ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಕಿಕಡ್ಡಿ ಬೆಳೆದಿದ್ದು...

ಅರಿವು ಹರಿವು
Last Updated 29 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಕಿ! ಶಾಖ ಮತ್ತು ಬೆಳಕಿನ ರೂಪದ ಭೌತಿಕ ಶಕ್ತಿ. ಪಂಚಭೂತಗಳಲ್ಲಿ ಒಂದಾಗಿರುವ, ಕಿಚ್ಚು, ಅಗ್ನಿ ಎಂಬ ಹೆಸರುಗಳಿಂದ ಕರೆಯಲಾಗುವ ‘ಬೆಂಕಿ’ಮನುಕುಲದ ಏಳಿಗೆಯಲ್ಲಿ ವಹಿಸಿರುವ ಪಾತ್ರ ಹಿರಿದು. ಬೆಂಕಿಯ ಉಪಯೋಗದ ಬಗೆಗಿನ ತಿಳಿವಳಿಕೆ ಆದಿಮಾನವರ ಜೀವನ ಶೈಲಿಯನ್ನೇ ಬದಲಾಯಿಸಿತ್ತು.

ಆರಂಭದ ದಿನಗಳಲ್ಲಿ ಎರಡು ಕಲ್ಲುಗಳನ್ನು ಪರಸ್ಪರ ಉಜ್ಜಿ, ಅದರಿಂದ ಬರುವ ಕಿಡಿಯಿಂದ ಬೆಂಕಿ ಉತ್ಪಾದಿಸುವ ಕ್ರಮವನ್ನು ಆದಿ ಮಾನವ ಕಲಿತ. ನಂತರ, ಗಡುಸಾದ ಮರದ ತುಂಡನ್ನು ಇನ್ನೊಂದು ಮರದ ತುಂಡಿನಲ್ಲಿಟ್ಟು ಮಥಿಸಿ ಕಿಚ್ಚು ಉಂಟು ಮಾಡುವ ವಿಧಾನ ಕರಗತ ಮಾಡಿಕೊಂಡ. ಲೋಹದ ಯುಗದಲ್ಲಿ ಉಕ್ಕಿನ ತುಂಡಿನ ಮೇಲ್ಮೈಗೆ ಗಡಸು ಜಾತಿಯ ಕಲ್ಲನ್ನು ಘರ್ಷಿಸಿ ಬೆಂಕಿ ಹೊತ್ತಿಸುವ ರೀತಿಯನ್ನು ರೂಪಿಸಿದ. ನಂತರ ಆಧುನಿಕತೆಯನ್ನು ಮೈಗೂಡಿಸಿಕೊಂಡ ಆತ, ನಿರ್ದಿಷ್ಟ ವಸ್ತುಗಳ ಮೇಲೆ ಮಸೂರಗಳ ಮೂಲಕ ಮೇಲೆ ಸೂರ್ಯನ ಬೆಳಕು ಹಾಯಿಸಿ ಬೆಂಕಿ ಸೃಷ್ಟಿಸುವ ವಿಧಾನವನ್ನೂ ಸಂಶೋಧಿಸಿದ. ಬೆಂಕಿ ಉತ್ಪತ್ತಿಯಾಗುವ ಪ್ರಕ್ರಿಯೆ ಮಾನವನ ನಿಯಂತ್ರಣದಲ್ಲಿ ಇಲ್ಲದಿದ್ದುದು ಈ ಎಲ್ಲ ವಿಧಾನಗಳ ಮಿತಿಯಾಗಿತ್ತು. ಬೆಂಕಿ ಕಿಡಿ ಸೃಷ್ಟಿ ಮಾಡಲು ಸಾಕಷ್ಟು ಸಮಯ ಹಿಡಿಯುತ್ತಿತ್ತು. ಹಾಗಾಗಿ, ಅತಿ ಸುಲಭವಾಗಿ ಕಿಚ್ಚು ಹೊತ್ತಿಸುವ, ಒಂದು ಕಡೆಯಿಂದ ಇನ್ನೊಂದು ಕಡೆಗೆ ಒಯ್ಯಬಹುದಾದ ಮತ್ತು ಅತ್ಯಂತ ವಿಶ್ವಾಸಾರ್ಹ ವಿಧಾನದ ಹುಡುಕಾಟವನ್ನು ಮಾನವ ಆರಂಭಿಸಿದ್ದ. ಅವನ ಮನಸ್ಸಿನಲ್ಲಿ ಇದ್ದುದು ಕಡ್ಡಿಯ ಮೂಲಕ ಬೆಂಕಿ ಕಿಡಿ ಸೃಷ್ಟಿಸುವ ವಿಧಾನ. ಅರ್ಥಾತ್‌ ಬೆಂಕಿಕಡ್ಡಿ ಆವಿಷ್ಕಾರದ ಕನಸು!

ಮೆಸಪೊಟೋಮಿಯಾ, ಈಜಿಪ್ಟ್‌, ಭಾರತ, ಚೀನಾ, ರೋಮ್‌, ಗ್ರೀಸ್‌ ನಾಗರಿಕತೆಗಳ ಜನರು ಬೆಂಕಿಕಡ್ಡಿ ತಯಾರಿಸಲು ಹಲವು ಯತ್ನಗಳನ್ನು ಮಾಡಿದ್ದರು ಎಂದು ಹೇಳುತ್ತದೆ ಇತಿಹಾಸ. ಕ್ರಿ.ಪೂ 3500ರಲ್ಲಿ ಈಜಿಪ್ಟಿಯನ್ನರು ಗಂಧಕದ ಮಿಶ್ರಣವನ್ನು (ಅಲ್ಲಿನ ಜನರು ಗಂಧಕವನ್ನು ಹೊಗೆ ಹಾಯಿಸಲು ಬಳಸುತ್ತಿದ್ದರು) ಪೈನ್‌ಮರದ ಕಡ್ಡಿಯ ತುದಿಗೆ ಸವರಿ ಬೆಂಕಿಕಡ್ಡಿಯನ್ನು ತಯಾರಿಸುವ ಪ್ರಯತ್ನ ಮಾಡಿದ್ದರಂತೆ. ಕ್ರಿ.ಪೂ 1350-1400ರ ಅವಧಿಯಲ್ಲಿ ತಂತಿಯ ತುದಿಗೆ ದಹನಶೀಲ ರಾಸಾಯನಿಕ ಮಿಶ್ರಣವನ್ನು ಲೇಪಿಸಿ ಸುಧಾರಿತ ಬೆಂಕಿಕಡ್ಡಿ ಮಾಡಿದ್ದರು. ಈ ಕಡ್ಡಿಯನ್ನು ಶಾಖದ ಮುಂದೆ ಹಿಡಿದಾಗ ಬೆಂಕಿ ಹತ್ತಿಕೊಳ್ಳುತ್ತಿತ್ತು. ಬೇರೆ ವಸ್ತುಗಳನ್ನು ಹೊತ್ತಿಸಲು ಇದನ್ನು ಬಳಸುತ್ತಿದ್ದರು. ಕ್ರಿ.ಶ 577ರಲ್ಲಿ ಪುರಾತನ ಚೀನಾದಲ್ಲಿ ನಡೆದ ಪ್ರಯತ್ನ ಭಾಗಶಃ ಯಶಸ್ವಿಯಾಯಿತು. ಅಲ್ಲಿ ಕೂಡ ಬೆಂಕಿ ಕಡ್ಡಿ ತಯಾರಿಕೆಗೆ ಗಂಧಕವನ್ನೇ ಬಳಸಿದ್ದರು.

ಆಧುನಿಕ ಬೆಂಕಿಕಡ್ಡಿ ರೂಪುಗೊಂಡಿದ್ದು ತೀರಾ ಇತ್ತೀಚೆಗೆ. ಅಂದರೆ 17ನೇ ಶತಮಾನದ ಕೊನೆಗೆ. ಅದೂ ಯೂರೋಪ್‌ನಲ್ಲಿ. ರಸಾಯನ ವಿಜ್ಞಾನ ಪ್ರವರ್ಧಮಾನಕ್ಕೆ ಬರುತ್ತಿದ್ದ ಕಾಲ ಅದು. ಹೆನ್ನಿಂಗ್‌ ಬ್ರಾಂಟ್‌ ಎಂಬ ತಜ್ಞ, ರಂಜಕದ ದಹನಶೀಲದ ಗುಣವನ್ನು ಪತ್ತೆ ಹಚ್ಚಿದ್ದು ಆಧುನಿಕ ಬೆಂಕಿಕಡ್ಡಿಯ ತಯಾರಿಕೆಗೆ ಮುನ್ನುಡಿ ಬರೆಯಿತು. 1669ರಲ್ಲಿ ನಡೆದಿದ್ದ ಈ ಸಂಶೋಧನೆಗೆ ರಾಬರ್ಟ್‌ ಬಾಯ್ಲ್‌ ಮತ್ತು ಅವರ ಸಹಾಯಕ ಗಾಡ್‌ಫ್ರೇ ಹಾಕ್‌ವಿಜ್‌ ನೆರವು ನೀಡಿದ್ದರು. 1680ರವರೆಗೆ ಇವರು ಗಂಧಕ ಮತ್ತು ರಂಜಕವನ್ನು ಬಳಸಿ ಅಧ್ಯಯನ ನಡೆಸಿದರೂ ಅಗ್ಗದ ಬೆಂಕಿಕಡ್ಡಿ ತಯಾರಿಕೆ ಸಾಧ್ಯವಾಗಲಿಲ್ಲ.

ಸ್ವಯಂ ಆಗಿ ಬೆಂಕಿ ಹತ್ತಿಕೊಳ್ಳುವ ಕಡ್ಡಿ ಜಗತ್ತಿಗೆ ಪರಿಚಯಗೊಂಡಿದ್ದು 1805ರಲ್ಲಿ. ಪ್ಯಾರಿಸ್‌ನ ರಸಾಯನ ವಿಜ್ಞಾನಿ ಲೂಯಿಸ್ ಜಾಕೆಸ್‌ ತೆರನಾರ್ಡ್‌ ಅವರಿಗೆ ಸಹಾಯಕರಾಗಿ ದುಡಿಯುತ್ತಿದ್ದ ಜೀನ್‌ ಚಾನ್ಸೆಲ್‌ ಈ ಆಧುನಿಕ ಬೆಂಕಿಕಡ್ಡಿಯ ರೂವಾರಿ. ಪೊಟ್ಯಾಷಿಯಂ ಕ್ಲೋರೇಟ್‌, ಗಂಧಕ, ಸಕ್ಕರೆ ಮತ್ತು ರಬ್ಬರ್‌ ಮಿಶ್ರಣದಿಂದ ಮಾಡಿದ ತುದಿಯನ್ನು ಹೊಂದಿದ್ದ ಈ ಕಡ್ಡಿಯನ್ನು ಅಪಾಯಕಾರಿ ಗಂಧಕಾಮ್ಲದಲ್ಲಿ ಅದ್ದಿ ತೆಗೆದಾಗ ಬೆಂಕಿ ಉಂಟಾಗುತ್ತಿತ್ತು. ಈ ಬೆಂಕಿ ಕಡ್ಡಿ ದುಬಾರಿಯಾಗಿದ್ದಲ್ಲದೇ, ಅಪಾಯಕಾರಿಯೂ ಆಗಿತ್ತು. ಹಾಗಾಗಿ, ಜನರ ಬಳಕೆಗೆ ಇದು ಮುಕ್ತವಾಗಲಿಲ್ಲ.

ಘರ್ಷಣೆ ಮೂಲಕ (ಉಜ್ಜುವಿಕೆ) ಬೆಂಕಿ ಸೃಷ್ಟಿಸುವ ಬೆಂಕಿ ಕಡ್ಡಿ ಮೊದಲ ಬಾರಿಗೆ 1926ರಲ್ಲಿ ರೂಪುಗೊಂಡಿತು. ಇಂಗ್ಲೆಂಡ್‌ನ ರಾಸಾಯನಿಕ ತಜ್ಞ ಜಾನಿ ವಾಕರ್‌ ಇದರ ನಿರ್ಮಾತೃ. ಗೋಂದು ಮಿಶ್ರಿತ ಗಂಧಕ, ಪೊಟ್ಯಾಷಿಯಂ ಕ್ಲೋರೇಟ್‌, ಸಕ್ಕರೆ, ಆಂಟಿಮೊನಿ ಟ್ರೈಸಲ್ಫೈಡ್‌ ಬಳಸಿ ಬೆಂಕಿ ಕಡ್ಡಿಯನ್ನು ಅವರು ತಯಾರಿಸಿದ್ದರು. ಈ ಕಡ್ಡಿಯನ್ನು ಮರಳು ಕಾಗದಕ್ಕೆ (ಉಜ್ಜು ಕಾಗದ) ಉಜ್ಜಿ ಬೆಂಕಿ ಹೊತ್ತಿಸಿದ್ದರು. ಇದೇ ಸಮಯದಲ್ಲಿ ನಿರ್ದಿಷ್ಟ ಸಂಖ್ಯೆಯ ಬೆಂಕಿಕಡ್ಡಿಗಳನ್ನು ಪೊಟ್ಟಣದಲ್ಲಿ ಹಾಕಿ ಮಾರಾಟ ಮಾಡುವ ಪರಿಪಾಠವೂ ಆರಂಭವಾಯಿತು. ವಾಕರ್‌ ಅವರು ತಾವು ಮಾರುತ್ತಿದ್ದ ಪೊಟ್ಟಣದ ಜೊತೆಗೆ ಮರಳು ಕಾಗದವನ್ನು ಗ್ರಾಹಕರಿಗೆ ಕೊಡುತ್ತಿದ್ದರು.
1830ರಲ್ಲಿ ಫ್ರಾನ್ಸ್‌ನ ಚಾರ್ಲ್ಸ್ ಸೌರಿಯಾ ಎಂಬುವವರು ಬಿಳಿ ರಂಜಕದಿಂದ ಮಾಡಿದ ಬೆಂಕಿಕಡ್ಡಿಯನ್ನು ಮಾರುಕಟ್ಟೆಗೆ ಪರಿಚಯಿಸಿದರು. ಬೆಂಕಿಕಡ್ಡಿ ತಯಾರಿಕೆಯಲ್ಲಿನ ಹೊಸ ಸಾಧ್ಯತೆಗಳನ್ನು ಇದು ಜಗತ್ತಿನ ಮುಂದೆ ತೆರೆದಿಟ್ಟಿತು.  20ನೇ ಶತಮಾನದ ಮೊದಲ ದಶಕದಲ್ಲಿ ಇದರ ಬಗ್ಗೆ ಜಗತ್ತಿನಾದ್ಯಂತ ಭಾರಿ ಚರ್ಚೆ ನಡೆಯಿತು. ಹಲವು ರಾಷ್ಟ್ರಗಳು ಬಿಳಿ ರಂಜಕದ ಬೆಂಕಿಕಡ್ಡಿ ಬಳಕೆಗೆ ನಿರ್ಬಂಧ ಹೇರಿದವು.

ಜನಸ್ನೇಹಿ ಮತ್ತು ಹೆಚ್ಚು ಸುರಕ್ಷತೆ ನೀಡುವ ಬೆಂಕಿಕಡ್ಡಿಯ ಅಭಿವೃದ್ಧಿಗೆ ಇದು ಚಿಮ್ಮು ಹಲಗೆಯಾಯಿತು. ಇದೇ ಸಮಯದಲ್ಲಿ ಕೆಂಪು ರಂಜಕದ ಉಪಯೋಗದ ಬಗ್ಗೆ ವಿಜ್ಞಾನಿಗಳಲ್ಲಿ ಅರಿವು ಮೂಡಿದ್ದು ಸುರಕ್ಷಿತ ಬೆಂಕಿಕಡ್ಡಿಯ ನಿರ್ಮಾಣಕ್ಕೆ ವೇದಿಕೆ ಸೃಷ್ಟಿಸಿತು. ಕೆಂಪು ರಂಜಕವನ್ನು ಬೆಂಕಿ ಕಡ್ಡಿಯ ತುದಿಯಲ್ಲಿ ಬಳಸುವ ಬದಲಿಗೆ, ಕಡ್ಡಿಯನ್ನು ಉಜ್ಜುವುದಕ್ಕಾಗಿ ರೂಪಿಸಲಾದ ವಿಶಿಷ್ಟ ವಿನ್ಯಾಸದ ಉಜ್ಜು ಮೇಲ್ಮೈಯಲ್ಲಿ ಬಳಸಲಾಯಿತು. ಈ ಉಪಾಯ ಹೊಳೆದದ್ದು ಸ್ವೀಡನ್ನಿನ ಗುಸ್ಟಾಫ್‌ ಎರಿಕ್‌ ಪಾಶ್ಚ್‌ ಎಂಬುವವರಿಗೆ. 1884ರಲ್ಲಿ ಅವರು ಉಜ್ಜು ಮೇಲ್ಮೈ ತಯಾರಿಕೆಯ ಪೇಟೆಂಟ್‌ ಪಡೆದರು. 1858ರ ವೇಳೆಗೆ ಜೋಹಾನ್‌ ಎಡ್ವರ್ಡ್‌ ಮತ್ತು ಅವರ ಕಿರಿಯ ಸೋದರ ಕಾರ್ಲ್‌ ಫ್ರಾನ್ಸ್‌ ಲುಂಡ್‌ ಸ್ಟ್ರೋಮ್‌ ಎಂಬುವವರು ಸ್ವೀಡನ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಸುರಕ್ಷಿತ ಬೆಂಕಿಕಡ್ಡಿಯ ಉದ್ದಿಮೆ ಆರಂಭಿಸಿದರು. ಈ ಬೆಂಕಿ ಕಡ್ಡಿಗಳಿಂದ ಬಳಕೆದಾರರಿಗಾಗಲಿ, ಪರಿಸರಕ್ಕಾಗಲಿ ಯಾವುದೇ ಹಾನಿ ಇರಲಿಲ್ಲ. ಹಾಗಾಗಿ ಇವುಗಳು ಬಹುಬೇಗ ಜನಪ್ರಿಯಗೊಂಡವು.

ಈಗಿನ ಬೆಂಕಿಕಡ್ಡಿಗಳನ್ನು ರಂಜಕ ಅಥವಾ ರಂಜಕದ ಸೆಸ್ಕ್ವಿಸಲ್ಫೈಡ್‌ನಿಂದ (ಖನಿಜ ಮೂಲದ ಸಂಯುಕ್ತ) ತಯಾರಿಸಲಾಗುತ್ತದೆ. ಸದ್ಯ ಜಗತ್ತಿನ ಮಾರುಕಟ್ಟೆಯಲ್ಲಿ ಅಸಂಖ್ಯ ಬೆಂಕಿಕಡ್ಡಿಗಳ (ಬೆಂಕಿಪೊಟ್ಟಣ) ಬ್ರಾಂಡ್‌ಗಳಿವೆ. ಲೈಟರ್‌, ಸಿಗರ್‌ಲೈಟ್‌ ಸೇರಿದಂತೆ ಬೆಂಕಿ ಕಿಡಿ ಹೊತ್ತಿಸುವ ಇತರ ಸಾಧನಗಳು ಬಳಕೆಯಲ್ಲಿದ್ದರೂ, ಬೆಂಕಿಪೊಟ್ಟಣಕ್ಕೆ ತನ್ನದೇ ಆದ ಮಾರುಕಟ್ಟೆ ಇದೆ. ಅಂದಾಜಿನ ಪ್ರಕಾರ ಜಗತ್ತಿನಾದ್ಯಂತ ಪ್ರತಿ ವರ್ಷ 50 ಸಾವಿರ ಕೋಟಿ ಬೆಂಕಿಕಡ್ಡಿಗಳಿಗೆ ಬೇಡಿಕೆ ಇದೆ!

ಕೇವಲ 3.4 ಸೆಂ.ಮೀನಿಂದ 4.8 ಸೆಂ.ಮೀನಷ್ಟು ಅಳೆಯುವ ಬೆಂಕಿಕಡ್ಡಿಯ ಆವಿಷ್ಕಾರ ಆಗದಿದ್ದರೆ ಜಗತ್ತು ಹೇಗಿರುತ್ತಿತ್ತು? ಊಹಿಸಿ ನೋಡಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT