ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಸಿಐಗೆ ಆದಾಯ ಕುಸಿಯುವ ಭೀತಿ

ಲೋಧಾ ಸಮಿತಿಯ ಶಿಫಾರಸುಗಳ ಬಗ್ಗೆ ಚರ್ಚೆ: 19ರಂದು ವಿಶೇಷ ಮಹಾಸಭೆ; ಖಾನ್‌ ಹೇಳಿಕೆಗೆ ಅನುರಾಗ್‌ ಠಾಕೂರ್ ತಿರುಗೇಟು
Last Updated 11 ಫೆಬ್ರುವರಿ 2016, 9:31 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಲೋಧಾ ಸಮಿತಿಯ ಶಿಫಾರಸುಗಳು ಅನುಷ್ಠಾನಕ್ಕೆ ಬಂದರೆ ಬಿಸಿಸಿಐಗೆ ಆರ್ಥಿಕ ನಷ್ಟ ಎದುರಾಗಲಿದೆ.

‘ಕ್ರಿಕೆಟ್‌ ಪಂದ್ಯಗಳು ನಡೆಯುವಾಗ  ಜಾಹೀರಾತುಗಳನ್ನು ತೋರಿಸಬಾರದು. ಚಹಾ ಮತ್ತು  ಭೋಜನ ವಿರಾಮದ ವೇಳೆಯಷ್ಟೇ ಜಾಹೀರಾತು ಇರಬೇಕು’ ಎಂದು ಲೋಧಾ ಸಮಿತಿ ತನ್ನ ಶಿಫಾರಸುಗಳಲ್ಲಿ ತಿಳಿಸಿದೆ.

ಆದರೆ ಬಿಸಿಸಿಐಗೆ ವಾಹಿನಿ  ಮಾರಾಟ ಹಕ್ಕು ಮತ್ತು ಜಾಹೀರಾತಿನಿಂದಲೇ ಸುಮಾರು ₹ 2000 ಕೋಟಿ ಆದಾಯವಿದೆ ಎಂದು  ಮೂಲಗಳು ತಿಳಿಸಿವೆ. ಒಂದು ವೇಳೆ ಈ ಶಿಫಾರಸು ಜಾರಿಗೆ ಬಂದರೆ ಆದಾಯ ₹ 400 ಕೋಟಿಗೆ ಕುಸಿಯಲಿದೆ.

‘ಬಿಸಿಸಿಐ ಆಯೋಜಿಸುವ ಎಲ್ಲಾ ಕ್ರಿಕೆಟ್‌ ಪಂದ್ಯಗಳ ಪ್ರಸಾರದ ಹಕ್ಕುಗಳನ್ನು ಸ್ಟಾರ್ ಸ್ಪೋರ್ಟ್ಸ್‌ ವಾಹಿನಿ ಪಡೆದುಕೊಂಡಿದೆ. ಇದರಿಂದ ಪ್ರತಿ ಪಂದ್ಯಕ್ಕೆ ₹ 43 ಕೋಟಿ  ಲಭಿಸುತ್ತದೆ. ಇದರಲ್ಲಿ ಬಿಸಿಸಿಐಗೆ ಸಿಗುವುದು₹ 8ರಿಂದ 10 ಕೋಟಿ ಮಾತ್ರ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

‘ಸಮಿತಿಯ ಶಿಫಾರಸುಗಳು ಜಾರಿಗೆ ಬಂದರೆ ಸುಮಾರು ₹ 1600 ಕೋಟಿ ನಷ್ಟವಾಗುತ್ತದೆ. ವಾಹಿನಿಗೆ ಲಭಿಸುವ ಲಾಭದಲ್ಲಿ ನಮಗೆ ಶೇ. 20ರಿಂದ 25ರಷ್ಟು ಹಣವಷ್ಟೇ ಸಿಗುತ್ತದೆ. ಐಪಿಎಲ್‌ ಟೂರ್ನಿಗೂ ಇದೇ ಮಾದರಿ ಇರುತ್ತದೆ. ಇಂಗ್ಲೆಂಡ್, ನ್ಯೂಜಿಲೆಂಡ್‌ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿಗಳು ಟೂರ್ನಿಗೆ ಆತಿಥ್ಯ ವಹಿಸಿದರೆ ಪ್ರಸಾರದ ಹಕ್ಕಿನಿಂದಲೇ ಭಾರತಕ್ಕಿಂತ ಹೆಚ್ಚು ಲಾಭ ಪಡೆಯುತ್ತವೆ’ ಎಂದೂ ಮೂಲಗಳು ತಿಳಿಸಿವೆ.

ಬಿಸಿಸಿಐ ವಿವಿಧ ವಯೋಮಿತಿಯೊಳಗಿನ ಟೂರ್ನಿಗೆ ಮತ್ತು  ಆ ಟೂರ್ನಿಗಳಲ್ಲಿ ಆಡುವ ಆಟಗಾರರಿಗೆ ಹೆಚ್ಚು ಹಣವನ್ನು ಖರ್ಚು ಮಾಡುತ್ತಿದೆ.  ಪ್ರತಿ ವರ್ಷ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ಸುಮಾರು ₹ 750 ಕೋಟಿ ನೀಡುತ್ತಿದೆ.  16 ವರ್ಷದ ಒಳಗಿನವರ ಮತ್ತು ಸೀನಿಯರ್‌ ತಂಡದ ಆಟಗಾರರಿಗೆ ₹ 400 ರಿಂದ 450 ಕೋಟಿ ವೇತನವನ್ನು ಬಿಸಿಸಿಐ ನೀಡುತ್ತದೆ.

ಬಿಸಿಸಿಐ ಪ್ರತಿ ವರ್ಷ 16, 19, 22 ಮತ್ತು ರಣಜಿ ಟ್ರೋಫಿ ಟೂರ್ನಿಯ ಸುಮಾರು 2000 ಪಂದ್ಯಗಳನ್ನು ಆಯೋಜಿಸುತ್ತದೆ. ಇದಕ್ಕಾಗಿ ₹ 350 ಕೋಟಿ ಖರ್ಚು ಮಾಡುತ್ತದೆ. ಪ್ರಥಮ ದರ್ಜೆ ಕ್ರಿಕೆಟ್‌ ಮತ್ತು ರಾಷ್ಟ್ರೀಯ ತಂಡಗಳಲ್ಲಿ ಆಡಿದ ಆಟಗಾರರ ಪಿಂಚಣಿಗೆ ಬಿಸಿಸಿಐ ಮಾಸಿಕ ₹ 25 ಕೋಟಿ ಕೊಡುತ್ತಿದೆ.

‘ಐಪಿಎಲ್‌ ಮತ್ತು ಅಂತರರಾಷ್ಟ್ರೀಯ ಪಂದ್ಯಗಳ ಪ್ರಸಾರದ ಹಕ್ಕಿನಿಂದ ಆದಾಯ ಲಭಿಸುತ್ತಿದೆ. ಈ ಹಣವನ್ನು ಮಂಡಳಿ ಜೂನಿಯರ್ ಕ್ರಿಕೆಟ್‌ ಅಭಿವೃದ್ಧಿಗೆ ವಿನಿಯೋಗಿಸುತ್ತಿದೆ. ಲೋಧಾ ಸಮಿತಿಯ ಶಿಫಾರಸು ಅನುಷ್ಠಾನಕ್ಕೆ ಬಂದ ಬಳಿಕ ನಮ್ಮ ಯೋಜನೆಗಳಿಗೆ ಪೆಟ್ಟು ಬೀಳುತ್ತದೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಖಾನ್‌ ಹೇಳಿಕೆಗೆ ಠಾಕೂರ್ ತಿರುಗೇಟು
‘ಭಾರತದಲ್ಲಿ ನಡೆಯುವ ವಿಶ್ವ ಟ್ವೆಂಟಿ–20  ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಯಾವ ತಂಡಗಳಿಗೂ ಭದ್ರತೆಯ ಸಮಸ್ಯೆಯಾಗುವುದಿಲ್ಲ. ಈ ಬಗ್ಗೆ  ಆತಂಕ ಪಡುವ ಅಗತ್ಯವೂ ಇಲ್ಲ’ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ  (ಬಿಸಿಸಿಐ) ಕಾರ್ಯದರ್ಶಿ ಅನುರಾಗ್ ಠಾಕೂರ್‌ ಸ್ಪಷ್ಟವಾಗಿ ಹೇಳಿದ್ದಾರೆ.

ಬುಧವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು ‘ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ಸಾಕಷ್ಟು ಪಂದ್ಯಗಳು ನಮ್ಮ ದೇಶದಲ್ಲಿ ನಡೆದಿವೆ. ಹಲವಾರು ಅಂತರರಾಷ್ಟ್ರೀಯ ಸರಣಿಗಳೂ ಜರುಗಿವೆ. ಯಾರಿಗೂ ಅಭದ್ರತೆಯ ಪ್ರಶ್ನೆ ಕಾಡಿಲ್ಲ’ ಎಂದರು.

ಭಾರತದಲ್ಲಿ ಭದ್ರತೆ ಸಮಸ್ಯೆ ಇರುವ ಕಾರಣ ವಿಶ್ವ ಟ್ವೆಂಟಿ–20 ಟೂರ್ನಿಯ ಪಾಕಿಸ್ತಾನದ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸಬೇಕು ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಮುಖ್ಯಸ್ಥ ಶಹರ್ಯಾರ್ ಖಾನ್‌ ಇತ್ತೀಚಿಗೆ ಹೇಳಿದ್ದರು. ದುಬೈಯಲ್ಲಿ ನಡೆದ ಐಸಿಸಿ ಮಂಡಳಿಯ ಸಭೆಯಲ್ಲೂ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದರು.

‘ಉಭಯ ದೇಶಗಳ ನಡುವೆ ಸರಣಿ ಆಯೋಜಿಸುವ ವಿಷಯವೇ ಬೇರೆ. ಇದು ವಿಶ್ವ ಟೂರ್ನಿ.  ಈ ಟೂರ್ನಿಯಲ್ಲಿ ಪಾಕ್‌ ತಂಡವಷ್ಟೇ ಅಲ್ಲ. ಹದಿನಾರು ರಾಷ್ಟ್ರಗಳು ಆಡುತ್ತವೆ. ಅವರೆಲ್ಲರಿಗೂ ಭಾರತ ಸರ್ಕಾರ ಬಿಗಿಭದ್ರತೆ ಒದಗಿಸುತ್ತದೆ. ಈ ಟೂರ್ನಿಯಲ್ಲಿ ಆಡಲು ಅರ್ಹತೆ ಪಡೆದಿರುವ ಎಲ್ಲಾ ತಂಡಗಳು ಭಾರತಕ್ಕೆ ಬಂದು ಆಡಬೇಕು.

ಒಂದು ವೇಳೆ ಬೇರೆ ಯಾವ ದೇಶವಾದರೂ ಭದ್ರತೆಗೆ ಬಗ್ಗೆ ಅನುಮಾನ ವ್ಯಕ್ತಪಡಿಸಿದರೆ ಟೂರ್ನಿ ಸ್ಥಳಾಂತರದ ಬಗ್ಗೆ ಚಿಂತಿಸುತ್ತೇವೆ. ಮಹತ್ವದ ಟೂರ್ನಿಯಲ್ಲಿ ಆಡುವ ಅಥವಾ ಬಿಡುವ ಬಗ್ಗೆ ಪಾಕಿಸ್ತಾನವೇ ನಿರ್ಧರಿಸಲಿ’ ಎಂದು ಠಾಕೂರ್‌ ಅವರು ಶಹರ್ಯಾರ್‌ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ನಾಟಕೀಯ ತಿರುವು:ವಿಶ್ವ ಟ್ವೆಂಟಿ–20 ಟೂರ್ನಿಯಿಂದ ಹಿಂದೆ ಸರಿಯುವ ಬಗ್ಗೆ ಪಾಕ್‌ ತಂಡ  ಸುಳಿವು ನೀಡಿತ್ತು.

ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ ಪಾಕ್‌ ಬುಧವಾರ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಮಾರ್ಚ್‌ ಎಂಟರಿಂದ ಏಪ್ರಿಲ್‌ ಮೂರರವರೆಗೆ ವಿಶ್ವ ಚುಟುಕು  ಟೂರ್ನಿ ಆಯೋಜನೆಯಾಗಿದೆ.

ಭಾರತ ಹಾಗೂ ಪಾಕ್‌ ನಡುವೆ ಸರಣಿ ನಡೆಸಲು ಎರಡೂ ದೇಶಗಳ ಕ್ರಿಕೆಟ್‌ ಮಂಡಳಿಗಳು ಮೂರು ತಿಂಗಳು ಹಿಂದೆ ನಿರ್ಧರಿಸಿದ್ದವು. ವೇಳಾಪಟ್ಟಿಯೂ ನಿಗದಿಯಾಗಿತ್ತು. ಆದರೆ  ಸರಣಿ ಆಡಲು ಭಾರತ ಸರ್ಕಾರ ಅನುಮತಿ ಕೊಟ್ಟಿರಲಿಲ್ಲ.

19ರಂದು  ವಿಶೇಷ ಮಹಾಸಭೆ(ಮುಂಬೈ ವರದಿ)
ನಿವೃತ್ತ ನ್ಯಾಯಮೂರ್ತಿ ಆರ್‌.ಎಂ. ಲೋಧಾ ನೇತೃತ್ವದ ಸಮಿತಿ ಮಾಡಿರುವ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವ ಸಲುವಾಗಿ ಬಿಸಿಸಿಐ  ಫೆಬ್ರುವರಿ 19ರಂದು ವಿಶೇಷ ಮಹಾಸಭೆ ನಡೆಸಲು ನಿರ್ಧರಿಸಿದೆ.

‘ಬಿಸಿಸಿಐ 19ರಂದು ಮಹಾಸಭೆ ನಡೆಸಲಿದೆ. ಈ ಬಗ್ಗೆ ಮಾನ್ಯತೆ ಹೊಂದಿರುವ ಎಲ್ಲಾ ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ಮಾಹಿತಿ ನೀಡಿದೆ’ ಎಂದು ಮುಂಬೈ ಕ್ರಿಕೆಟ್ ಸಂಸ್ಥೆಯ ಮೂಲಗಳು ತಿಳಿಸಿವೆ.

ಲೋಧಾ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರಲು ಸುಪ್ರೀಂ ಕೋರ್ಟ್‌ ಬಿಸಿಸಿಐಗೆ ಮಾರ್ಚ್‌ ಮೂರರವರೆಗೆ ಕಾಲಾವಕಾಶ ನೀಡಿದೆ. ‘ಇಲ್ಲವಾದರೆ ನಾವೇ ಶಿಫಾರಸುಗಳನ್ನು ಜಾರಿಗೆ ತರಬೇಕಾಗುತ್ತದೆ’ ಎಂದೂ ಎಚ್ಚರಿಕೆ ನೀಡಿದೆ. ಆದ್ದರಿಂದ ಭಾರತದ ಕ್ರಿಕೆಟ್‌ ಆಡಳಿತ ಸಭೆ ಕರೆದಿದೆ. ಹೋದ ವಾರ ಕಾನೂನು ಪರಿಣಿತರ ಸಮಿತಿಯ ಸಭೆ ಜರುಗಿತ್ತು.

70 ವರ್ಷಕ್ಕಿಂತ ಹೆಚ್ಚು ವಯಸ್ಸಾದವರು ಆಡಳಿತದಲ್ಲಿ ಇರಬಾರದು. ಒಂದು ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ಒಬ್ಬರಿಗಷ್ಟೇ ಮತದಾನದ ಹಕ್ಕು, ಬೆಟ್ಟಿಂಗ್‌ ಕಾನೂನುಬದ್ಧಗೊಳಿಸಬೇಕು ಎನ್ನುವ ಪ್ರಮುಖ ಶಿಫಾರಸುಗಳನ್ನು ಲೋಧಾ ಸಮಿತಿ ಮಾಡಿದೆ.

ಮಹಾರಾಷ್ಟ್ರ ಮತ್ತು ಗುಜರಾತ್‌ ತಲಾ ಮೂರು ಕ್ರಿಕೆಟ್‌ ಸಂಸ್ಥೆಗಳನ್ನು ಹೊಂದಿವೆ.

ಎನ್‌. ಶ್ರೀನಿವಾಸನ್‌ ಐಸಿಸಿ ಮುಖ್ಯಸ್ಥರಾಗಿದ್ದ ವೇಳೆ ಜಾರಿಗೆ ತಂದಿದ್ದ ಕೆಲ ವಿವಾದಾತ್ಮಕ ನಿಯಮಗಳನ್ನು ಕೈ ಬಿಡಲು ಶಶಾಂಕ್‌ ಮನೋಹರ್‌ ನೇತೃತ್ವದ ಐಸಿಸಿ ಆಡಳಿತ ನಿರ್ಧರಿಸಿತ್ತು. ಹೋದ ವಾರ ದುಬೈಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿತ್ತು.

ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಕ್ರಿಕೆಟ್‌ ಮಂಡಳಿಗಳಿಗೆ ಐಸಿಸಿ ಹಣಕಾಸಿನ ಅಧಿಕಾರವನ್ನು ನೀಡಿತ್ತು. ಕಳೆದ ಬಾರಿಯ ಸಭೆಯಲ್ಲಿ ಇದನ್ನು ರದ್ದು ಮಾಡಲಾಗಿದೆ. ಈ ವಿಷಯವೂ ಮಹಾಸಭೆಯಲ್ಲಿ ಚರ್ಚೆಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT