ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಧಾರಾಕಾರ ಮಳೆ, ಮನೆಗಳಿಗೆ ನೀರು

Last Updated 4 ಅಕ್ಟೋಬರ್ 2015, 20:11 IST
ಅಕ್ಷರ ಗಾತ್ರ

ಬೆಂಗಳೂರು:  ರಾಜಧಾನಿಯಲ್ಲಿ ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಕೆಲವೆಡೆ ಮರಗಳು ಧರೆಗುರುಳಿವೆ.

ಮಧ್ಯಾಹ್ನದಿಂದಲೇ  ಆರಂಭವಾದ ಮಳೆ, ರಾತ್ರಿಯಿಡೀ ಸುರಿಯಿತು. ಎಡೆಬಿಡದೆ ಸುರಿದ ಮಳೆಯಿಂದಾಗಿ ದೊಮ್ಮಲೂರು, ದೊಡ್ಡ ಬಾಣಸವಾಡಿ,  ನಾರಾಯಣಪುರ, ಫಾತಿಮಾ ಬಡಾವಣೆ, ಬಿ.ಟಿ.ಎಂ ಬಡಾವಣೆ, ಜೈಭಾರತ್‌ನಗರ, ಮಾರುತಿನಗರ, ಎಚ್‌ಆರ್‌ ಬಿಆರ್‌ ಬಡಾವಣೆ 5ನೇ ಮುಖ್ಯರಸ್ತೆ, ಟಿ. ದಾಸರಹಳ್ಳಿ, ಲಗ್ಗೆರೆಯ ಲವಕುಶನಗರ, ಪಂಚಶೀಲನಗರ ಸೇರಿದಂತೆ ಹಲವೆಡೆ ಮನೆಗಳಿಗೆ ನೀರು ನುಗ್ಗಿತು.

ಅಮರಜ್ಯೋತಿನಗರ ಮತ್ತು ಪಂಚಶೀಲನಗರದ ಅಪಾರ್ಟ್‌ಮೆಂಟ್‌ವೊಂದರ  ನೆಲಮಹಡಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹ
ಗೊಂಡಿತ್ತು.

ಇದರಿಂದಾಗಿ ತಳಮಹಡಿಯಲ್ಲಿ ನಿಲ್ಲಿಸಿದ್ದ ಕಾರುಗಳು ನೀರಿನಲ್ಲಿ ಮುಳುಗಿದ್ದವಲ್ಲದೆ,  ನಿವಾಸಿಗಳು ಹೊರಬರಲು ಪರದಾಡಬೇಕಾಯಿತು.
ರಾಜಗೋಪಾಲನಗರ, ಶ್ರೀನಗರ, ಕೋರಮಂಗಲ, ಇಂದಿರಾನಗರ 9ನೇ ಕ್ರಾಸ್‌, ದೊಮ್ಮಲೂರು, ನೃಪತುಂಗ ರಸ್ತೆ ಹಾಗೂ ನಾಗೇನಹಳ್ಳಿ ಸೇರಿದಂತೆ ಕೆಲವೆಡೆ ಮರಗಳು ಧರೆಗುರುಳಿವೆ.

ಮಳೆಯಿಂದಾಗಿ ಮನೆಗಳಿಗೆ ಮತ್ತು ಅಪಾರ್ಟ್‌ಮೆಂಟ್‌ಗಳಿಗೆ ನೀರು ನುಗ್ಗಿರುವ ಕುರಿತು ಹಲವು ದೂರುಗಳು ಬಂದಿವೆ.
ನೀರನ್ನು ಹೊರ ಹಾಕುವುದಕ್ಕಾಗಿ ಸಿಬ್ಬಂದಿಯನ್ನು ದೂರು ಬಂದ ಸ್ಥಳಗಳಿಗೆ ಕಳುಹಿಸಲಾಗಿದೆ ಎಂದು ಬಿಬಿಎಂಪಿ ನಿಯಂತ್ರಣ ಕೊಠಡಿ ಅಧಿಕಾರಿಗಳು ತಿಳಿಸಿದರು.

ಮಳೆಯ ಅಬ್ಬರಕ್ಕೆ ಒಳಚರಂಡಿಗಳು,  ಮ್ಯಾನ್‌ಹೋಲ್‌ಗಳು ಹಾಗೂ ರಾಜಕಾಲುವೆಗಳು ತುಂಬಿ ಹರಿದಿದ್ದರಿಂದ ಬಹುತೇಕ ರಸ್ತೆಗಳ ಮೇಲೆ ಮಳೆ ನೀರು ಕೆರೆಯಂತೆ ಸಂಗ್ರಹಗೊಂಡಿತ್ತು. ಇದರಿಂದಾಗಿ ವಾಹನಗಳ ಸಂಚಾರಕ್ಕೆ ತೊಂದರೆಯಾಯಿತಲ್ಲದೆ, ಪಾದಚಾರಿಗಳು ರಸ್ತೆ ದಾಟಲು ಪರದಾಡಬೇಕಾಯಿತು.

ಸಂಚಾರ ದಟ್ಟಣೆ: ಮಳೆಯಿಂದಾಗಿ ಹಳೆ ಮದ್ರಾಸ್‌ ರಸ್ತೆ, ಮೆಜೆಸ್ಟಿಕ್, ಹೊಸೂರು ರಸ್ತೆ, ಎಂ.ಜಿ.ರಸ್ತೆ,  ಶಾಂತಿನಗರ, ಸಿಲ್ಕ್‌ಬೋರ್ಡ್‌ ಜಂಕ್ಷನ್‌, ಕಾರ್ಪೊರೇಷನ್, ಮೆಜೆಸ್ಟಿಕ್‌, ಟಿನ್‌ ಫ್ಯಾಕ್ಟರಿ, ಮೈಸೂರು ರಸ್ತೆ, ಜೆ.ಪಿ. ನಗರ, ವಿಮಾನ ನಿಲ್ದಾಣ ರಸ್ತೆ, ಕನಕಪುರ ರಸ್ತೆ, ಕೆ.ಆರ್‌. ಮಾರುಕಟ್ಟೆ, ಓಕಳಿಪುರ, ಮಲ್ಲೇಶ್ವರ, ರಾಜಾಜಿನಗರ ಸೇರಿದಂತೆ ಹಲವೆಡೆ ಸಂಚಾರ ದಟ್ಟಣೆ ಕಂಡುಬಂತು.

ಬಿಡದೆ ಸುರಿದ ಮಳೆಯಿಂದಾಗಿ ನಗರದ ಹಲವು ಭಾಗಗಳಲ್ಲಿ ಹಲವು ಗಂಟೆಗಳ ಕಾಲ ವಿದ್ಯುತ್‌    ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ
ದ್ದರಿಂದ, ಜನರು ಕತ್ತಲಲ್ಲಿ ಕಾಲ ಕಳೆಯಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT