ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಿಭಜನೆ ಕೈಬಿಡಲು ಆಗ್ರಹ

ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯ ಅಂಗೀಕಾರ
Last Updated 6 ಮೇ 2015, 20:04 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ವಿಭಜನೆಯ ವಿಚಾರವನ್ನು ಸರ್ಕಾರ ಕೈಬಿಡುವುದು ಸೇರಿದಂತೆ ಒಟ್ಟು ಐದು ನಿರ್ಣಯಗಳನ್ನು ಒಂಬತ್ತನೇ ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬುಧವಾರ ಅಂಗೀಕರಿಸಲಾಯಿತು.

ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಬುಧವಾರ ನಡೆದ ಬಹಿರಂಗ ಅಧಿವೇಶನದಲ್ಲಿ ಸಮ್ಮೇಳನದ ಅಧ್ಯಕ್ಷ ಜಿ. ರಾಮಕೃಷ್ಣ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಶ್‌ ಅವರ ಉಪಸ್ಥಿತಿಯಲ್ಲಿ ನಿರ್ಣಯಗಳನ್ನು ಅಂಗೀಕರಿಸಲಾಯಿತು.

ಪದಾಧಿಕಾರಿಯಾದ ನಂ. ನಂಜಪ್ಪ ಅವರು ನಿರ್ಣಯಗಳನ್ನು ಮಂಡಿಸಿದರು. ಐದೂ ನಿರ್ಣಯಗಳ ವಿವರ ಇಂತಿದೆ.

1. ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರಿಗೆ ವಿಶ್ವಮಟ್ಟದಲ್ಲಿ ವಿಶಿಷ್ಟ ಸ್ಥಾನವಿದೆ. ಅದನ್ನು ವಿಭಜಿಸುವ ಸರ್ಕಾರದ ನಿರ್ಧಾರ ಒಂದು ದೊಡ್ಡ ಪರಂಪರೆಗೆ ಅಪಚಾರ ಎಸಗಿದಂತೆ ಆಗುತ್ತದೆ. ಅಲ್ಲದೇ ಇದು ಕನ್ನಡಿಗರ ಧ್ವನಿಯನ್ನು ಕುಗ್ಗಿಸುತ್ತದೆ. ಹಾಗಾಗಿ ಸರ್ಕಾರ ಬೆಂಗಳೂರು ವಿಭಜನೆಯ ವಿಷಯವನ್ನು ಕೈಬಿಡಬೇಕು.

2. ಬೆಂಗಳೂರಿನಲ್ಲಿ ಕನ್ನಡದ ವಾತಾವರಣ ಕ್ಷೀಣಿಸುತ್ತಿದೆ ಎನ್ನುವ ಆತಂಕ ಎಲ್ಲರನ್ನು ಕಾಡುತ್ತಿದೆ. ಸರ್ಕಾರ ನಗರದ ಎಲ್ಲ ಅಂಗಡಿ–ಮುಂಗಟ್ಟು, ಸಾರ್ವಜನಿಕ ಸಂಸ್ಥೆಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಪ್ರಧಾನ ಸ್ಥಾನ ಇರುವಂತೆ ಕಡ್ಡಾಯಗೊಳಿಸಿ ಮರು ಆದೇಶ ಹೊರಡಿಸಬೇಕು.

3. ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗ ಅವಕಾಶ ಕಡ್ಡಾಯಗೊಳಿಸುವ ಡಾ. ಸರೋಜಿನಿ ಮಹಿಷಿ ವರದಿ
ಯನ್ನು ಇಂದಿನ ಕಾಲಮಾನಕ್ಕೆ ಅನುಗುಣವಾಗಿ ಪರಿಷ್ಕರಿಸಬೇಕು. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ  ಕ್ಷೇತ್ರ ಸೇರಿದಂತೆ ಎಲ್ಲ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಿಡಲು ಸರ್ಕಾರ ಕ್ರಮ ಕೈಗೊಳ್ಳಬೇಕು.

4. ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧಿಸುತ್ತಿರುವುದು ದುರದೃಷ್ಟಕರ. ಕುಡಿಯುವ ನೀರಿಗೆ ಆದ್ಯತೆ ಇರಬೇಕೆಂದು ರಾಷ್ಟ್ರೀಯ ಜಲ ನೀತಿ ಹೇಳುತ್ತದೆ. ಈ ನಿಟ್ಟಿನಲ್ಲಿ ರಾಜ್ಯದ ಸಂಸದರೆಲ್ಲ ಒಟ್ಟಾಗಿ ಕೇಂದ್ರ ಸರ್ಕಾರದಿಂದ ಮೇಕೆದಾಟು ಯೋಜನೆಗೆ ಅನುಮತಿ ದೊರಕಿಸಿಕೊಡಲು ಶ್ರಮಿಸಬೇಕು.

5. ದೇಸಿಯ ಭಾಷೆ ಮತ್ತು ಸಂಸ್ಕೃತಿಗಳ ಸಂರಕ್ಷಣೆಗಾಗಿ ಶೆಡ್ಯೂಲ್‌–8ರಲ್ಲಿರುವ ಎಲ್ಲ ಭಾಷೆಗಳನ್ನು ಪ್ರಾಥ
ಮಿಕ ಶಿಕ್ಷಣದಲ್ಲಿ ಕಡ್ಡಾಯಗೊಳಿಸುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ರೂಪಿಸಬೇಕು.

ನಿರ್ಣಯ ಮಂಡನೆಗೆ ಆಕ್ಷೇಪ
ಸಮ್ಮೇಳನದಲ್ಲಿ ನಿರ್ಣಯ ಮಂಡಿಸುವಾಗ ಸಾಹಿತ್ಯ ಅಭಿಮಾನಿಯೊಬ್ಬರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆಯಿತು.

ನಂ. ನಂಜಪ್ಪ ಅವರು ನಿರ್ಣಯಗಳನ್ನು ಮಂಡಿಸಲು ಶುರು ಮಾಡುತ್ತಿದ್ದಂತೆ ಸಭಿಕರ ಸಾಲಿನಲ್ಲಿ ಕುಳಿತಿದ್ದ ಬಸವರಾಜ ದಿಂಡೂರ್‌ ಅವರು ಎದ್ದು ನಿಂತು, ‘ನಿರ್ಣಯ ಮಂಡಿಸುವುದು ಬೇಡ. ನಿರ್ಣಯಗಳು ಜಾರಿಯಾಗುವುದಾದರೆ ಮಾತ್ರ ಅವುಗಳನ್ನು ಮಂಡಿಸಿ’ ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ನಗರ ಜಿಲ್ಲಾ ಕಸಾಪ ಅಧ್ಯಕ್ಷ ಟಿ. ತಿಮ್ಮೇಶ್‌ ಅವರು ಮಧ್ಯ ಪ್ರವೇಶಿಸಿದರು. ‘ನಿರ್ಣಯಗಳನ್ನು ಶಾಸನಬದ್ಧಗೊಳಿಸುವ ಅಧಿಕಾರ ಪರಿಷತ್ತಿಗೆ ಇಲ್ಲ’ ಎಂದು ಸಮಜಾಯಿಷಿ ನೀಡಿದರು. ಆದರೂ ಅವರ ಮಾತಿಗೆ ಬಸವರಾಜ
ಅವರು ಸಂತೃಪ್ತರಾಗಲಿಲ್ಲ. ಆದರೆ, ಬಹುತೇಕ ಸಭಿಕರು ನಿರ್ಣಯ ಮಂಡಿಸಿ ಎಂದು ಒತ್ತಾಯ ಮಾಡಿದ್ದರಿಂದ ನಂಜಪ್ಪ ಅವರು ಆ ಪ್ರಕ್ರಿಯೆ ಪೂರ್ಣಗೊಳಿಸಿದರು.

ನಿರ್ಣಯಕ್ಕೆ ಸೇರಿಸಲು ಸಲಹೆ
‘ಬೆಂಗಳೂರಿನ ಹೊಸ ಬಡಾವಣೆಗಳಲ್ಲಿ ಉತ್ತರ ಭಾರತಕ್ಕೆ ಸೇರಿದವರ ಅನೇಕ ಕಂಪೆನಿಗಳಿವೆ. ಅಲ್ಲಿ ಯಾರಿಗೂ ಕನ್ನಡ ಮಾತನಾಡಲು ಬರುವುದಿಲ್ಲ. ನಾಲ್ಕನೇ ದರ್ಜೆ ಸೇರಿದಂತೆ ಇತರ ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡಬೇಕು’ ಎನ್ನುವ ವಿಷಯವನ್ನು ಸಮ್ಮೇಳನ ಕೈಗೊಂಡಿರುವ ನಿರ್ಣಯಗಳಲ್ಲಿ ಸೇರಿಸಲು ಪರಿಶೀಲಿಸಬೇಕು’ ಎಂದು ಕವಿ  ಮೂಡ್ನಾಕೂಡು ಚಿನ್ನಸ್ವಾಮಿ ಅವರು ಸಲಹೆ ಮಾಡಿದರು.

ಬಹಿರಂಗ ಅಧಿವೇಶನದ ನಂತರ ನಡೆದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ವೇಳೆ ಈ ಸಲಹೆ ನೀಡಿದರು.
‘ಇದು ಉಪಯುಕ್ತ ಸಲಹೆಯಾಗಿದೆ. ಹಿರಿಯರ ಸಲಹೆ ಪಡೆದು ನಿರ್ಧಾರಕ್ಕೆ ಬರಲಾಗುವುದು’ ಎಂದು ನಗರ ಜಿಲ್ಲಾ ಕಸಾಪ ಅಧ್ಯಕ್ಷ ತಿಮ್ಮೇಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT