ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಕಿ ಅನಾಹುತ ತಪ್ಪಿಸಿ

Last Updated 6 ಜುಲೈ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು ಮಹಾನಗರದಲ್ಲಿ ಅಗ್ನಿ ದುರಂತಗಳು ಆಗಿಂದಾಗ್ಗೆ ಸಂಭ­ವಿಸುತ್ತಲೇ ಇವೆ. ಕಳೆದ ಒಂದು ವಾರದ ಅವಧಿಯಲ್ಲಿ ಎರಡು ಬೆಂಕಿ ಅನಾಹುತಗಳು ಘಟಿಸಿವೆ. ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಚಿನ್ನಾಭರಣ ಮಳಿಗೆಯೊಂದು ಗುರುವಾರ ಬೆಂಕಿಗೆ ಆಹುತಿಯಾಗಿದೆ. ಅದರ ಬೆನ್ನಿಗೇ ಹಲಸೂರು ಕೆರೆ ಬಳಿ ಇರುವ ಕಾಲ್‌ ಸೆಂಟರ್‌ ಕಟ್ಟಡವೊಂದರಲ್ಲಿ ಬೆಂಕಿ ಹೊತ್ತಿಕೊಂಡು ಆತಂಕ ಸೃಷ್ಟಿಸಿದ ವಿದ್ಯಮಾನ ನಡೆದಿದೆ.

ಈ ಆಕಸ್ಮಿಕ­ಗಳಲ್ಲಿ ಆಭರಣ, ಆಸ್ತಿಪಾಸ್ತಿ ನಷ್ಟವಾದರೂ ಯಾವುದೇ ಪ್ರಾಣ ಹಾನಿ ಆಗಿಲ್ಲ ಎಂಬುದು ಸಮಾಧಾನದ ಸಂಗತಿ. ಆದರೂ ಅಗ್ನಿ ದುರಂತಗಳು ಒಂದರ ಹಿಂದೆ ಒಂದರಂತೆ ಸಂಭವಿಸುತ್ತಿರುವುದು ಆತಂಕದ ವಿಷಯ. ಬಹು­ಮಹಡಿ ಕಟ್ಟಡಗಳಲ್ಲಿ ಬೆಂಕಿ ಅನಾಹುತ ತಪ್ಪಿಸಲು ಮತ್ತಷ್ಟು ಎಚ್ಚರಿಕೆ ಮತ್ತು ಆಸ್ಥೆ ವಹಿಸಬೇಕಾದ ಅಗತ್ಯವನ್ನು ಈ ಅವಘಡಗಳು ನಮಗೆ ಮತ್ತೊಮ್ಮೆ ನೆನ­ಪಿ­ಸಿವೆ. 2010ರಲ್ಲಿ  ಕಾರ್ಲ್‌ಟನ್‌  ಟವರ್ಸ್ ಕಟ್ಟಡದಲ್ಲಿ ಉಂಟಾದ ಬೆಂಕಿ ಅನಾಹುತ,  ಒಂಬತ್ತು ಮಂದಿಯನ್ನು ಆಹುತಿ ಪಡೆಯುವ ಮೂಲಕ ಎಚ್ಚ­ರಿಕೆ ಗಂಟೆ ಬಾರಿಸಿತ್ತು. ಅದರ ನಂತರವೂ ನಾವು ಎಚ್ಚೆತ್ತುಕೊಂಡಿಲ್ಲ ಎಂಬುದಕ್ಕೆ ಈಗಿನ ಆಕಸ್ಮಿಕಗಳು ನಿದರ್ಶನ ಒದಗಿಸುತ್ತವೆ.

ಬೆಂಗಳೂರಿನಲ್ಲಿ ಗಗನಚುಂಬಿ ಕಟ್ಟಡಗಳು ಪೈಪೋಟಿಗೆ ಇಳಿದಂತೆ ಮೇಲೇ­ಳು­ತ್ತಿವೆ. ಅದರೊಂದಿಗೆ ವಿದ್ಯುತ್ ಶಾರ್ಟ್್‌ ಸರ್ಕಿಟ್‌ನಿಂದ ಆಗುವ ಬೆಂಕಿ ಅವಘಡ­ಗಳ ಸಂಖ್ಯೆಯೂ ಹೆಚ್ಚುತ್ತಿದೆ. ಇಂತಹ ಅನಾಹುತಗಳಿಗೆ ಕಾರಣ­ವಾಗುವ ಅಂಶಗಳನ್ನು ಪತ್ತೆಹಚ್ಚಿ, ನಿವಾರಣೆಗೆ ಕ್ರಮ ಕೈಗೊಳ್ಳಬೇಕು. ಬೆಂಕಿ ಆಕಸ್ಮಿಕಗಳಿಗೆ ಕಾರಣವಾದ ಅಂಶಗಳು ಎಷ್ಟೋ ಸಂದರ್ಭಗಳಲ್ಲಿ ಹೊರಗೆ ಬರುವುದೇ ಇಲ್ಲ.

ಇದು ನಾನಾ ಬಗೆಯ ಗುಮಾನಿಗಳಿಗೆ ಎಡೆಮಾಡಿ­ಕೊಡು­ತ್ತದೆ. ಹಾಗಾಗಬಾರದು. ಈ ಕುರಿತು ಸಮಗ್ರ ತನಿಖೆಯಾಗಬೇಕು. ಕಾರಣ­ಗಳು ಬಯಲಾಗಬೇಕು. ಮುಂದೆ ಇಂತಹ ಅವಘಡಗಳು ಸಂಭವಿಸದಂತೆ ಮುನ್ನೆ­ಚ್ಚರಿಕೆ ವಹಿಸಲು ಹಾಗೂ ನಿವಾರಣಾ ಕ್ರಮಗಳಿಗೆ ಅವು ನೆರ­ವಾಗ­ಬೇಕು. ಕಟ್ಟಡಗಳಲ್ಲಿ ಅಗ್ನಿ ಆಕಸ್ಮಿಕ ಮುಂತಾದ ಅಪಘಾತಗಳನ್ನು ನಿರ್ವ­ಹಿಸಲು ಬೇಕಾದ ಉಪಕರಣಗಳನ್ನು ಅಳವಡಿಸಲಾಗಿದೆಯೇ ಎನ್ನುವ ಬಗೆಗೆ ಸಂಬಂ­ಧಿಸಿದ ಇಲಾಖೆಯವರು ನಿಗಾ ವಹಿಸಬೇಕು. ಅವುಗಳನ್ನು ಬಳಸು­ವು­ದರ ಬಗ್ಗೆ ನಿವಾಸಿಗಳಿಗೆ ತರಬೇತಿ ನೀಡಬೇಕು.

ಕಟ್ಟಡ ನಿರ್ಮಿಸುವವರೂ ಸುರ­ಕ್ಷತೆಯ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅಲ್ಲದೇ ಬಹಳ ಕಾಲದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಅಗ್ನಿಶಾಮಕ ದಳ ಸೇವೆಯನ್ನು ಬಲ­­ಪಡಿಸುವ ಕೆಲಸ ತುರ್ತಾಗಿ ಆಗಬೇಕಿದೆ. ಸಿಬ್ಬಂದಿಗೆ  ತರಬೇತಿ  ಹಾಗೂ ಅತ್ಯಾ­ಧುನಿಕ ಉಪಕರಣಗಳನ್ನು ಒದಗಿಸಬೇಕು. ಜನಸಂಖ್ಯೆ ಏರಿಕೆಗೆ ತಕ್ಕಂತೆ ಅಗ್ನಿಶಾಮಕ ಠಾಣೆಗಳ ಸಂಖ್ಯೆಯನ್ನೂ ಹೆಚ್ಚಿಸಬೇಕು. ನಿವೃತ್ತಿ ಮತ್ತಿತರ ಕಾರಣಗಳಿಂದ ತೆರವಾಗುವ ಹುದ್ದೆಗಳಿಗೆ ಕಾಲಕಾಲಕ್ಕೆ ನೇಮಕಾತಿ ನಡೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT