ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಕನ್ನಡ ಉಳಿಯುವುದೆ?

Last Updated 23 ಜುಲೈ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡದ ಈಗಿನ ಸ್ಥಿತಿ ಪ್ರಬುದ್ಧ, ಪ್ರಕಾಶಮಾನವಾಗಿ ಇದ್ದರೂ  ಬೆಂಗಳೂರಿನಲ್ಲಿ ಕನ್ನಡ ಉಳಿಯುತ್ತದೆಯೇ ಎನ್ನುವ ಹೆದರಿಕೆ ನನ್ನನ್ನು ಕಾಡುತ್ತಿದೆ’
ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ ಆತಂಕದ ನುಡಿ ಇದು.

ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಸಾಧಕರೊಡನೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾನು ಅಧ್ಯಾಪಕನಾಗಿದ್ದ ಸಂದರ್ಭದಲ್ಲಿ ವರ್ಷಕ್ಕೆ 150 ಪುಸ್ತಕಗಳು ಪ್ರಕಟಗೊಳ್ಳುತ್ತಿದ್ದವು. ಇಂದು 4 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಪ್ರಕಟಗೊಳ್ಳುತ್ತಿವೆ. ಕನ್ನಡ ಸಾಹಿತ್ಯ ವಿಸ್ತಾರವಾಗಿ ಬೆಳೆದಿದೆ. ಆದರೆ, ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಶೇ 20ರಷ್ಟು ಇಲ್ಲ. ಉರ್ದು, ಹಿಂದಿ, ತೆಲುಗು, ತಮಿಳು, ಮರಾಠಿ ಮುಂತಾದ ಭಾಷೆ ಮಾತನಾಡುವವರೇ ಜಾಸ್ತಿ ಇದ್ದಾರೆ’ ಎಂದರು.

‘ಶಿಕ್ಷಣ ಕ್ಷೇತ್ರದಲ್ಲಿ ಕನ್ನಡಕ್ಕೆ ಅನ್ಯಾಯ ಆಗಿದೆ. ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲೇ ನೀಡಬೇಕು ಎಂಬ ನಿಲುವಿಗೆ ವಿರುದ್ಧವಾಗಿ ಸುಪ್ರೀಂಕೋರ್ಟ್‌್ ತೀರ್ಪು ನೀಡಿದೆ. ಇದು ನನ್ನ ಹೃದಯವನ್ನು ಅಲ್ಲಾಡಿಸಿದೆ. ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಬೇಕು’ ಎಂದು ಒತ್ತಾಯಿಸಿದರು.
‘ಕನ್ನಡ ಅನ್ನದ ಭಾಷೆಯಾಗಬೇಕಾದರೆ, ಸ್ಥಳೀಯ ವ್ಯಕ್ತಿಗಳು ಉದ್ಯಮಗಳನ್ನು ಸ್ಥಾಪಿಸಬೇಕು. ಅವು ಕನ್ನಡದಲ್ಲೇ ವ್ಯವಹರಿಸಬೇಕು. ಆಗ ಕನ್ನಡಿಗರಿಗೆ ಉದ್ಯೋಗಾವಕಾಶಗಳು ಸಿಗುತ್ತವೆ’ ಎಂದರು.

ನಿಘಂಟಿಗೆ ವಿಭಾಗ ಇರಲಿ: ‘ಕಸಾಪ ನಿಘಂಟುಗಳನ್ನು ಪ್ರಕಟಿಸಿದ ಬಳಿಕ ಅದರ ಕಚೇರಿಯನ್ನು ಮುಚ್ಚಿತು. ಆಕ್ಸ್‌ಫರ್ಡ್‌ ವಿವಿ ನಿಘಂಟುಗಳನ್ನು 170 ವರ್ಷಗಳಿಂದ ಮುದ್ರಿಸುತ್ತಾ ಬಂದಿದೆ. ಅದರ ಮುದ್ರಣಾಲಯ ಇಂದಿಗೂ ಕಾರ್ಯ ನಿರ್ವಹಿಸುತ್ತಿದೆ. ಇನ್ನಾದರೂ ಕನ್ನಡ ನಿಘಂಟಿಗೆಂದೇ ಪ್ರತ್ಯೇಕ ವಿಭಾಗ ಸ್ಥಾಪಿಸಬೇಕು’ ಎಂದು ಒತ್ತಾಯಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌  ಮಾತನಾಡಿ, ‘ಅನ್ನದ ಭಾಷೆಯಾಗಿ ಕನ್ನಡ ಎಂಬ ಯೋಜನೆಯನ್ನು ಕೈಗೊಂಡಿದ್ದು, ಸಲಹಾ ಸಮಿತಿಯನ್ನು ರಚಿಸಲಾಗಿದೆ. ಅದರಲ್ಲಿ ಸಾಫ್ಟ್‌ವೇರ್‌ ತಜ್ಞರಿದ್ದಾರೆ. ವಿವಿಧ ಕಂಪೆನಿಗಳ ಜತೆ ಕಸಾಪ ಸೇತುವೆಯಾಗಿ ಕಾರ್ಯನಿರ್ವಹಿಸಲಿದ್ದು, ನಿರುದ್ಯೋಗಿ ಕನ್ನಡಿಗರಿಗೆ ಕೆಲಸ ಕೊಡಿಸುತ್ತೇವೆ’ ಎಂದರು.

ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಮಾತನಾಡಿ, ‘3 ವರ್ಷಪ್ರತಿ ತಿಂಗಳು ನಾಲ್ಕನೇ ಶನಿವಾರದಂದು ಸಾಧಕರೊಡನೆ ಸಂವಾದ ನಡೆಯಲಿದೆ. ವಿವಿಧ ಕ್ಷೇತ್ರದ ಸಾಧಕರನ್ನು ಆಹ್ವಾನಿಸಿ ಸಂವಾದ ನಡೆಸುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT