ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಮತ್ತು ವಾಸ್ತುಶಾಸ್ತ್ರ

ವಾಸ್ತು ಪ್ರಕಾರ
Last Updated 26 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು ಮಹಾನಗರದ ಆಡಳಿತಕ್ಕೆ ಸಂಬಂಧಿಸಿದಂತೆ ಹಲವು ಗೊಂದಲಗಳು ಉಂಟಾಗಿರುವ ಸಮಯವಿದು. ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿ ನೋಡಿ: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ’ಯ ಪುನರ್‌ ರಚನೆಗೆ ಸಂಬಂಧಿಸಿದಂತೆ ಅಧ್ಯಯನ ಸಮಿತಿ ತನ್ನ ಅಂತಿಮ ವರದಿಯನ್ನು ಇನ್ನೂ ನೀಡಿಲ್ಲ. ಆದರೆ, ಅದಕ್ಕೆ ಮೊದಲೇ ‘ಬಿಬಿಎಂಪಿ’ಯನ್ನು ಹೋಳು ಮಾಡುವ ಕುರಿತ ಮಾತುಗಳು ಚಾಲ್ತಿಯಲ್ಲಿವೆ. ಪಾಲಿಕೆಯನ್ನು ವಿಭಜಿಸುವ ಕುರಿತು ಸರ್ಕಾರವೂ ಉತ್ಸಾಹದಿಂದಿದೆ. ಈ ಉತ್ಸಾಹವನ್ನು ನೋಡಿ ಪಾಲಿಕೆಯನ್ನು ಎರಡು ಹೋಳುಗಳಾಗಿ ಕೆಲವರು, ಮೂರು ಹೋಳುಗಳಾಗಿ ಕೆಲವರು ಕಲ್ಪಿಸಿಕೊಳ್ಳುತ್ತಿದ್ದಾರೆ.

ಗೊಂದಲಗಳು ವಿಭಜನೆಯ ಮಾತಿಗಷ್ಟೇ ಮುಗಿದಿಲ್ಲ. ಮಹಾನಗರದ ಆಡಳಿತ ವ್ಯವಸ್ಥೆಯಲ್ಲಿ ‘ಬಿಡಿಎ’ ಇರಬೇಕೇ? ಇದ್ದರೆ ಇದೇ ರೂಪದಲ್ಲಿ ಇರಬೇಕಾ ಅಥವಾ ಅದರ ಸ್ವರೂಪ ಬದಲಾಗಬೇಕಾ ಎನ್ನುವ ಪ್ರಶ್ನೆಗಳೂ ಇವೆ. ಸದ್ಯಕ್ಕಂತೂ ಈ ಪ್ರಶ್ನೆಗಳಿಗೆ ಕೊನೆಯಿದ್ದಂತಿಲ್ಲ. ಅಂದಹಾಗೆ, ಬೆಂಗಳೂರಿನ ಈ ಸಮಸ್ಯೆಗಳಿಗೆಲ್ಲ ಏನು ಕಾರಣ? ‘ನಗರದ ವಾಸ್ತುವೇ ಸರಿ ಇಲ್ಲ ಸ್ವಾಮಿ’ ಎನ್ನೋದು ವಾಸ್ತು ತಜ್ಞರ ಅನಿಸಿಕೆ. ಮಹಾನಗರ ವಾಸ್ತುವಿನ ಬಗೆಗಿನ ಗೊಣಗಾಟ ಇದು ಮೊದಲೇನೂ ಅಲ್ಲ.

ವಾಸ್ತುಶಾಸ್ತ್ರಕ್ಕೂ ನಗರಕ್ಕೂ ಎತ್ತಣ ಸಂಬಂಧ ಎಂದು ಕೇಳಿದರೆ, ವಾಸ್ತುತಜ್ಞರು ಮನೆಯ ವಾಸ್ತುವನ್ನೇ ನಗರದ ಚೌಕಟ್ಟಿಗೂ ಅನ್ವಯಿಸುತ್ತಾರೆ. ಅವರ ಪ್ರಕಾರ, ಬೆಂಗಳೂರಿನ ದೇವಮೂಲೆಯಲ್ಲಿ ಬೆಳವಣಿಗೆ ಕುಂಠಿತ ಆಗಿರುವುದೇ ರಾಜಧಾನಿಯಲ್ಲಿನ ಎಲ್ಲ ಸಮಸ್ಯೆಗಳಿಗೂ ಮೂಲ ಕಾರಣ. ‘ಈಶಾನ್ಯ ಮೂಲೆ ಬೆಳೆಯಬೇಕು’ ಎನ್ನುವುದು ಮನೆ ಕಟ್ಟುವ ನಿಟ್ಟಿನಲ್ಲಿ ವಾಸ್ತುವಿನ ಪ್ರಾಥಮಿಕ ನಿಯಮ ಅಲ್ಲವೇ? ಇದೇ ನಿಯಮ ನಗರಕ್ಕೂ ಅನ್ವಯಿಸುತ್ತದಂತೆ. ಆದರೆ, ಬೆಂಗಳೂರಿನ ಈಶಾನ್ಯ ಮೂಲೆಯಲ್ಲಿ ಬೆಳವಣಿಗೆ ಕುಂಠಿತವಾಗಿದೆ. ಪ್ರಸ್ತುತ ನಾವು ಕಾಣುವ ರಾಜಕೀಯ ಹಾಗೂ ಸಾಮಾಜಿಕ ತಳಮಳಗಳಿಗೆಲ್ಲ ಈ ದೋಷವೇ ಕಾರಣವಂತೆ.

ನಗರದ ಆಗ್ನೇಯ ದಿಕ್ಕು ಸಿಕ್ಕಾಪಟ್ಟೆ ಬೆಳೆದಿದೆಯಂತೆ. ಇನ್ನು ಮುಂದೆ ಪೂರ್ವ, ಉತ್ತರ ಭಾಗಗಳನ್ನೊಳಗೊಂಡಂತೆ ಈಶಾನ್ಯ ದಿಕ್ಕಿಗೆ ನಗರ ಹೆಚ್ಚು ಬೆಳೆಯಬೇಕು ಎನ್ನುವುದು ವಾಸ್ತುಪ್ರಿಯರ ಅನಿಸಿಕೆ. ಅಂದರೆ, ಕೆ.ಆರ್‌. ಪುರಂ, ದೇವನಹಳ್ಳಿ ದಿಕ್ಕುಗಳಲ್ಲಿ ಬೆಳವಣಿಗೆ ತೀವ್ರಗೊಳ್ಳಬೇಕು ಎನ್ನುವ ಸೂಚನೆಯದು. ಹಾಗೆ ನೋಡಿದರೆ, ವಿಮಾನ ನಿಲ್ದಾಣ ದೇವನಹಳ್ಳಿ ಪರಿಸರದಲ್ಲಿ ರೂಪುಗೊಂಡ ಮೇಲೆ ಆ ದಿಕ್ಕಿನಲ್ಲಿನ ಬೆಳವಣಿಗೆ ವಾಯುವೇಗದಲ್ಲೇ ನಡೆದಿದೆ. ಯಲಹಂಕ, ರಾಜಾನುಕುಂಟೆ, ದೇವನಹಳ್ಳಿ ಫಾಸಲೆಯಲ್ಲಿ ಭೂಮಿಯ ಬೆಲೆಗೂ ಚಿನ್ನದ ಬೆಲೆಗೂ ವ್ಯತ್ಯಾಸವೇ ಉಳಿದಿಲ್ಲ. ದೊಡ್ಡಬಳ್ಳಾಪುರ, ಗೌರಿಬಿದನೂರುಗಳವರೆಗೂ ಬೆಂಗಳೂರಿನ ರಿಯಲ್‌ ಎಸ್ಟೇಟ್‌ ಕಾವು ತಗುಲಿದೆ.

ಕೆ.ಆರ್‌. ಪುರಂ ಆಸುಪಾಸಿನಲ್ಲೂ ಇನ್ನು ಬೆಳವಣಿಗೆಗೆ ಆಸ್ಪದವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಊರು ಬೆಳೆಯುತ್ತಿದೆ. ಈ ಬೆಳವಣಿಗೆಯನ್ನು ನೋಡಿದರೆ, ಬೆಂಗಳೂರಿನ ಈಶಾನ್ಯ ಮೂಲೆಯ ಬೆಳವಣಿಗೆ ತೀವ್ರವಾಗಿಯೇ ನಡೆಯುತ್ತಿದೆ ಎನ್ನಬೇಕು. ಈ ಬೆಳವಣಿಗೆಯ ವೇಗವನ್ನು ಗಮನಿಸಿದರೆ, ಮಹಾನಗರಕ್ಕೆ ತಗುಲಿದ ವಾಸ್ತುದೋಷ ನಿವಾರಣೆಯಾಗಿ ಸದ್ಯದಲ್ಲೇ ಒಳ್ಳೆಯ ದಿನಗಳು ಪ್ರಾರಂಭವಾಗಲಿವೆ ಎಂದು ನಿರೀಕ್ಷಿಸಬಹುದು. ವಾಸ್ತುವೋ ಅವಾಸ್ತುವೋ ಬೇರೆಯ ಮಾತು. ಒಳ್ಳೆಯದು ಯಾವ ರೂಪದಲ್ಲಾದರೂ ಬರಲಿ ಎನ್ನುವುದು ನಾಗರೀಕರ ಅಪೇಕ್ಷೆ.

ರಿಯಾಲ್ಟಿ ನಗೆಹನಿ
ಬಾರ್‌ನಲ್ಲಿ ಮಧ್ಯಮವಯಸ್ಕ ಸಜ್ಜನ ಕುಳಿತಿದ್ದ. ಸುಂದರ ಯುವತಿ ಗಜಗಮನೆಯಂತೆ ಅಲ್ಲಿಗೆ ಬಂದು, ಒಂದು ಸುತ್ತು ಕಣ್ಣಾಡಿಸಿ ಆ ಸಜ್ಜನರ ಬಳಿಗೆ ಬಂದಳು. ಉಳಿದವರು ಬಿಟ್ಟಕಣ್ಣು ಬಿಟ್ಟ ಹಾಗೆಯೇ ನೋಡುವಂತೆ ತುಸು ಬಾಗಿದ ಅವಳು ಸಜ್ಜನನ ಕಿವಿಯಲ್ಲಿ ಇಂತೆಂದಳು: ‘ಐವತ್ತು ಕೊಟ್ಟರೆ ಸಾಕು, ನಿಮಗಾಗಿ ಏನು ಬೇಕಾದರೂ ಮಾಡುತ್ತೇನೆ. ತುಸು ನೆತ್ತಿಗೆ ಹತ್ತಿದಂತೆ ನಟಿಸುತ್ತಾ ಆ ಸಜ್ಜನ ಮದ್ಯದ ಲೋಟವನ್ನು ಮೇಜಿನ ಮೇಲಿಟ್ಟು, ತನ್ನ ಜೇಬಿಗೆ ಕೈಹಾಕಿದ. ಹರಿದ, ಮಡಚಿದ ನೋಟುಗಳನ್ನು ತಡಕಿ, ಸೇರಿಸಿ ಅವಳ ಕೈಗಿತ್ತು ಹೇಳಿದ: ‘ನಡಿ ಹಾಗಿದ್ದರೆ... ನನ್ನ ಮನೆಯ ಗೋಡೆಗಳನ್ನು ಪೇಂಟ್ ಮಾಡು’.
....
ರಿಯಲ್ ಎಸ್ಟೇಟ್ ಏಜೆಂಟ್ ಫ್ಯಾಮಿಲಿ ಪ್ಲಾನಿಂಗ್‌ಗೆ ಏನು ಮಾಡುತ್ತಾನೆ?
ಉತ್ತರ: ತನ್ನ ವ್ಯಕ್ತಿತ್ವವನ್ನು ಬಳಸುತ್ತಾನೆ.
....
ಪೇಪರ್‌ನಲ್ಲಿ ಇದ್ದ ಪದಬಂಧವನ್ನು ಪೂರ್ಣಗೊಳಿಸಲು ಒಂಬತ್ತು ದಿನಗಳನ್ನು ತೆಗೆದುಕೊಂಡ ರಿಯಲ್ ಎಸ್ಟೇಟ್ ಏಜೆಂಟ್ ನಕ್ಕಿದ್ದು ಯಾಕೆ?
ಯಾಕೆಂದರೆ, ಆ ಇಂಗ್ಲಿಷ್ ಪದಬಂಧದ ಸೂಚನೆಗಳಲ್ಲಿ 8ರಿಂದ 12 ವರ್ಷದವರಿಗೆ ಎಂದಿತ್ತು. ಅದನ್ನು ಆ ವ್ಯಕ್ತಿ ಪದಬಂಧ ಪೂರೈಸಲು ಇರುವ ಅವಧಿ ಎಂದು ತಪ್ಪಾಗಿ ಓದಿಕೊಂಡಿದ್ದ.

ಅಪಾರ್ಟ್‌ಮಿಂಟು
ಸೈಕಲ್‌ ಹೊಡೆಯುವುದು ಇನ್ಫೊಸಿಸ್ ಕಚೇರಿ ಆವರಣದಲ್ಲಿ ಒಂದು ಕಟ್ಟಡದಿಂದ ಇನ್ನೊಂದನ್ನು ತಲುಪಲು ಸೈಕಲ್ ಬಳಸುವ ನೌಕರರು ಬಹಳ ಹಿಂದೆ ಅದನ್ನು ರೋಚಕ ಕಥೆ ಎನ್ನುವಂತೆ ಹೇಳಿಕೊಳ್ಳುತ್ತಿದ್ದರು. ಈಗ ಲಂಡನ್‌ನಲ್ಲಿ ಫಾಸ್ಟರ್+ಪಾರ್ಟ್‌ನರ್ಸ್ ಕಟ್ಟಿರುವ ಅಪಾರ್ಟ್‌ಮೆಂಟ್‌ಗಳ ಕುರಿತು ಜನರು ಮಾತನಾಡುತ್ತಿರು ವುದಕ್ಕಿಂತ ಹೆಚ್ಚಾಗಿ ಅಲ್ಲಿ ಸೈಕಲ್ ಬಳಕೆಗೆ ನೀಡಿರುವ ಆದ್ಯತೆಯನ್ನೇ ಬಣ್ಣಿಸತೊಡಗಿದ್ದಾರೆ. ಅಲ್ಲಿ 930 ಅಪಾರ್ಟ್‌ಮೆಂಟ್‌ಗಳಿವೆ. 200 ಕಾರುಗಳನ್ನು ನಿಲ್ಲಿಸಲಷ್ಟೇ ಸ್ಥಳಾವಕಾಶವಿದ್ದು, 1486 ಸೈಕಲ್‌ಗಳನ್ನು ನಿಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. 32ರಿಂದ 46ನೇ ಅಂತಸ್ತಿನಲ್ಲಿ ವಾಸ ಮಾಡುವವರಿಗೆಂದೇ ವಿಶೇಷ ಸೈಕಲ್ ಬಳಕೆಯ ಕಾರ್ಯಾಗಾರವನ್ನೂ ಅಲ್ಲಿ ಏರ್ಪಡಿಸಲಾಗಿತ್ತು. ಸೈಕಲ್‌ಗಳನ್ನು ಮೊದಲ ಮಹಡಿಯಲ್ಲಿರುವ ಸಂಗ್ರಹಾಗಾರದಲ್ಲಿ ನಿಲ್ಲಿಸುವ ಸೌಲಭ್ಯವಿದೆ. ನಿಲ್ಲಿಸಿದಾಗ ಒಂದಕ್ಕೊಂದು ತಾಗಿ ಹಾಳಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಸೆಲಾರ್‌ನಿಂದ ಮೊದಲ ಮಹಡಿಗೆ ಸೈಕಲ್‌ಗಳನ್ನು ಸಾಗಿಸಲೆಂದೇ ಪ್ರತ್ಯೇಕ ಲಿಫ್ಟ್ ಕೂಡ ಅಲ್ಲಿದೆ. ಅಪಾರ್ಟ್‌ಮೆಂಟ್‌ನಲ್ಲಿ ಇರುವ ಕೆಫೆ, ರೆಸ್ಟೋರೆಂಟ್‌ಗಳು ಎಲ್ಲಾ ಕಡೆಗೆ ಜನರು ಓಡಾಡಲು ಸೈಕಲ್‌ಗಳನ್ನೇ ಹೆಚ್ಚಾಗಿ ಬಳಸುವ ಅನಿವಾರ್ಯವನ್ನು ಅಪಾರ್ಟ್‌ಮೆಂಟ್ ಮಾಲೀಕರು ಸೃಷ್ಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT