ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿ ವ್ಯಾಪಾರಿ ಮೇಲೆ ಕಾರ್ಪೊರೇಟರ್ ಹಲ್ಲೆ

ಪಾಲಿಕೆಯ ಅಗರ ವಾರ್ಡ್ ಸದಸ್ಯನ ವಿರುದ್ಧ ದೂರು; ಆರೋಪ ಅಲ್ಲಗಳೆದ ಗುರುಮೂರ್ತಿ
Last Updated 1 ಜುಲೈ 2016, 19:39 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಅಗರ ವಾರ್ಡ್‌ ಸದಸ್ಯ ಗುರುಮೂರ್ತಿ ರೆಡ್ಡಿ ಅವರು ರಸ್ತೆ ಬದಿ ತಿಂಡಿ ಮಾರುತ್ತಿದ್ದ ಶಕ್ತಿ ಸುಬ್ಬರಾವ್ ಎಂಬುವರಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಎಚ್‌ಎಸ್‌ಆರ್‌ ಲೇಔಟ್ 27ನೇ ಮುಖ್ಯರಸ್ತೆಯಲ್ಲಿ ಗುರುವಾರ ರಾತ್ರಿ ನಡೆದಿದೆ.

ಶಕ್ತಿ ಅವರು ಎರಡು ವರ್ಷಗಳಿಂದ ‘ಜಿಪ್ಸಿ ಕಿಚನ್’ ಹೆಸರಿನಲ್ಲಿ, ರಸ್ತೆ ಬದಿ ವಾಹನ ನಿಲ್ಲಿಸಿಕೊಂಡು ತಿಂಡಿ ವ್ಯಾಪಾರ ಮಾಡುತ್ತಾರೆ. ಅಂತೆಯೇ ಗುರುವಾರ ಸಂಜೆ ಆರು ಗಂಟೆಯಿಂದ ವಹಿವಾಟು ಪ್ರಾರಂಭಿಸಿದ್ದರು. 7.30ರ ಸುಮಾರಿಗೆ ಬೆಂಬಲಿಗರ ಜತೆ ಸ್ಥಳಕ್ಕೆ ಬಂದ ಕಾರ್ಪೊರೇಟರ್ ಗುರುಮೂರ್ತಿ, ವ್ಯಾಪಾರ ನಿಲ್ಲಿಸಿ ಸ್ಥಳದಿಂದ ವಾಹನ ತೆಗೆಯುವಂತೆ ಸೂಚಿಸಿದ್ದರು ಎನ್ನಲಾಗಿದೆ.

ಈ ವೇಳೆ ಶಕ್ತಿ, ‘ಹೊಟ್ಟೆಪಾಡಿಗಾಗಿ ಈ ಕೆಲಸ ಮಾಡುತ್ತಿದ್ದೇನೆ. ತೊಂದರೆ ಕೊಡಬೇಡಿ’ ಎಂದು ಮನವಿ ಮಾಡಿದ್ದಾರೆ. ಆಗ ಗುರುಮೂರ್ತಿ, ‘ರಸ್ತೆ ಬದಿ ಗಾಡಿ ನಿಲ್ಲಿಸಿರುವುದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ವಾಪಸ್ ಬರುವಷ್ಟರಲ್ಲಿ ಗಾಡಿ ತೆಗೆದಿರಬೇಕು’ ಎಂದು ಎಚ್ಚರಿಸಿ ಹೋಗಿದ್ದಾರೆ.
ಆದರೂ, ಶಕ್ತಿ ಅವರು ರಾತ್ರಿ 10 ಗಂಟೆವರೆಗೂ ವಹಿವಾಟು ಮುಂದುವರಿಸಿದ್ದರು. ಆಗ ಏಳು ಮಂದಿ ಬೆಂಬಲಿಗರ ಜತೆ ಸ್ಥಳಕ್ಕೆ ಮರಳಿದ ಗುರುಮೂರ್ತಿ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಲೇ ಶಕ್ತಿ ಅವರ ಮೇಲೆ ಹಲ್ಲೆಗೆ  ಮುಂದಾಗಿದ್ದಾರೆ. ಇದಕ್ಕೆ ಶಕ್ತಿ ಪ್ರತಿರೋಧ ತೋರಿದಾಗ, ಬೆಂಬಲಿಗರು ಅವರ ಮೇಲೆರಗಿ ಥಳಿಸಿದ್ದಾರೆ. ನೆರವಿಗೆ ಧಾವಿಸಿದ ಸ್ಥಳೀಯರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಚಿತ್ರೀಕರಿಸಿಕೊಂಡ ನಾಗರಿಕ: ಬೀದಿ ವ್ಯಾಪಾರಿ ಮೇಲೆ ಗುಂಪು ಹಲ್ಲೆ ನಡೆಸಿರುವುದನ್ನು ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಕಾರ್ಪೊರೇಟರ್ ಹಾಗೂ ಬೆಂಬಲಿಗರು ವ್ಯಾಪಾರಿ ಮೇಲೆ ಹಲ್ಲೆ ನಡೆಸಿರುವುದು ಸ್ಪಷ್ಟವಾಗಿದೆ. ಆದರೆ, ಯಾವ ವಿಚಾರಕ್ಕೆ ಜಗಳವಾಯಿತು ಎಂಬ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಪಡೆಯಬೇಕಿದೆ’ ಎಂದು ಹಿರಿಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.
‘ಹಲ್ಲೆಯಿಂದಾಗಿ ಶಕ್ತಿ ಅವರ ತಲೆ, ಬೆನ್ನು, ಕೈ–ಕಾಲುಗಳಿಗೆ ಗಾಯಗಳಾಗಿವೆ. ಸದ್ಯ ಆಸ್ಪತ್ರೆಗೆ ದಾಖಲಾಗಿರುವ ಅವರು, ಚೇತರಿಸಿಕೊಂಡ ಬಳಿಕ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

‘ಗುರುವಾರ ಕುಡಿಯುವುದಿಲ್ಲ’
ಗುರುಮೂರ್ತಿ ಅವರು ಕುಡಿದ ಮತ್ತಿನಲ್ಲಿ ವ್ಯಾಪಾರಿ ಮೇಲೆ ಹಲ್ಲೆ ನಡೆಸಿದ್ದಾಗಿ ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿದ ರೆಡ್ಡಿ, ‘ನಾನು ಕುಡಿಯುತ್ತೇನೆ ನಿಜ. ಆದರೆ, ಗುರುವಾರ ಮದ್ಯ ಮುಟ್ಟುವುದಿಲ್ಲ. ಫುಟ್‌ಪಾತ್ ಮೇಲೆ ವ್ಯಾಪಾರ ಮಾಡುತ್ತಿದ್ದ ಕಾರಣ ಪಾದಚಾರಿಗಳಿಗೆ ತೊಂದರೆಯಾಗುತ್ತಿತ್ತು. ಈ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು. ಈ ಬಗ್ಗೆ ವಿಚಾರಿಸಲು ಹೋಗಿದ್ದೆ. ನಾನು ಯಾರ ಮೇಲೂ ಹಲ್ಲೆ ಮಾಡಿಲ್ಲ. ವ್ಯಾಪಾರಿ ಜತೆ ಯಾರೋ ಗಲಾಟೆ ಮಾಡುತ್ತಿದ್ದರು. ಆ ಜಗಳ ಬಿಡಿಸಲು ಹೋಗಿ ನಾನೇ ಹಲ್ಲೆಗೆ ಒಳಗಾದೆ’ ಎಂದರು ಗುರುಮೂರ್ತಿರೆಡ್ಡಿ.

***
ಗುರುಮೂರ್ತಿ, ಬೆಂಬಲಿಗರ ವಿರುದ್ಧ ಹಲ್ಲೆ (ಐಪಿಸಿ 323) ಹಾಗೂ ಉದ್ದೇಶ ಪೂರ್ವವಕವಾಗಿ ಶಾಂತಿ ಕದಡಿದ (ಐಪಿಸಿ 504) ಆರೋಪದ ಮೇಲೆ ಪ್ರಕರಣ ದಾಖಲಾಗಿದೆ 

-ಪೊಲೀಸರು ಎಚ್‌ಎಸ್‌ಆರ್ ಲೇಔಟ್­

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT