ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಕಿ ದುರಂತ: ಸಿಬಿಐ ತನಿಖೆಗೆ ಕಾಂಗ್ರೆಸ್‌ ಒತ್ತಾಯ

Last Updated 18 ಏಪ್ರಿಲ್ 2014, 19:55 IST
ಅಕ್ಷರ ಗಾತ್ರ

ಮಾಲ್ದಾ (ಪಶ್ಚಿಮ ಬಂಗಾಳ) (ಪಿಟಿಐ): ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಂಗಿದ್ದ ಹೋಟೆಲ್‌ನಲ್ಲಿ ಗುರುವಾರ ಸಂಭವಿಸಿದ ಬೆಂಕಿ ಆಕಸ್ಮಿಕಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿದೆ.

ಕೇಂದ್ರ ಸಚಿವರೂ ಆದ ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್‌ ಸಮಿತಿ (ಡಬ್ಲ್ಯುಪಿಸಿಸಿ) ಅಧ್ಯಕ್ಷ ಅಧೀರ್‌ ರಂಜನ್‌ ಚೌಧರಿ ಅವರು ಚುನಾವಣಾ ಸಭೆ ನಂತರ ಸುದ್ದಿಗಾರರ ಜತೆ ಮಾತನಾಡಿ ಈ ಆಗ್ರಹ ಮಾಡಿದರು.

ಮಮತಾ ಅವರು ಚುನಾವಣಾ ಪ್ರಚಾರದ ವೇಳೆ ತಂಗಿದ್ದ ಹೋಟೆಲ್‌ನಲ್ಲಿ ಸಂಭವಿಸಿದ ಈ ಬೆಂಕಿ ಅವಘಡದ ಹಿಂದೆ ಸಂಚು ಇದೆ ಎಂದು ತೃಣಮೂಲ ಕಾಂಗ್ರೆಸ್‌ ಹೇಳುತ್ತಿದೆ. ಆದರೆ ಮಮತಾ ಅವರ ಭದ್ರತೆಯ ಹೊಣೆ ಹೊತ್ತಿದ್ದ ಸಿಬ್ಬಂದಿಯ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಆಶ್ಚರ್ಯಕರ ಎಂದು ಚೌಧರಿ ಹೇಳಿದರು.

ಮಮತಾ ಅವರು ಹೋಟೆಲ್‌ನ ಶೌಚಾಲಯದಲ್ಲಿದ್ದಾಗ ಅವರ ಕೊಠಡಿಯ ಹವಾನಿಯಂತ್ರಕಕ್ಕೆ ಬೆಂಕಿ ಹೊತ್ತಿತ್ತು. ಆಗ ಉಂಟಾದ ಹೊಗೆ ಮಮತಾ ಅವರ ಶ್ವಾಸದೊಂದಿಗೆ ಸೇರಿ ಅವರು ಆಯಾಸಗೊಂಡು ತಕ್ಷಣವೇ ಸಹಾಯಕ್ಕಾಗಿ ತಮ್ಮ ಸಹಾಯಕನನ್ನು ಕರೆದರು. 
ಸಹಾಯಕ ತಕ್ಷಣವೇ ಬಂದು ಮಮತಾ ಅವರನ್ನು ಹೊಗೆ ಆವರಿಸಿದ್ದ ಕೊಠಡಿಯಿಂದ ಹೊರಕ್ಕೆ ಎಳೆದ ಘಟನೆ ಗುರುವಾರ ನಡೆದಿತ್ತು.

ರಾಜ್ಯಸಭಾ ಸದಸ್ಯತ್ವಕ್ಕೆ ಸೆಲ್ವಗಣಪತಿ ರಾಜೀನಾಮೆ
ಧರ್ಮಪುರಿ (ತಮಿಳುನಾಡು) (ಪಿಟಿಐ):
ಸ್ಮಶಾನ ನಿರ್ಮಾಣ ಕಾಮಗಾರಿಯಲ್ಲಿ ಅವ್ಯವಹಾರ ಎಸಗಿದ ಆರೋಪದ ಮೇಲೆ ಸಿಬಿಐ ನ್ಯಾಯಾಲಯದಿಂದ ಎರಡು ವರ್ಷಗಳ ಕಠಿಣ ಶಿಕ್ಷೆಗೆ ಒಳಗಾಗಿರುವ ಡಿಎಂಕೆ ಮುಖಂಡ ಟಿ.ಎಂ.ಸೆಲ್ವಗಣಪತಿ ಅವರು  ರಾಜ್ಯಸಭಾ ಸದಸ್ಯತ್ವಕ್ಕೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ.

ಶಿಕ್ಷೆ ಪ್ರಕಟವಾದ ಒಂದು ದಿನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೆಲ್ವಗಣಪತಿ ಅವರು, ಇದನ್ನು ಮದ್ರಾಸ್‌ ಉಚ್ಚನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ತಿಳಿಸಿದರು.

‘ರಾಜ್ಯದಿಂದ ಕಾಂಗ್ರೆಸ್‌ನ ಕೇಂದ್ರ ಸಚಿವರೊಬ್ಬರ ರಾಜಕೀಯ ದ್ವೇಷದಿಂದಾಗಿ ನನ್ನ ಮೇಲೆ ಸುಳ್ಳು ದೂರನ್ನು ದಾಖಲಿಸಲಾಗಿತ್ತು’ ಎಂದು ರಾಜ್ಯಸಭೆಯ ಸಭಾಧ್ಯಕ್ಷರಿಗೆ ಸಲ್ಲಿಸಿರುವ ತಮ್ಮ ರಾಜೀನಾಮೆ ಪತ್ರದಲ್ಲಿ ಅವರು ತಿಳಿಸಿದ್ದಾರೆ.

ಎಐಎಡಿಎಂಕೆ ಪಕ್ಷದ ಜಯಲಲಿತಾ ನೇತೃತ್ವದ ಸರ್ಕಾರದ ಅವಧಿ (1991–96)ಯಲ್ಲಿ ನಡೆದ ಸ್ಮಶಾನ ನಿರ್ಮಾಣ ಕಾಮಗಾರಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಸ್‌.ಮಲಾಥಿ ಅವರು ಸೆಲ್ವಗಣಪತಿ ಸೇರಿದಂತೆ ಇತರೆ ನಾಲ್ಕು ಮಂದಿಗೆ ಎರಡು ವರ್ಷಗಳ ಕಠಿಣ ಶಿಕ್ಷೆ ವಿಧಿಸಿತ್ತು. ಸದ್ಯ ಸೆಲ್ವಗಣಪತಿ ಅವರು ಡಿಎಂಕೆ ಪಕ್ಷದ ಧರ್ಮಪುರಿ ಲೋಕಸಭಾ ಕ್ಷೇತ್ರದ ಉಸ್ತುವಾರಿ ಹೊತ್ತಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ಬಚ್ಚನ್‌ ಸಿನಿಮಾ!
ನವದೆಹಲಿ (ಪಿಟಿಐ):
ಲೋಕಸಭಾ ಚುನಾವಣೆಯ ಗುಂಗಿನ ನಡುವೆಯೇ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ನಟ ಅಮಿತಾಭ್‌

ಬಚ್ಚನ್‌ ಅವರೊಂದಿಗೆ ಗುರುವಾರದ ಸಂಜೆಯನ್ನು ಮನರಂಜನೆಯೊಂದಿಗೆ ಕಳೆದರು.

ಸ್ವತಃ ಅಮಿತಾಭ್‌ ಅವರು ಅಭಿನಯಿಸಿರುವ ‘ಭೂತನಾಥ್‌ ರಿಟರ್ನ್‌್ಸ’ ಚಿತ್ರವನ್ನು ರಾಷ್ಟ್ರಪತಿ ಭವನದಲ್ಲಿ ವೀಕ್ಷಿಸಿದರು. ದೆವ್ವವು ರಾಜಕಾರಣಿಯಾಗಿ ರೂಪಾಂತರಗೊಂಡು ರಾಷ್ಟ್ರದಲ್ಲಿ ಆಳವಾಗಿ ಬೇರೂರಿದ ಭ್ರಷ್ಟಾಚಾರ ಮತ್ತಿತರ ಪಿಡುಗುಗಳನ್ನು ಕಿತ್ತೆಸೆಯುವ ಸಲುವಾಗಿ ಚುನಾವಣೆಗೆ ಧುಮುಕುವ ಕಥಾ ವಸ್ತುವನ್ನು ಇದು ಒಳಗೊಂಡಿದೆ.

ಏ.11ರಂದು ಬಿಡುಗಡೆಯಾದ ಈ ಚಿತ್ರವು ಮತ ಚಲಾವಣೆಯ ಪ್ರಾಮುಖ್ಯವನ್ನೂ ನೋಡುಗರ ಮುಂದಿಡುತ್ತದೆ.
‘ರಾಷ್ಟ್ರಪತಿ ಭವನದಲ್ಲಿ ಆಯ್ದ ಗಣ್ಯರಿಗಾಗಿ ಖಾಸಗಿಯಾಗಿ ಈ ಚಿತ್ರವನ್ನು ಪ್ರದರ್ಶಿಸುವ ಅವಕಾಶ ನೀಡಿದ್ದು ನನಗೆ ಸಿಕ್ಕ ಅಪರೂಪದ ಗೌರವ’ ಎಂದು 71 ವರ್ಷದ ಬಚ್ಚನ್‌ ಹೇಳಿದರು.

ರಾಜೀವ್‌ ಹತ್ಯೆ ಆರೋಪಿಗಳ ಬಿಡುಗಡೆ: ವಾರದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು
ಕೊಯಮತ್ತೂರು (ಪಿಟಿಐ): 
ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ  ಎಲ್ಲ ಏಳು ಜನ ಆರೋಪಿಗಳನ್ನು ಬಿಡುಗಡೆ ಮಾಡುವ ತಮಿಳುನಾಡು ಸರ್ಕಾರದ ನಿರ್ಧಾರ ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಒಂದು ವಾರದ ಒಳಗೆ ತೀರ್ಪು ನೀಡುವ ಇಂಗಿತವನ್ನು ಸುಪ್ರೀಂಕೋರ್ಟ್  ಮುಖ್ಯ ನ್ಯಾಯಮೂರ್ತಿ  ಪಿ. ಸದಾಶಿವಂ  ವ್ಯಕ್ತಪಡಿಸಿದರು.

‘ಅರ್ಜಿಗೆ ಸಂಬಂಧಿಸಿದ ವಾದ ಪ್ರತಿವಾದ ಪೂರ್ಣಗೊಂಡಿದ್ದು, ತೀರ್ಪು ಹೊರಬೀಳಬೇಕಾಗಿದೆ. ಏ.25­ಕ್ಕೆ  ತಮ್ಮ ಅಧಿಕಾರಾವಧಿ ಕೊನೆ­ಗೊಳ್ಳು­ತ್ತಿದ್ದು ಈ ಅವಧಿ­ಯೊಳಗೇ ತೀರ್ಪು ನೀಡಲಾಗುವುದು’ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಆರೋಪಿಗಳನ್ನು ಬಿಡುಗಡೆ ಮಾಡುವ ತಮಿಳುನಾಡು ಸರ್ಕಾರದ ಆದೇಶಕ್ಕೆ ಮುಖ್ಯ ನ್ಯಾಯಮೂರ್ತಿ ಸದಾಶಿವಂ ನೇತೃತ್ವದ ಪೀಠ ಫೆ. 20 ರಂದು ತಡೆಯಾಜ್ಞೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT