ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಅಧ್ಯಾತ್ಮ ಕೇಂದ್ರಗಳು

Last Updated 20 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಯಾವುದೇ ಒಂದು ಹೊಸ ಊರು ಸ್ಥಾಪನೆಯಾದಾಗ ಅದರ ಜತೆಜತೆಗೇ ಮೊದಲು ನಿರ್ಮಾಣಗೊಳ್ಳುವುದು ದೇವಸ್ಥಾನಗಳು ಮತ್ತು ಭಜನಾ ಮಂದಿರಗಳು. ಈ ಮಾತು ಕೆಂಪೇಗೌಡರು ಕಟ್ಟಿದ ಬೆಂಗಳೂರಿಗೂ ಅನ್ವಯಿಸುತ್ತದೆ. ನಗರದ ದೇವಾಲಯಗಳಲ್ಲಿ ಶಾಸ್ತ್ರೋಕ್ತವಾಗಿ ಪೂಜೆ ಕೆಲಸ ನೆರವೇರಿಸಲು ಕೆಂಪೇಗೌಡರು ತನ್ನೂರಿನಿಂದ ಬ್ರಾಹ್ಮಣರ ಒಂದು ಗುಂಪನ್ನು ಕರೆದುಕೊಂಡು ಬಂದು ಅವರಿಗೆ ಕನಕಪುರ ಬಾಗಿಲು ಹತ್ತಿರ ಒಂದು ಸೀಗೆ ಬೇಲಿ (ಸಿದ್ಧಿಕಟ್ಟೆ ಅಗ್ರಹಾರ) ಕಟ್ಟಿಸಿಕೊಟ್ಟಿದ್ದರು.  ಇದರಿಂದಾಗಿ ಬೆಂಗಳೂರಿನಲ್ಲಿ ಹರಿಕಥೆದಾಸರು, ಪುರಾಣಿಕರು ಬಂದರು. ಭಜನೆಗಳು ನಡೆಯತೊಡಗಿದವು. ಶನಿವಾರದ ಭಜನೆ ಒಂದು ಪ್ರಮುಖ ಜನಾಕರ್ಷಣೆಯ ಅಭ್ಯಾಸವಾಗಿತ್ತು.

ದೇವಸ್ಥಾನದಿಂದ ಅಧ್ಯಾತ್ಮ ಕೇಂದ್ರದೆಡೆಗೆ...
ಮೊದಮೊದಲು ಎಲ್ಲರೂ ಧಾರ್ಮಿಕ ಕಟ್ಟುನಿಟ್ಟುಗಳಿಗೆ ಬದ್ಧರಾಗಿದ್ದರು. ತಮ್ಮ ತಮ್ಮ ಜಾತಿ ಗುಂಪು ಶಕ್ತಿಯುತವಾದಾಗ ಅಥವಾ ರಕ್ಷಣೆ ಅವಶ್ಯಕ ಎನಿಸಿದಾಗ ಪ್ರತಿಯೊಬ್ಬರಿಗೂ ತಮ್ಮ ತಮ್ಮದೇ ಜಾತಿಯ ಸಂಘ ಸಂಸ್ಥೆಗಳನ್ನು ಸ್ಥಾಪಿಸಿಕೊಳ್ಳುವುದು ಅನಿವಾರ್ಯವಾಯಿತು. ಕಟ್ಟುಪಾಡುಗಳು ಮತ್ತು ಕಟ್ಟುಪಾಡುಗಳ ರಕ್ಷಕರು ತಮಗೆದುರಾಗಿದ್ದಾರೆ ಎನಿಸಿದಾಗ ಯಾವ ಬಗೆಯ ಕಟ್ಟುಪಾಡುಗಳೂ ಇಲ್ಲದ ಸ್ವತಂತ್ರ–ಮುಕ್ತ ಮನೋಭಾವದ ಚಿಂತಕರಿಗೆ ತಮ್ಮ ಸಮಾಜದ ಸ್ಥಾನಮಾನಗಳಿಗೆ ತಕ್ಕಂತೆ ಸಂಸ್ಥೆಗಳನ್ನು ಸ್ಥಾಪಿಸಿಕೊಳ್ಳುವ ಆಲೋಚನೆ ಬಂತು.

ಬಹುಶಃ ಈ ಪ್ರತ್ಯೇಕತಾ ಮನೋಭಾವ, ಬೆಂಗಳೂರಿನ ಆಡಳಿತ ಕೆಂಪೇಗೌಡ ಸಂತತಿಯವರ ಕೈತಪ್ಪಿ (ಕ್ರಿ.ಶ 1638)
ಮರಾಠರು–ಮುಸ್ಲಿಮರ ಹಿಡಿತಕ್ಕೆ ಬಂದ ಮೇಲೆ ಪ್ರಾರಂಭವಾಗಿರಬೇಕು. ಕ್ರಿ.ಶ 1800ರ ಅನಂತರ ಬೆಂಗಳೂರಿಗೆ ಇಂಗ್ಲಿಷರ ಆಗಮನ, ದಂಡು ಪ್ರದೇಶ ಸ್ಥಾಪನೆ,  ಕ್ರಿಶ್ಚಿಯನ್‌ ಸಂಸ್ಕೃತಿಯ ಹರಡಿಕೊಳ್ಳುವಿಕೆ ಇವೆಲ್ಲ ಬೆಂಗಳೂರಿನ ಹಿಂದಿನ ಸಂಸ್ಕೃತಿ, ಆಚಾರ, ಸಂಪ್ರದಾಯ, ನಂಬಿಕೆಗಳನ್ನು, ಕಟ್ಟುಪಾಡುಗಳನ್ನು ಬುಡಸಮೇತ ಅಲುಗಾಡಿಸಿದವು. ಕ್ರಿ.ಶ. 1900ಕ್ಕೂ ಹಿಂದೆಯೇ ಧಾರ್ಮಿಕ ಮಠಗಳು ನೂರಾರು ಸಂಖ್ಯೆಯಲ್ಲಿ ಬೆಂಗಳೂರಿನ ಎಲ್ಲ ಪ್ರದೇಶಗಳಲ್ಲೂ ಇದ್ದವು. ನಂತರ ಸಂಪೂರ್ಣ ಮತೀಯ ಎನ್ನಲಾಗದ ಅನೇಕ ಸಂಸ್ಥೆಗಳು ಒಂದೊಂದಾಗಿ ನೆಲೆ ಕಂಡುಕೊಂಡವು.

ರಾಮಕೃಷ್ಣಾಶ್ರಮ
ಕ್ರಿ.ಶ. 1892ರಲ್ಲಿ ಸ್ವಾಮಿ ವಿವೇಕಾನಂದರು ಅಮೆರಿಕೆಗೆ ಹೋಗುವ ಮೊದಲು ಮೈಸೂರು ಪ್ರಾಂತ್ಯಕ್ಕೆ ಬಂದವರು ಬೆಂಗಳೂರಿಗೂ ಭೇಟಿ ಕೊಟ್ಟರು. ಆಗ ಅವರು ನೀಡಿದ ಭಾಷಣಗಳಿಗೆ ಜನರು ಎಷ್ಟು ಪ್ರಭಾವಿತರಾಗಿ ಹೋದರು ಎಂದರೆ ಬೇಕಾದಷ್ಟು ಜನ ಅವರ ವ್ಯಕ್ತಿತ್ವ ವಲಯದೊಳಕ್ಕೆ ಬಂದರು. ಇದೇ ಪ್ರಭಾವದಿಂದ 1904ರಲ್ಲಿ ಬೆಂಗಳೂರಿನಲ್ಲಿ ಕಲ್ಕತ್ತೆಯ ‘ರಾಮಕೃಷ್ಣಾಶ್ರಮ’ದ ಶಾಖೆಯೊಂದು ಪ್ರಾರಂಭವಾಯಿತು. ಸ್ವಾಮಿ ರಾಮಕೃಷ್ಣಾನಂದ ಎಂಬವರು ಇದರ ಸ್ಥಾಪಕರು. ಬಹುಬೇಗ ರಾಮಕೃಷ್ಣಾಶ್ರಮ ಬೆಂಗಳೂರಿಗರ ಒಂದು ಅಧ್ಯಾತ್ಮ ತಾಣವಾಯಿತು.

ಮೇಖ್ರಿ ವೃತ್ತದಲ್ಲಿರುವ ‘ದಿ ರಮಣ ಮಹರ್ಷಿ ಸೆಂಟರ್‌ ಫಾರ್‌ ಲರ್ನಿಂಗ್‌’ ಸಂಸ್ಥೆ 1979ರಲ್ಲಿ ಪ್ರಾರಂಭಗೊಂಡು ಅತಿ ಸುಂದರವಾದ ಕಟ್ಟಡ ಹೊಂದಿದೆ. ದಂಡಿನ ಗಂಗಾಧರ ಚೆಟ್ಟಿ ರಸ್ತೆಯಲ್ಲಿರುವ ‘ದಿ ಅರಬಿಂದೋ ಸೊಸೈಟಿ ಟ್ರಸ್ಟ್‌’ ಮತ್ತು ‘ಅರಬಿಂದೋ ಭವನ’ಗಳು (1960) ಅರವಿಂದ ಮಹರ್ಷಿಗಳು ಪ್ರತಿಪಾದಿಸಿದ ತತ್ವಗಳ ಅಧ್ಯಯನ, ಪ್ರಚಾರಗಳಿಗೆಂದು  ರೂಪುಗೊಂಡಿವೆ. ಶ್ರೀ ಅರಬಿಂದೋ ಕಪಾಲಿ ಶಾಸ್ತ್ರಿ ಇನ್‌ಸ್ಟಿಟ್ಯೂಟ್‌ ಆಫ್‌ ವೇದಿಕ್‌ ಕಲ್ಚರ್‌ ಉಪಯುಕ್ತ  ಸಂಶೋಧನಾ ಗ್ರಂಥಗಳನ್ನು ಪ್ರಕಟಿಸುತ್ತಿದೆ.

ಸ್ವಾಮಿ ಚಿನ್ಮಯಾನಂದ ಅವರು ಬೆಂಗಳೂರಿನಲ್ಲಿ ಭಗವದ್ಗೀತೆ ಇಂಗ್ಲಿಷ್‌ ಉಪನ್ಯಾಸಗಳನ್ನು ಮಾಡುತ್ತಾ ಬೆಂಗಳೂರಿಗರ ಮನಸ್ಸಿನಲ್ಲಿ ನೆಲೆಸಿದವರು. ಅವರ ಚಿನ್ಮಯ ಮಿಷನ್‌ ಸಂಸ್ಥೆ ಭಗವದ್ಗೀತೆ ಪ್ರಚಾರ, ಧ್ಯಾನ, ಭಜನೆ ಮೊದಲಾದ ಕಾರ್ಯಗಳಲ್ಲಿ ತೊಡಗಿದೆ. ಅಲ್ಲದೇ ಆಸ್ಪತ್ರೆ ಹಾಗೂ ಶಾಲೆಯನ್ನೂ ನಡೆಸುತ್ತಿದೆ. 1958ರಲ್ಲಿ ಬೆಂಗಳೂರು ನೆಹರೂ ನಗರದ ಪುಟ್ಟ ಕಟ್ಟಡದಲ್ಲಿ ಆರಂಭವಾದ ‘ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ’ ಆಂದೋಲನ ನಿಧಾನವಾಗಿ ಬೆಂಗಳೂರಿಗರ ಮನಸ್ಸು ತಲುಪಿತು.

ಇದಲ್ಲದೇ ಸಾಯಿ ಮಂದಿರ, ಡಿವೈನ್‌ ಲೈಫ್‌ ಸೊಸೈಟಿ, ಆತ್ಮದರ್ಶನ ಯೋಗಾಶ್ರಮ, ಚಾಮರಾಜ ಪೇಟೆಯಲ್ಲಿನ ವಿವೇಕಾನಂದ ಕೇಂದ್ರ, ಬ್ರಹ್ಮಚಾರಿ ಶಿವರಾಮ ಶರ್ಮ ಸ್ಥಾಪಿಸಿದ ‘ಜ್ಞಾನಾಶ್ರಮ’, ರವಿಶಂಕರ್‌ ಅವರು ಸ್ಥಾಪಿಸಿದ ‘ವ್ಯಕ್ತಿ ವಿಕಾಸ ಕೇಂದ್ರ’ (ಆರ್ಟ್‌ ಆಫ್‌ ಲಿವಿಂಗ್‌), ಜಿಡ್ಡು ಕೃಷ್ಣಮೂರ್ತಿ ಅವರು ಸ್ಥಾಪಿಸಿದ ಜಿ.ಕೆ ಫೌಂಡೇಷನ್‌ನ ‘ಬೆಂಗಳೂರು ಶಿಕ್ಷಣ ಕೇಂದ್ರ’ ಹೀಗೆ ಅನೇಕ ಕೇಂದ್ರಗಳು ಇಂದಿನ ಬೆಂಗಳೂರಿಗರ ಅಧ್ಯಾತ್ಮದ  ಹಸಿವನ್ನು ನೀಗಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT