ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರದಲ್ಲಿ 25 ನಕಲಿ ವಿದ್ಯಾರ್ಥಿಗಳು ಪತ್ತೆ

ಕಾಮೆಡ್–ಕೆ ಅವ್ಯವಹಾರ ಪ್ರಕರಣ
Last Updated 23 ಅಕ್ಟೋಬರ್ 2014, 19:57 IST
ಅಕ್ಷರ ಗಾತ್ರ

ಬೆಂಗಳೂರು: ನಕಲಿ ಶೈಕ್ಷಣಿಕ ದಾಖಲೆಗಳನ್ನು ಬಳಸಿ­ಕೊಂಡು ಕಾಮೆಡ್–ಕೆ ಪರೀಕ್ಷೆ ಬರೆದಿದ್ದ ಬಿಹಾರ ಮೂಲದ 25 ವಿದ್ಯಾರ್ಥಿಗಳನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಪತ್ತೆ ಮಾಡಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ 19 ರಾಜ್ಯಗಳ 600 ವಿದ್ಯಾರ್ಥಿಗಳು ಈ ಹಗರಣದಲ್ಲಿ ಭಾಗಿಯಾಗಿರುವ ಸಂಗತಿ ಸಿಸಿಬಿ ತನಿಖೆಯಿಂದ ಬಯಲಾಗಿತ್ತು. ಹೀಗಾಗಿ ವಿಶೇಷ ತಂಡಗಳನ್ನು ರಚಿಸಿಕೊಂಡು ಕಾರ್ಯಾಚರಣೆ ಆರಂಭಿಸಿದ ಪೊಲೀಸರು, ಇದೀಗ ಬಿಹಾರದಲ್ಲಿ 25 ನಕಲಿ ವಿದ್ಯಾರ್ಥಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

‘ಕಾಮೆಡ್–ಕೆ ಪರೀಕ್ಷೆ ಬರೆದಿದ್ದ ಬಿಹಾರ ಮೂಲದ 60 ವಿದ್ಯಾರ್ಥಿಗಳ ದಾಖಲೆಗಳನ್ನು ಪರಿಶೀಲಿಸ­ಲಾಯಿತು.  ಇವರಲ್ಲಿ 25 ಮಂದಿ ಬೇರೆಯವರ ಶೈಕ್ಷಣಿಕ ದಾಖಲೆಗಳನ್ನು ಬಳಸಿ­ಕೊಂಡು ಅಕ್ರಮವಾಗಿ ಪರೀಕ್ಷೆ ಬರೆದಿದ್ದಾರೆ.
ಮತ್ತೆ 25 ವಿದ್ಯಾರ್ಥಿಗಳು ತಮ್ಮ ದಾಖಲೆಗ­ಳಿಂದಲೇ ನ್ಯಾಯಯುತ­ವಾಗಿ ಪರೀಕ್ಷೆ ಬರೆ­ದಿದ್ದರೂ, ಕೊನೇ ಕ್ಷಣದಲ್ಲಿ ಸೀಟನ್ನು ಮರಳಿಸಿ­ದ್ದಾರೆ. ಉಳಿದ ಹತ್ತು ಮಂದಿಯ ಶೈಕ್ಷಣಿಕ ದಾಖಲೆ­ಗಳಲ್ಲಿ ಗೊಂದಲಗಳಿದ್ದು, ಅವುಗಳ ಪರಿಶೀಲನಾ ಕಾರ್ಯ ನಡೆ­ಯು­ತ್ತಿದೆ’ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸಕ್ತ ಸಾಲಿನ ಕಾಮೆಡ್–ಕೆ ಪ್ರವೇಶ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು, ನಕಲಿ ದಾಖಲೆ ಕೊಟ್ಟು ಪರೀಕ್ಷೆ ಬರೆದಿದ್ದ 29 ವಿದ್ಯಾರ್ಥಿಗಳು ಹಾಗೂ ಒಂಬತ್ತು ಮಂದಿ ದಲ್ಲಾಳಿಗಳನ್ನು ಬಂಧಿಸಿದ್ದರು. ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಇದೊಂದು ಅಂತರ ರಾಜ್ಯ ಮಟ್ಟದ ಬೃಹತ್‌ ಜಾಲವೆಂಬುದು ಗೊತ್ತಾಗಿತ್ತು. ಈ ಸುಳಿವಿನ ಮೇರೆಗೆ ಮಲ್ಲೇಶ್ವರದ ಕಾಮೆಡ್–ಕೆ ಕೇಂದ್ರ ಕಚೇರಿ ಮೇಲೆ ದಾಳಿ ನಡೆಸಿದ್ದ ಸಿಸಿಬಿ, ಕೆಲ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿತ್ತು.

ಆ ದಾಖಲೆಗಳನ್ನು ಪರಿಶೀಲಿಸಿದಾಗ ಬಿಹಾರ, ಉತ್ತರ ಪ್ರದೇಶ, ರಾಜಸ್ತಾನ, ಜಾರ್ಖಂಡ್, ಕೇರಳ, ಪಂಜಾಬ್, ಜಮ್ಮು–ಕಾಶ್ಮೀರ ಸೇರಿದಂತೆ ವಿವಿಧ ರಾಜ್ಯಗಳ 600 ವಿದ್ಯಾರ್ಥಿಗಳು ಈ ಅಕ್ರಮದಲ್ಲಿ ಭಾಗಿಯಾಗಿರುವ ಸಂಗತಿ ಗೊತ್ತಾಯಿತು.
ಹೀಗಾಗಿ ಅಂಥ ವಿದ್ಯಾರ್ಥಿಗಳ ವಿವರ ಕೋರಿ ರಾಜ್ಯದ 14 ವೈದ್ಯಕೀಯ ಕಾಲೇಜುಗಳಿಗೆ ನೋಟಿಸ್ ಕೊಟ್ಟಿದ್ದ ಸಿಸಿಬಿ ಅಧಿಕಾರಿಗಳು, ಅಗತ್ಯ ಮಾಹಿತಿಯನ್ನು ಸಂಗ್ರಹಿಸಿ­ಕೊಂಡು ನಕಲಿ ವಿದ್ಯಾರ್ಥಿಗಳ ಶೋಧ ಕಾರ್ಯ ಆರಂಭಿಸಿದ್ದಾರೆ.

ಶೀಘ್ರದಲ್ಲೇ ಬಂಧನ
‘ಪತ್ತೆಯಾಗಿರುವ ನಕಲಿ ವಿದ್ಯಾರ್ಥಿಗಳನ್ನು ಶೀಘ್ರದಲ್ಲೇ ಬಂಧಿಸಿ ನಗರಕ್ಕೆ ಕರೆತರಲಾಗು­ವುದು. ಅಕ್ರಮದಲ್ಲಿ ಭಾಗಿಯಾಗಿ­ರುವ ಇತರೆ ವಿದ್ಯಾರ್ಥಿ­ಗಳ ಪತ್ತೆಗೆ ನೆರವು ಕೋರಿ 19 ರಾಜ್ಯಗಳ ಶಿಕ್ಷಣ ಇಲಾಖೆ ಮತ್ತು ಪೊಲೀಸ್ ಇಲಾಖೆಗೆ ಪತ್ರ ಬರೆಯಲಾಗಿದೆ’ ಎಂದು ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಾಡಿಗೆ ಅಂಕಪಟ್ಟಿ
ಕಾಮೆಡ್–ಕೆ ಪ್ರವೇಶಕ್ಕೆ ಅರ್ಜಿ ಸಲ್ಲಿಸುವ ವೇಳೆ ನಕಲಿ ವಿದ್ಯಾರ್ಥಿ­ಗಳು ಪಿಯುಸಿ ಅಂಕಪಟ್ಟಿಯನ್ನು ಬಾಡಿಗೆಗೆ ಪಡೆದಿರುವ ಸಂಗತಿ ಕೂಡ ತನಿಖೆ­ಯಿಂದ ಬಯ­ಲಾಗಿದೆ.
ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ­ಗಳ ಅಂಕಪಟ್ಟಿ­ಯನ್ನು ರೂ 10 ಸಾವಿರಕ್ಕೆ ಬಾಡಿಗೆ ಪಡೆದು ಕಾಮೆಡ್‌–ಕೆಗೆ ಸಲ್ಲಿಸಿರುವುದು ಗೊತ್ತಾಗಿದೆ. ಹೀಗಾಗಿ ಅಂಕ­ಪಟ್ಟಿಯ ಭಾವಚಿತ್ರದ ಪರಿ­ಶೀಲನೆಗೆ ಹೆಚ್ಚಿನ ಆದ್ಯತೆ ನೀಡ­ಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT