ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ‘ಸ್ನೂಕರ್‌ ಕಿರೀಟ’ ಪಂಕಜ್‌ ಅಡ್ವಾಣಿ

Last Updated 29 ಮೇ 2016, 19:30 IST
ಅಕ್ಷರ ಗಾತ್ರ

ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ ವಲಯದಲ್ಲಿ ‘ಗೋಲ್ಡನ್‌ ಬಾಯ್‌’ ಎಂದೇ ಗುರುತಿಸಿಕೊಂಡಿರುವ ಬೆಂಗಳೂರಿನ ಪಂಕಜ್‌ ಅಡ್ವಾಣಿ ಹೋದ ವಾರ ಅಬುಧಾಬಿಯಲ್ಲಿ ನಡೆದ  ಏಷ್ಯನ್‌ 6 ರೆಡ್‌ ಸ್ನೂಕರ್‌ ಟೂರ್ನಿಯಲ್ಲಿ  ಪ್ರಶಸ್ತಿ ಗೆದ್ದು ಚಾರಿತ್ರಿಕ ಸಾಧನೆ ಮಾಡಿದ್ದಾರೆ. ಅವರ ಸಾಧನೆಗಳ ಬಗ್ಗೆ ಜಿ.ಶಿವಕುಮಾರ ಮಾಹಿತಿ ನೀಡಿದ್ದಾರೆ.

ಹತ್ತರ ಹರೆಯದ ಬಾಲಕನಿಗೆ ಒಮ್ಮೆ ಪರಿಚಿತರೊಬ್ಬರು ನೀನು ಮುಂದೆ ಏನಾಗಬೇಕು ಎಂದುಕೊಂಡಿದ್ದೀಯ ಎಂದು  ಪ್ರಶ್ನಿಸಿದ್ದರಂತೆ. ಅದಕ್ಕೆ ಆ ಬಾಲಕ  ಮುಂದೊಂದು ದಿನ ವಿಶ್ವ ಚಾಂಪಿಯನ್‌ ಆಗಿ ದೊಡ್ಡ ಹೆಸರು ಮಾಡುತ್ತೇನೆ ಎಂದು ಉತ್ತರಿಸಿದ್ದ. ಅದಾಗಿ ಎಂಟು ವರ್ಷಗಳಲ್ಲಿ ಆತ ತನ್ನ ಕನಸನ್ನು ನನಸಾಗಿಸಿಕೊಂಡಿದ್ದ.

ಅವರು, ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ ಲೋಕದಲ್ಲಿ ಹಲವು ಮೊದಲುಗಳನ್ನು ನಿರ್ಮಿಸಿರುವ ಅಪ್ಪಟ ಪ್ರತಿಭಾವಂತ  ಪಂಕಜ್‌ ಅಡ್ವಾಣಿ. ಕ್ರೀಡೆಯ ಬಗೆಗಿನ ಶ್ರದ್ಧೆ, ಬದ್ಧತೆ, ಹೋರಾಟ ಮನೋಭಾವ, ಸದಾ ಕಲಿಯುವ ತುಡಿತ ಹೊಂದಿರುವ  ಪಂಕಜ್‌ ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ ಕ್ಷಿತಿಜದಲ್ಲಿ ಕಂಗೊಳಿಸುತ್ತಿದ್ದಾರೆ.

ಒಂದೇ ಋತುವಿನಲ್ಲಿ ವಿಶ್ವ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ನ ಪಾಯಿಂಟ್ಸ್‌ ಮತ್ತು ಟೈಮ್‌ ಮಾದರಿಗಳಲ್ಲಿ ಮೂರು ಬಾರಿ ಟ್ರೋಫಿ ಎತ್ತಿಹಿಡಿದ ವಿಶ್ವದ ಮೊದಲ ಮತ್ತು ಏಕೈಕ ಆಟಗಾರ ಎಂಬ ಹಿರಿಮೆ ಕರ್ನಾಟಕದ  ಪಂಕಜ್‌ ಅವರದ್ದು. ರಾಜ್ಯದ ಆಟಗಾರ 2005ರಲ್ಲಿ ಮಾಲ್ಟ, 2008ರಲ್ಲಿ ಬೆಂಗಳೂರು ಮತ್ತು 2014 ರಲ್ಲಿ ಲೀಡ್ಸ್‌ನಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ಗಳಲ್ಲಿ ಪ್ರಶಸ್ತಿ ಜಯಿಸಿ ಈ ಸಾಧನೆ ಮಾಡಿದ್ದರು. ಅಷ್ಟೇ ಅಲ್ಲದೆ ಐಬಿಎಸ್‌ಎಫ್‌ ವಿಶ್ವ ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ಗಳಲ್ಲಿ ಕಿರೀಟ ಮುಡಿಗೇರಿಸಿಕೊಂಡ ಮೊದಲಿಗರೂ ಆಗಿದ್ದಾರೆ.

12ನೇ ವಯಸ್ಸಿನಲ್ಲಿಯೇ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಟೂರ್ನಿಗಳಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಿದ ಪಂಕಜ್‌, ಮಿಂಚಿ ಮರೆಯಾಗುವ ನಕ್ಷತ್ರವಾಗಲಿಲ್ಲ. 2000, 2001 ಮತ್ತು 2003ರಲ್ಲಿ ನಡೆದಿದ್ದ ಇಂಡಿಯನ್‌ ಜೂನಿಯರ್‌ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ಗಳಲ್ಲಿ ಪ್ರಶಸ್ತಿ ಗೆದ್ದು ಭರವಸೆ ಮೂಡಿಸಿದ ಅವರು ಆ ಬಳಿಕ ತಿರುಗಿ ನೋಡಿದ್ದೇ ಇಲ್ಲ.

2003ರಲ್ಲಿ ರಾಷ್ಟ್ರೀಯ ಜೂನಿಯರ್‌ ಸ್ನೂಕರ್‌ ಚಾಂಪಿಯನ್‌ಷಿಪ್‌ನಲ್ಲಿ  ಪ್ರಶಸ್ತಿ ಗೆದ್ದಿದ್ದ ಬೆಂಗಳೂರಿನ ಆಟಗಾರ ಈ ಸಾಧನೆ ಮಾಡಿದ ಕಿರಿಯ ಆಟಗಾರ ಎಂಬ ಶ್ರೇಯ ತಮ್ಮದಾಗಿಸಿಕೊಂಡಿದ್ದರು. ಆಗ ಪಂಕಜ್‌ಗೆ 18 ವರ್ಷ. ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ ಆಡುವ ಆಟಗಾರರಿಗೆ ತಾಳ್ಮೆ ಅಗತ್ಯ.

ಈ ಗುಣ ಪಂಕಜ್‌ಗೆ ಜನ್ಮತಃ ಸಿದ್ಧಿಸಿದಂತಿದೆ. ಆಟಗಾರನೊಬ್ಬ  ಸ್ನೂಕರ್‌ ಇಲ್ಲವೆ ಬಿಲಿಯರ್ಡ್ಸ್‌ ಪೈಕಿ ಒಂದನ್ನು ಆಯ್ಕೆ ಮಾಡಿಕೊಂಡು ಎತ್ತರದ ಸಾಧನೆ ಮಾಡುವುದು ಸಾಮಾನ್ಯ. ಆದರೆ ಪಂಕಜ್‌ ಇದಕ್ಕೆ ಅಪವಾದದಂತಿದ್ದಾರೆ. ರಾಜ್ಯದ ಆಟಗಾರ  ಎರಡೂ ಪ್ರಕಾರಗಳಲ್ಲೂ ವಿಶ್ವ ಚಾಂಪಿಯನ್‌ ಆಗಿದ್ದಾರೆಂಬುದು ಅವರ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ.

ಬಿಲಿಯರ್ಡ್ಸ್‌ನಲ್ಲೂ ಬಾದ್‌ಶಹಾ
ಪಂಕಜ್‌ ಕೇವಲ ಸ್ನೂಕರ್‌ ಮಾತ್ರವಲ್ಲ ಬಿಲಿಯರ್ಡ್ಸ್‌ನಲ್ಲೂ ಎತ್ತರದ ಸಾಧನೆ ಮಾಡಿದ್ದಾರೆ. 2002ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಏಷ್ಯನ್‌ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಆಡುವ ಮೂಲಕ ಈ ಮಾದರಿಗೆ ಪದಾರ್ಪಣೆ ಮಾಡಿದ್ದ ಅವರು, ಫೈನಲ್‌ ಪ್ರವೇಶಿಸಿದ್ದರು. ಇದಾದ ಮೂರು ವರ್ಷದಲ್ಲಿ ಅವರು ಮಾಲ್ಟದ ಕ್ವಾವ್ರಾದಲ್ಲಿ ನಡೆದಿದ್ದ ವಿಶ್ವ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಟ್ರೋಫಿ ಜಯಿಸಿ ಈ ಮಾದರಿಯಲ್ಲಿ ಪ್ರಶಸ್ತಿ ಬೇಟೆಗೆ ಮುನ್ನುಡಿ ಬರೆದಿದ್ದರು.

2008ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಪಂಕಜ್‌ ಪ್ರಶಸ್ತಿ ಜಯಿಸಿ ತವರಿನ ಅಭಿಮಾನಿಗಳ ಮನ ಗೆದ್ದಿದ್ದರು. ಒಂದೇ ಋತುವಿನಲ್ಲಿ ರಾಷ್ಟ್ರೀಯ, ಪ್ರಾದೇಶಿಕ ಮತ್ತು ವಿಶ್ವ ಬಿಲಿಯರ್ಡ್ಸ್‌ ಟೂರ್ನಿಗಳಲ್ಲಿ ಐದು ಪ್ರಶಸ್ತಿ ಗೆದ್ದ ಸಾಧನೆಯೂ ಪಂಕಜ್‌ ಹೆಸರಿನಲ್ಲಿದೆ.

ಸ್ನೂಕರ್‌ನಲ್ಲಿ ವಿಶ್ವ ಸಾಮ್ರಾಟ
2003ರ ಅಕ್ಟೋಬರ್‌ 25ರಂದು ಚೀನಾದ ಜಿಯಾಂಗ್‌ಮೆನ್‌ನಲ್ಲಿ ನಡೆದಿದ್ದ ಐಬಿಎಸ್‌ಎಫ್‌ ವಿಶ್ವ ಸ್ನೂಕರ್‌ ಚಾಂಪಿಯನ್‌ಷಿಪ್‌ನಲ್ಲಿ ಚಿಗುರು ಮೀಸೆಯ ಹುಡುಗ ಪಂಕಜ್‌, ಭಾರತದ ಸವಾಲು ಮುನ್ನಡೆಸಿದ್ದರು. 18ರ ಹರೆ ಯದ ಯುವಕನನ್ನು ಕಂಡು ಆಗ ಮೂಗು ಮುರಿದಿದ್ದವರೇ ಹೆಚ್ಚು.

ಆ ಚಾಂಪಿಯನ್‌ಷಿಪ್‌ನಲ್ಲಿ ಘಟಾನುಘಟಿಗಳಿಗೆ ಸಲೀಸಾಗಿ ನೀರು ಕುಡಿಸಿದ್ದ ಪಂಕಜ್‌, ವಿಶ್ವ ಚಾಂಪಿಯನ್‌ ಕಿರೀಟ ಮುಡಿಗೇರಿಸಿಕೊಂಡು ಸ್ನೂಕರ್‌ ಲೋಕದ ಗಮನ ಸೆಳೆದಿದ್ದರು. ಇದರೊಂದಿಗೆ ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ ಎಂಬ ದಾಖಲೆ ತಮ್ಮದಾಗಿಸಿಕೊಂಡಿದ್ದರು.

ಇದಾಗಿ ಒಂದು ದಶಕದ ಬಳಿಕ ಈಜಿಪ್ಟ್‌ನ ಶರ್ಮ್‌ ಎಲ್‌ ಶೇಖ್‌ನಲ್ಲಿ ಜರುಗಿದ್ದ ಐಬಿಎಸ್‌ಎಫ್‌ ವಿಶ್ವ 6  ರೆಡ್‌ ಸ್ನೂಕರ್‌ ಚಾಂಪಿಯನ್‌ಷಿಪ್‌ನಲ್ಲಿ ಪಂಕಜ್‌ ಅವರು ಟ್ರೋಫಿ ಹಿತ್ತಿಹಿಡಿದು ವಿಶ್ವ ಮಟ್ಟದಲ್ಲಿ ರಾಜ್ಯದ ಕೀರ್ತಿ ಬೆಳಗಿದ್ದರು. ವಿಶ್ವದ ದಿಗ್ಗಜರೆಂದೇ ಗುರುತಿಸಿಕೊಂಡಿದ್ದ ಕ್ರೆಗ್‌ ಸ್ಟೀಡ್‌ಮ್ಯಾನ್‌, ಸ್ಟೀವ್‌ ಡೇವಿಸ್‌, ಅಲಾನ್‌ ಮೆಕ್‌ಮನಸ್‌ ಮತ್ತು ಮೈಕಲ್‌ ಹೋಲ್ಟ್‌, ಜಾನ್‌ ಹಿಗ್ಗಿನ್ಸ್‌  ಅವರನ್ನು ಮಣಿಸಿರುವ ಪಂಕಜ್‌ ಸಾಧನೆ ಅನನ್ಯವಾದುದು.

2016ರ ವೇಲ್ಸ್‌ ಓಪನ್‌ ಟೂರ್ನಿ ಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಹೊಂದಿದ್ದ ಪಂಕಜ್‌, ಅದೇ ವರ್ಷ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 74ನೇ ಸ್ಥಾನಕ್ಕೂ ಏರಿದ್ದರು. ಹೀಗೆ ಪ್ರತಿ ಟೂರ್ನಿಯಲ್ಲೂ ಆಟದ ಗುಣಮಟ್ಟ ಹೆಚ್ಚಿಸಿಕೊಂಡು ಸಾಗಿದ ‘ಗೋಲ್ಡನ್‌ ಬಾಯ್‌’ ಹೋದ ವಾರ ಅಬುಧಾಬಿಯಲ್ಲಿ ನಡೆದಿದ್ದ   ಏಷ್ಯನ್‌ 6 ರೆಡ್‌ ಸ್ನೂಕರ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿ ಚಾರಿತ್ರಿಕ ಸಾಧನೆ ಮಾಡಿದ್ದಾರೆ.

ಪಂಕಜ್‌ ಅವರು ವಿಶ್ವ ಮತ್ತು ಏಷ್ಯನ್‌ 6 ರೆಡ್‌ ಸ್ನೂಕರ್‌ ಚಾಂಪಿಯನ್‌ಷಿಪ್‌ಗಳಲ್ಲಿ ಪ್ರಶಸ್ತಿ ಗೆದ್ದ ವಿಶ್ವದ ಏಕೈಕ ಆಟಗಾರ  ಎನಿಸಿದ್ದಾರೆ. ಐಬಿಎಸ್‌ಎಫ್‌ ವಿಶ್ವ 6 ರೆಡ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬಾರಿ ಪ್ರಶಸ್ತಿಯ ಸಾಧನೆ ಮಾಡಿರುವ  ಪಂಕಜ್‌ ಅವರು ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಟ್ರೋಫಿ ಗೆದ್ದಿರುವುದು ಮೊದಲು.

ಪಂಕಜ್‌ ಪಯಣ ಶುರುವಾಗಿದ್ದು...
ಪಂಕಜ್‌ ಆರು ವರ್ಷದ ಬಾಲಕನಾಗಿದ್ದಾಗ ಅವರ ಕುಟುಂಬ ಕುವೈತ್‌ನಿಂದ ಬೆಂಗಳೂರಿಗೆ ಬಂದು ನೆಲೆಸಿತು. ಪಂಕಜ್‌ ಮತ್ತು ಅವರ ಅಣ್ಣ ಶ್ರೀ ಅಡ್ವಾಣಿ ಅವರು ಫ್ರಾಂಕ್‌ ಅಂಥೋನಿ ಪಬ್ಲಿಕ್‌ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದರು. ಪಂಕಜ್‌ 10 ವರ್ಷದವನಾಗಿದ್ದಾಗ  ಅಣ್ಣನೊಂದಿಗೆ ಪ್ರತಿ ದಿನ ಮನೆಯ ಬಳಿ ಇದ್ದ ಸ್ನೂಕರ್‌ ಪಾರ್ಲರ್‌ಗೆ ಹೋಗುತ್ತಿದ್ದರು.

ಅಲ್ಲಿ ಅಣ್ಣ ಆಡುತ್ತಿದ್ದುದನ್ನು ನೋಡುತ್ತಾ ಈ ಕ್ರೀಡೆಯತ್ತ ಆಕರ್ಷಿತರಾದರು. ಆ ನಂತರ ರಾಜ್ಯಮಟ್ಟದ ಟೂರ್ನಿಯಲ್ಲಿ ಅಣ್ಣನನ್ನೆ ಮಣಿಸಿ ಪ್ರಶಸ್ತಿ ಜಯಿಸಿದ್ದರು. ಆಗ ಪಂಕಜ್‌ ಸ್ನೂಕರ್‌ ದಿಗ್ಗಜ ಅರವಿಂದ್‌ ಸವೂರ್‌ ಅವರ ಕಣ್ಣಿಗೆ ಬಿದ್ದರು. ಸವೂರ್‌ ಅವರು  ಪಂಕಜ್‌ ಪ್ರತಿಭೆಗೆ ಸಾಣೆ ಹಿಡಿದು ಅವರನ್ನು ಸಮರ್ಥ ಆಟಗಾರನನ್ನಾಗಿ ರೂಪಿಸಿದರು.

* ವಿಶ್ವದ ಗರಿಷ್ಠ ರ‍್ಯಾಂಕಿಂಗ್‌: 56 (2013/14).
* ಗರಿಷ್ಠ ಬ್ರೇಕ್‌: ಸ್ನೂಕರ್‌: 136 (2014, ಚೀನಾ ಓಪನ್‌)
* ಬಿಲಿಯರ್ಡ್ಸ್‌: 876.

ಅಂಕಿ–ಅಂಶ
* 5 ಏಷ್ಯನ್‌ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ನ ಸಿಂಗಲ್ಸ್‌ನಲ್ಲಿ ಪಂಕಜ್‌ ಗೆದ್ದ ಪ್ರಶಸ್ತಿಗಳು.
* 2005, 2008, 2009, 2010, ಮತ್ತು 2012ರಲ್ಲಿ ಅವರಿಂದ ಪ್ರಶಸ್ತಿಯ ಸಾಧನೆ ಮೂಡಿಬಂದಿದೆ.
* 24 ರಾಷ್ಟ್ರೀಯ ಟೂರ್ನಿಗಳಲ್ಲಿ  ಜಯಿಸಿದ ಒಟ್ಟು ಟ್ರೋಫಿಗಳು
* 6 ರಾಷ್ಟ್ರೀಯ ಸೀನಿಯರ್‌ ಸ್ನೂಕರ್‌ನಲ್ಲಿ ಗೆದ್ದ ಪ್ರಶಸ್ತಿಗಳು
* 6 ರಾಷ್ಟ್ರೀಯ ಸೀನಿಯರ್‌ ಬಿಲಿಯರ್ಡ್ಸ್‌ ಟೂರ್ನಿಯಲ್ಲಿ ಜಯಿಸಿದ ಪ್ರಶಸ್ತಿಗಳು
* 7 ಬಾರಿ ಜೂನಿಯರ್‌ ಬಿಲಿಯರ್ಡ್ಸ್‌ ಟೂರ್ನಿಯಲ್ಲಿ ಚಾಂಪಿಯನ್‌ ಪಟ್ಟ ಪಡೆದುಕೊಂಡಿದ್ದಾರೆ.
* 4 ಬಾರಿ ಜೂನಿಯರ್‌ ಸ್ನೂಕರ್‌ ಚಾಂಪಿಯನ್‌ಷಿಪ್‌ನಲ್ಲಿ ಚಾಂಪಿಯನ್‌ ಆಗಿದ್ದಾರೆ.
* 3 ಬಾರಿ ಒಂದೇ ಋತುವಿನಲ್ಲಿ  ವಿಶ್ವ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ನ ಪಾಯಿಂಟ್ಸ್‌ ಮತ್ತು ಟೈಮ್‌ ಮಾದರಿಯಲ್ಲಿ ಟ್ರೋಫಿ ಎತ್ತಿಹಿಡಿದಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಏಕೈಕ ಆಟಗಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT