ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಲ್ಸ್ ಅಂಗಳದಲ್ಲಿ ಭಟ್ಕಳದ ಹರೀಶ

Last Updated 26 ಜೂನ್ 2016, 19:30 IST
ಅಕ್ಷರ ಗಾತ್ರ

ಪ್ರೊ ಕಬಡ್ಡಿಯಲ್ಲಿ ಆಡುವುದು ಹೊಸ ತಲೆಮಾರಿನ ಅನೇಕ ಆಟಗಾರರ ಕನಸು. ಇಂಥ ಕನಸಿನ ಬೆನ್ನೇರಿ ರಾಜಧಾನಿಯ ಕಡೆಗೆ ಮುಖ ಮಾಡಿ ನಿಂತವರು ಅನೇಕರು. ಆದರೆ ಭಟ್ಕಳದ ಹರೀಶ ನಾಯ್ಕ ಅವರನ್ನು ಕಬಡ್ಡಿಯೇ ಹುಡುಕಿಕೊಂಡು ಬಂದಿದೆ. ಬೆಂಗಳೂರು ಬುಲ್ಸ್ ತಂಡದಲ್ಲಿ ಸ್ಥಾನ ಪಡೆದಿರುವುದು ಅವರಿಗೆ ಬಯಸದೇ ಬಂದ ಭಾಗ್ಯ. ಅವರ ಕುರಿತು ವಿಕ್ರಂ ಕಾಂತಿಕೆರೆ ಬರೆದಿದ್ದಾರೆ.

ಸಾಧಾರಣ ಬ್ಯಾಟ್‌ ಹಿಡಿದು ಟೆನಿಸ್ ಬಾಲ್‌ ಅನ್ನು ಶಾಲೆಯ ‘ಬೌಂಡರಿ’ಯಾಚೆ ಅಟ್ಟುತ್ತಿದ್ದ ಆ ಹುಡುಗನಿಗೆ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಅವರಂತಾಗಬೇಕು ಎಂಬ ಕನಸು ಇರಲಿಲ್ಲ.

ಕ್ರಿಕೆಟ್‌ ಬಿಟ್ಟು ಬೇರೆ ಆಟ ಗೊತ್ತೂ ಇರಲಿಲ್ಲ. ಆದರೆ ದಿಢೀರ್‌ ತಿರುವು ಕಂಡು ಜೀವನ ಪಥ ಬದಲಾಯಿತು; ಬದುಕಿನ ಬಂಡಿ ಕಬಡ್ಡಿ ಅಂಗಳದಲ್ಲಿ ಹೋಗಿ ನಿಂತಿತು.

ಉತ್ತರ ಕನ್ನಡ ಜಿಲ್ಲೆ ಭಟ್ಕಳ ಮೂಲದ ಹರೀಶ, ಭಾರತ ಕ್ರೀಡಾ ಪ್ರಾಧಿಕಾರ ಧಾರವಾಡ ತರಬೇತಿ ಕೇಂದ್ರದ ಲ್ಲಿ ತರಬೇತಿ ಪಡೆದರು. ಪ್ರೊ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್‌ ತಂಡಕ್ಕೆ ಆಯ್ಕೆಯಾಗಿರುವ ಏಕೈಕ ಕನ್ನಡಿಗ; ಪ್ರೊ ಕಬಡ್ಡಿಗೆ ಆಯ್ಕೆಯಾದ ಮುಂಬೈ ಕರ್ನಾಟಕದ ಮೊದಲ ಆಟಗಾರ ಎಂಬಿತ್ಯಾದಿ ಹಿರಿಮೆಯ ಗರಿ ಈಗ ಹರೀಶ ನಾಯ್ಕ ಅವರ ಮುಡಿಯಲ್ಲಿ ಮೂಡಿದೆ.

ಮೊದಲ ಎರಡು ಆವೃತ್ತಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಮೂರನೇ ಆವೃತ್ತಿಯಲ್ಲಿ ಕಳೆಗುಂದಿದ ಬೆಂಗಳೂರು ಬುಲ್ಸ್‌ ತಂಡ ನಾಲ್ಕನೇ ಆವೃತ್ತಿಗೆ ಸಜ್ಜಾಗುತ್ತಿದ್ದ ಸಮಯ ಅದು.

18ರಿಂದ 23 ವರ್ಷದೊಳಗಿನ, ಹುರುಪು ತುಂಬಿದ ಆಟಗಾರ ಒಬ್ಬ ತಂಡದಲ್ಲಿ ಇರಬೇಕು ಎಂದು ಬಯಸಿ ಹುಡುಕಾಟ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ರಾಜ್ಯದ ಹಿರಿಯ ಆಟಗಾರರು ಶಿಫಾರಸು ಮಾಡಿದ ಹೆಸರು ಹರೀಶ ನಾಯ್ಕ ಅವರದು.

ಕಾಲೇಜು ಮಟ್ಟದಲ್ಲಿ ಮತ್ತು ಮುಕ್ತ ಟೂರ್ನಿಗಳಲ್ಲಿ ನೀಡಿದ ಪ್ರದರ್ಶನವೇ ಹಿರಿಯರ ಕಣ್ಣು ಅವರ ಮೇಲೆ ಬೀಳಲು ಕಾರಣ. ಎತ್ತರದ ನಿಲುವು, ಕಟ್ಟುಮಸ್ತಾದ ದೇಹ, ರೈಡಿಂಗ್‌ನಲ್ಲಿ ತೋರುವ ಚುರುಕು ಮತ್ತು ಅಂಗಣದಲ್ಲಿ ತೋರುವ ಆತ್ಮವಿಶ್ವಾಸ ಹರೀಶ ಅವರನ್ನು ದೇಶದ ಅತಿದೊಡ್ಡ ಕ್ರೀಡಾ ಸ್ಪರ್ಧೆಗಳಲ್ಲಿ ಒಂದಾಗಿರುವ ಪ್ರೊ ಕಬಡ್ಡಿಯಲ್ಲಿ ಆಡುವ ಹಂತಕ್ಕೆ ಬೆಳೆಸಿದ್ದು ಎಂಬುದು ರಾಜ್ಯದ ಕಬಡ್ಡಿ ವಲಯದಲ್ಲಿ ಈಗ ಹರಡಿರುವ ಮಾತು.

ಭಟ್ಕಳದಿಂದ ಧಾರವಾಡಕ್ಕೆ
ಭಟ್ಕಳದ ಶಂಕರ ಮತ್ತು ಪಾರ್ವತಿ ದಂಪತಿಯ ಪುತ್ರ ಹರೀಶ ಕ್ರಿಕೆಟ್ ಆಡುತ್ತ ಬೆಳೆದವರು. ಅವರೇ ಹೇಳುವ ಪ್ರಕಾರ ಎಸ್‌.ಎಸ್‌.ಎಲ್‌.ಸಿ ಮುಗಿಸುವ ವೇಳೆ ಊರಿನಲ್ಲಿ ಕ್ಲಬ್ ಒಂದು ಸ್ಥಾಪನೆಯಾಗಿತ್ತು.

ಅದರಲ್ಲಿ ಕಬಡ್ಡಿ ಆಡುವವರೂ ಇದ್ದರು. ಅವರೊಂದಿಗೆ ಸೇರಿದ ಹರೀಶ ಅವರ ಆಟ ಕಂಡು ಊರಿನ ಕೆಲವರು ಧಾರವಾಡಕ್ಕೆ ತೆರಳಿ ಹಾಸ್ಟೆಲ್ ಸೇರುವಂತೆ ಸೂಚಿಸಿದರು. ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್‌) ಧಾರವಾಡ ತರಬೇತಿ ಕೇಂದ್ರದಲ್ಲಿ ಪ್ರವೇಶವೂ ಲಭಿಸಿತು.

ಧಾರವಾಡದ ಬಸವರಡ್ಡಿ ಕಾಲೇಜು ಸೇರಿದ ಹರೀಶ ನಾಯ್ಕ ಸಾಯ್‌ ಕಬಡ್ಡಿ ಕೋಚ್ ಈಶ್ವರ ಅಂಗಡಿ ಅವರ ಗರಡಿಯಲ್ಲಿ ಪಳಗಿದರು. ಪ್ರತಿಭೆ ಬಹುಬೇಗ ಬೆಳಕಿಗೆ ಬಂತು. ರಾಜ್ಯ–ಅಂತರರಾಜ್ಯ ಟೂರ್ನಿಗಳಲ್ಲಿ ಆಡಿ ಹೆಸರು ಮಾಡಿದರು.

ಸ್ಟೇಟ್‌ ಬ್ಯಾಂಕ್ ಆಫ್‌ ಮೈಸೂರು ಅವರನ್ನು ಅತಿಥಿ ಆಟಗಾರನಾಗಿ ತಂಡದಲ್ಲಿ ಸೇರಿಸಿಕೊಂಡಿತು. ರಾಜ್ಯ ಕಬಡ್ಡಿ ತಂಡದ ಆಯ್ಕೆ ಶಿಬಿರಕ್ಕೂ ಕರೆ ಬಂತು. ಕೇವಲ ಎರಡು ವರ್ಷಗಳಲ್ಲಿ ನಡೆದ ಈ ಬೆಳವಣಿಗೆಗಳು ಬೆಂಗಳೂರು ಬುಲ್ಸ್‌ನ ಆಯ್ಕೆ ಶಿಬಿರಕ್ಕೆ ತೆರಳುವಂತೆ ಅನೇಕರಿಂದ ಒತ್ತಾಯ ಬರಲು ಕಾರಣವಾಯಿತು.

‘ಬುಲ್ಸ್‌ ಆಯ್ಕೆ ಶಿಬಿರಕ್ಕೆ 50ಕ್ಕೂ ಹೆಚ್ಚು ಆಟಗಾರರು ಬಂದಿದ್ದರು. ನನಗೆ ಐದು ರೈಡ್ ಕೊಟ್ಟಿದ್ದರು. ಎಲ್ಲದರಲ್ಲೂ ಉತ್ತಮ ಪ್ರದರ್ಶನ ನೀಡಿದೆ. ಕೋಚ್‌ ರಣಭೀರ್ ಸಿಂಗ್ ಮೆಚ್ಚಿದರು; ತಂಡಕ್ಕೆ ಸೇರಿಸಿದರು’ ಎಂದು ಹೇಳುತ್ತಾರೆ ಹರೀಶ.

ತಂಡದೊಂದಿಗೆ ಮುಂಬೈಗೆ ತೆರಳಿರುವ ಅವರು ದೂರವಾಣಿ ಮೂಲಕ ‘ಪ್ರಜಾವಾಣಿ’ ಜೊತೆ ಮಾತನಾಡಿ ‘ಇದೊಂದು ಅಪರೂಪದ ಅವಕಾಶ. ಇಂಥ ಸಾಧ್ಯತೆ ಬಗ್ಗೆ ಕನಸು ಕೂಡ ಕಂಡಿರಲಿಲ್ಲ.

ನಾಯಕ ಸುರೇಂದರ್‌ ನಾಡಾ, ಹೆಸರು ಗಳಿಸಿರುವ ಡಿಫೆಂಡರ್ ಮೋಹಿತ್ ಚಿಲ್ಲಾರ್‌ ಮುಂತಾದವರ ಜೊತೆ ಇರಲು ಅವಕಾಶ ಸಿಕ್ಕಿದ್ದೇ ದೊಡ್ಡ ಸಾಧನೆ. ಪಂದ್ಯದಲ್ಲಿ ಆಡಲು ಅನುವು ಮಾಡಿಕೊಟ್ಟರೆ ಸಾಮರ್ಥ್ಯ ತೋರಿಸುವೆ’ ಎಂದು ಹೇಳಿದರು.

10 ಪ್ರಮುಖ ರೈಡರ್‌ಗಳನ್ನು ಹೊಂದಿರುವ ತಂಡದಲ್ಲಿ ನಿಮ್ಮ ನಿರೀಕ್ಷೆಗಳು ಏನು ಎಂದು ಕೇಳಿದರೆ ‘ಅವಕಾಶ ಸಿಗುತ್ತದೆ ಎಂಬ ಭರವಸೆ ಇದೆ. ಈಗ ನನ್ನೂರಿನಲ್ಲಿ ಎಲ್ಲ ಕಡೆ ನನ್ನ ಹೆಸರೇ ಕೇಳಿ ಬರುತ್ತಿದೆ

. ಜನಿಸಿ ಬೆಳೆದ ಊರು, ಕಬಡ್ಡಿ ಕಲಿತ ಧಾರವಾಡದ ಜೊತೆಗೆ ರಾಜ್ಯಕ್ಕೆ ಹೆಸರು ತರಲು ಪ್ರಯತ್ನಿಸುತ್ತೇನೆ, ಭವಿಷ್ಯದಲ್ಲಿ ದೇಶವನ್ನು ಪ್ರತಿನಿಧಿಸುವುದು ನನ್ನ ದೊಡ್ಡ ಕನಸು’ ಎನ್ನುತ್ತಾರೆ 18ರ ಹರಯದ ಹರೀಶ.

*
ಯಾವುದೇ ಹಂತದ ಪಂದ್ಯವೇ ಆಗಿರಲಿ, ಹರೀಶ ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಿದ್ದರು. ಇಂಥ ಅರ್ಪಣಾ ಭಾವ ಅವರನ್ನು ಈ ಮಟ್ಟಕ್ಕೆ ಬೆಳೆಸಿದೆ. ತರಬೇತಿ ಸಂದರ್ಭದಲ್ಲಿ ಹೇಳಿಕೊಟ್ಟ ತಂತ್ರಗಳನ್ನು ಚಾಚೂ ತಪ್ಪದೆ ಪಾಲಿಸುವ ಗುಣ ಅವರಲ್ಲಿದೆ. ಸಾಧನೆ ಮಾಡಲು ಸದಾ ಹಾತೊರೆಯುತ್ತಿರುವ ಅವರು ಪ್ರೊ ಕಬಡ್ಡಿಯಲ್ಲಿ ಆಡಲು ಅವಕಾಶ ಲಭಿಸಿದರೆ ಮಿಂಚುವುದರಲ್ಲಿ ಸಂದೇಹ ಇಲ್ಲ.
–ಈಶ್ವರ ಅಂಗಡಿ
ಧಾರವಾಡ ಸಾಯ್ ಕೇಂದ್ರದ ಕೋಚ್‌

*
ಆಟದಲ್ಲಿ ತಲ್ಲೀನನಾಗಿ ಪಂದ್ಯ ಗೆಲ್ಲಿಸಿಕೊಡುವ ಕಲೆ ಹರೀಶ ಅವರಿಗೆ ರಕ್ತಗತ. ಪ್ರತಿಕೂಲ ಪರಿಸ್ಥಿತಿಯಲ್ಲೂ ಸಾಧನೆಯ ಕನಸು ಕಂಡು ಹೆಜ್ಜೆ ಹಾಕಿದ ಅವರು ಯುವ ತಲೆಮಾರಿನ ಆಟಗಾರರಿಗೆ ಮಾದರಿಯಾಗಿದ್ದಾರೆ.
–ಸೂರಜ್‌ ನಾಯ್ಕ ಸೋನಿ
ಉತ್ತರ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT