ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಜಗಳ ತಡಿಕೆ

ಕೊನರು, ಸರಣಿ 5
Last Updated 13 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

‘ಏನೇನ್ ಬೀಜ ಕೊಡಲಿ?’ ಬೀಜದಂಗಡಿಯ ಯಜಮಾನ್ತಿಯಂತೆ ಮೀನಾಕ್ಷಿ ಧರೆಪ್ಪ ಕಿತ್ತೂರ್ ಕೇಳಿದರು. ಆ ಮಹಿಳೆಯ ಮುಗುಳ್ನಗೆಯ ಮಾತಿನಲ್ಲಿ, ಕೇಳಿದ ಕಾಳು ಕೊಡುವ ವಿಶ್ವಾಸವಿತ್ತು. ಅರೆಕ್ಷಣದಲ್ಲಿ ಅಟ್ಟವೇರಿ ಬುಟ್ಟಿ ಇಳಿಸಿದಳು, ಚೀಲದಿಂದ ಬಗೆ ಬಗೆಯ ಬೀಜಗಳನ್ನು ಜಗುಲಿಯ ಮೇಲೆ ರಂಗೋಲಿಯಂತೆ ಬಿಡಿಸಿಟ್ಟರು.

ಏನಿದೆಯೆಂದು ಕಣ್ಣಾಡಿಸುವುದರೊಳಗೆ ಪುಟ್ಟ ಪ್ಯಾಕಿಂಗ್ ಯಂತ್ರವನ್ನು ಪಕ್ಕದಲ್ಲಿಟ್ಟು ಸಜ್ಜಾದರು. ಸಬ್ಬಸಗಿ, ಜವೆಗೋಧಿ, ಚಕ್ಕೋತ ಸೊಪ್ಪಿನ ಬೀಜ, ಗಜರಿ, ಚವಳಿ, ತಿರಕಸಾಲಿ, ಕರಿಕಡ್ಲೆ, ಪಾಲಾಕ್ ಮುಂತಾದ ಬೀಜಗಳು ಪುಟ್ಟ ಪುಟ್ಟ ಪ್ಯಾಕ್‌ಗಳಲ್ಲಿ ಭರ್ತಿಯಾಗುತ್ತಿದ್ದವು. ಅರ್ಧ ಗಂಟೆಯಲ್ಲಿ 50ಕ್ಕೂ ಹೆಚ್ಚು ಜಾತಿಯ ಬೀಜಗಳು ನನ್ನ ಕೈಸೇರಿದವು. ಒಂದೊಂದು ಜಾತಿ ಬೀಜ ತುಂಬುವಾಗಲೂ ಕೃಷಿ ಆರೈಕೆ, ಆಹಾರ ಬಳಕೆಯ ರೀತಿಗಳನ್ನು ವಿವರಿಸುತ್ತಿದ್ದರು.

‘ನೀವು ಇನ್ನೂ ಸ್ವಲ್ಪ ಹೊತ್ತು ಕೂಡ್ರಿ, ನಮ್ ಹೊಲದಾಗ ಬೆಳಿಯೋ ಎಲ್ಲ ಬೆಳೆಗಳ ಸ್ಯಾಂಪಲ್ ಬೀಜ ಕೊಡ್ತೀನಿ. ಏಣಿಸಿದ್ರೆ 80 ರಿಂದ 100 ಜಾತಿ ಆಗಬಹುದು’ ಎಂದ ಮಾತಿನಲ್ಲಿ ಅಚ್ಚರಿಯಿತ್ತು, ನಾಟಿ ಬೀಜಗಳ ಕೃಷಿ ಕಥನವಿತ್ತು.
‘ಹಣ್ಣಾದ ಬದನೆಯ ಬೀಜ ಒಣಗಿಸಿಡಬೇಕು, ಬೆಳೆದ ಸೋಡಿಗೆ, ಬೆಂಡೆ, ಹೀರೆಯನ್ನು ಹಾಗೇ ಸಿಪ್ಪೆ ಸಹಿತ ಒಣಗಿಸಿ ಬೆಚ್ಚಗೆ ಕಾದಿಡಬೇಕು. ಹಾಗಲ ಬೀಜವನ್ನು ಸೆಗಣಿಯಲ್ಲಿ ಕಲಸಿ ಅಡುಗೆ ಒಲೆಯ ಹಿಂಭಾಗದ ಗೋಡೆಗೆ ಹೊಡೆದಿಟ್ಟರೆ ವರ್ಷವಾದರೂ ಕೆಡುವುದಿಲ್ಲ....’ ಅಮ್ಮ ಹೇಳಿದ್ದ ಹಳೆಯ ಮಾತುಗಳು ನಿಮಗೆ ನೆನಪಿರಬಹುದು. ಬೀಜಕ್ಕೆ ಹುಳು ಬೀಳದಂತೆ ಕಾಡುಗೇರು,ಲಕ್ಕಿ ಸೊಪ್ಪು, ಬೂದಿ, ನೆಲತುಂಬೆ, ಬೇವು ಬಳಸಿ ಸಂರಕ್ಷಿಸುವ ಉಪಾಯಗಳು ಗೊತ್ತಿರಬಹುದು.

ಕೃಷಿ ಬೀಜ ಸಂರಕ್ಷಣೆಯಲ್ಲಿ ಮಹಿಳೆಯರ ಪಾತ್ರ ಮುಖ್ಯ. ಇವರ ಕಾಳಜಿಗೆ ಕಾಳು ಉಳಿಸುವ ತಾಕತ್ತಿದೆ. ರೋಗ ಸಹಿಷ್ಣುತೆ ಗುಣದ ಬೆಳೆ, ರುಚಿ ರುಚಿಯ ನಾಟಿ ತರಕಾರಿ, ಸೊಪ್ಪು ಪಡೆಯಲು ಮನೆ ಮನದಲ್ಲಿ ಬೀಜ ಸಂರಕ್ಷಣೆಯ ಸೂತ್ರ ಅರಿತರೆ ಮಾತ್ರ ಸಾಧ್ಯ. ಜಮಖಂಡಿ ತೇರದಾಳದ ಕೃಷಿ ಸಾಧಕ ಧರೆಪ್ಪ ಕಿತ್ತೂರರ ಹೊಲದಲ್ಲಿ ಬೆಳೆ ವೈವಿಧ್ಯವನ್ನು ಯಾವತ್ತೂ ಗಮನಿಸಬಹುದು. ಚಳಿ, ಮಳೆ, ಬೇಸಿಗೆ ಯಾವ ಕಾಲಕ್ಕೆ ಹೋದರೂ ಬೆಳೆಯಿದೆ.

ಕೃಷಿ ಯಶಸ್ಸಿಗೆ ಉಳುಮೆ, ಗೊಬ್ಬರ, ನೀರು ನಿರ್ವಹಣೆ ಮುಖ್ಯವೇನೋ ಹೌದು. ಆದರೆ ಕೃಷಿ ಗೆಲುವಿಗೆ ಇಷ್ಟು ಸಾಲುವುದಿಲ್ಲ. ಹೊಲದಲ್ಲಿ ಮಾಗಿದ ಫಸಲುಗಳಿಂದ ಯೋಗ್ಯ ಬೀಜ ಸಂಗ್ರಹಿಸಿ ಮುಂದಿನ ವರ್ಷಕ್ಕೆಂದು ಜಾಗ್ರತೆಯಲ್ಲಿ ಬಚ್ಚಿಡುವ ಜಾಣ್ಮೆ ಬೇಕು. ಅತ್ತ ಹೊಲದಲ್ಲಿ ಉಳುಮೆ ಮುಗಿದು ಬೀಜಮಡಿ ತಯಾರಿಸುವ ಸಮಯಕ್ಕೆ ಬಿತ್ತನೆಗೆ ಯೋಗ್ಯ ಬೀಜ ಕೈಗಿಡುವ ತಜ್ಞತೆ ಬೇಕು. ಚಳಿಗಾಲಕ್ಕೆ ಹೂಕೋಸು, ಎಲೆಕೋಸು, ಬೆಳ್ಳುಳ್ಳಿ, ಪಾಲಾಕ್, ಸಬ್ಬಸಿಗೆ ಬೆಳೆಯಬಹುದು. ಬೇಸಿಗೆಗೆ ಹಾಗಲ, ಹೀರೆ, ಮೆಂತ್ಯ, ಅಲಸಂದೆ, ಬದನೆ, ಅವರೆ ಹಾಕಬಹುದು. ಇವನ್ನು ಮಾರುಕಟ್ಟೆಯಿಂದ ಖರೀದಿಸುತ್ತ ಹೋದರೆ ಗುಣಮಟ್ಟ ಅನುಮಾನ.

ಇಲ್ಲಿ ಹಾಗಲ್ಲ, ಧರೆಪ್ಪರ ಪತ್ನಿ ಮೀನಾಕ್ಷಿ ಬೀಜ ಸಂರಕ್ಷಿಸಿ ಬೇಸಾಯ ಮುನ್ನಡೆಸುವಲ್ಲಿ ಧರೆಪ್ಪರ ಜೊತೆ ಹಿನ್ನೆಲೆಯಲ್ಲಿ ನಿಂತವರು. ಅತ್ತೆ ಶಿವಲಿಂಗಮ್ಮ ಕಲಿಸಿದ ಪರಿಶ್ರಮ ಪಾಠವೂ ಮುಖ್ಯವಾದುದು. ಕಬ್ಬು, ಅರಿಶಿಣ ಮುಖ್ಯ ಬೆಳೆಯಾದ ದಿನಗಳವು. ಮಗ ಧರೆಪ್ಪರ ಉಸ್ತುವಾರಿಯಲ್ಲಿ ಕೃಷಿ ನಡೆಯುತ್ತಿತ್ತು. ಇವುಗಳ ಜೊತೆ ತರಕಾರಿ ಬೆಳೆಯಲು 30 ವರ್ಷಗಳ ಹಿಂದೆ ಮುಂದಾದರು ಶಿವಲಿಂಗಮ್ಮ. ಸಾವಯವ ತಾಜಾ ತರಕಾರಿಗಳನ್ನು ವರ್ಷವಿಡೀ ಬೆಳೆದು ಸ್ವತಃ ಮಾರಾಟ ಮಾಡಲು ಆರಂಭಿಸಿದರು. ತರಕಾರಿಯನ್ನು  ಕುಟುಂಬದ ಪ್ರಮುಖ ಆದಾಯ ಮಾರ್ಗವಾಗಿ ತೋರಿಸಿದರು. ನಾಟಿ ತರಕಾರಿಗಳನ್ನು ಜನ ಅಕ್ಕರೆಯಲ್ಲಿ ಖರೀದಿಸಿದಾಗ ತಳಿಯ ಉತ್ತಮ ಬೀಜ ಸಂಗ್ರಹಿಸಿ, ಬೆಳೆಸಿ, ಸಂರಕ್ಷಿಸುತ್ತ ಬೆಳೆ ಭವಿಷ್ಯ ರೂಪಿಸಿದ ಕೃಷಿ ತಜ್ಞೆ! ಅಡುಗೆ ಕಾಯಕದ ಜೊತೆ  ಅತ್ತೆಯ ಗರಡಿಯಲ್ಲಿ ಪಳಗಿದ ಸೊಸೆ ಮೀನಾಕ್ಷಿ  ಬೀಜ ಉಳಿಸಲು ಕಲಿತರು. ಧರೆಪ್ಪರ ಹೊಲದ ಬೆಳೆ ವೈವಿಧ್ಯದ ರಥ ಮುನ್ನಡೆಯಲು ಇವರ ಕೊಡುಗೆ ದೊಡ್ಡದು.

ಕಬ್ಬಿನ ಜೊತೆ ಪುಂಡಿಯ ಒಂದಿಷ್ಟು ಬೀಜ ಹಾಕಬಹುದು. ಇದು ಲಕ್ಷ್ಮಿ ಇದ್ದಂತೆ, ಪಲ್ಯಕ್ಕೆ ಪುಂಡಿಸೊಪ್ಪು ಎಲ್ಲರಿಗೂ ಬೇಕು ಎನ್ನುತ್ತಾರೆ ಮೀನಾಕ್ಷಿ. ಚಕ್ಕೋತ ಸೊಪ್ಪು ಹಲವರಿಗೆ ಅಪರಿಚಿತ, ವರ್ಷವಿಡೀ ಬೆಳೆಯುವ ಸೊಪ್ಪು ತರಕಾರಿಯ ಸಸ್ಯ ಅಡುಗೆ ಅಕ್ಕರೆಯ ಸರಕು. ಕುಟುಂಬದ ಅಗತ್ಯದ ಜೊತೆಗೆ ಮಾರುಕಟ್ಟೆಯ ಅವಕಾಶ ಗಮನಿಸಿಕೊಂಡು ಬೆಳೆ ಯೋಜನೆ ರೂಪಿಸುವಲ್ಲಿ ಧರೆಪ್ಪರ ಕುಟುಂಬ ಎತ್ತಿದ ಕೈ. ಬೆಳ್ಳುಳ್ಳಿ, ಗಜ್ಜರಿಯ ಸಾಲು ದಕ್ಷಿಣೋತ್ತರವಾಗಿದ್ದರೆ ಒಳ್ಳೆಯ ಬೆಳೆ ದೊರೆಯುತ್ತದೆ. ಅಮಾವಾಸ್ಯೆ ಎದುರಿನಲ್ಲಿ ಬೀಜ ಬಿತ್ತನೆ, ಹುಣ್ಣಿಮೆಗೆ ಮುಂಚೆ ಸಸಿ ನೆಡುವ ಪರಂಪರೆಯಿದೆ. ಬದನೆಯ ಕೊಯ್ಲು ಮುಗಿಯುತ್ತಿದ್ದಂತೆ ಅದರ ಬುಡದಲ್ಲಿ ಹೀರೆ ಬೀಜ ಹಾಕುತ್ತಾರೆ.

ಹೀರೆಯ ಬಳ್ಳಿಗೆ ಚಪ್ಪರದ ಅಗತ್ಯವಿಲ್ಲ, ಬದನೆ ಗಿಡಕ್ಕೆ ಹಬ್ಬಿ ಫಲ ನೀಡುತ್ತವೆ. ಕೃಷಿಯ ಸುಲಭದ ತಂತ್ರಗಳು ಕರಗತವಾಗಿವೆ. ಕಬ್ಬಿನ ಸಾಲಿನ ಅಂತರ ಹಿಗ್ಗಿಸಿ ಅವುಗಳ ನಡುವೆ ಎಲೆಕೋಸು, ಸವತೆ, ಬೆಂಡೆ, ಚೌಳಿ, ಬದನೆ, ಮೆಂತ್ಯ, ಸಬ್ಬಸಿಗೆ, ಪಾಲಾಕ್, ಮೆಣಸು, ಗಜ್ಜರಿ ಹೀಗೆ ತಹರೇವಾರಿ ತರಕಾರಿ ಬೆಳೆಯುವರು. ಮಹಾರಾಷ್ಟ್ರದಲ್ಲಿ ಜನಪ್ರಿಯ ಈ ಮಾದರಿಯಲ್ಲಿ ಉಳುಮೆ, ಗೊಬ್ಬರ, ನೀರಿನ ಅಗತ್ಯವಿಲ್ಲದೇ ಕಬ್ಬಿನ ತೋಟದಲ್ಲಿ ತರಕಾರಿ ಆದಾಯ ಸಾಧ್ಯವಾಗಿದೆ. 

ಬದುವಿನಲ್ಲಿ ನುಗ್ಗೆ, ಬೇವು, ತೇಗ, ಪೇರಲ, ಚಿಕ್ಕು ಮುಂತಾದ ಫಲವೃಕ್ಷಗಳಿವೆ. ಕಬ್ಬಿನ 10ಕ್ಕೂ ಹೆಚ್ಚು ತಳಿಗಳಿವೆ. ಜಲ ಸಂರಕ್ಷಣೆಯ ಹೆಜ್ಜೆಯಿದೆ. ಔಷಧ ಸಸ್ಯಗಳ ಪುಟ್ಟ ತೋಟವಿದೆ. ಹೈನು ಹಸಿರನ್ನು ಮನೆ ಸುತ್ತ ಪೋಷಿಸುತ್ತ ಬದುಕಿದ ಕುಟುಂಬದ ಬೆಳೆ ವೈವಿಧ್ಯಗಳ ನಿಜ ರಹಸ್ಯಗಳು ಮನೆಯ ಬೀಜ ಬುಟ್ಟಿಯಲ್ಲಿವೆ. ಮನೆಯ ಇನ್ನೊಂದು ತಳಿ ಸಂರಕ್ಷಣೆಯ ವಿಶೇಷ ಹೇಳದಿದ್ದರೆ ಕೃಷಿ ಕತೆ ಅಪೂರ್ಣವಾಗುತ್ತದೆ. ಕುಟುಂಬದ ಯುವ ಚೇತನವಾದ ದಯಾನಂದ, ಮನೋಜ, ಪವನ್, ಶಿವಾನಂದ, ಪ್ರಣವ್ ಎಲ್ಲರೂ ಒಮ್ಮನಸಿನ ತಂಡವಾಗಿ ಕೃಷಿ ನಂಬಿ ಬದುಕಿದ್ದಾರೆ. ಹಳ್ಳಿ ಯುವಕರ ನಗರ ವಲಸೆಯ ಮಧ್ಯೆ ಕೃಷಿ ಯುವ ತಲೆಮಾರನ್ನು ಮಣ್ಣಿನಲ್ಲಿ ಉಳಿಸಿದ್ದು ವಿಶೇಷವಾಗಿದೆ.

ಹದ ಮಳೆ ಸುರಿದಾಗಷ್ಟೇ ನಿದ್ದೆಯಿಂದ ಎಚ್ಚರಾದಂತೆ ಬೇಸಾಯ ಕೆಲವರಿಗೆ ನೆನಪಾಗುತ್ತದೆ. ಇಂಥವರು ಬೀಜ ಕಂಪೆನಿ ಅಂಗಡಿಗಳಲ್ಲಿ ಸಾಲು ಹಚ್ಚುವುದು ನೋಡುತ್ತೇವೆ. ರಾಸಾಯನಿಕ ಗೊಬ್ಬರ ಸುರಿದು, ಕಂಪೆನಿ ಬೀಜ ಬಿತ್ತಿ ಬೆಳೆ ಬೆಳೆವ ಪೈಪೋಟಿಗೆ ಇಳಿಯುತ್ತಾರೆ. ಮಣ್ಣು, ನೀರಿನ ಆರೋಗ್ಯ ಹದಗೆಡಿಸುತ್ತಾರೆ. ಕೃಷಿಯ ಲಾಭಗಳು ಬೀಜ, ರಾಸಾಯನಿಕ, ಕೀಟನಾಶಕ ಕಂಪೆನಿಗಳ ಕಿಸೆ ಸೇರುತ್ತದೆ. ಕೃಷಿ ಖರ್ಚು ಹನುಮನ ಬಾಲವಾಗಿ ಬೆಳೆಯುತ್ತ ‘ಸಾಲಲೀಲೆ’ ಶುರುವಾಗುತ್ತದೆ. ಕಂಪೆನಿ ಕೃಷಿಯ ಪರಾವಲಂಬಿ ಕುಲದ ದಾಸ್ಯದ ಹಾಡು ಹೊಲದ ಸುಪ್ರಭಾತವಾಗುತ್ತದೆ. ಅಟ್ಟದ ಬೀಜದ ಬುಟ್ಟಿ ಮರೆತು ಸಮಸ್ಯೆಗಳ ಬೆಟ್ಟ ಮೈಮೇಲೆ ಎರಗುತ್ತಿದೆ. ಭೂಮಿಗೆ ಅಗತ್ಯ ಬೀಜ ಸಂರಕ್ಷಿಸಿ, ಬೇಸಾಯ ಮುನ್ನಡೆಸಲು ಮಹಿಳೆಯರ ಪ್ರೇರಣೆ ಬೇಕು.  ನಿಮ್ಮೂರಿನ ಅಜ್ಜಿ, ಅಮ್ಮಂದಿರಲ್ಲಿ ಶಿವಲಿಂಗಮ್ಮ, ಮೀನಾಕ್ಷಿಯರೂ ಇರಬಹುದೇ? ಬನ್ನಿ, ಹುಡುಕುತ್ತ ಹೋಗೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT