ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲ ನಡುವೆ ಬಿರುಸಿನ ಮತದಾನ

11 ರಾಜ್ಯಗಳ 117 ಲೋಕ­ಸಭಾ ಕ್ಷೇತ್ರಗಳಿಗೆ ಆರನೇ ಹಂತದಲ್ಲಿ ಚುನಾವಣೆ
Last Updated 24 ಏಪ್ರಿಲ್ 2014, 7:14 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ ಐಎಎನ್‌ಎಸ್): ತಮಿಳುನಾಡು ಸೇರಿದಂತೆ 11 ರಾಜ್ಯಗಳ 117 ಲೋಕ­ಸಭಾ ಕ್ಷೇತ್ರಗಳಿಗೆ ಆರನೇ ಹಂತದಲ್ಲಿ ಗುರುವಾರ ಬೆಳಿಗ್ಗೆಯಿಂದ ಆರಂಭವಾಗಿರುವ ಮತದಾನವು ಬಿರು ಬಿಸಿಲಿನ ನಡುವೆಯೂ ಬಿರುಸಿನಿಂದ ಶಾಂತಿಯುತವಾಗಿ ಸಾಗಿದೆ.

16ನೇ ಲೋಕಸಭೆ ಚುನಾವಣೆಯ ಒಂಬತ್ತು ಹಂತಗಳ ಪೈಕಿ ಎರ­ಡನೇ ಅತ್ಯಂತ ದೊಡ್ಡ ಹಂತದ ಈ ಚುನಾವಣೆಯಲ್ಲಿ  2,076 ಅಭ್ಯರ್ಥಿಗಳ ಹಣೆಬರಹವನ್ನು 18 ಕೋಟಿ ಮತ­ದಾರರು ನಿರ್ಧರಿಸಲಿದ್ದಾರೆ.

ಭಾರಿ ಭದ್ರತೆಯ ನಡುವೆ ಬಹುತೇಕ ಶಾಂತಿಯುತವಾಗಿ ನಡೆದಿರುವ ಮತದಾನದಲ್ಲಿ ಆರಂಭದ ಕೆಲ ಗಂಟೆಗಳ ಅವಧಿಯಲ್ಲಿ ಪ್ರಮುಖ ರಾಜಕಾರಣಿಗಳು, ಉದ್ಯಮಿಗಳು, ಚಿತ್ರನಟರು ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಇವರೆಗೆ ಚುನಾವಣಾ ಆಯೋಗದಿಂದ ಲಭ್ಯವಾಗಿರುವ ಮಾಹಿತಿಗನುಸಾರವಾಗಿ ರಾಜ್ಯವಾರು ಮತದಾನದ ವಿವರ ಇಂತಿದೆ...

ಜಮ್ಮು ಮತ್ತು ಕಾಶ್ಮೀರ ವರದಿ: ರಾಜ್ಯದಲ್ಲಿ ಮೂರನೇ ಹಂತದಲ್ಲಿ ಅನಂತ್‌ನಾಗ ಲೋಕಸಭಾ ಸ್ಥಾನಕ್ಕಾಗಿ ಗುರುವಾರ ಬೆಳಿಗ್ಗೆಯಿಂದ ಆರಂಭವಾಗಿರುವ ಮತದಾನಕ್ಕೆ ನೀರಸ ಪ್ರತಿಕ್ರಿಯೆ ಕಂಡುಬರುತ್ತಿದೆ.

ಕಳೆದ ಒಂದು ವಾರದ ಅವಧಿಯಲ್ಲಿ ರಾಜ್ಯದಲ್ಲಿ ನಡೆದ ನಾಲ್ವರು ರಾಜಕೀಯ ಕಾರ್ಯಕರ್ತರ ಹತ್ಯೆಯ ಪ್ರಕರಣಗಳು ಮತದಾರರು ಮತದಾನಕ್ಕೆ ಹಿಂದೇಟು ಹಾಕಲು ಕಾರಣವಾಗಿದೆ ಎನ್ನಲಾಗಿದೆ. ಏತನ್ಮಧ್ಯೆ, ಕೆಲ ಮತಗಟ್ಟೆಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿರುವ ಘಟನೆಗಳು ವರದಿಯಾಗಿವೆ.

ಉತ್ತರ ಪ್ರದೇಶ ವರದಿ: ಉತ್ತರ ಪ್ರದೇಶದಲ್ಲಿ ಮೂರನೇ ಹಂತದಲ್ಲಿ 12 ಸ್ಥಾನಗಳಿಗೆ ನಡೆದಿರುವ ಮತದಾನದಲ್ಲಿ 11 ಗಂಟೆಯ ವೇಳೆಗೆ ಶೇ.24 ಅಧಿಕ ಮತದಾರರು ಮತ ಚಲಾಯಿಸಿದ್ದಾರೆ.

ಕಣದಲ್ಲಿರುವ 188 ಅಭ್ಯರ್ಥಿಗಳ ಪೈಕಿ  ಎಸ್‌ಪಿ ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್‌ (ಮೈನ್‌ಪುರಿ), ಅವರ ಸೊಸೆ ಡಿಂಪಲ್‌ ಯಾದವ್‌ (ಕನೌಜ್‌) ಮತ್ತು ವಿದೇಶಾಂಗ ಸಚಿವ ಸಲ್ಮಾನ್‌ ಖುರ್ಷಿದ್‌ (ಫರೂಖಾ­ಬಾದ್‌) ಕಣದಲ್ಲಿರುವ  ಪ್ರಮುಖರು. ಆರ್‌ಎಲ್‌ಡಿ ಮುಖ್ಯಸ್ಥ ಅಜಿತ್‌ ಸಿಂಗ್‌ ಅವರ ಪುತ್ರ ಜಯಂತ್‌ ಅವರು ಮಥುರಾದಲ್ಲಿ ಬಾಲಿವುಡ್‌ ‘ಕನಸಿನ ಕನ್ಯೆ’ ಬಿಜೆಪಿಯ ಹೇಮಾಮಾಲಿನಿ ಅವ­ರಿಂದ ಕಠಿಣ ಸ್ಪರ್ಧೆ ಎದುರಿಸುತ್ತಿದ್ದಾರೆ.

ಬಿಹಾರ ವರದಿ: 7 ಲೋಕಸಭಾ ಸ್ಥಾನಗಳಿಗೆ ಮೂರನೇ ಹಂತದಲ್ಲಿ ಗುರುವಾರ ಆರಂಭವಾಗಿರುವ ಮತದಾನವು ಚುರುಕಿನಿಂದ ಸಾಗಿದ್ದು, ಆರಂಭದ ಮೂರು ಗಂಟೆಗಳ ಅವಧಿಯಲ್ಲಿ ಶೇ.15ರಷ್ಟು ಮತದಾನವಾಗಿದೆ.

ಸ್ಪರ್ಧಾ ಕಣದಲ್ಲಿ ಒಟ್ಟು 108 ಅಭ್ಯರ್ಥಿಗಳಿದ್ದು, ಅವರಲ್ಲಿ ಹಾಲಿ ಲೋಕಸಭೆಯಲ್ಲಿ ಬಿಜೆಪಿಯ ಏಕೈಕ ಸಂಸದರಾಗಿರುವ ಶಹನವಾಜ್‌ ಹುಸೇನ್, ಎನ್‌ಸಿಪಿ ಪ್ರಧಾನ ಕಾರ್ಯ­ದರ್ಶಿ ತಾರೀಕ್‌ ಅನ್ವರ್‌, ಆರ್‌ಜೆಡಿ ನಾಯಕ ಮೊಹಮ್ಮದ್‌ ತಸ್ಲೀಮುದ್ದೀನ್‌ ಮುಂತಾದವರು ಪ್ರಮುಖರಾಗಿದ್ದಾರೆ.

ಪಶ್ಚಿಮ ಬಂಗಾಳ ವರದಿ: ಎರಡನೇ ಹಂತದಲ್ಲಿ 6 ಲೋಕಸಭಾ ಸ್ಥಾನಗಳಿಗೆ ಗುರುವಾರ ಬೆಳಿಗ್ಗೆಯಿಂದ ಆರಂಭವಾಗಿರುವ ಮತದಾನದಲ್ಲಿ ಆರಂಭದ ಮೂರು ಗಂಟೆಗಳ ಅವಧಿಯಲ್ಲಿ ಶೇ. 28ರಷ್ಟು ಮತದಾನವಾಗಿದೆ.

ಸ್ಪರ್ಧಾ ಕಣದಲ್ಲಿರುವ ಒಟ್ಟು 78 ಅಭ್ಯರ್ಥಿಗಳ ಪೈಕಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರ, ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅಭಿಜಿತ್ ಮುಖರ್ಜಿ ಪ್ರಮುಖರಾಗಿದ್ದಾರೆ.

ಛತ್ತೀಸಗಡ ವರದಿ: 7 ಲೋಕಸಭಾ ಸ್ಥಾನಗಳಿಗೆ ಮೂರನೇ ಮತ್ತು ಕೊನೆಯ ಹಂತದಲ್ಲಿ ಗುರುವಾರ  ಬೆಳಿಗ್ಗೆಯಿಂದ ಆರಂಭವಾಗಿರುವ ಮತದಾನದಲ್ಲಿ 11 ಗಂಟೆಯ ಸುಮಾರಿಗೆ ಶೇ.22 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಜಾರ್ಖಂಡ್ ವರದಿ: 4 ಲೋಕಸಭಾ ಸ್ಥಾನಗಳಿಗೆ ಗುರುವಾರ ನಡೆದ ಮೂರನೇ ಮತ್ತು ಕೊನೆಯ ಹಂತದ ಮತದಾನವು ಚುರುಕಿನಿಂದ ಕೂಡಿದ್ದು, ಮತದಾನ ಆರಂಭವಾದ ಎರಡು ಗಂಟೆಗಳ ಅವಧಿಯಲ್ಲಿ ಶೇ.13.37ರಷ್ಟು ಮತದಾನವಾಗಿದೆ.

ಸ್ಪರ್ಧಾ ಕಣದಲ್ಲಿರುವ 72 ಅಭ್ಯರ್ಥಿಗಳ ಪೈಕಿ ಜೆಎಂಎಂನ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಶಿಬು ಸೋರೆನ್, ಜಾರ್ಖಂಡ್ ವಿಕಾಸ್ ಮೊರ್ಚಾ ಅಭ್ಯರ್ಥಿ ಬಾಬುಲಾಲ್ ಮರಾಂಡಿ ಮತ್ತು ಬಿಜೆಪಿಯ ಸುನಿಲ್ ಸೋರೆನ್ ಅವರು ಪ್ರಮುಖರಾಗಿದ್ದಾರೆ.

ಅಸ್ಸಾಂ ವರದಿ: ಆರು ಲೋಕಸಭಾ ಸ್ಥಾನಗಳಿಗೆ ಗುರುವಾರ ಭಾರಿ ಬಿಗಿಭದ್ರತೆಯ ನಡುವೆ ನಡೆದ ಮೂರನೇ ಮತ್ತು ಕೊನೆಯ ಹಂತದ ಮತದಾನವು ಆರಂಭದಿಂದಲೂ ಚುರುಕಿನಿಂದ ಸಾಗಿದ್ದು, ಮೊದಲ ಎರಡು ಗಂಟೆಗಳ ಅವಧಿಯಲ್ಲಿ ಶೇ.17ರಷ್ಟು ಮತದಾನವಾಗಿದೆ.

ಮಧ್ಯ ಪ್ರದೇಶ ವರದಿ: ಕೊನೆಯ ಹಂತದಲ್ಲಿ ಲೋಕಸಭೆಯ 10 ಸ್ಥಾನಗಳಿಗೆ ಗುರುವಾರ ನಡೆದ ಮತದಾನದಲ್ಲಿ ಆರಂಭದ ಎರಡು ಗಂಟೆಗಳ ಅವಧಿಯಲ್ಲಿ ಶೇ. ರಷ್ಟು ಮತದಾನವಾಗಿದೆ.

ಸ್ಪರ್ಧಾ ಕಣದಲ್ಲಿರುವ 118 ಅಭ್ಯರ್ಥಿಗಳ ಪೈಕಿ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ಸುಮಿತ್ರಾ ಮಹಾಜನ್ ಮತ್ತು ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ ಪ್ರಮುಖರು.

ರಾಜಸ್ತಾನ ವರದಿ: 5 ಲೋಕಸಭೆ ಸ್ಥಾನಗಳಿಗೆ ಎರಡನೇ ಮತ್ತು ಕೊನೆಯ ಹಂತದಲ್ಲಿ ಗುರುವಾರ ಆರಂಭವಾಗಿರುವ ಮತದಾನವು ಚುರುಕಿನಿಂದ  ಕೂಡಿದೆ.

ಮಹಾರಾಷ್ಟ್ರ ವರದಿ: ಪ್ರತಿಷ್ಠಿತರ ಜಿದ್ದಾಜಿದ್ದಿಯ ರಾಜ್ಯವಾದ ಮಹಾರಾಷ್ಟ್ರದಲ್ಲಿ ಮೂರನೇ ಮತ್ತು ಕೊನೆಯ ಹಂತದಲ್ಲಿ 19 ಲೋಕಸಭಾ ಸ್ಥಾನಗಳಿಗೆ ಗುರುವಾರ ಆರಂಭವಾಗಿರುವ ಮತದಾನವು ಬಿರು ಬಿಸಿಲಿನ ನಡುವೆಯೂ ಬಿರುಸಿನಿಂದ ಸಾಗಿದೆ.

ಮತದಾನ ಆರಂಭವಾದ ಕೆಲ ಗಂಟೆಗಳಲ್ಲಿ ಉದ್ಯಮಿ ಅನಿಲ್ ಅಂಬಾನಿ ಮತ್ತು ಚಿತ್ರನಟರಾದ ಅಮಿರ್ ಖಾನ್,  ಸುನಿಲ್ ಶೆಟ್ಟಿ, ಸೋನಂ ಕಪೂರ್, ರೇಖಾ ಮತ್ತು ವಿದ್ಯಾ ಬಾಲನ್ ಸೇರಿದಂತೆ ಹಲವು ಪ್ರಮುಖರು ಮತ ಚಲಾಯಿಸಿದರು.

ರಾಜ್ಯದ 19 ಕ್ಷೇತ್ರಗಳಲ್ಲಿ  ಮುಂಬೈ ನಗರದ ಆರು ಕ್ಷೇತ್ರಗಳೂ ಸೇರಿವೆ. ಈ ಆರೂ ಕ್ಷೇತ್ರಗಳು ಸದ್ಯ ಕಾಂಗ್ರೆಸ್‌–ಎನ್‌ಸಿಪಿ ಮೈತ್ರಿಕೂಟದ ಕೈಯಲ್ಲಿವೆ.  ಕೇಂದ್ರ ಸಚಿವ ಮಿಲಿಂದ್‌ ದೇವ್ರಾ, ಕಾಂಗ್ರೆಸ್‌ ಪ್ರಿಯಾ ದತ್‌, ಗುರುದಾಸ್‌ ಕಾಮತ್‌, ಎಎಪಿ ಅಭ್ಯರ್ಥಿಗಳಾದ ಸಾಮಾ­­ಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್‌ ಮತ್ತು ಮೀರಾ ಸನ್ಯಾಲ್‌ ಮುಂಬೈಯಿಂದ ಸ್ಪರ್ಧಿಸುತ್ತಿರುವ ಪ್ರಮುಖರು.

ತಮಿಳುನಾಡು ವರದಿ: 39 ಲೋಕಸಭಾ ಸ್ಥಾನಗಳಿಗೆ ಗುರುವಾರ ಬೆಳಗ್ಗೆಯಿಂದ ಆರಂಭವಾಗಿರುವ ಮತದಾನವು ಚುರುಕಿನಿಂದ ನಡೆದಿದ್ದು, 10 ಗಂಟೆಯ ಸುಮಾರಿಗೆ 5.50 ಕೋಟಿ ಮತದಾರರ ಪೈಕಿ ಶೇ.20 ರಷ್ಟು  ಮತದಾರರು ತಮ್ಮ ಹಕ್ಕು ಚಲಾಯಿಸಿದರು.

ಮತದಾನದ ಆರಂಭವಾದ ಕೆಲ ಹೊತ್ತಿನಲ್ಲಿಯೇ ಪ್ರಖ್ಯಾತ ನಟರಾದ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರು ಮತ ಚಲಾಯಿಸಿದರು.

ಪುದುಚೇರಿ ವರದಿ: ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿರುವ ಒಂದು ಲೋಕಸಭಾ ಸ್ಥಾನಕ್ಕೆ ಗುರುವಾರ ನಡೆದ ಮತದಾನದಲ್ಲಿ ಬೆಳಿಗ್ಗೆ 9 ಗಂಟೆ ಹೊತ್ತಿಗೆ ಶೇ.10 ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT