ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೃಂದಾವನ, ಕದನ, ಏಕತಾನ...

Last Updated 24 ಜನವರಿ 2015, 19:30 IST
ಅಕ್ಷರ ಗಾತ್ರ

ಪುರಾಣದ ಆವರಣವೊಂದಕ್ಕೆ ವರ್ತಮಾನದ ನೆಲೆಯಲ್ಲಿ ಮತ್ತೊಮ್ಮೆ ಭೇಟಿ ನೀಡಿ ಸದ್ಯವನ್ನೂ, ಭೇಟಿ ನೀಡಿದ ಪುರಾಣದ ಆವರಣವನ್ನೂ ವ್ಯಾಖ್ಯಾನಿಸುವ ಅನೇಕ ಪ್ರಯತ್ನಗಳು ಕನ್ನಡದಲ್ಲಿ ಆಗಿವೆ. ಪು.ತಿ.ನ ಅವರ ‘ಗೋಕುಲ ನಿರ್ಗಮನ’, ಕುವೆಂಪು ಅವರ ‘ಶ್ಮಶಾನ ಕುರುಕ್ಷೇತ್ರ’, ‘ಬೆರಳ್‌ಗೆ ಕೊರಳ್’, ‘ಶೂದ್ರ ತಪಸ್ವಿ’ ಮುಂತಾದ ನಾಟಕಗಳು, ಅನೇಕ ಕವಿಗಳ ನೂರಾರು ಕವನಗಳು ಇಂತಹ ಮಾದರಿಗಳಾಗಿ ನೆನಪಿಗೆ ಬರುತ್ತವೆ.

ಪುರಾಣವೊಂದು ಆದರ್ಶ, ವರ್ತಮಾನವು ವಿಕಲ್ಪ ಎನ್ನುವ ನೆಲೆಯ ‘ಗೋಕುಲ ನಿರ್ಗಮನ’, ಪುರಾಣದ ಕೇಡಿನ ಬೀಜಗಳು ವರ್ತಮಾನದಲ್ಲಿ ಫಲ ಕೊಡುತ್ತಿವೆ ಎನ್ನುವ ‘ಬೆರಳ್‌ಗೆ ಕೊರಳ್’, ‘ಶ್ಮಶಾನ ಕುರುಕ್ಷೇತ್ರ’ದಂತಹ ಕೃತಿಗಳು ಪುರಾಣ ಮತ್ತು ವರ್ತಮಾನದ ಸಂಬಂಧಗಳನ್ನು ಇದಿರಾಗುವ ಕೆಲವು ಮಾದರಿಗಳನ್ನು ಒದಗಿಸುತ್ತವೆ. ವರ್ತಮಾನ ಮೂರ್ತರೂಪದ ಬದುಕಾದರೆ ಪುರಾಣ ಕಾಲ್ಪನಿಕ ಸಂಕೇತಗಳ ಮೂಲಕ ನಡೆಸಿದ ಸಾಂಸ್ಕೃತಿಕ ರಾಜಕಾರಣ ಎಂಬ ಸ್ಪಷ್ಟ ಅರಿವಿನಿಂದಲೇ ಇಂತಹ ಅನುಸಂಧಾನಗಳು ನಡೆಯಬೇಕು.

‘ನಿನ್ನ ಧ್ಯಾನದ ಹಣತೆ’ ಕವಿ ವಾಸುದೇವ ನಾಡಿಗ್ ಅವರ ಐದನೆಯ ಕವನ ಸಂಕಲನ. ಎಲ್ಲ ನಲವತ್ತನಾಲ್ಕು ಕವನಗಳೂ ಕೃಷ್ಣ–ರಾಧೆ, ಮಥುರೆ, ಗೋಕುಲಗಳನ್ನೇ ಧೇನಿಸಿವೆ. ಎಲ್ಲವೂ ಕೃಷ್ಣನೆಂಬ ಗಂಡಿನ ಕಡೆಯಿಂದ ಕಂಡ ನೋಟಗಳು. ಈ ನೋಟಗಳೆಲ್ಲ ವರ್ತಮಾನದೊಂದಿಗೆ ಬೆಸೆದುಕೊಂಡು ಬಂದಂತಿವೆ. 

ಪ್ರತಿ ಹಗಲು ನನ್ನ ನಾನು ಹುಡುಕುತ್ತೇನೆ
ಅಲ್ಲಿ ನೀನೇ ಕಾಣಿಸುವೆ.
ಮುಖ ತಿರುಗಿಸಿಕೊಂಡು ಹೋಗಿಬಿಡುವ
ನಿನ್ನಲಿ ಅದೆಷ್ಟು ಪ್ರಶ್ನೆಗಳಿವೆ!
ಕುಳಿತು ಮಾತನಾಡಬೇಕಾಗಿದೆ ರಾಧೆ
ಶತ ಶತಮಾನಗಳು ಕಳೆದರೂ ನಿರೀಕ್ಷೆ ಮುಗಿಯುವುದಿಲ್ಲ! 
(ಹಣತೆ ೧)

ವರ್ತಮಾನದ ಹೆಣ್ಣು-ಗಂಡಿನ ಸಂಬಂಧಗಳು  ಸಡಿಲವಾಗುತ್ತಿವೆ, ಸೂಕ್ಷ್ಮವಾಗುತ್ತಿವೆ ಇತ್ಯಾದಿ ಗಂಡು-ಹಳಹಳಿಕೆಗಳು ಇತ್ತೀಚೆಗೆ ಜಾಸ್ತಿಯಾಗಿವೆ. ಸಾವಿರಾರು ವರ್ಷಗಳಿಂದ ಗಂಡಿನ ಅನುಬಂಧದಂತೆ ಬಾಳಿದ್ದ ಹೆಣ್ಣು ಜೀವ ಇದೀಗ ತನ್ನನ್ನು ತಾನು ಗುರುತಿಸಿಕೊಳ್ಳುವ ಪ್ರಯತ್ನ ಆರಂಭಿಸಿದ್ದಾಳೆ. ಹಾಗಾಗಿ ಗಂಡಸಿಗೆ ಆತಂಕ ಶುರುವಾಗಿದೆ! ಅದು ವ್ಯಕ್ತವಾಗುವ ಪರಿ ಇದು:
ಜಗದ ದುಃಖದ ಎದುರು ಅತೀ
ದುಃಖಾರ್ತನಾಗಿ ನಿಂತಿದ್ದೇನೆ
ನಿನ್ನಿರುವಿಕೆಯೂ ನೋವು
ನಿನ್ನಗಲಿಕೆಯೂ ನೋವು   
(ಹಣತೆ ೩)

ಹೊರಟು ಹೋಗದಿರು ಗೋಕುಲಕೆ
ರಾಧೆಯೇ,
ನಾಳಿನ ಬೆಳಗುಗಳು ಅರ್ಥ ಕಳೆದುಕೊಳ್ಳುತ್ತವೆ
ಇನ್ನು ಇರುಳುಗಳಿಗೆಲ್ಲಿ ಮುಖ?  
(ಹಣತೆ ೨)

ಪುರಾಣದ ಆವರಣವೊಂದನ್ನು ಏಕಮುಖವಾಗಿ ಕಾಣುವ ಅನುಸಂಧಾನಗಳಿಗೆ ಎಲ್ಲವೂ ನಿರಾಳ. ಕೃಷ್ಣನೆಂದರೆ ಅವರ ಕೃಷ್ಣ, ರಾಧೆಯೆಂದರೆ ಅವರಿಗಾಗಿ ಇರುವ ರಾಧೆ. ತನ್ನ ಕುಲಮೂಲದವರೆಲ್ಲ ಹೊರಗೆ ‘ಅಲ್ಲೆ ಕುಂತವರೆ’ ಎಂದುಕೊಳ್ಳದ ವರ್ತಮಾನದ ವೈದಿಕ ಕೃಷ್ಣನನ್ನು ಹೊರಗೆ ನಿಂತ ಜನ ಹೇಗೆ ನೋಡುತ್ತಾರೆ ಎಂಬುದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲದ ರಾಜಕೀಯ ಸಂದರ್ಭದಲ್ಲಿ ನಾವಿದ್ದೇವೆ. ಕೃಷ್ಣಮಠವೆಂದರೆ ಕೇವಲ ಕೃಷ್ಣಮಠವಲ್ಲ ಅದು ವಿಧಾನಸೌಧದ ಇನ್ನೊಂದು ವಿಸ್ತರಣೆಯೂ ಹೌದು. ರಾಮಾಯಣ, ಮಹಾಭಾರತ, ಭಗವದ್ಗೀತೆಗಳು ಕೇವಲ ಕತೆ ಕಾವ್ಯಗಳಲ್ಲ, ಅವು ನಮ್ಮೆಲ್ಲರ ಇಂದಿನ ಬದುಕನ್ನು ಹೇಗೆ ಬೇಕೋ ಹಾಗೆ ಈಡಾಡಲು ಅಧಿಕಾರ ಕೇಂದ್ರಗಳು ಬಳಸಿಕೊಳ್ಳುವ ರಾಜಕೀಯ ಹತಾರುಗಳು ಎಂಬುದು ಈಗ ಸಾಮಾನ್ಯರಿಗೂ ಗೊತ್ತಾಗಿದೆ. ಗೋಕುಲವಿಂದು ಡಿನೋಟಿಫಿಕೇಶನ್ನಿಗೆ, ವಿಶೇಷ ಆರ್ಥಿಕ ವಲಯಗಳ ದಾಳಿಗೆ ಛಿದ್ರವಾಗಿದೆ.

ಕಾವ್ಯವೆನ್ನುವುದು ಕವಿ ಮತ್ತು ರಾಜರಿಬ್ಬರ ರಾಜಕಾರಣವಾಗಿರುವುದರಿಂದ ಅಧಿಕಾರ ಕೇಂದ್ರಗಳು ನಿರ್ನಾಮ ಮಾಡಿದ ಸಾಮಾನ್ಯರ ಬದುಕಿಗೆ ಸಮರ್ಥನೆಯ ಹೆಸರೊಂದನ್ನೋ ಪದವೊಂದನ್ನೋ ಹಾಡೊಂದನ್ನೋ ಸೃಷ್ಟಿಸಿ ಕೈತೊಳೆದುಕೊಂಡಿದೆ. ಆದರೆ ಜೀವಿಗಳ ರಕ್ತದ ಗುರುತುಗಳನ್ನು ಅಷ್ಟು ಸುಲಭವಾಗಿ ಒರೆಸಿಹಾಕಲಾಗದು.
ಈಗಷ್ಟೇ ಬಂದೆ ಅವ ಆ ಅಸುರನ
ಎದೆಗೆ ಚಕ್ರ ತಾಗಿಸಿ ನೋಡು,
ಹಾಡು ಹಗಲೆ ಕಾಡುವ
ವೈರಿಗಳ ಕತ್ತಲ್ಲಿ ನನ್ನ ಕೈ ಬೆರಳ ಗುರುತು!
ರಾಧೆ,
ಈ ರಕ್ತ ಸಿಕ್ತ ಕೈಬೆರಳುಗಳೂ
ಹೂಮುಡಿಸಬಲ್ಲವು ನಿನ್ನ ಹೆರಳಿಗೆ
ಒಡ್ಡು ಮುಡಿಯ!
ಬೆಣ್ಣೆ ಮೃದುವಿನಲ್ಲಾಡಿದ
ಕೈಬೆರಳುಗಳೂ
ಎಡತಾಕಬಲ್ಲುದು ಕ್ರೌರ್ಯದ ಬೇರುಗಳನು  
(ಹಣತೆ ೪)

ಈ ಸಂಕಲನದ ಒಂದು ಓದು ಅನೇಕ ಸಂಗತಿಗಳನ್ನು ಮುನ್ನೆಲೆಗೆ ತರುತ್ತದೆ. ತಮಿಳು ಕಾವ್ಯ ಮೀಮಾಂಸೆಯ ‘ಅಗಂ-ಪುರಂ’ ಪರಿಕಲ್ಪನೆಗಳ ವ್ಯಾಖ್ಯಾನಕ್ಕಾಗಿಯೇ ಕಟ್ಟಿದಂತಿರುವ ಈ ಹಣತೆ ಹಾಡುಗಳಲ್ಲಿ, ವೈಯಕ್ತಿಕವಾದ ಭಾವನಾತ್ಮಕ ತಾಕಲಾಟಗಳು-ಸಾಮಾಜಿಕ ಬದುಕಿನ ಇಕ್ಕಟ್ಟುಗಳು, ವ್ಯಷ್ಟಿ-ಸಮಷ್ಟಿಯ ಬದುಕಿನ ನಿರ್ವಹಣೆ ಇವೆರಡಕ್ಕೂ ಕಾವ್ಯ ದುಡಿಯಬೇಕು ಎನ್ನುವ ಆಶಯ ಎದ್ದು ಕಾಣುತ್ತದೆ. ಕವಿಗೆ ಇಂತಹ ಉದ್ದೇಶ ಇತ್ತೋ ಇಲ್ಲವೋ ಎನ್ನುವುದು ಇಲ್ಲಿ ಗಣನೆಗೆ ಬರಬೇಕಿಲ್ಲ. ಎಲ್ಲವನ್ನೂ ಮುಕ್ತಿಗೆ, ಪರಮಾರ್ಥಕ್ಕೆ ಅರ್ಪಿಸಿ ಕೈತೊಳೆದುಕೊಳ್ಳುವ ಭಾರತೀಯ ಕಾವ್ಯ ಮೀಮಾಂಸೆಗೆ ಹೊರತಾಗಿ ವ್ಯಕ್ತಿಯೊಬ್ಬ ಬಿಡಿಯಾಗಿ ಮತ್ತು ಇಡಿಯಾಗಿ ಬದುಕಲು ಕಟ್ಟಿಕೊಳ್ಳಬೇಕಾದ ಜೀವನ ಮೀಮಾಂಸೆಯ ಸೂತ್ರಗಳನ್ನು ಒದಗಿಸಿಕೊಡುವ ಪ್ರಯತ್ನವನ್ನು ತಮಿಳು ಕಾವ್ಯ ಮೀಮಾಂಸೆಯ ‘ಅಗಂ-ಪುರಂ’ಗಳು ಮಾಡುತ್ತವೆ. ಈ ಸಂಕಲನ ಅಂತಹ ಮೀಮಾಂಸೆಯ ಓದಿಗೆ ಒಡ್ಡಿಕೊಳ್ಳುತ್ತದೆ. ಅಂತಹ ಒಂದೆರಡು ಮಾದರಿಗಳನ್ನು ನೋಡಬಹುದು.

ವಿಷಸರ್ಪ
ರಕ್ಕಸರ ಒಳಸಂಚು
ಕೋಟೆ ಕೊತ್ತಲ ದಾಹ
ಯುದ್ಧ ಸನ್ನಾಹದ್ದೇ ಕನವರಿಕೆ
ಈ ಜಗತ್ತಿಗೆ
ನಿಜದ ಬದುಕಿನ
ಪಠ್ಯ ಅಪಥ್ಯ  
(ಹಣತೆ ೨೩)
ನಿನ್ನ ಕೊರಳ
ಮಣಿಗಳಲಿ ನನ್ನನ್ನೂ
ಪೋಣಿಸಿಕೋ ಸಖಿ
ಕಣ್ಣಗುಡ್ಡೆಗಳನ್ನು ಅಲ್ಲಲ್ಲಿ
ಸೇರಿಸಿಕೋ
ಮಿಂಚಲಿ ಬಳೆಗಳುಲುಹಲಿ ಮಧ್ಯೆ
ನನ್ನ ಹೃದಯ
ಬಡಿತ ಬೆರೆಸು ಬೇಕಾದರೆ
ನಿನ್ನ ಕಾಲಂದುಗೆಗಳಲಿ!  
(ಹಣತೆ ೨೯)

ಈ ಸಂಕಲನದ ಎಲ್ಲ ನಲವತ್ತನಾಲ್ಕು ಕವನಗಳನ್ನು ಓದುವ ಹೊತ್ತಿಗೆ ಏಕತಾನತೆಯನ್ನು ತಡೆಯುವ ಎಲ್ಲ ಪ್ರಯತ್ನಗಳೂ ವಿಫಲವಾಗಿ ಯಾಕಿಂಥ ಹಳಹಳಿಕೆ ಎಂದು ಅನ್ನಿಸಲೂಬಹುದು. ಕಾರಣವೆಂದರೆ, ಕನ್ನಡ ಕಾವ್ಯದ ದೊಡ್ಡ ಜಾಗವನ್ನು ಕೃಷ್ಟ-ರಾಧೆಯಂತಹ ಪಾತ್ರಗಳು ಈಗಾಗಲೇ ಬಳಸಿಕೊಂಡಿವೆ. ಮಹಾಕಾವ್ಯಗಳಿಂದ ಕೀರ್ತನೆ, ಭಾವಗೀತೆಗಳವರೆಗೆ ದಣಿವಾಗುವಷ್ಟು ಅವರನ್ನು ಸ್ತುತಿಸಿಯಾಗಿದೆ. ಅವರ ಪ್ರಸ್ತುತತೆ ಇನ್ನೂ ಇರುವುದಾದರೆ ಈವರೆಗಿನ ರೂಪಕಗಳನ್ನಾಗಲೀ, ಕಾವ್ಯಮಟ್ಟುಗಳನ್ನಾಗಲೀ ಬಳಸದೆ ಹೊಸ ಬಂಧಗಳಲ್ಲಿ ಪ್ರಯತ್ನಿಸಿದರೆ ಅದೂ ಸಹ್ಯವೇ. ವಾಸುದೇವ ನಾಡಿಗ್ ಆಧುನಿಕ ಜಗತ್ತಿನಲ್ಲಿ ಸಂಬಂಧಗಳು ದುರ್ಬಲವಾಗುತ್ತಿರುವ ಪರಿಯನ್ನು ಮಥುರೆ, ಗೋಕುಲ, ಬೃಂದಾವನಗಳ ಮೂಲಕ ಅನಾವರಣ ಮಾಡುತ್ತಿದ್ದಾರೆ. ಆದರೆ ಅಂತಹ ತಾಕಲಾಟಗಳು ಹುಟ್ಟಬಹುದಾದ ಹೊಸ ರೂಪಕಗಳು, ಕಾವ್ಯದ ಹೊಸ ಮಾದರಿಗಳೇನಾದರೂ ಇವೆಯೆ ಎಂದು ತಡಕಾಡುವಂತಾಗುತ್ತದೆ.

ಅದೇ ಮಥುರ
ಅದೇ ಗೋಕುಲ
ಅದೇ ಬೃಂದಾವನ
ಅದೇ ಕದನ ಕಾನನ
ಅದೇ ಏಕತಾನದ ಜೀವನ
ನಿನ್ನ ಪ್ರವೇಶಕೆ ಅದಾವ ಮಾಂತ್ರಿಕತೆ ಇತ್ತು?
ಸಖೀ ಹಗಲಿಲಗೆ ತಹತಹಿಸುವ
ಇರುಳನ್ನು ಪ್ರೀತಿಸುವ ಕಲಿಕೆ ಕೊಟ್ಟೆ! 
(ಹಣತೆ ೪೪)

ಓದುತ್ತ ಓದುತ್ತ ಬರೀ ಕೃಷ್ಣನೇ ಮಾತನಾಡುತ್ತಿದ್ದಾನಲ್ಲ, ರಾಧೆಯೊಮ್ಮೆ ಬಾಯಿಬಿಡಬಾರದೆ ಎನ್ನುವ ಹಂಬಲ ಹತ್ತಿಕ್ಕಲಾರದಷ್ಟು ಪ್ರಬಲವಾಗುತ್ತದೆ. ಹೊಸ ಪೀಳಿಗೆಯ ಯುವಕ ಯುವತಿಯರು ಯಾವುದೋ ಒಂದು  ಭಾವುಕ ಉನ್ಮತ್ತತೆಯಲ್ಲಿ ಯಾವ ಪುರಾಣದ ಆವರಣದಲ್ಲಿಯೂ ಓಲಾಡಲಾರರು. ಅವರು ಇರುವುದನ್ನು ಮುರಿದು ಕಟ್ಟುವಲ್ಲಿ ತಡ ಮಾಡುವುದಿಲ್ಲ. ಯಾವುದನ್ನೂ ಹಾಗೆ ಜಾಡಿಗೆ ಬೀಳುವವರೆಗೆ ಬಿಡುವಷ್ಟು ವ್ಯವಧಾನವೂ ಇಲ್ಲ, ಅದು ಅವರ ಜಾಯಮಾನವೂ ಅಲ್ಲ. ಹಾಗಾಗಿ ಕವಿಯ ಈ ಮಾತುಗಳನ್ನು ಓದುಗ ಒಬ್ಬನೇ/ಒಬ್ಬಳೇ ಇದ್ದಾಗಲೂ ಜೋರಾಗಿ ಓದಿಬಿಡಬಹುದು.

ಆತ್ಮಪ್ರತ್ಯಯಗಳಲ್ಲೇ
ದಣಿಯುವುದು ನಿನಗೂ ಇಷ್ಟವಿಲ್ಲ ಸಖೀ
ಬಿಡು
ಕಣ್ಣರೆಪ್ಪೆಯನ್ನೂ ಮಿಟುಕಿಸದೆ
ಕುಳಿತಿದ್ದೇನೆ
ಹಣತೆ ಆರೀತೆಂದು!
ವರ್ತಮಾನದ ಅನೇಕ ರೀತಿಯ ತಲ್ಲಣಗಳಿಗೆ ಕೃಷ್ಣ ಪರಿಹಾರವೆನ್ನುವ ನಿಲುವು ಎಷ್ಟು ಸಬಲವಾದುದೋ, ಸದ್ಯದ ತಲ್ಲಣಗಳಿಗೆ ಕೃಷ್ಣನೂ ಕಾರಣ ಎನ್ನುವುದು ಅಷ್ಟೇ ಸಬಲವಾದುದು! ಪ್ರಶ್ನಾತೀತ ಕೃಷ್ಣಭಕ್ತಿಯ ಭಾವುಕ ಆವರಣಗಳಲ್ಲಿ ಹುಟ್ಟಿದ ಭಾವಗೀತೆಗಳ ಮುಂದುವರಿಕೆಯಂತಿರುವ ಇಲ್ಲಿನ ರಚನೆಗಳು ತಮಗಾಗುತ್ತಿರುವ ದಣಿವನ್ನು ಓದುಗರಿಗೂ ತಟಾಯಿಸುತ್ತವೆ.

ನಿನ್ನ ಧ್ಯಾನದ ಹಣತೆ
ಲೇ: ವಾಸುದೇವ ನಾಡಿಗ್ಬೆ
ರೂ. 60
ಪ್ರ: ಫಲ್ಗುಣಿ ಪುಸ್ತಕ, ನಂ. 13/1, 9ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-560 003

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT