ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಹೃದಯ ಚೆನ್ನೈಗೆ

Last Updated 19 ಡಿಸೆಂಬರ್ 2014, 20:17 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಮಣಿಪಾಲ್‌ ಆಸ್ಪತ್ರೆಯಿಂದ ಚೆನ್ನೈನ ಫೋರ್ಟಿಸ್‌ ಆಸ್ಪತ್ರೆಗೆ ವಿಶೇಷ ವಿಮಾನದ ಮೂಲಕ  ಶುಕ್ರವಾರ ‘ಹೃದಯ’ವನ್ನು ಸಾಗಿಸಲಾಯಿತು.

ನಗರದ ಸಾಫ್ಟ್‌ವೇರ್ ಕಂಪೆನಿ­ಯೊಂದ­ರ ಎಂಜಿನಿಯರ್ ಅಮಿತ್ ಉಪಾಧ್ಯಾಯ ಅವರ ಎರಡು ವರ್ಷ 10 ತಿಂಗಳ ಮಗ ಯತಾರ್ಥ್ ಮಿದುಳು ಜ್ವರದಿಂದ ಬಳಲುತ್ತಿದ್ದ. ಗುರುವಾರ ರಾತ್ರಿ ಆತನ ಮಿದುಳು ನಿಷ್ಕ್ರಿಯ­ಗೊಂಡಿತ್ತು. ನಂತರ ಪೋಷ ಕರು ಮಗು­ವಿನ ಹೃದಯವನ್ನು  ದಾನ ಮಾಡಿದ್ದರು.

ಮಣಿಪಾಲ್ ಆಸ್ಪತ್ರೆಯಿಂದ ಚೆನ್ನೈನ ಫೋರ್ಟಿಸ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಅಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಎರಡು ವರ್ಷ 8 ತಿಂಗಳ ಮಗುವಿಗೆ ಅಳವಡಿಸಲಾಗಿದೆ.

ಹೃದಯ ಚೆನ್ನೈಗೆ ಶೀಘ್ರದಲ್ಲಿಯೇ ತಲುಪುವಲ್ಲಿ ಸಂಚಾರ ಪೊಲೀಸರು ಪ್ರಮುಖ ಪಾತ್ರ ವಹಿಸಿದ್ದಾರೆ. ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿನ ಮಣಿಪಾಲ್‌ ಆಸ್ಪತ್ರೆಯಿಂದ ಚೆನ್ನೈಗೆ ಹೃದಯ ಸಾಗಿಸುವ ವೇಳೆ ಸಂಚಾರ ಸಮಸ್ಯೆ ಎದುರಾಗದಂತೆ ಸಂಚಾರ ಪೊಲೀಸರು ಎಚ್‌ಎಎಲ್‌ ವಿಮಾನ ನಿಲ್ದಾಣದ ವರೆಗೂ ‘ಸಿಗ್ನಲ್ ಮುಕ್ತ­ಗೊಳಿಸುವ ಯೋಜನೆ’ ರೂಪಿಸಿದ್ದರು.

‘ಕೂಡಲೇ ಸಿದ್ಧತೆ’

ಹೃದಯ ರವಾನೆಯಾಗುವ ಬಗ್ಗೆ ಆಸ್ಪತ್ರೆಯಿಂದ ಮಾಹಿತಿ ಬಂದ ಕೂಡಲೇ ಸಿದ್ಧತೆಗಳನ್ನು ಕೈಗೊಳ್ಳ­ಲಾಯಿತು. ಮಣಿಪಾಲ್ ಆಸ್ಪತ್ರೆ­ಯಿಂದ ಎಚ್‍ಎಎಲ್ ವಿಮಾನ ನಿಲ್ದಾಣ­ದವರೆಗಿನ 3 ಕಿ.ಮೀ ವ್ಯಾಪ್ತಿ­ಯನ್ನು ಆಂಬ್ಯುಲೆನ್ಸ್ ಕೇವಲ 1 ನಿಮಿಷ 22 ಸೆಕೆಂಡ್‌ಗಳಲ್ಲಿ ತಲುಪಿದೆ.
– ಎಂ.ಎನ್.ಬಾಬುರಾಜೇಂದ್ರ ಪ್ರಸಾದ್,- ಡಿಸಿಪಿ, ಪೂರ್ವ ಸಂಚಾರ ವಿಭಾಗ

ಅಂಗಾಂಗ ಕಸಿಗಾಗಿನ ಕರ್ನಾಟಕ ವಲಯ ಸಮನ್ವಯ ಸಮಿತಿ (ಜಡ್‌ಸಿ ಸಿಕೆ): ಅಂಗಾಂಗಗಳು ಬೇಕಾಗಿರುವ ವ್ಯಕ್ತಿಗಳ ಹಾಗೂ ದಾನಿಗಳ ನಡುವೆ ಕೊಂಡಿಯಂತೆ ಕಾರ್ಯನಿರ್ವಹಿ­ಸುತ್ತಿರುವ ಕರ್ನಾಟಕ ಕಸಿ ಸಮನ್ವಯ ಸಮಿತಿ (ಜಡ್‌ಸಿಸಿಕೆ) ಚೆನ್ನೈಗೆ ಹೃದಯ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

‘ಚೆನ್ನೈನಲ್ಲಿನ ಎರಡು ವರ್ಷ 8 ತಿಂಗಳ ಮಗುವಿಗೆ ಹೃದಯ ಅವಶ್ಯಕತೆ ಇರುವ ಬಗ್ಗೆ ಮಾಹಿತಿ ಪಡೆಯಲಾಗಿತ್ತು. ಇದೇ ವೇಳೆ ಗುರುವಾರ ರಾತ್ರಿ ಮಣಿಪಾಲ್ ಆಸ್ಪತ್ರೆಯಲ್ಲಿ ಮಗುವಿನ ಮಿದುಳು ನಿಷ್ಕ್ರಿಯ ಗೊಂಡಿರುವ ವಿಷಯ ತಿಳಿಯಿತು. ಕೂಡಲೇ ಕಾರ್ಯೋನ್ಮುಖರಾಗಿ ಮಗುವಿನ ಪೋಷಕರನ್ನು ಸಂಪರ್ಕಿಸಿ ಹೃದಯ ದಾನ ಮಾಡುವಂತೆ ಕೋರ ಲಾಯಿತು. ಪೋಷಕರು ಸಕಾರಾತ್ಮಕವಾಗಿ ಸ್ಪಂದಿಸಿ ದರು’ ಎಂದು ಜಡ್‌ಸಿಸಿಕೆ ಮುಖ್ಯ  ಸಂಯೋಜಕಿ ಕೆ.ಯು.ಮಂಜುಳಾ ತಿಳಿಸಿದ್ದಾರೆ.

‘ಗುರುವಾರ ರಾತ್ರಿಯಿಂದಲೇ ಚೆನ್ನೈಗೆ ಹೃದಯ ಕಳುಹಿಸುವ ಕಾರ್ಯಾಚರಣೆ ಕೈಗೊಳ್ಳಲಾಯಿತು. ಬೆಳಿಗ್ಗೆ ಮಗುವಿನ ಹೃದಯವನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದು ಕಳುಹಿಸಲಾಯಿತು’ ಎಂದರು.

‘ನನ್ನ ಸೌಭಾಗ್ಯ’

ಜೀವ ಉಳಿಸುವುದು ನನ್ನ ವೃತ್ತಿ ಧರ್ಮ, ಅದನ್ನು ಮಾಡಿದ್ದೇನೆ. ಮಗು­ವಿನ ಹೃದಯ ಕಳುಹಿಸಿ­ಕೊಡುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. 
- – ಹರೀಶ್‌, ಆಂಬ್ಯುಲೆನ್ಸ್ ಚಾಲಕ

ಡಿ.14ರಂದು ಆಸ್ಪತ್ರೆಗೆ ದಾಖಲು: ಯಥಾರ್ಥ್‌, ಜ್ವರದಿಂದ ಬಳಲುತ್ತಿದ್ದುದರಿಂದ ಪೋಷಕರು ಮೊದಲು ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊ­ಯ್ದಿದ್ದಾರೆ. ಆದರೆ, ಅಲ್ಲಿ ಸೂಕ್ತ ಚಿಕಿತ್ಸೆ ಲಭಿಸದ ಕಾರಣ ಡಿ.14ರಂದು ಮಣಿಪಾಲ್ ಆಸ್ಪತ್ರೆಗೆ ಕರೆತರಲಾಗಿತ್ತು.

ಈ ಬಗ್ಗೆ ಮಾತನಾಡಿದ ಮಣಿಪಾಲ್ ಆಸ್ಪತ್ರೆಯ ನಿರ್ದೇಶಕ ಡಾ. ಸುದರ್ಶನ ಬಲ್ಲಾಳ್, ‘ಆಸ್ಪತ್ರೆಗೆ ಮಗುವನ್ನು ಕರೆತಂದಾಗಲೇ ಸ್ಥಿತಿ ಗಂಭೀರವಾಗಿತ್ತು. ಆದರೂ, ವೈದ್ಯರು ಮಗುವನ್ನು ಬದುಕುಳಿಸಲು ಸಾಕಷ್ಟು ಪ್ರಯತ್ನ ಮಾಡಿದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮಗುವಿನ ಮಿದುಳು ನಿಷ್ಕ್ರಿಯಗೊಂಡಿತು’ ಎಂದು ಹೇಳಿದರು.

ಹೀಗಾದರೂ ಜೀವಂತ ಇರುತ್ತಾನೆ:  ನಮ್ಮ ಮಗ ಇನ್ನು ಉಳಿಯುವುದಿಲ್ಲ ಎಂಬುದು ಖಚಿತವಾಯಿತು. ನನ್ನ ಮಗ ನನಗೆ ಸಿಗುವುದಿಲ್ಲ ಎಂದು ದುಃಖಿಸು ತ್ತಿರುವಾಗ ಮತ್ತೊಂದು ಮಗುವಿಗೆ ಹೃದಯ ಬೇಕಾಗಿದೆ ಎಂಬ ವಿಷಯ ತಿಳಿಯಿತು. ನನ್ನ ಮಗನ ಹೃದಯ ಬೇರೆಯವರ ಮಗನ ಪ್ರಾಣ ಉಳಿಸುತ್ತದೆ ಎನ್ನುವು ದಾದರೆ ದಾನ ಮಾಡುವುದರಲ್ಲಿ ತಪ್ಪೇನಿಲ್ಲ ಎನಿಸಿ ದಾನ ಮಾಡಿದೆ ಎಂದು ಮಗುವಿನ ತಂದೆ ಅಮಿತ್ ಉಪಾಧ್ಯಾಯ ಹೇಳಿದ್ದಾರೆ.

ಹೃದಯ ಕಸಿ ಮಾಡಿರುವ ಉದಾಹರಣೆಗಳು ದೇಶದಲ್ಲಿ ಸಾಕಷ್ಟಿವೆ. ಆದರೆ, ಪುಟ್ಟ ಹೃದಯ ವನ್ನು ಕಸಿ ಮಾಡಿರುವ ಘಟನೆ ರಾಜ್ಯದಲ್ಲಿಯೇ ಇದೇ ಮೊದಲು.

– ಕೆ.ಯು. ಮಂಜುಳಾ, ಜಡ್‌ಸಿಸಿಕೆ,
ಮುಖ್ಯ ಸಂಯೋಜಕರು

ಚೆನ್ನೈನ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 2 ವರ್ಷ ಎಂಟು ತಿಂಗಳ ಮಗುವಿಗೆ ಹೃದಯವನ್ನು ಅಳವ ಡಿಸಲಾಗಿದೆ. ಚೆನ್ನೈ ಫೋರ್ಟಿಸ್ ಆಸ್ಪತ್ರೆಯ ಹೃದ್ರೋಗ ವಿಜ್ಞಾನ ವಿಭಾಗದ ನಿರ್ದೇಶಕ ಡಾ.ಕೆ.­ಆರ್.ಬಾಲಕೃಷ್ಣನ್ ನೇತೃತ್ವದ ತಜ್ಞ ವೈದ್ಯರ ತಂಡವು  ಶಸ್ತ್ರಚಿಕಿತ್ಸೆ ನಡೆಸಿ ಮಗುವಿಗೆ ಹೃದಯ ಜೋಡಿಸಿದೆ.

ನಾಲ್ಕು ತಿಂಗಳ ಹಿಂದೆಯೂ ಹೃದಯ ರವಾನೆ:  ನಾಲ್ಕು ತಿಂಗಳ ಹಿಂದೆ ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ಯಿಂದ ಚೆನ್ನೈನ ಫೋರ್ಟಿಸ್‌ ಆಸ್ಪತ್ರೆಗೆ ‘ಹೃದಯ’ವನ್ನು ಸಾಗಿಸ­ಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT