ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಸಿಐಗೆ ‘ಸುಪ್ರೀಂ’ ಚಾಟಿ

Last Updated 30 ಜೂನ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಬಿಸಿಸಿಐ ಆಡಳಿತದಲ್ಲಿ ಪಾರದರ್ಶಕತೆ ತರುವ ಸಲುವಾಗಿ ಆರ್‌. ಎಂ. ಲೋಧಾ ನೇತೃತ್ವದ ಸಮಿತಿ ಮಾಡಿರುವ ಶಿಫಾರಸುಗಳನ್ನು ಜಾರಿಗೆ ತರಬೇಕು ಎಂದು ಸುಪ್ರೀಂ ಕೋರ್ಟ್‌ ತಾಕೀತು ಮಾಡಿದೆ.

ಅಷ್ಟೇ ಅಲ್ಲ, ಕ್ರಿಕೆಟ್‌ ಮಂಡಳಿ ಹಣಕಾಸು ವ್ಯವಹಾರ ಮತ್ತು ಲೆಕ್ಕಪತ್ರಗಳನ್ನು ಕಟ್ಟುನಿಟ್ಟಾಗಿ ನಿರ್ವಹಣೆ ಮಾಡಬೇಕು. ಒಂದು ವೇಳೆ ಇದರಲ್ಲಿ ದೋಷ ಕಂಡು ಬಂದರೆ ಕಠಿಣ ಕ್ರಮಕ್ಕೂ ಹಿಂಜರಿಯುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಚಾಟಿ ಬೀಸಿದೆ.

2013ರ ಐಪಿಎಲ್‌ ಟೂರ್ನಿಯ ವೇಳೆ ನಡೆದಿದ್ದ ಬೆಟ್ಟಿಂಗ್ ಮತ್ತು ಸ್ಪಾಟ್‌ ಫಿಕ್ಸಿಂಗ್ ಪ್ರಕರಣದ ಬಳಿಕ ಬಿಸಿಸಿಐನ ಹುಳುಕು ಬಯಲಾಗಿತ್ತು. ಆದ್ದರಿಂದ ಸುಪ್ರೀಂ ಕೋರ್ಟ್‌ ಸಮಿತಿ ರಚಿಸಿ ಕ್ರಿಕೆಟ್‌ ಮಂಡಳಿಯ ಸುಧಾರಣೆಗೆ ಸಲಹೆಗಳನ್ನು ತಿಳಿಸುವಂತೆ ಲೋಧಾ ಸಮಿತಿಗೆ ಹೇಳಿತ್ತು.  ಇದರ ಸಲುವಾಗಿ ಸುಪ್ರೀಂ ಕೋರ್ಟ್‌ ಹಲವು ಬಾರಿ ವಿಚಾರಣೆ ನಡೆಸಿತ್ತು. ಇದರ ವಿಚಾರಣೆ ಗುರುವಾರ ಅಂತ್ಯ ಕಂಡಿದ್ದು, ಲೋಧಾ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರಲೇಬೇಕು ಎಂದು ಸುಪ್ರೀಂ ಕೋರ್ಟ್‌ ಕಟ್ಟಿನಿಟ್ಟಾಗಿ ಹೇಳಿದೆ.

ಕೆಲವು ರಾಜ್ಯ ಕ್ರಿಕೆಟ್‌ ಸಂಸ್ಥೆಗಳು ಹಣಕಾಸು ನಿರ್ವಹಣೆಯಲ್ಲಿ ಪಾರದರ್ಶಕತೆ ಹೊಂದಿಲ್ಲ ಎನ್ನುವ ದೂರುಗಳು ಕೇಳಿ ಬಂದಿದ್ದವು. ಗೋವಾ ಕ್ರಿಕೆಟ್‌ ಸಂಸ್ಥೆ ಕಳೆದ ಐದು ವರ್ಷಗಳ ಅವಧಿಯಲ್ಲಿ ಬಿಸಿಸಿಐನಿಂದ ₹ 141 ಕೋಟಿ ಹಣ ಪಡೆದುಕೊಂಡಿದೆ. ಈ ಹಣವನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಗೋವಾ ಸಂಸ್ಥೆಯ ಅಧ್ಯಕ್ಷ ಮತ್ತು ಕಾರ್ಯದರ್ಶಿಯನ್ನು ಬಂಧಿಸಲಾಗಿತ್ತು. ಈ ವಿಷಯವನ್ನು ಅಮಿಕ್‌ ಕ್ಯೂರಿ (ಕೋರ್ಟ್‌ಗೆ ಸಹಕರಿಸುವ ವಕೀಲರು) ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

ಅದೇ ರೀತಿ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ,  ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್‌ ಸಂಸ್ಥೆಗಳಲ್ಲಿಯೂ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ದೆಹಲಿಯ ಕ್ರಿಕೆಟ್ ಆಡಳಿತದಲ್ಲಿ ಭ್ರಷ್ಟಾಚಾರವಾಗಿದೆ. ಇಲ್ಲಿನ ಫಿರೋಜ್‌ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಮಕ್ಕಳಿಗೆ ಪಂದ್ಯ ನೋಡಲು ಜಾಗವೇ ಸಿಗುತ್ತಿಲ್ಲ ಎಂದು ಸುಬ್ರಮಣಿಯನ್‌ ದೂರಿದರು.

‘ಲೋಧಾ ಸಮಿತಿಯ ಶಿಫಾರಸಿನ ಪ್ರಕಾರ ಹಣ ದುರ್ಬಳಕೆಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಯಾದರೆ ಅದನ್ನು ಗಂಭೀರ ಪ್ರಕರಣವೆಂದು ಪರಿಗಣಿಸಬೇಕು ಎಂದು ಹೇಳಿದೆ. ಕೋಟ್ಲಾ ಮೈದಾನದಲ್ಲಿ ಪಂದ್ಯ ವೀಕ್ಷಿಸಲು  ಮಕ್ಕಳಿಗೆ ಅವಕಾಶವೇ ಲಭಿಸುವುದಿಲ್ಲ’ ಎಂದೂ ಅವರು ಆರೋಪಿಸಿದ್ದಾರೆ.
ಒಂದು ರಾಜ್ಯ ಕ್ರಿಕೆಟ್‌ ಸಂಸ್ಥೆಯಿಂದ ಒಬ್ಬರಿಗಷ್ಟೇ ಮತದಾನದ ಹಕ್ಕು, 70 ವರ್ಷ ಮೇಲಿನವರು ಕ್ರಿಕೆಟ್‌ ಆಡಳಿತದಲ್ಲಿ ಇರುವಂತಿಲ್ಲ ಎನ್ನುವ ಪ್ರಮುಖ ಶಿಫಾರಸುಗಳನ್ನು ಲೋಧಾ ಸಮಿತಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT