ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಸಿಐ ಅಧ್ಯಕ್ಷ ಸ್ಥಾನ ಅಲಂಕರಿಸಿದ ಶಶಾಂಕ್

ಎನ್. ಶ್ರೀನಿವಾಸನ್ ಬಣಕ್ಕೆ ತೀವ್ರ ಮುಖಭಂಗ; ಪೂರ್ವ ವಲಯದ ಆರು ವಿಭಾಗಗಳ ಬೆಂಬಲ
Last Updated 4 ಅಕ್ಟೋಬರ್ 2015, 19:52 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ನಾಗಪುರದ ಹಿರಿಯ ವಕೀಲ ಶಶಾಂಕ್ ಮನೋಹರ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಿ ಭಾನುವಾರ ಅವಿರೋಧವಾಗಿ ಆಯ್ಕೆಯಾದರು.

ಶ್ರೀಮಂತ ಸಂಸ್ಥೆಯಾಗಿರುವ ಬಿಸಿಸಿಐ ಅಧ್ಯಕ್ಷ ಸ್ಥಾನವು ಜಗಮೋಹನ್ ದಾಲ್ಮಿಯ ಅವರ ನಿಧನದಿಂದಾಗಿ ಕಳೆದ 15 ದಿನಗಳಿಂದ ತೆರವಾಗಿತ್ತು. ಭಾನುವಾರ ನಡೆದ ವಿಶೇಷ ಮಹಾಸಭೆಯಲ್ಲಿ ಪೂರ್ವ ವಲಯದ ಎಲ್ಲ ಆರು ವಿಭಾಗಗಳೂ ಶಶಾಂಕ್ ಅವರ ಹೆಸರನ್ನು ಒಮ್ಮತದಿಂದ ಘೋಷಿಸಿದವು.

ಕೋಲ್ಕತ್ತದ ನ್ಯಾಷನಲ್ ಕ್ರಿಕೆಟ್ ಕ್ಲಬ್ (ಎನ್‌ಸಿಸಿ) ಪ್ರತಿನಿಧಿಯಾಗಿರುವ ಅಭಿಷೇಕ್ ದಾಲ್ಮಿಯ (ಜಗಮೋಹನ್ ದಾಲ್ಮಿಯ ಪುತ್ರ),  ಬಂಗಾಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಸೌರವ್ ಗಂಗೂಲಿ, ತ್ರಿಪುರ ಸಂಸ್ಥೆಯ ಪ್ರತಿನಿಧಿ ಸೌರವ್ ದಾಸಗುಪ್ತ, ಅಸ್ಸಾಂನ ಗೌತಮ್ ರಾಯ್, ಓಡಿಶಾದ ಆಶೀರ್ವಾದ್ ಬೆಹೆರಾ, ಜಾರ್ಖಂಡ್‌ನ ಸಂಜಯ್ ಸಿಂಗ್ ಅವರು ಶಶಾಂಕ್‌ಗೆ ಬೆಂಬಲ ಸೂಚಿಸಿದರು.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಬೇರೆ ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ. ಶನಿವಾರ ರಾತ್ರಿ 7ರವರೆಗೂ ನಾಮಪತ್ರ ಸಲ್ಲಿಸಲು ಅವಕಾಶವಿತ್ತು. ಆದ್ದರಿಂದ ಶಶಾಂಕ್ ಮನೋಹರ್ ಅವರನ್ನು 2017ರವರೆಗೆ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಯಿತು.
ಅವರು ಈ ಸ್ಥಾನ ಅಲಂಕರಿಸುತ್ತಿರುವುದು ಇದು ಎರಡನೇ ಬಾರಿ. 2008 ರಿಂದ 2011ರ ವರೆಗಿನ ಅವಧಿಯಲ್ಲಿ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. 

ವಿಶೇಷ ಸಭೆಯಲ್ಲಿ ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಬಿಸಿಸಿಐ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ಹಾಜರಿರಲಿಲ್ಲ. ತಮಿಳುನಾಡು ಪ್ರತಿನಿಧಿಯಾಗಿ ಪಿ.ಎಸ್. ರಾಮನ್ ಭಾಗವಹಿಸಿದ್ದರು. ಶ್ರೀನಿವಾಸನ್‌ಗೆ ಮುಖಭಂಗ: ಸೆ. 20ರಂದು ದಾಲ್ಮಿಯ ನಿಧನದ ನಂತರ ಪೂರ್ವ ವಲಯದ ಮತದಾರ ಸಂಸ್ಥೆಗಳ ಬೆಂಬಲದೊಂದಿಗೆ ತಮ್ಮ ಅಭ್ಯರ್ಥಿ ಯನ್ನು ಅಧ್ಯಕ್ಷರನ್ನಾಗಿ ಮಾಡುವ ತೀವ್ರ ಪ್ರಯತ್ನವನ್ನು ಅವರು ಮಾಡಿದ್ದರು.

ತಮ್ಮ ಆಪ್ತ ಮತ್ತು ಜಾರ್ಖಂಡ್ ಸಂಸ್ಥೆಯ ಪ್ರತಿನಿಧಿಯನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲು ಎಲ್ಲ ರೀತಿಯ ಕಸರತ್ತುಗಳನ್ನೂ ಅವರು ಮಾಡಿದ್ದರು.  ಅದಕ್ಕಾಗಿ ಶರದ್ ಪವಾರ್ ಅವರನ್ನೂ ಭೇಟಿಯಾಗಿ ಬೆಂಬಲ ಯಾಚಿಸಿದ್ದರು. ಬೆಂಗಳೂರಿನಲ್ಲಿ ತಮ್ಮ ನಿಷ್ಠರ ಸಭೆ ನಡೆಸಿ  ತಮ್ಮ ಅಭ್ಯರ್ಥಿಗೆ ಬೆಂಬಲ ಕೋರಿದ್ದರು. ಆದರೆ, ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಅವರ ತಂತ್ರವೇ ಕೊನೆಗೂ ಯಶಸ್ವಿಯಾಗಿದೆ.

ಶಶಾಂಕ್ ಮನೋಹರ್ ಅವರನ್ನು ಮುಂಚೂಣಿಗೆ ತಂದ ಅವರು ಕೇಂದ್ರ ಸಚಿವ ಅರುಣ್ ಜೇಟ್ಲಿ ಮತ್ತು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಬೆಂಬಲದೊಂದಿಗೆ ಶ್ರೀನಿವಾಸನ್ ಅವರನ್ನು ಬಿಸಿಸಿಐ ಆಧಿಕಾರ ಕೇಂದ್ರದಿಂದ ದೂರವಿಡು ವಲ್ಲಿ ಸಫಲರಾಗಿದ್ದಾರೆ.

2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್‌ ನಲ್ಲಿ ಕಳಂಕಿತರಾಗಿದ್ದ ಶ್ರೀನಿವಾಸನ್ ಬಿಸಿಸಿಐ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದಿ ದ್ದರು. ನಂತರ ಜಗಮೋಹನ್ ದಾಲ್ಮಿಯ ಅಧ್ಯಕ್ಷರಾಗಿದ್ದರು.  ಇದೀಗ ಶಶಾಂಕ್ ಅವರ ಮರು ಪ್ರವೇಶದಿಂದ ಶ್ರೀನಿವಾಸನ್ ಪ್ರಭಾವ ಕುಂದಿರುವ ಲಕ್ಷಣಗಳು ಗಾಢವಾಗಿ ಗೋಚರಿಸುತ್ತಿವೆ.

ಬಿಸಿಸಿಐಗೆ ಒಳ್ಳೆಯದಾಗಲಿದೆ: ಗಂಗೂಲಿ: ‘ಶಶಾಂಕ್ ಅವರಿಂದ ಬಿಸಿಸಿಐಗೆ ಒಳ್ಳೆಯದಾಗಲಿದೆ. ಬಹ ಳಷ್ಟು ಶ್ರೇಷ್ಠ ವ್ಯಕ್ತಿಗಳು ಕಟ್ಟಿ ಬೆಳೆಸಿರುವ ಬಿಸಿಸಿಐ ಅನ್ನು ಶಶಾಂಕ್ ಉನ್ನತದ ರ್ಜೆಗೆ ಏರಿಸುವರು’ ಎಂದು ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಸಮರ್ಥ ಆಡಳಿತಗಾರರಾಗಿದ್ದ ಜಗಮೋಹನ್ ದಾಲ್ಮಿಯ ಅವರ ನಿಧನದಿಂದಾಗಿ ನಾವು ಕ್ಲಿಷ್ಟ ಪರಿಸ್ಥಿತಿಯನ್ನು ಎದುರಿಸಿದ್ದೇವೆ. ಇದೀಗ ಕ್ರಿಕೆಟ್‌ ಮತ್ತು ಅದಕ್ಕೆ ಸಂಬಂಧಿಸಿದ ಪ್ರತಿಯೊಬ್ಬರ ಹಿತಾಸಕ್ತಿಯ ದೃಷ್ಟಿ ಯಿಂದ ಈ ನಿರ್ಣಯ ಕೈಗೊಂಡಿದ್ದು ಸಮಾಧಾನ ತಂದಿದೆ’ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಅಧ್ಯಕ್ಷರೂ ಆಗಿರುವ ಗಂಗೂಲಿ ಹೇಳಿದ್ದಾರೆ.

‘ಸೇಡಿನ ಮನೋಭಾವ ಇಲ್ಲ’: ‘ನಾವು ಯಾರ ಮೇಲೂ ಸೇಡು ತೀರಿಸಿಕೊಳ್ಳುವ ಮನೋಭಾವ ಹೊಂದಿಲ್ಲ. ಅಂತಹ ಮನೋಧರ್ಮದೊಂದಿಗೆ ನಾವು ಕೆಲಸ ಮಾಡುವುದಿಲ್ಲ. ಸಂಸ್ಥೆಯ ಅಭಿವೃದ್ಧಿ ಗಾಗಿ ಎಲ್ಲರೊಂದಿಗೆ ಸೇರಿ ದುಡಿಯು ತ್ತೇವೆ’ ಎಂದು ಶಶಾಂಕ್ ಮನೋಹರ್ ಹೇಳಿದ್ದಾರೆ.  ಎನ್. ಶ್ರೀನಿವಾಸನ್ ಅವರ ಹೆಸರನ್ನು ಪ್ರಸ್ತಾಪ ಮಾಡದೇ ಅವರು ತಮ್ಮ ಇಂಗಿತವನ್ನು ಹೇಳಿದ್ದಾರೆ.

‘ತಮಿಳುನಾಡು ಕ್ರಿಕೆಟ್‌ ಸಂಸ್ಥೆಯೂ ಸೇರಿದಂತೆ ಒಟ್ಟು ಮೂವತ್ತು ಸದಸ್ಯ ಸಂಸ್ಥೆಗಳೊಂದಿಗೆ ನಾವು ಕೆಲಸ ಮಾಡುತ್ತೇವೆ’ ಎಂದು ಸ್ಪಷ್ಟಪಡಿಸಿದ್ದಾರೆ. ‘ಠಾಕೂರ್ ವಿರುದ್ಧ ಶ್ರೀನಿವಾಸನ್ ಅವರು ಸುಳ್ಳು ಸಾಕ್ಷ್ಯಾಧಾರ ನೀಡಿರುವ ಕುರಿತು ನ್ಯಾಯಾಲಯದಲ್ಲಿ ಹಾಕಿರುವ ಮೊಕದ್ದಮೆಯನ್ನು ಹಿಂಪಡೆಯಬೇಕು’ ಎಂದು ಶಶಾಂಕ್ ಮನವಿ ಮಾಡಿದ್ದಾರೆ.

*
ಒಂಬುಡ್ಸ್‌ಮನ್ ನೇಮಕ: ಮಹಿಳಾ ಕ್ರಿಕೆಟಿಗರಿಗೆ ಕೇಂದ್ರ ಗುತ್ತಿಗೆ
ಶಶಾಂಕ್ ಮನೋಹರ್ ಅವರು ಅಧ್ಯಕ್ಷ ಸ್ಥಾನಕ್ಕೆ ನೇಮಕವಾದ ಕೂಡಲೇ ಬಿಸಿಸಿಐನಲ್ಲಿ ತರಬೇಕಾದ ಬದಲಾವಣೆ ಮತ್ತು ಸುಧಾರಣೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಆ ಪಟ್ಟಿಯ ಪ್ರಮುಖ ಅಂಶಗಳು ಇಂತಿವೆ.

1) ಆಟಗಾರರು, ಆಡಳಿತಗಾರರ ಹಿತಾಸಕ್ತಿ ಸಂಘರ್ಷ ಸಮಸ್ಯೆ ನಿಭಾಯಿಸಲು  ಪ್ರತ್ಯೇಕ ಒಂಬುಡ್ಸ್‌ಮನ್  ನೇಮಕ.

2)ಕ್ರಿಕೆಟ್‌ನಲ್ಲಿ ನಡೆಯುವ ಭ್ರಷ್ಟಾಚಾರ, ಮೋಸದಾಟ, ಕಳ್ಳಾಟಗಳ ತನಿಖೆಗಾಗಿ ಸರ್ಕಾರಿ ಸ್ವಾಮ್ಯದ ತನಿಖಾ ದಳದೊಂದಿಗೆ ಸಂಯೋಜನೆ

3) ಬಿಸಿಸಿಐ ಪ್ರತಿವರ್ಷವೂ ನೀಡುವ ಅನುದಾನವನ್ನು ರಾಜ್ಯ ಸಂಸ್ಥೆಗಳು ಯಾವ ರೀತಿ ಬಳಸುತ್ತಿವೆ ಎಂಬುದರ ಮೇಲೆ ನಿಗಾ ಇಡಲು ಪ್ರತ್ಯೇಕ ಲೆಕ್ಕಪರಿಶೋಧಕರು (ಆಡಿಟರ್) ನೇಮಕ.

4) ₹ 25 ಲಕ್ಷಕ್ಕಿಂತ ಹೆಚ್ಚಿನ ಬಾಬ್ತಿನ ವೆಚ್ಚಗಳು ಮತ್ತು ವಾರ್ಷಿಕ ಲೆಕ್ಕಪತ್ರ, ಬಿಸಿಸಿಐ ನಿಯಮಾವಳಿಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುವುದು. (ಈಗಾಗಲೇ ವಾರ್ಷಿಕ ವರದಿಗಳನ್ನು ವೆಬ್‌ಸೈಟ್‌ನಲ್ಲಿ ಹಾಕಲಾಗುತ್ತಿದೆ).

5) ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಯನ್ನು (ಎನ್‌ಸಿಎ)ಶ್ರೇಷ್ಠತಾ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವುದು.

6) ಮಹಿಳಾ ಕ್ರಿಕೆಟಿಗರನ್ನು ಬಿಸಿಸಿಐ ಕೇಂದ್ರ ಗುತ್ತಿಗೆ (ಹಣಕಾಸು ವಿಭಾಗದಿಂದ   ಒಪ್ಪಿಗೆ ಪಡೆದುಕೊಂಡಿದೆ).

7) ಸಂಸ್ಥೆಯ ಹಳೆಯ ದಾಖಲೆಗಳು ಮತ್ತು ಪ್ರಮಾಣಪತ್ರಗಳು ಮುಂಬೈನ ಬಿಸಿಸಿಐ ಮುಖ್ಯಕಚೇರಿಯಲ್ಲಿ ಲಭ್ಯವಾಗಲಿವೆ. ಸದಸ್ಯರು ಅವಶ್ಯಕತೆ ಬಿದ್ದಾಗ ಅವುಗಳನ್ನು ಪಡೆದು ಪರಿಶೀಲಿಸಬಹುದು.

8) ಮುಂದಿನ ವರ್ಷ ನಡೆಯಲಿರುವ ಐಸಿಸಿ ವಿಶ್ವಕಪ್ ಟ್ವೆಂಟಿ–20 ಟೂರ್ನಿಯ ನ್ನು ಯಶಸ್ವಿಯಾಗಿ ಆಯೋಜಿಸಲು ಸಿದ್ಧತೆ.

9) ಬಿಸಿಸಿಐನ ನಿಯಮಾವಳಿಯು ತಿದ್ದುಪಡಿ ಆಗುವವರೆಗೂ ಸಂಸ್ಥೆಯ ಯಾವುದೇ ಚುನಾವಣೆಯಲ್ಲಿ ಅಧ್ಯಕ್ಷರು ಮತ ಚಲಾವಣೆ ಮಾಡುವಂತಿಲ್ಲ.

10) ಸಂಸ್ಥೆಯ ಯಾವುದೇ ವಿವಾದ ಬಗೆಹರಿಸುವಲ್ಲಿ ಅಧ್ಯಕ್ಷರು ತಮ್ಮ ವಿವೇಚನಾ ಅಧಿಕಾರವನ್ನು ಬಳಸುವಂತಿಲ್ಲ.  ಸದಸ್ಯರ ಬಹುಮತದ ನಿರ್ಣಯವನ್ನು ಗಣನೆಗೆ ತೆಗೆದುಕೊಳ್ಳಲಾಗುವುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT