥವರು ತುಳಸಿ ರಸವನ್ನು ದಿನದಲ್ಲಿ ಎರಡು ಬಾರಿ ಹಚ್ಚಿಕೊಳ್ಳುತ್ತಾ ಬಂದರೆ ಕೆಲವೇ ದಿನಗಳಲ್ಲಿ ಮೊಡವೆ ಮಾಯವಾಗುತ್ತವೆ. ಜಿಡ್ಡು ನಿಯಂತ್ರಣಕ್ಕೆ ಬಂದು ಮುಖ ಕಾಂತಿಯಿಂದ ನಳನಳಿಸುತ್ತದೆ.

ಬೇವು, ಪುದೀನಾ, ತುಳಸಿ
ಬಿಸಿಲಲ್ಲಿ ಹೆಚ್ಚು ಓಡಾಡುವುದರಿಂದ ತ್ವಚೆ ಸುಟ್ಟುಹೋಗುತ್ತದೆ. ಇದರಿಂದ ಚರ್ಮ ಕಪ್ಪಾಗಿ ಕಾಣಿಸುತ್ತದೆ. ಅದಕ್ಕಾಗಿ ಬೇವು, ಪುದೀನಾ, ತುಳಸಿ ಎಲೆಯನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡು ಜೇನು ತುಪ್ಪ ಮತ್ತು ನಿಂಬೆ ರಸದೊಂದಿಗೆ ಪುಡಿಯನ್ನು ಬೆರೆಸಿ ಫೇಸ್ ಪ್ಯಾಕ್ ಹಾಕಿಕೊಳ್ಳಬೇಕು. ಪ್ರತಿದಿನ ಮನೆಗೆ ಬಂದಮೇಲೆ ಒಂದು ಗಂಟೆ ಮುಖಕ್ಕೆ ಈ ಫೇಸ್ ಪ್ಯಾಕ್ ಹಾಕಿಕೊಂಡರೆ ತಂಪಾದ ಅನುಭವದೊಂದಿಗೆ ಚರ್ಮವೂ ತಾಜಾತನದಿಂದ ಹೊಳೆಯುತ್ತದೆ.

ಬಿಲ್ವ ಪತ್ರೆ
ಪತ್ರೆಯನ್ನು ರುಬ್ಬಿಕೊಂಡು ಅದರ ಎರಡು ಚಮಚ ರಸಕ್ಕೆ ಒಂದು ಗ್ಲಾಸ್ ಕಡೆದ ಮಜ್ಜಿಗೆ, ಸ್ವಲ್ಪ ಬೆಲ್ಲ, ರುಚಿಗೆ ಚಿಟಿಕೆ ಉಪ್ಪನ್ನು ಬೆರೆಸಿ ಕುಡಿಯುವುದರಿಂದ ಬಿಸಿಲಿಗೆ ಉಂಟಾಗುವ ಪಿತ್ತ ಕಡಿಮೆಯಾಗುತ್ತದೆ. ಅಲ್ಲದೆ ಆರಾಮದಾಯಕ ಅನುಭವ ಉಂಟು ಮಾಡುತ್ತದೆ. ರುಬ್ಬಿಕೊಂಡಾಗ ಇರುವ ಹೆಚ್ಚಿನ ರಸವನ್ನು ಸ್ನಾನ ಮಾಡುವ ಮುನ್ನ 20 ನಿಮಿಷಗಳ ಕಾಲ ಮೈಗೆ, ತಲೆಗೆ ಹಚ್ಚಿಕೊಂಡು ನಂತರ ಸ್ನಾನ ಮಾಡಿದರೆ ದೇಹದಿಂದ ಬರುವ ದುರ್ಗಂಧ ಕಡಿಮೆಯಾಗುತ್ತದೆ.

ವೀಳ್ಯದೆಲೆ
ವೀಳ್ಯದೆಲೆಯ ರಸವನ್ನು ತೆಗೆದು ದಿನದಲ್ಲಿ ಎರಡು ಬಾರಿ ತುಟಿಗೆ ಸವರಿಕೊಂಡರೆ ತುಟಿಗಳು ಒಣಗಿ ಕಪ್ಪಾಗುವುದನ್ನು ತಡೆಯುತ್ತದೆ. ಜೊತೆಗೆ ತುಟಿ ಕೆಂಪಾಗಿರುವಂತೆ ಮಾಡುತ್ತದೆ.

ಬೇವಿನ ಎಲೆ
ಬೇವಿನ ಎಲೆಯನ್ನು ಒಣಗಿಸಿ ಪುಡಿಮಾಡಿಕೊಂಡು ನಿಂಬೆರಸದಲ್ಲಿ ಬೆರೆಸಿ ಫೇಸ್ ಪ್ಯಾಕ್ ಮಾಡಿಕೊಂಡರೆ ಮುಖದಲ್ಲಿರುವ ಕಪ್ಪುಕಲೆ, ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್ ಕೂಡಾ ನಿವಾರಣೆಯಾಗುತ್ತದೆ.

ಮೆಂತ್ಯೆ ಎಲೆ, ಮಂದಾರದ ಎಲೆ
ಮೆಂತ್ಯದೆಲೆಯ ರಸವನ್ನು ತಲೆ ಕೂದಲಿಗೆ ಹಚ್ಚಿಕೊಳ್ಳುವುದರಿಂದ ಬಿಸಿಲಿಗೆ ಒರಟಾದ ಕೂದಲು ನಯವಾಗಿ ಹೊಳಪಿನಿಂದ ಕೂಡಿರುತ್ತವೆ. ಬಿಸಿಲಿಗೆ ಉಂಟಾಗುವ ಕಣ್ಣುಉರಿಯನ್ನು ತಡೆದು ತಂಪಾದ ಅನುಭವ ನೀಡುತ್ತದೆ. ಮಂದಾರದ ಎಲೆಯನ್ನು ರುಬ್ಬಿಕೊಂಡು ಅಂಟವಾಳದ ರಸದೊಂದಿಗೆ ಕೇಶರಾಶಿಗೆ ಹಚ್ಚಿಕೊಳ್ಳಬೇಕು. ಸ್ನಾನಕ್ಕೂ ಮುಂಚೆ 30 ನಿಮಿಷಗಳಕಾಲ ಬಿಡುವುದರಿಂದ ತಲೆಕೂದಲು ಕಪ್ಪಾಗಿ ಹೊಳಪಿನಿಂದ ಕೂಡಿರುತ್ತವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT