ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧಿಜೀವಿಗಳಿಗೆ ಸಮದರ್ಶಿತ್ವ ಅಗತ್ಯ

ಚರ್ಚೆ
Last Updated 13 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಅಸಹನೆ, ಅನುಮಾನ, ದ್ವೇಷ ಬಿತ್ತಿ ಅದನ್ನೇ ಬಂಡವಾಳ ಮಾಡಿಕೊಂಡು ಬೆಳೆದ ರಾಜಕೀಯ ಪಕ್ಷ ಎಂಬಂತಹ ಪೂರ್ವಗ್ರಹ ಮಾತುಗಳೊಂದಿಗೆ ಅರಂಭವಾಗುವ ದೇವನೂರರ ಲೇಖನ (ಪ್ರ.ವಾ. ಏ.­10) ಅವರ ರಾಜಕೀಯ ವಿಚಾರಗಳೊಡನೆ ಸಮೀಕರಿಸುವುದರಲ್ಲಿ ಮಾತ್ರ ಯಶಸ್ವಿಯಾಗಿದೆ ಎಂದು ಹೇಳ­ಬಹುದು.

ಇಲ್ಲಿ ರಾಜಕೀಯ ಎಂದರೆ ಅದು ಎಲ್ಲ ಕಾಲ, ದೇಶಗಳಲ್ಲೂ ಅಧಿಕಾರಕ್ಕಾಗಿ ಹಪಹಪಿಸುವುದೇ ಆಗಿ­ರು­ತ್ತದೆ. ಅದು ಕರ್ನಾಟಕ­ವಿರಬಹುದು, ಗುಜರಾತ್ ಇರಬಹುದು, ಕಾಂಗ್ರೆಸ್, ಕಮ್ಯುನಿಸ್ಟ್, ಬಿಜೆಪಿ ಯಾವುದೇ ಪಕ್ಷವಿರಬಹುದು ಅದರ ಆಂತರ್ಯದ ನಾಯಕತ್ವ ವಹಿಸಿಕೊಳ್ಳುವ ನಾಯಕತ್ವದ ಬಗ್ಗೆ ಸದಾ ಕೆಲವೊಂದು ಸಕಾರಾತ್ಮಕ ಹಾಗೂ ನಕಾರಾತ್ಮಕ ಕಮೆಂಟ್‌ಗಳು  ಇದ್ದೇ ಇರುತ್ತವೆ.

ಸಮಾಜವಾದಿ ಹಿನ್ನೆಲೆಯಿಂದ ಜನತಾ ಪರಿವಾರದಲ್ಲಿ ನೆಲೆ ಕಂಡುಕೊಂಡು ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯ­ಮಂತ್ರಿಯಾಗಿರುವ ಸಿದ್ದರಾಮಯ್ಯನವರನ್ನು ಸರ್ವಾಧಿಕಾರಿ, ದುರಹಂಕಾರಿ ಎಂದು ಜರೆಯುವ ಅವರ ಪಕ್ಷದಲ್ಲಿರುವ ಅಧಿಕಾರ, ಸವಲತ್ತುಗಳಿಂದ ವಂಚಿತರಾದವರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಇನ್ನು ಮೂಲ ಕಾಂಗ್ರೆಸ್‌ನ ಕಥೆಯಂತೂ ಜನಜನಿತ. ಜವಾಹರಲಾಲ್‌ ನೆಹರೂ ಪ್ರಧಾನಿ­ಯಾ­ಗಿದ್ದು ಅವರ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದ ಪಟೇಲರನ್ನು ಸರ್ವಾಧಿಕಾರಿ ಎಂದದ್ದು, ನಂತರ ಅಧಿ­ಕಾರದ ಚುಕ್ಕಾಣಿ ಹಿಡಿದ ಇಂದಿರಾ ಗಾಂಧಿ ಪಕ್ಷದೊಳಗಷ್ಟೇ ಅಲ್ಲದೆ ಇಡೀ ದೇಶವನ್ನು ಸರ್ವಾಧಿಕಾರಿ ತೆಕ್ಕೆಯೊಳಗೆ ತೆಗೆದುಕೊಳ್ಳ ಹೊರಟಿದ್ದು ಇತಿಹಾಸದಲ್ಲಿ ಸೇರಿಹೋಗಿರುವ ಸಂಗತಿ. 

ಕಾಂಗ್ರೆಸ್ ವಿರೋಧಿಸುತ್ತಿದ್ದ ಅಂಬೇಡ್ಕರ್ ಹಾಗೂ ಲೋಹಿಯಾ ಅವರನ್ನು ಸಂಸತ್ತಿನೊಳಗೆ ಬರ­ದಂತೆ ಕಾಂಗ್ರೆಸ್ ಷಡ್ಯಂತ್ರಗಳನ್ನು ರೂಪಿಸುವಲ್ಲಿ ಯಶಸ್ವಿಯಾಗಿತ್ತು. ಲೋಹಿಯಾ ಅವರು ಕಡೆಗೆ ಜನ­ಸಂಘದ ಬೆಂಬ­ಲ­ದಿಂದಾಗಿ ಸಂಸತ್ತಿಗೆ ಆರಿಸಿಬಂದರು ಎಂಬುದನ್ನು ನೆನಪಿಸಿಕೊಳ್ಳಬೇಕಾಗಿದೆ. ಇದಕ್ಕೆ ಕಮ್ಯುನಿಸ್ಟ್‌­ರಾಗಲಿ , ಹಳೇ ತಲೆಮಾರಿನ ಬಿಜೆಪಿಯಾಗಲಿ ಹೊರತಲ್ಲ. ಬಲರಾಜ್ ಮಧೊಕ್‌ರ ಕಥೆ ನಿಮಗೆ ಗೊತ್ತೇ ಇದೆ. ನೀವು ಈಗ ಕರುಣೆಯ ಕಣ್ಣುಗಳಿಂದ ನೋಡುತ್ತಿರುವ ಇದೇ ಅಡ್ವಾಣಿ, ವಾಜಪೇಯಿ ಅವರನ್ನು ಆತ ಸರ್ವಾಧಿಕಾರಿ ಎಂದೇ ಕರೆದಿದ್ದರು.

ಒಟ್ಟಾರೆ ನಾನು ಇಲ್ಲಿ ಹೇಳ ಹೊರಟಿರುವುದೇನೆಂದರೆ ರಾಜಕೀಯ ಪಕ್ಷವೊಂದರಲ್ಲಿ ಪ್ರವರ್ಧಮಾನಕ್ಕೆ ಏರುವ ವ್ಯಕ್ತಿಗಳ ಬಗ್ಗೆ ಉಳಿದಿರುವವರಿಗೆ ಒಂದು ಅಸಮಾಧಾನ ಇದ್ದೇ ಇರುತ್ತದೆ. ಆ ಗುಂಪು ಆ ವ್ಯಕ್ತಿಯನ್ನು ಸರ್ವಾ­ಧಿ­ಕಾರಿ, ಕೊಲೆಗಡುಕ, ಸುಳ್ಳ, ವಂಚಕ ಎಂಬ ಹಣೆ ಪಟ್ಟಿ ಕಟ್ಟುವುದು ಅತ್ಯಂತ ಸಹಜವಾದ ಸಂಗತಿ ಎನಿಸು­ತ್ತದೆ. ಇನ್ನು ದೇವನೂರರು ಗುಜರಾತ್ ಅಭಿವೃದ್ದಿ ಹಿನ್ನೆಲೆಯಲ್ಲಿ ನೀಡಿರುವ ಅಂಕಿ ಅಂಶಗಳು ನೈಜವಾಗಿ ತಜ್ಞರು ವಿಶ್ಲೇಷಿಸಬೇಕಾದ ಸಂಗತಿ. ನೀವು ಪ್ರತಿ­ಪಾದಿಸುವ ಸರ್ವೋದಯ ಆರ್ಥಿಕ ದೃಷ್ಟಿಕೋನವನ್ನು ಪ್ರತಿಪಾದಿಸುವ ಆರ್.ಎಸ್.ಎಸ್‌ನ ಸ್ವದೇಶಿ ವಿಚಾರವನ್ನು ಯಾವ ರೀತಿ ಅದು ಮುಂದಿನ ದಿನಗಳಲ್ಲಿ ಸಮೀಕರಿಸಿಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾದ ವಿಚಾರ.

ಆಶೀಶ್ ನಂದಿಯಂತಹ ಎಡಪಂಥೀಯ ವಿಚಾರದ ಹಿನ್ನೆಲೆಯವರು ಮೋದಿಯವರನ್ನು ಸರ್ವಾಧಿಕಾರಿ ಚಹ­ರೆಯ ವ್ಯಕ್ತಿ ಎಂದು ವಿಶ್ಲೇಷಿಸುವುದರ ಬಗ್ಗೆ ಉತ್ಪ್ರೇಕ್ಷೆ ಎನಿಸುವುದಿಲ್ಲ. ಗೋಧ್ರಾದಲ್ಲಿ ಹಿಂದೂಗಳ ಸಾಮೂ­ಹಿಕ ಹತ್ಯೆಯ ನಂತರ ನಡೆದ ದಂಗೆಯ ಸಮಯದಲ್ಲಿ ಮುಖ್ಯ­ಮಂತ್ರಿ­ಯಾಗಿ­ದ್ದರು ಎಂಬ ಒಂದೇ ಕಾರಣಕ್ಕಾಗಿ ಇಡೀ ದಂಗೆಯ ರೂವಾರಿ ಎಂದು ತೀರ್ಪು ನೀಡುವುದು ಸಹ ಸರ್ವಾಧಿಕಾರಿ ಧೋರಣೆಯ ಮತ್ತೊಂದು ಮುಖ ಅಲ್ಲವೇ?

ನೀವು ನಿಮ್ಮ ಲೇಖನವನ್ನು ಬರೆಯುತ್ತಾ ಭಯಕ್ಕೆ ಬಿದ್ದೆ ಎಂದು ಬರೆದಿದ್ದೀರಿ. ಆ ರೀತಿ ಭಯ­ಗೊಳ್ಳು­ವುದು ಮತ್ತು ಬೇರೆಯವರನ್ನು ಭಯಗೊಳಿಸುವ ಅವಶ್ಯಕತೆ  ಇಲ್ಲ. ಏಕೆಂದರೆ ಮೋದಿ ಪ್ರತಿ ಬಾರಿಯೂ ಚುನಾ­ವಣೆ ಎದುರಿಸಿಯೇ ಅಧಿಕಾರಕ್ಕೆ ಬರಬೇಕು, ಕಾಂಗ್ರೆಸ್ ಆಗಲಿ, ಜನತಾದಳವಾಗಲಿ, ಬಿಜೆಪಿ­ಯಾ­ಗಲಿ, ಕಮ್ಯು­ನಿಸ್ಟ್‌­ರಾಗಲಿ ಭ್ರಷ್ಟ ದುರಾಡಳಿತ ಮಾಡಿದಾಗ ಅವರನ್ನು ಮುಲಾಜಿಲ್ಲದೆ ಪ್ರಜಾಪ್ರಭುತ್ವ ವ್ಯವಸ್ಥೆ ಪದಚ್ಯುತಿ­ಗೊಳಿ­ಸಿದೆ. ಪ್ರಪಂಚದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಭಾರತ  ತನಗೊದಗಿದ ಸಂಕಷ್ಟದ ಸಮ­ಯಗಳಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳುವ  ಧೀರತೆ ಹಾಗೂ ಪ್ರಬುದ್ಧತೆ­ಯನ್ನು ಮೆರೆದಿದೆ.

ಗುಜ­ರಾತಿ­ನಂತಹ ರಾಜ್ಯದ ಮುಖ್ಯಮಂತ್ರಿಯನ್ನು ಪ್ರಧಾನಮಂತ್ರಿ ಅಭ್ಯರ್ಥಿಯ ಮಟ್ಟಕ್ಕೆ ಏರಿಸಿದ್ದು ಅವರನ್ನು ಅತಿ­ರಂಜಿ­ತ­ವಾಗಿ ವಿರೋಧಿಸಿದ ಮಾಧ್ಯಮಗಳು ಹಾಗೂ ವಿರೋಧಿ ನಾಯಕರು ಎಂಬ ರಾಜಕೀಯ ತಜ್ಞರ ವಿಶ್ಲೇ­ಷಣೆ­ಯಲ್ಲಿ ಸತ್ಯವಿದೆ ಎನಿಸುತ್ತದೆ. ಇಂದು ಎಲ್ಲೆಡೆ ಕಾಣಿಸಿಕೊಳ್ಳುತ್ತಿರುವ ಮೋದಿ ಪರ ಹಾಗೂ ವಿರೋಧಿಗಳ ಗುಂಪು­ಗಳಾಗಿರುವ ನೀವು ಹಾಗೂ ನಿಮ್ಮಂತಹ ಬುದ್ಧಿಜೀವಿಗಳು ಸಮದರ್ಶಿ ಭಾವವನ್ನು ಇಟ್ಟುಕೊಳ್ಳದೆ ಕಾಂಗ್ರೆಸ್ ನಂತಹ ಪಕ್ಷದೊಂದಿಗೆ ಕೈ ಜೋಡಿಸಿರುವುದು ದುರಂತವೇ ಸರಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT