ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಬಾವಿಗಳು, ಕಲ್ಯಾಣಿಗಳ ಕಣ್ಮರೆ

Last Updated 31 ಜುಲೈ 2015, 19:45 IST
ಅಕ್ಷರ ಗಾತ್ರ

ದೊಡ್ಡ ನದಿಗಳಿಂದ ದೂರವಿರುವ, ಅರೆ ಒಣಭೂಮಿಯೆಂದು ಕರೆಯಬಹುದಾದ ಪ್ರದೇಶ ಬೆಂಗಳೂರಿನದ್ದು. ಈ ನಗರದ ಅಸ್ತಿತ್ವಕ್ಕೆ ನೀರು ಅಗತ್ಯವಾಗಿತ್ತು. ಇದನ್ನು ಪೂರೈಸುತ್ತಿದ್ದುದು ಕೆರೆಗಳ ಯೋಜಿತ ಜಾಲ, ಕಲ್ಯಾಣಿಗಳು ಮತ್ತು ತೆರೆದ ಬಾವಿಗಳು.

ಬಾವಿ ನೀರು ಚೌಳಾಗಿದ್ದರೆ (ಸ್ವಲ್ಪ ಉಪ್ಪು), ಕಲ್ಯಾಣಿ ಅಥವಾ ಕೆರೆಯ ನೀರು ಸಿಹಿಯಾಗಿರುತ್ತಿತ್ತು. ಮನೆಯ ಅಂಗಳದಲ್ಲೇ ಇದ್ದ ಖಾಸಗಿ ತೆರೆದ ಬಾವಿಗಳು ಹಾಗೂ ಸಾರ್ವಜನಿಕ ತೆರೆದ ಬಾವಿಗಳನ್ನು ಭಾರತೀಯರು ಮತ್ತು ಯುರೋಪಿಯನ್ನರು ಬಳಸುತ್ತಿದ್ದರು. ಕೆರೆಯ ಬದಿಯಲ್ಲೇ ಇರುತ್ತಿದ್ದ ಬಾವಿಗಳು ಜಾನುವಾರುಗಳನ್ನು ಮೇಯಿಸುವವರು, ಮೀನಗಾರರು ಮತ್ತು ರೈತರಂಥ ಸಮುದಾಯಗಳಿಗೆ ಸೀಮಿತವಾಗಿರುತ್ತಿತ್ತು. ತೋಟಗಳು ಮತ್ತು ತೋಪುಗಳಲ್ಲಿ ಇದ್ದ ಬಾವಿಗಳು ನೀರಾವರಿಗೆ ಬಳಕೆಯಾಗುತ್ತಿತ್ತು.

ಅಗಸ ಸಮುದಾಯವೂ ನಗರದ ಕೆಲವೆಡೆ ತಮ್ಮದೇ ಬಾವಿಗಳನ್ನು ಹೊಂದಿತ್ತು. ಇವುಗಳ ಹೊರತಾಗಿ ಸಾರ್ವಜನಿಕ ಬಾವಿಗಳೂ ನಗರದ ಹಲವು ಬೀದಿಗಳಲ್ಲಿದ್ದು ಅವೂ ನಗರಕ್ಕೆ ಅಗತ್ಯವಿರುವ ನೀರು ಪೂರೈಸುತ್ತಿದ್ದವು.

19ನೇ ಶತಮಾನದಲ್ಲಿ ಕಾಣಸಿಕೊಂಡ ಪ್ಲೇಗ್‌, ಮಲೇರಿಯಾ, ಟೈಫಾಯ್ಡ್‌ನಂಥ ಸಾಂಕ್ರಾಮಿಕ ರೋಗಗಳ ಪರಿಣಾಮವಾಗಿ ನೈರ್ಮಲ್ಯದ ಕುರಿತ ಕಾಳಜಿ ಹೆಚ್ಚಾಯಿತು. ರೋಗಗಳ ಹರಡುವಿಕೆಗೆ ಕಾರಣವಾಗುತ್ತಿವೆ ಎಂಬ ಕಾರಣಕ್ಕಾಗಿ ಹಲವು ಬಾವಿಗಳು ಮತ್ತು ಕೆರೆಗಳನ್ನು ಮುಚ್ಚಲಾಯಿತು. 1970ರ ದಶಕದಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳನ್ನು ತಡೆಯುವುದಕ್ಕೆ ಸಹಕಾರಿ ಎಂಬ ತಪ್ಪು ಕಲ್ಪನೆಯಿಂದ ಅನೇಕ ಕೆರೆಗಳನ್ನು ಮುಚ್ಚಿ ಆ ಭೂಮಿಯನ್ನು ಇತರ ಚಟುವಟಿಕೆಗಳಿಗೆ ಬಳಸಲಾಯಿತು.

ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರಕ್ಕೆ  ಕಾವೇರಿ ನೀರು ಸಾಕಾಗುವುದಿಲ್ಲ ಎಂಬುದು ನಮಗೆ ಈಗ ಅರ್ಥವಾಗಿದೆ. ಈಗಾಗಲೇ ನಗರ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಈಗ ಅಪಾಯಕಾರಿ ಮಟ್ಟಕ್ಕೆ ಕುಸಿದಿದೆ. ಸ್ಥಳೀಯ ಸಮುದಾಯಗಳ ಪಾಲ್ಗೊಳ್ಳುವಿಕೆಯೊಂದಿಗೆ ಕೆಲವು ಕೆರೆಗಳನ್ನು ಪುನರುಜ್ಜೀವನಗೊಳಿಸಿದ್ದರಿಂದ ಅಂತರ್ಜಲ ಮಟ್ಟದಲ್ಲಿ ಸುಧಾರಣೆಯಾಗಿದೆ. ಆದರೆ ನಮ್ಮ ನಗರ ಯೋಜನೆಗಳನ್ನು ರೂಪಿಸುವವರು ತೆರೆದ ಬಾವಿಗಳ ಸಾಧ್ಯತೆಯನ್ನು ಮರೆತಿರುವ ವಿಷಾದಕರ ಸಂಗತಿಯೂ ಇಲ್ಲಿ ಉಲ್ಲೇಖಾರ್ಹ.

ಕಳೆದೊಂದು ಶತಮಾನದ ಅವಧಿಯಲ್ಲಿ ಬೆಂಗಳೂರು ಕಳೆದುಕೊಂಡಿರುವ ಬಾವಿಗಳ ಸಂಖ್ಯೆ ಭಾರೀ ದೊಡ್ಡದು. 1885ರಲ್ಲಿ ಬೆಂಗಳೂರಿನ ದಂಡು ಪ್ರದೇಶದಲ್ಲಿದ್ದ ತೆರೆದ ಬಾವಿಗಳ ಸಂಖ್ಯೆ 1960. ಇದು 1935ರ ವೇಳೆಗೆ ಇದು 490ಕ್ಕೆ ಕುಸಿದಿತ್ತು. 1973ರ ಹೊತ್ತಿಗೆ ಈ ಪ್ರದೇಶದಲ್ಲಿ ಉಳಿದ ಬಾವಿಗಳ ಸಂಖ್ಯೆ ಕೇವಲ 149. ಇವುಗಳಲ್ಲಿ ಕೇವಲ 49ನ್ನಷ್ಟೇ ಇತ್ತೀಚೆಗೆ ನಡೆಸಿದ ಕ್ಷೇತ್ರ ಕಾರ್ಯದಲ್ಲಿ ಗುರುತಿಸಲು ಸಾಧ್ಯವಾಯಿತು.

ಹಳೆಯ ನಕಾಶೆಗಳು ಈ ಬಾವಿಗಳ ಸಂಖ್ಯೆಯಲ್ಲಿ ಕಂಡುಬಂದ ಕುಸಿತಕ್ಕೆ ಕಾರಣಗಳನ್ನು ಹೇಳುತ್ತವೆ. ಹೆಚ್ಚಿನ ಬಾವಿಗಳನ್ನು ಕೃಷಿ ನೀರಾವರಿಗೆ ಬಳಸಲಾಗುತ್ತಿತ್ತು. ಈಗ ಬೆಂಗಳೂರು ನಗರದಲ್ಲಿ ಕೃಷಿಯೇ ಇಲ್ಲ. ಬಾವಿಗಳನ್ನು ಮುಚ್ಚಿ ಅವುಗಳ ಮೇಲೆ ಕಟ್ಟಡಗಳನ್ನು ನಿರ್ಮಿಸಲಾಯಿತು.

ಈಗ ಬಾವಿಗಳು ಕಾಣಸಿಗುವುದು ಎರಡು ಬಗೆಯ ಸ್ಥಳಗಳಲ್ಲಿ. ಒಂದು: ನೀರಿನ ಅಗತ್ಯವನ್ನು ಪೂರೈಸುವ ಎರಡನೇ ಮೂಲವಾಗಿ ಬಾವಿಯನ್ನು ಬಳಸುತ್ತಿರುವ ಸ್ಥಳಗಳಲ್ಲಿ. ಎರಡು: ಯಾವುದೇ ಕಟ್ಟಡ ಇತ್ಯಾದಿ ಅಭಿವೃದ್ಧಿಗಳು ನಡೆಯದೇ ಇರುವ ಸ್ಥಳಗಳಲ್ಲಿ. ಈಗಲೂ ಶುದ್ಧನೀರು ದೊರೆಯುವ ಅನೇಕ ಬಾವಿಗಳಿವೆ. ಇಂಥವು ಹೆಚ್ಚಾಗಿರುವುದು ಮನೆಗಳು, ದೇವಾಲಯಗಳು, ಕೊಳೆಗೇರಿಗಳು ಮತ್ತು ಅಗಸ ಸಮುದಾಯದವರು ಇರುವಲ್ಲಿ. ಇವುಗಳ ಹೊರತಾಗಿ ಈಗ ಬಳಕೆಯಲ್ಲಿ ಇಲ್ಲದೇ ಇರುವ ಕೆಲವು ಬಾವಿಗಳೂ ಇವೆ.

ಇವುಗಳಲ್ಲಿ ಬೇಗೂರು ಕೋಟೆ, ಲಾಲ್‌ಬಾಗ್ ಮುಂತಾದೆಡೆಗಳಲ್ಲಿರುವ ಸುಂದರವಾದ ಐತಿಹಾಸಿಕ ಮಹತ್ವವುಳ್ಳ ಬಾವಿಗಳೂ ಸೇರಿವೆ. ಈಗ ಬಳಕೆಯಲಿಲ್ಲದೆ ಪಾಳು ಬಿದ್ದೂ ಉಳಿದುಕೊಂಡಿರುವ ಬಾವಿಗಳು ತಮ್ಮ ಕಲ್ಲಿನ ಸುರುಳಿ ಮೆಟ್ಟಿಲುಗಳು, ಮರದಲ್ಲಿ ತಯಾರಿಸಿದ ಚೆಂದದ ರಾಟೆಗಳು, ಅಲಂಕೃತ ಕಟ್ಟೆಗಳ ಮೂಲಕ ಹಳೆಯ ವೈಭವವನ್ನು ನೆನಪಿಸುತ್ತಿವೆ. ಈಗ ಉಳಿದುಕೊಂಡಿರುವ ಕೊಟ್ಟ ಕೊನೆಯ ಸಾರ್ವಜನಿಕ ಕಲ್ಯಾಣಿಗಳಲ್ಲೊಂದು ಸಂಪಂಗಿರಾಮ ನಗರದ ಕಂಠೀರವ ಸ್ಟೇಡಿಯಂನ ಬಳಿ ಇದೆ. ಇದರಲ್ಲೀಗ ನೀರಿಲ್ಲ. ಆದರೆ ಇಲ್ಲಿನ ಕಲ್ಲಿನ ಶಿಲ್ಪಗಳು 16ನೇ ಶತಮಾನದಲ್ಲಿ ಈ ಕಲ್ಯಾಣಿಗಿದ್ದ ಮಹತ್ವವನ್ನು ಹೇಳುತ್ತದೆ. ಇದನ್ನು ಕೆಂಪೇಗೌಡ ಕಟ್ಟಿಸಿದ್ದೆಂಬ ಪ್ರತೀತಿ ಇದೆ.

ಈಗ ಇಲ್ಲವಾಗಿರುವ ಕಲ್ಯಾಣಿಗಳು ಮತ್ತು ತೆರೆದ ಬಾವಿಗಳಿಗೆ ಮರುಜೀವ ನೀಡಿದರೆ ನಗರದ ಬಾಯಾರಿಕೆಯನ್ನು ತಣಿಸುವುದಕ್ಕೆ ಅನುಕೂಲಕರವಷ್ಟೇ ಅಲ್ಲ ಅಂತರ್ಜಲದ ಮರುಪೂರಣದ ಮೂಲಕ ನಗರದ ನೀರಿನ ಸಮತೋಲನವನ್ನೂ ಕಾಯ್ದುಕೊಳ್ಳಲು ಸಾಧ್ಯವಿದೆ. ನಮ್ಮ ನಗರ ಪರಂಪರೆಯ ಸಾಂಸ್ಕೃತಿಕ, ಸಾಮಾಜಿಕ ಮತ್ತು ಪರಿಸರ ಸಂಬಂಧದ ಶ್ರೀಮಂತಿಕೆಯ ಪ್ರತೀಕಗಳಾಗಿರುವ ಇವುಗಳನ್ನು ಪುನರುಜ್ಜೀವನಗೊಳಿಸುವ ಈ ಕೆಲಸವನ್ನು ಈಗಲೂ ಕೈಗೆತ್ತಿಕೊಳ್ಳಬಹುದು.

ಪೂರಕ ಮಾಹಿತಿ: ಅಶೋಕ ಟ್ರಸ್ಟ್ ಫಾರ್ ಇಕಾಲಜಿಯ ಪಿಎಚ್‌ಡಿ ವಿದ್ಯಾರ್ಥಿ ಹಿತಾ ಉನ್ನಿಕೃಷ್ಣನ್
***
ಸೋಮವಾರ
ಗುಂಡತೋಪುಗಳು – ಕಾಂಕ್ರೀಟ್‌ ನಗರದಲ್ಲಿ ಮರೆತುಹೋಗಿರುವ ಹಸಿರ ಗುರುತುಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT