ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲ ನಾಡಲ್ಲಿ ಬಗೆಬಗೆ ಬೆಳೆ

Last Updated 14 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬಿಸಿಲ ನಾಡೆಂದೇ ಪ್ರಸಿದ್ಧಿ ಹೊಂದಿರುವ ಗುಲ್ಬರ್ಗ ನಗರದಿಂದ ಕೇವಲ 15 ಕಿ.ಮೀ. ದೂರದಲ್ಲಿರುವ ಪಟ್ಟಣ ಎಂಬ ಗ್ರಾಮದಲ್ಲಿದೆ ಗುಂಡೇರಾವ ಸಿದ್ದಣ್ಣ ಧೂಳಗುಂಡ ಅವರ ಜಮೀನು.

ಇರುವುದು 3.27 ಎಕರೆ ಜಮೀನಾದರೂ ಅದರಲ್ಲಿಯೇ  ಸಪೋಟ, ಮೋಸಂಬಿ, ಸೀತಾಫಲ, ಅಂಜೂರ, ದಾಳಿಂಬೆ, ಹಲಸು ಹಣ್ಣುಗಳ ಗಿಡಗಳು ಫಲ ನೀಡುತ್ತಿವೆ. ಇವುಗಳ ಜೊತೆಯಲ್ಲಿಯೇ ಈರುಳ್ಳಿ, ತೆಂಗು, ಸಾಗುವಾನಿ,  ಗ್ಲಿಸಿರಿಡಿಯಾ, ಹುಣಸೆ, ಬೇವು ಮತ್ತು ಜಾಲಿ ಮರಗಳು ಬೆಳೆದು ನಿಂತಿವೆ. ಅಷ್ಟೇ ಅಲ್ಲ, ಸಪೋಟ ಗಿಡಗಳ ಮಧ್ಯೆ ಎಳ್ಳು, ಉದ್ದು, ತೊಗರಿ, ಸಜ್ಜೆ, ನವಣೆ, ಸಾಮೆ, ರಾಗಿ ಮುಂತಾದ ಮಿಶ್ರ ಬೆಳೆಗಳು ತೆನೆಯಾಡುತ್ತಿವೆ. ಇವುಗಳ ಜೊತೆಗೆ ರೇಷ್ಮೆ ಕೃಷಿಯೂ ಇವರ ಕೈಹಿಡಿದಿದೆ!

ಸಂಪೂರ್ಣವಾಗಿ ಸಾವಯವ ಕೃಷಿ ಮತ್ತು ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡು ರೇಷ್ಮೆ ಕೃಷಿ ಹಾಗೂ ವೈವಿಧ್ಯಮಯ ಬೆಳೆಗಳನ್ನು ಬೆಳೆದು ವರ್ಷಕ್ಕೆ ₨ 5ರಿಂದ 6 ಲಕ್ಷ  ಲಾಭ ಪಡೆಯುತ್ತ ಎಲ್ಲರನ್ನೂ ಚಕಿತಗೊಳಿಸಿದ್ದಾರೆ ಗುಂಡೇರಾವ.

ತಾವು ಬೆಳೆದ ಹಣ್ಣುಗಳನ್ನು ಹೊಲದ ರಸ್ತೆಬದಿಯಲ್ಲೇ ಮಾರಾಟ ಮಾಡಿ ಕಳೆದ ವರ್ಷ ₨ 1.25 ಲಕ್ಷ ಲಾಭ ಪಡೆದಿದ್ದು, ಈ ವರ್ಷವೂ ಅಷ್ಟೇ ಲಾಭದ ನಿರೀಕ್ಷೆ ಹೊಂದಿದ್ದಾರೆ. ಗಂಗಾ ಮಂಡಲವೆಂದು ಹೆಸರಿಸಿ ಮನೆಯ ಪಕ್ಕದಲ್ಲಿ ವಿವಿಧ ತರಕಾರಿ ಬೆಳೆದು ಸ್ವಂತಕ್ಕೆ ಉಪಯೋಗಿಸುತ್ತಿದ್ದಾರೆ. ಎಸ್ಸೆಸ್ಸೆಲ್ಸಿವರೆಗೆ ಮಾತ್ರ ಓದಿದ ಇವರು ತಮ್ಮ 2 ಎಕರೆ ಜಮೀನಿನಲ್ಲಿ ಕೈಗೊಂಡ ದ್ವಿತಳಿ ರೇಷ್ಮೆ ಸಾಕಾಣಿಕೆಯಿಂದ ಖುಷಿ ಕಂಡುಕೊಂಡಿದ್ದಾರೆ. ಕಳೆದ ವರ್ಷ 4 ಬೆಳೆ ಪಡೆದು ಒಟ್ಟು 6 ಕ್ವಿಂಟಾಲ್ ರೇಷ್ಮೆಗೂಡು ಉತ್ಪಾದಿಸಿ
₨ 2.40 ಲಕ್ಷ  ನಿವ್ವಳ ಆದಾಯ ಗಳಿಸಿದ್ದಾರೆ.

ಅರ್ಧ ಎಕರೆ ಜಮೀನಿನಲ್ಲಿ ₨ 2 ಲಕ್ಷ ಖರ್ಚು ಮಾಡಿ ನಿರ್ಮಿಸಿದ ದೊಡ್ಡ ಗಾತ್ರದ ಕೃಷಿ ಹೊಂಡದಲ್ಲಿ ಹಳ್ಳದಿಂದ ಬರುವ ನೀರನ್ನು ಶೇಖರಿಸಿ ಆರು ತಿಂಗಳವರೆಗೆ ನೀರಿನ ಸಮರ್ಥ ಬಳಕೆ ಮಾಡುತ್ತಿದ್ದಾರೆ.

ಸಿಂಟೆಕ್ಸ್ ಡ್ರಮ್‌ಗಳನ್ನು ಮತ್ತು ಜಾನುವಾರು ಸೆಗಣಿಯನ್ನು ಉಪಯೋಗಿಸಿ ಬಯೋಗ್ಯಾಸ್ ಘಟಕ ಸ್ಥಾಪಿಸಿದ್ದು, ಉತ್ಪಾದನೆಯಾಗುವ ಅಡುಗೆ ಅನಿಲವನ್ನು ಮನೆಗಾಗಿ ಬಳಸುತ್ತಿದ್ದಾರೆ. ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕಿನಲ್ಲಿ ಜೀವಾಮೃತ ತಯಾರಿಸಿ ಬೆಳೆಗಳಿಗೆ ಹನಿ ನೀರಾವರಿ ಮೂಲಕ ಹರಿಸುವರು. ಸಸ್ಯ ಜನ್ಯ ಕೀಟನಾಶಕಗಳ ಬಳಕೆಯಿಂದ ಕೀಟಗಳ ನಿರ್ವಹಣೆ ಮಾಡುವರಲ್ಲದೆ ಬಯೋ ಡೈಜೆಸ್ಟರ್ ಘಟಕ ನಿರ್ಮಾಣ ಮಾಡಿದ್ದಾರೆ ಮತ್ತು ಆಜೋಲ ಸಹ ಉತ್ಪಾದಿಸುವರು. 

ಹೊಲಕ್ಕೆ ದನದ ಕೊಟ್ಟಿಗೆ ಮತ್ತು ಎರೆಹುಳು ಗೊಬ್ಬರವನ್ನೇ ಬಳಸಿ ಭೂಮಿಯ ಫಲವತ್ತತೆ ಕಾಪಾಡುವರು. ಇದಕ್ಕಾಗಿ ಎರೆಹುಳು ಗೊಬ್ಬರ ತಯಾರಿಕಾ ಘಟಕ ಸಹ ಸ್ಥಾಪಿಸಿದ್ದಾರೆ. ಬದುಗಳ ಮೇಲೆ ಮೇವು ಮತ್ತು ಹಸಿರೆಲೆ ಗೊಬ್ಬರ ಗಿಡಗಳನ್ನು ಬೆಳೆದು ಕೃಷಿಪೂರಕ ಹೈನುಗಾರಿಕೆಗಾಗಿ ಎರಡು ದೇವಣಿ ತಳಿ ಆಕಳುಗಳನ್ನು ಸಾಕಿದ್ದಾರೆ. ಕುರಿ ಸಾಕಾಣಿಕೆ, ಮೀನು ಸಾಕಾಣಿಕೆ, ಜೇನು ಸಾಕಾಣಿಕೆ, ಹಸಿರು ಮನೆಯಲ್ಲಿ ಆಧುನಿಕ ಪದ್ಧತಿಯಲ್ಲಿ ದೊಣ್ಣೆ ಮೆಣಸಿನಕಾಯಿಯ ಅಧಿಕ ಇಳುವರಿ ಹೀಗೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಇದರಲ್ಲೂ ಅಪಾರ ಆದಾಯ ಗಳಿಸುತ್ತಿದ್ದಾರೆ.

ಇವರ ಕೃಷಿ ಸಾಧನೆಗಾಗಿ 2012–13ನೇ ಸಾಲಿನ ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಕೇಂದ್ರ ರೇಷ್ಮೆ ಸಂಸ್ಥೆ ದ್ವಿತಳಿ ರೇಷ್ಮೆ ಸಾಕಾಣಿಕೆ ಪ್ರಶಸ್ತಿ, ನಾಗಪುರದ ಗೋವಿಜ್ಞಾನ ಅನುಸಂಧಾನದಿಂದ ಉತ್ತಮ ಕೃಷಿಕ ಪ್ರಶಸ್ತಿ, ‘ಕೃಷಿ ಋಷಿ’ ಬಿರುದು, ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ‘ಪ್ರಗತಿಪರ ರೈತ’ ಪ್ರಶಸ್ತಿ ಪಡೆದಿದ್ದಾರೆ. ‘ಮೈ ಮುರಿದು ದುಡಿಯುವ ನನಗೆ ಕೃಷಿ ಕಷ್ಟದ ಕಸುಬು ಎನಿಸಿಲ್ಲ’ ಎನ್ನುತ್ತಾರೆ ಗುಂಡೇರಾವ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT