ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಲೆಟ್ ಪ್ಲೇನ್ ಬಿಟ್ರೆ ಹೆಂಗೆ?

ವಿನೋದ
Last Updated 20 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಮೋದಿ ಸರ್ಕಾರಕ್ಕೆ ನೂರು ದಿನ ತುಂಬಿದ ಸಂಭ್ರಮಕ್ಕಾಗಿ ಮಿಸ್ಸಮ್ಮನ ಚಾದಂಗಡಿಯಲ್ಲಿ ಸಂತೋಷ ಕೂಟ ಏರ್ಪಾಟಾಗಿತ್ತು. ಹರಟೆಕೋರರಿಗೆಲ್ಲ ಬಿಸಿಬಿಸಿ ಒಗ್ಗರಣಿ ಮಂಡಕ್ಕಿ-, ಮೆಣಸಿನಕಾಯಿ, ಮೇಲೆ ಅರ್ಧರ್ಧ ಖಡಕ್ ಚಾ! ಗುಡ್ಡೆ ಒಂದು ಪ್ಲೇಟ್ ಮಂಡಕ್ಕಿ ಮುಗಿಸಿ ಎರಡನೆಯದಕ್ಕೆ ಕೈ ಹಾಕಿದಾಗ ದುಬ್ಬೀರ, ‘ಲೇ ಗುಡ್ಡೆ, ರುಚಿ ಐತಿ ಅಂತ ಜಾಸ್ತಿ ತಿನ್‌ಬೇಡಲೆ, ಮೊದ್ಲೇ ಅದು ಗ್ಯಾಸು’ ಎಂದ.

‘ಆದ್ರಾತು ಬಿಡಲೆ, ಮಿಸ್ಸಮ್ಮ ಅಪರೂಪಕ್ಕೆ ಪಾರ್ಟಿ ಕೊಡ್ತಿದಾಳೆ, ಬಿಡೋಕಾಗುತ್ತಾ? ಆಮೇಲೆ ಮೋದಿ ಬರ್ತ್‌ಡೇ ಪಾರ್ಟಿ ಬೇರೆ ಬಾಕಿ ಐತಿ. ಅದನ್ಯಾವಾಗ ಕೊಡ್ತಿ ಮಿಸ್ಸಮ್ಮ?’ ಎಂದ ಗುಡ್ಡೆ. ‘ಕೊಡಾನ ಬಿಡೋ ಗುಡ್ಡೆ, ಅದ್ಯಾವ ದೊಡ್ಡ ವಿಷ್ಯ, ಇನ್ನೊಂದಿನ ಚಿತ್ರಾನ್ನ ಮಾಡಿಕೊಡ್ತೀನಿ ಆಯ್ತಾ?’ ಎಂದಳು ಮಿಸ್ಸಮ್ಮ.

‘ಚಿತ್ರಾನ್ನನಾ? ಯಾವುದು? ಒಂದು ರೂಪಾಯಿಗೆ ಕೆ.ಜಿ. ಅಕ್ಕೀದಾ? ಅಕ್ಕಿ ಸಿದ್ರಾಮಣ್ಣುಂದು, ಚಿತ್ರಾನ್ನ ಮೋದೀದಾ? ನೀನೂ ಮಸ್ತ್ ಅದಿ ಬಿಡು’ ಎಂದು ನಕ್ಕ ಗುಡ್ಡೆ, ‘ಅಲ್ಲಿ ಮೋದಿ ಸಾಹೇಬ್ರು ಚೀನಾ ಪ್ರೆಸಿಡೆಂಟ್ ಪಿಂಗ್ ಅನ್ನೋರಿಗೆ ನೂರಾ ಐವತ್ತು ತರಹದ್ದು ಅಡುಗೆ ಮಾಡ್ಸಿದಾರಂತೆ. ಇಲ್ಲಿ ನೀನು ಜುಜುಬಿ ಚಿತ್ರಾನ್ನ ಕೊಡ್ತೀನಿ ಅಂತೀಯ...’ ಎಂದ.

ಅಲೆ ಇವ್ನ, ಚೀನಾ ಪ್ರೆಸಿಡೆಂಟು ಅಂದ್ರೆ ನಮ್ ಅತಿಥಿಗಳು. ಅವರಿಗೆ ವೆರೈಟಿ ವೆರೈಟಿ ಅಡುಗೆ ಮಾಡ್ಲೇಬೇಕು. ಅವರು ಅದ್ರಲ್ಲಿ ಒಂದೋ ಎರಡೋ ಥರದ್ದು ತಿಂತಾರೆ. ಸದ್ಯ ಪಿಂಗ್ ಸಾಹೇಬ್ರು ಕಪ್ಪೆಕಾಲಿನ ಫ್ರೈ, ಜಿರಲೆ ಬಿರಿಯಾನಿ ಕೇಳಿಲ್ಲ. ಕೇಳಿದ್ರೆ, ಪಾಪ ಮೋದಿ ಏನ್ಮಾಡ್ತಿದ್ರೋ... ‘ಥು, ಅವರು ಅದನ್ನೆಲ್ಲ ತಿಂತಾರಾ? ವ್ಯಾ...’ ಮಿಸ್ಸಮ್ಮ ವಾಕರಿಸಿಕೊಂಡಳು.

‘ಮತ್ತೇನ್ಮಾಡ್ತಾರೆ ಮಿಸ್ಸಮ್ಮ, ಅಲ್ಲಿ ಜನಸಂಖ್ಯೆ ದೊಡ್ಡದು. ಅಲ್ಲಿ ಜನ ಈಗಾಗ್ಲೇ ಕುರಿ ಕೋಳಿ ಎಲ್ಲ ತಿಂದು, ನಾಯಿ -ನರಿ, ಹಾವು- ಚೇಳು ಎಲ್ಲ ಮುಗಿಸಿ ಈಗ ಕಪ್ಪೆ, ಜಿರಲೆ ತಿನ್ನೋಕೆ ಶುರು ಮಾಡಿದಾರಂತೆ. ಪಾಪ ಅಷ್ಟೊಂದು ಜನಕ್ಕೆ ಯಾವ ಪ್ರಾಣಿ ಈಡಾಗ್ತವೆ ಹೇಳು...’.
‘ಹೌದಾ? ಮತ್ತೆ ಕಪ್ಪೆ ಜಿರಲೆ ತಿನ್ನೋರ ಮುಂದೆ ಗುಜರಾತಿ ಡೋಕ್ಲಾ, ಪರೋಟಾ ಇಟ್ರೆ ಹೆಂಗೋ? ಅದರ ಬದ್ಲು ಅವರಿಗೆ ನಮ್ ಮಿಸ್ಸಮ್ಮನ ಒಗ್ಗರಣಿ ಮಂಡಕ್ಕಿ-ಮೆಣಸಿನಕಾಯಿ ತಿನ್ಸಿದ್ರೆ ಚೆನ್ನಾಗಿತ್ತಪ್ಪ...’ ತೆಪರೇಸಿ ನಕ್ಕ.

‘ಅವರು ನಮ್ ಮೆಣಸಿನಕಾಯಿ ತಿಂದ್ರೆ ಮುಗೀತು. ಖಾರ ನೆತ್ತಿಗೇರಿ ಪಿಂಗ್ ಸಾಹೇಬ್ರು ಟಿಂಗ್ ಟಿಂಗ್ ಅಂತ ಕುಣೀಬೇಕಾಗ್ತಿತ್ತು ಅಷ್ಟೆ...’.
‘ಅಲ್ಲ, ಅವರ ಹೆಸರುಗಳೇನು ಹಂಗದಾವೆ? ಗಂಡ ಪಿಂಗ್ ಅಂತೆ, ಹೆಂಡ್ತಿ ಪೆಂಗ್ ಅಂತೆ. ವಿಚಿತ್ರ ಅಲ್ವ? ನಂಗಂತೂ ನಗು ಬಂತಪ್ಪ’ ಅಂದ ತೆಪರೇಸಿ.
‘ಹೌದೌದು, ನಿನ್ ಹೆಸರು ಭಾಳ ಚೆಂದೈತಿ ನೋಡು. ತೆಪರೇಸಿ, ದುಬ್ಬೀರ, ಗುಡ್ಡೆ, ಯಬಡೇಶಿ... ಈ ಹೆಸರುಗಳನ್ನ ಕೇಳಿದ್ರೆ ಅವರೂ ಬಿದ್ದು ಬಿದ್ದು ನಗ್ತಾರೇನಪ್ಪ. ದೊಡ್ಡೋರ ಬಗ್ಗೆ ಹಂಗೆಲ್ಲ ಹಗುರವಾಗಿ ಮಾತಾಡ್‌ಬಾರದಲೆ...’ ಪರ್ಮೇಶಿ ರೇಗಿದ.

‘ಅರೆ, ದೊಡ್ಡೋರಾದ್ರೆ ಅವರ ಮನಿಗೆ ಬಿಡಲೆ, ನಮ್ಮ ದೇಶಕ್ಕೆ ಬಂದಮೇಲೆ ಅವರು ಮಾಡಿದ್ದೇನು? ಇಲ್ಲಿ ಶಾಂತಿ ಮಾತುಕತೆ ಆಡೋದು, ಗಡಿಯಲ್ಲಿ ಅವರ ಸೈನಿಕರನ್ನ ಭಾರತದೊಳಕ್ಕೆ ನುಗ್ಸೋದು. ಇದು ಸರೀನಾ? ನಮ್ಮ ಮನೆಗೆ ಬಂದು ನಮ್ ಹಣೆಗೇ ಬಂದೂಕು ಇಡ್ತಾರೆ ಅಂದ್ರೆ ಹೆಂಗೆ?’ ತೆಪರೇಸಿಗೂ ಸಿಟ್ಟು ಬಂತು.

‘ಶಾಂತಿ ಶಾಂತಿ’ ಎಂದ ದುಬ್ಬೀರ, ‘ಅದಕ್ಕೆ ನೀನ್ಯಾಕೆ ಅಷ್ಟೊಂದು ತೆಲಿ ಕೆಡಿಸ್ಕಂತೀಯಲೆ, ಅದನ್ನೆಲ್ಲ ನೋಡ್ಕಳ್ಳಾಕೆ ಮೋದಿ ಅದಾರೆ...’ ಎಂದು ಸಮಾಧಾನಿಸಿದ. ‘ನಿಮಗೆ ವಿಷ್ಯ ಗೊತ್ತಾ? ಮೋದಿ ಸಾಹೇಬ್ರು ಚೀನೀ ಭಾಷೇಲಿ ಪಿಂಗ್ ಜೊತೆ ಮಾತಾಡಿದ್ರಂತಪ್ಪ...’ ಗುಡ್ಡೆ ಹೇಳಿದಾಗ ಮಿಸ್ಸಮ್ಮನ ಮುಖ ಅರಳಿತು. ‘ಹೌದಾ? ಮೋದೀಜಿಗೆ ಚೀನೀ ಭಾಷೆ ಬರುತ್ತಾ? ಏನಂತ ಮಾತಾಡಿದ್ರಂತೆ?’ ಎಂದು ಕೇಳಿದಳು.

‘ಇಶ್ಯು ಇಶ್ಯು, ಶಿಶಿ ಶಿಶಿ ವೆರಿಮಚ್, ಅಯ್ಯೋಯಾ ಅಂತ ನಾಲ್ಕಾರು ಚೀನೀ ಪದ ಕಲ್ತು ಚೀನಾ ಪ್ರೆಸಿಡೆಂಟ್ ಜೊತೆ ಮಾತಾಡಿದ್ರಂತಪ...’.
‘ಹೌದಾ? ಹಂಗಂದ್ರೆ ಏನು?’ ‘ಚೀನೀ ಭಾಷೇಲಿ ಇಶ್ಯು ಇಶ್ಯು ಅಂದ್ರೆ ಸ್ವಾಗತ ಸುಸ್ವಾಗತ ಅಂತ ಅರ್ಥ. ಶಿಶಿ ಶಿಶಿ ಅಂದ್ರೆ ಥ್ಯಾಂಕ್ಯು ಥ್ಯಾಂಕ್ಯು, ಅಯ್ಯೋಯಾ ಅಂದ್ರೆ ಬ್ಯೂಟಿಫುಲ್ ಅಂತ ಅರ್ಥ...’.

‘ನಿಜಾನಾ? ಬುಲ್ಡಿ ಬಿಡಬ್ಯಾಡಲೆ ಗುಡ್ಡೆ...’ ತೆಪರೇಸಿ ನಗುತ್ತ ಅವನ ಮುಖವನ್ನೇ ನೋಡಿದ. ‘ದೇವ್ರಾಣಿ ನಿಜ ಕಣಲೆ, ನಾ ಹೇಳಿದ್ದೆಲ್ಲ ಚೀನೀ ಭಾಷೆ ಪದಗಳು. ಬೇಕಾದ್ರೆ ಕಂಪ್ಯೂಟರ್ ನೋಡ್ರಿ...’ ಗುಡ್ಡೆ ಸವಾಲು ಹಾಕಿದ.

‘ಆಯ್ತು ಬಿಡಪ್ಪ, ಆಮೇಲೆ ಮೋದಿಜೀನೂ ಪಿಂಗ್ ಸಾಹೇಬ್ರು ಅದೇನೋ ಒಪ್ಪಂದ ಮಾಡ್ಕಂಡ್ರಂತೆ? ಒಪ್ಪಂದ ಆಗ್ತಿದ್ದಂಗೆ ಸನ್ಸೆಕ್ಸು ಟಣ್ ಅಂತ ಏರಿಬಿಡ್ತಂತೆ?’. ‘ಅದು ಸನ್ಸೆಕ್ಸ್ ಅಲ್ಲಲೆ ತೆಪರ, ಸೆನ್ಸೆಕ್ಸು ಅಂತ. ಅಂದ್ರೆ ಶೇರು ಮಾರುಕಟ್ಟೆ ದಿಢೀರ್ ಏರಿಬಿಡ್ತಂತೆ...’ ‘ಹೌದಾ? ಅಂಥದ್ದೇನು ಒಪ್ಪಂದ ಮಾಡ್ಕಂಡ್ರಲೆ ಅವರು?’

‘ಭಾರತದಲ್ಲಿ ಬುಲೆಟ್ ಟ್ರೇನ್ ಬಿಡ್ತಾರಂತೆ. ಹೊಸ ಕಾರ್ಖಾನೆ ಹಾಕ್ತಾರಂತೆ, ವ್ಯಾಪಾರ ಮಾಡ್ತಾರಂತೆ... ಇನ್ನೂ ಏನೇನೋ...’ ಗುಡ್ಡೆ ವಿವರಿಸಿದ.
‘ಈ ಬುಲೆಟ್ ಟ್ರೇನ್ ಬಿಡೋ ಬದ್ಲು ಬುಲೆಟ್ ಏರೋಪ್ಲೇನ್ ಬಿಟ್ರೆ ಹೆಂಗೆ? ಐದು ನಿಮಿಷದಾಗೆ ಅಮೇರಿಕಾಕ್ಕೆ ಹಾರಿಬಿಡಬಹುದಿತ್ತು...’ ತೆಪರೇಸಿ ಹೇಳಿದಾಗ ಮಿಸ್ಸಮ್ಮಗೆ ನಗು ಬಂತು. ‘ಬುಲೆಟ್ ಏರೋಪ್ಲೇನಾ? ಅದನ್ನೇನು ನೀನು ಓಡಿಸ್ತಿದ್ಯಾ?’ ಎಂದು ಛೇಡಿಸಿದಳು.

‘ಯಾಕೆ? ನಂಗೇನ್ ಏರೋಪ್ಲೇನ್ ಬಿಡಾಕೆ ಬರಲ್ವಾ? ನನ್ನ ಏನಂದ್‌ಕೊಂಡಿದಿ ಮಿಸ್ಸಮ್ಮ?’ ಗುಡ್ಡೆ ಹುಬ್ಬು ಕುಣಿಸಿದ. ‘ನೀನು ರೈಲು ಬಿಡೋದನ್ನ ನೋಡಿದೀವಪ. ಆದ್ರೆ ಏರೋಪ್ಲೇನ್ ಬಿಡೋದು ನೋಡಿಲ್ಲ... ಯಾವಾಗ ಕಲಿತಿದ್ದೆ?’ ಮಿಸ್ಸಮ್ಮ ನಕ್ಕಳು. ‘ನಿನ್ತೆಲಿ, ರೈಲು ಬಸ್ಸಿಗಿಂತ ಏರೋಪ್ಲೇನ್ ಬಿಡೋದು ಬಹಳ ಸುಲಭ ಮಿಸ್ಸಮ್ಮ, ಬಹಳ ಈಜಿ...’. ‘ಹೌದಾ? ಅದೆಂಗೆ?’

‘ಬೆಂಗಳೂರಂಥ ಬೆಂಗಳೂರು ಟ್ರಾಫಿಕ್‌ನಲ್ಲೇ ಆಟೊ ಓಡಿಸಿರೋನು ನಾನು. ನಂಗೆ ಏರೋಪ್ಲೇನ್ ಓಡ್ಸೋದು ಕಷ್ಟಾನಾ? ಆಕಾಶದಲ್ಲಿ ಟ್ರಾಫಿಕ್ಕೇ ಇರಲ್ಲ. ಗೇರ್ ಹಾಕಂಗಿಲ್ಲ, ಟರ್ನ್ ತಗಳಂಗಿಲ್ಲ. ಡೈರೆಕ್ಟ್ ಸುಂಯ್ ಅಂತ ಹೋಗಿಬಿಡಬಹುದು...’. ‘ಹೌದು ಸುಂಯ್ ಅಂತ ಹೋಗಿಬಿಡಬಹುದು. ವಾಪಾಸ್ ಬರಂಗಿಲ್ಲ ಅಷ್ಟೆ’ ತೆಪರೇಸಿ ಮಾತಿಗೆ ಎಲ್ಲರೂ ಗೊಳ್ಳಂತ ನಕ್ಕರು.

‘ಇರ್‍ಲಿ ಬಿಡೋ, ಹಂಗೇನಾದ್ರು ಬುಲೆಟ್ ಪ್ಲೇನ್ ಬಂದ್ರೆ ನಿನ್ನೇ ಪೈಲಟ್ ಮಾಡ್ಕಳಿ ಅಂತ ಮೋದಿಜೀಗೆ ರೆಕ್ಮಂಡ್ ಮಾಡ್ತೀನಿ, ಆಯ್ತಾ?’ ಮಿಸ್ಸಮ್ಮ ಹೇಳಿದಾಗ ‘ಶಿಶಿ ಶಿಶಿ ಮೆರಿಮಚ್’ ಎಂದ ತೆಪರೇಸಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT