ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಮ್ಯಾರಥಾನ್‌: ಮಿಂಚಿದ ಸುಧಾ ಸಿಂಗ್‌

Last Updated 19 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ತೀರಥ್‌ ಕುಮಾರ್ ಮತ್ತು ಶಾಮಿಲಿ ಸಿಂಗ್‌ ಅವರು ಬೆಂಗಳೂರು ಮ್ಯಾರಥಾನ್‌ನಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಅಗ್ರಸ್ಥಾನ ತಮ್ಮದಾಗಿಸಿಕೊಂಡರು.

ಭಾನುವಾರ ಬೆಳಿಗ್ಗೆ ತಂಪಾದ ವಾತಾವರಣದಲ್ಲಿ ನಡೆದ ಸ್ಪರ್ಧೆಯಲ್ಲಿ ತೀರಥ್‌ ನಿಗದಿತ ದೂರವನ್ನು (42.195 ಕಿ.ಮೀ) ಎರಡು ಗಂಟೆ 25 ನಿಮಿಷ ಮತ್ತು 51 ಸೆಕೆಂಡ್‌ಗಳಲ್ಲಿ ಕ್ರಮಿಸಿದರು. ಮಹಿಳೆಯರ ವಿಭಾಗದಲ್ಲಿ ಚಿನ್ನ ಗೆದ್ದ ಶಾಮಿಲಿ ಈ ದೂರವನ್ನು ಕ್ರಮಿಸಲು ಮೂರು ಗಂಟೆ 16 ನಿಮಿಷ ಮತ್ತು 18 ಸೆಕೆಂಡ್‌ಗಳನ್ನು ತೆಗೆದುಕೊಂಡರು. 

ವಿದೇಶದ ಅಥ್ಲೀಟ್‌ಗಳು ಮತ್ತು ರಾಷ್ಟ್ರದ ಪ್ರಮುಖ ಸ್ಪರ್ಧಿಗಳು ಪಾಲ್ಗೊಳ್ಳದ ಕಾರಣ ಮ್ಯಾರಥಾನ್‌ ನೀರಸವಾಗಿ ಕಂಡಿತು. ಕಂಠೀರವ ಕ್ರೀಡಾಂಗಣದಲ್ಲಿ ಆರಂಭವಾಗಿ ನಗರದ ವಿವಿಧ ರಸ್ತೆಗಳ ಮೂಲಕ ಸಾಗಿದ ಓಟ ಕಂಠೀರವ ಕ್ರೀಡಾಂಗಣದಲ್ಲೇ ಮುಕ್ತಾಯ ಕಂಡಿತು.

‘ಇಲ್ಲಿ ಅಗ್ರಸ್ಥಾನ ಪಡೆಯುವ ಉತ್ತಮ ಅವಕಾಶವಿದೆ ಎಂದು ಭಾವಿಸಿದ್ದೆ. ಆದ್ದರಿಂದ ಆರಂಭದಿಂದಲೇ ಆತ್ಮವಿಶ್ವಾಸದಿಂದ ಓಡಲು ಸಾಧ್ಯವಾಯಿತು. ಇಲ್ಲಿನ ವಾತಾವರಣ ಕೂಡಾ ಹಿತಕರವಾಗಿತ್ತು. ಈ ಪ್ರದರ್ಶನ ನನಗೆ ತೃಪ್ತಿ ನೀಡಿದೆ’ ಎಂದು ಗೂರ್ಖಾ ರೆಜಿಮೆಂಟ್‌ನಲ್ಲಿರುವ ತೀರಥ್‌ ಸ್ಪರ್ಧೆಯ ಬಳಿಕ ಪ್ರತಿಕ್ರಿಯಿಸಿದ್ದಾರೆ.

ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡಿದ್ದ ತೀರಥ್‌ಗೆ ಇತರ ಸ್ಪರ್ಧಿಗಳಿಂದ ತಕ್ಕ ಪೈಪೋಟಿ ಎದುರಾಗಲಿಲ್ಲ. ಕೃಷ್ಣ ಸಿಂಗ್‌ ಮತ್ತು ನೀರಜ್‌ ಪಾಲ್‌ ಸಿಂಗ್‌ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದುಕೊಂಡರು.

ಮಹಿಳೆಯರ ವಿಭಾಗದಲ್ಲಿ ಶಾಮಿಲಿ ಸಿಂಗ್‌ ಗೆಲುವು ಪಡೆದು ಅಚ್ಚರಿ ಉಂಟುಮಾಡಿದರು. ಸುಧಾ ವಿಜ್‌ ಎರಡನೇ ಸ್ಥಾನ ಪಡೆದುಕೊಂಡರೆ, ಇಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಓಟಗಾರ್ತಿ ಎನಿಸಿಕೊಂಡಿದ್ದ ಜಿ. ಜ್ಯೋತಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಹಾಫ್‌ ಮ್ಯಾರಥಾನ್‌ (21.195  ಕಿ.ಮೀ) ಸ್ಪರ್ಧೆಯಲ್ಲಿ ಪುರುಷರ ವಿಭಾಗದ ಪ್ರಶಸ್ತಿಯನ್ನು ದಾಸರಿ ವಾಸು ತಮ್ಮದಾಗಿಸಿಕೊಂಡರು. ಅವರು ಒಂದು ಗಂಟೆ 11 ನಿಮಿಷ 57 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ನಿರ್ಮಲ್ ಕುಮಾರ್‌ ಮತ್ತು ಬಿ.ಸಿ. ತಿಲಕ್‌ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದುಕೊಂಡರು.

ಮಹಿಳೆಯರ ವಿಭಾಗದಲ್ಲಿ ಸುಧಾ ಸಿಂಗ್‌ (1:18.23 ಸೆ.) ಚಿನ್ನ ಗೆದ್ದರೆ, ಎಲ್‌. ಸೂರ್ಯ ಹಾಗೂ ಕವಿತಾ ರಾವತ್‌ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಪಡೆದುಕೊಂಡರು. ಪ್ರಸಕ್ತ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಸುಧಾ ನಿರೀಕ್ಷೆಯಂತೆಯೇ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡರು.

ಫಲಿತಾಂಶ ಇಂತಿದೆ: ಫುಲ್‌ ಮ್ಯಾರಥಾನ್‌: ಪುರುಷರ ವಿಭಾಗ: ತೀರಥ್‌ ಕುಮಾರ್‌ (ಸಮಯ: 2 ಗಂಟೆ 25 ನಿಮಿಷ51 ಸೆಕೆಂಡ್‌)–1, ಕೃಷ್ಣ ಸಿಂಗ್‌ (2:26.07)–2, ನೀರಜ್‌ ಪಾಲ್‌ ಸಿಂಗ್‌ (2:27.03)–3
ಮಹಿಳೆಯರ ವಿಭಾಗ: ಶಾಮಿಲಿ ಸಿಂಗ್‌ (3:16.18)–1, ಸುಧಾ ವಿಜ್‌ (3:17.20)–2, ಜ್ಯೋತಿ ಜಿ. (3:29.09)–3

ಹಾಫ್‌ ಮ್ಯಾರಥಾನ್‌: ಪುರುಷರ ವಿಭಾಗ: ದಾಸರಿ ವಾಸು (1:11:57)–1, ನಿರ್ಮಲ್‌ ಕುಮಾರ್‌ (1:12.10)–2, ಬಿ.ಸಿ. ತಿಲಕ್‌ (1:12.18)–3 

ಮಹಿಳೆಯರ ವಿಭಾಗ: ಸುಧಾ ಸಿಂಗ್‌ (1:18.23)–1, ಎಲ್‌. ಸೂರ್ಯ (1:19.12), ಕವಿತಾ ರಾವತ್‌ (1:120.26)–3

ಓಪನ್‌ ವಿಭಾಗ: ಫುಲ್‌ ಮ್ಯಾರಥಾನ್‌;  ಪುರುಷರು: ರಾಜಾ (2:34.28)–1, ಜಗದೀಶನ್‌ (2:39.33)–2, ಪ್ರಕಾಶ್‌ ಡಿ. (2:55.02)–3 ಮಹಿಳೆಯರು: ಈವ್‌ ಬಗ್ಲೆರ್‌ (3:39.57)–1, ಎಲಿಜಬೆತ್‌ ಚಾಪ್ಮನ್‌ (3:34.06)–2, ಭಗವತಿ (3:51.48)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT