ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಡೆಕಾಯಿ ಔಷಧವೂ ಹೌದು!

Last Updated 3 ಜುಲೈ 2015, 19:30 IST
ಅಕ್ಷರ ಗಾತ್ರ

ಎಲ್ಲ ವಿಧದ ಪದಾರ್ಥಗಳಿಗೂ ಒಗ್ಗಬಲ್ಲ ತರಕಾರಿಗಳ ಸಾಲಿಗೆ ಸೇರುವ ಬೆಂಡೆಕಾಯಿಯಿಂದ ಸಾರು, ಪಲ್ಯ, ಸಾಂಬಾರು, ಮಜ್ಜಿಗೆಹುಳಿ, ಬೋಂಡಾ ಮುಂತಾದ ಹಲವು ವಿಧದ ಮೇಲೋಗರಗಳನ್ನು ತಯಾರಿಸಬಹುದು. ಹಸಿಯಾಗಿ ಸಲಾಡ್ ಮಾಡಲೂ ಯೋಗ್ಯವಾಗಿದೆ.

ಅದು ಅತ್ಯಂತ ಶಕ್ತಿದಾಯಕವಾದ ತರಕಾರಿಯಷ್ಟೇ ಅಲ್ಲ, ಮನೆಯ ಔಷಧವೂ ಹೌದು. ಕಾಳುಮೆಣಸು, ಶುಂಠಿ, ಒಣಮೆಣಸಿನ ಕಾಯಿಗಳೊಂದಿಗೆ ಬೆಂಡೆಕಾಯಿಯಿಂದ ತಯಾರಿಸುವ ಸೂಪ್ ಸೇವಿಸಿದರೆ ದೀರ್ಘಕಾಲದಿಂದ ಬಾಧಿಸುತ್ತಿದ್ದ ಭೇದಿ ಗುಣವಾಗುತ್ತದೆಂದು ಆಹಾರ ಶಾಸ್ತ್ರಜ್ಞರು ಹೇಳುತ್ತಾರೆ.

ಮೂವತ್ತು ಕೆಲೊರಿಗಳಿರುವ ಪೌಷ್ಟಿಕ ತರಕಾರಿಯಾಗಿರುವ ಬೆಂಡೆಕಾಯಿಯಲ್ಲಿ 75 ಮಿಲಿಗ್ರಾಂ ಸಿ ಜೀವಸತ್ವವಿದೆ. ಒಂದು ತುಂಡು ಬೆಂಡೆ ತಿಂದರೆ ಒಂದು ಕಪ್ ಟೊಮೆಟೊದಲ್ಲಿರುವಷ್ಟು ಸಿ ಜೀವಸತ್ವ ಪ್ರಾಪ್ತವಾಗುತ್ತದೆ. ಶೇ. 7.6ರಷ್ಟು ಕಾರ್ಬೋಹೈಡ್ರೇಟ್ಸ್, ಶೇ. 3.2 ನಾರು, ಶೇ. 2 ಪ್ರೊಟೀನ್, 75 ಮಿಲಿಗ್ರಾಂ ಸುಣ್ಣ, ಮೆಗ್ನೀಶಿಯಂ, ಫೋಲೆಟ್‌ಗಳಿರುವ ಅದರಲ್ಲಿ 57 ಮಿಲಿಗ್ರಾಂ ಪ್ರಮಾಣದ ಎ ಜೀವಸತ್ವವೂ ಇದೆ.

ಕೊಬ್ಬಿನಂಶ ಇಲ್ಲ. ಅದರಲ್ಲಿರುವ ಬೀಜಗಳಲ್ಲಿ ರಕ್ತವನ್ನು ಹೆಪ್ಪುಗಟ್ಟಿಸಲು ಅಗತ್ಯವಾದ ಕೆ ಜೀವಸತ್ವ ಮತ್ತು ಮೂಳೆಗಳನ್ನು ದೃಢಗೊಳಿಸುವ ಸುಣ್ಣ ವಿಪುಲವಾಗಿದೆ. ಫಾರ್ಮಸಿ ಅಂಡ್ ಬಯೋಲಿಯೆಡ್ ಸೈನ್ಸಸ್ ಜರ್ನಲ್ 2011ರ ವರದಿ ಪ್ರಕಾರ ಕರುಳಿನ ಸಕ್ಕರೆ ಹೀರುವಿಕೆಯ ಪ್ರಮಾಣವನ್ನು ಬೆಂಡೆಕಾಯಿ ತಡೆಯುತ್ತದೆ. ಮಧುಮೇಹ ನಿರ್ಬಂಧಕ ಗುಣ ಅದರಲ್ಲಿ ಹೇರಳವಾಗಿದೆ. ಮನುಷ್ಯನ ಜಠರದ ಲೋಳ್ಪರೆಯಲ್ಲಿ ಹೆಲಿಕೋಬ್ಯಾಕ್ಟರ್ ರೋಗಾಣುಗಳು ಅಂಟಿಕೊಳ್ಳುವುದನ್ನು ನಿವಾರಿಸಲು ಹಸಿ ಬೆಂಡೆಕಾಯಿಯ ರಸ ಸಮರ್ಥವಾಗಿದೆ.

* ಕರುಳಿನಲ್ಲಿ ಆಹಾರ ತಕ್ಷಣ ಜೀರ್ಣವಾಗಿ ಮಲಬದ್ಧತೆ ನಿವಾರಿಸಲು ಬೆಂಡೆಕಾಯಿ ಸಹಕಾರಿ.
* ಬೆಂಡೆಕಾಯಿಯ ಕಷಾಯ ಸೇವನೆ ಲೋಳ್ಪರೆಯ ಉರಿಯೂತ, ಜ್ವರ, ತಲೆನೋವು, ಸಂಧಿವಾತ, ಅತಿಸಾರ  ಶಮನಗೊಳಿಸುತ್ತದೆ. ಕೆಮ್ಮು ಮತ್ತು ಗಂಟಲುನೋವಿಗೆ ಬೆಂಡೆ ರಸ ಸಿದ್ಧೌಷಧವೆನಿಸಿದೆ. ಹೊಟ್ಟೆನೋವು, ಜ್ವರದ ಭೇದಿ ನಿವಾರಿಸುತ್ತದೆ. ರಸದ ಲೇಪನದಿಂದ ಚರ್ಮದ ತುರಿಕೆ ಗುಣವಾಗಿ ಕಾಂತಿ ಹೆಚ್ಚುತ್ತದೆ.

* ಬೆಂಡೆಯೊಳಗಿರುವ ಲೋಳೆಯೂ ಒಂದು ಪ್ರತ್ಯೇಕ ಔಷಧಿಯಾಗಿದೆ. ಕೊಲೆಸ್ಟ್ರಾಲ್ ಮತ್ತು ಪಿತ್ಥರಸಗಳನ್ನು ಪ್ರತಿಬಂಧಿಸಿ ದೇಹದ ಅಧಿಕ ತೂಕವನ್ನು ಇಳಿಸುತ್ತದೆ. ಚರ್ಮದ ಗುಳ್ಳೆ, ಮೊಡವೆಗಳನ್ನು ಗುಣಪಡಿಸುತ್ತದೆ. ಉತ್ತಮ ವಿರೇಚಕ ಗುಣ ಹೊಂದಿದೆ.
* ಬೆಂಡೆ ಗಿಡದ ಬೇರು ಯಕೃತ್ತಿನ ರೋಗನಿರೋಧಕ ಸಾಮರ್ಥ್ಯ ಹೆಚ್ಚಿಸುವ ಗುಣ ಹೊಂದಿದೆ. ಎಲೆ ಮತ್ತು ಬೇರುಗಳನ್ನು ಅರೆದು ಹಚ್ಚಿದರೆ ಗಾಯಗಳು ಗುಣವಾಗುತ್ತವೆ. ಎಲೆ ಹಾಗೂ ಕಾಯಿಯಿಂದ ತಯಾರಿಸುವ ಕಷಾಯ ಸೇವಿಸಿದರೆ ನೋವಿನಿಂದ ಕೂಡಿದ ಮೂತ್ರ ವಿಸರ್ಜನೆ ಮೊದಲಾದ ಮೂತ್ರಕೋಶದ ಸಮಸ್ಯೆಗಳು, ಗನೋರಿಯಾ, ಸಿಫಿಲಿಸ್‌ನಂತಹ ಲೈಂಗಿಕ ಕಾಯಿಲೆಗಳ ನೋವು, ಉರಿಯೂತ ಶಮನವಾಗುತ್ತದೆಂದು ಹೇಳಲಾಗಿದೆ.

* ಬೆಂಡೆಕಾಯಿಯಲ್ಲಿ ನೀರಿನಲ್ಲಿ ಕರಗುವ ನಾರು ಇದೆ. ಇದು ಹೃದಯದ ರಕ್ತನಾಳಗಳನ್ನು ಬಲಗೊಳಿಸಿ ಪಾರ್ಶ್ವವಾಯು, ಹೃದಯರೋಗಗಳಿಗೆ ಕಾರಣವಾಗುವ ಕೊಲೆಸ್ಟ್ರಾಲ್ ಏರಿಕೆಯನ್ನು ತಡೆಯುತ್ತದೆ.
*ದೃಷ್ಟಿದೋಷ ನಿವಾರಿಸುವ ಎ ಜೀವಸತ್ವ ಬೆಂಡೆಯಲ್ಲಿದೆ. ಬಾಯಿಯ ಕುಹರ ಮತ್ತು ಶ್ವಾಸಕೋಶದ ಕ್ಯಾನ್ಸರ್ ನಿವಾರಿಸುವ ಶಕ್ತಿಯನ್ನೂ ಅದರಲ್ಲಿ ಗುರುತಿಸಲಾಗಿದೆ. ಕೀಲುರೋಗ ಮತ್ತು ಸಂಧಿವಾತ ತಡೆಯಲು ಶಕ್ತವಾದ ಮ್ಯಾಂಗನೀಸ್ ಮತ್ತು ಇ ಜೀವಸತ್ವ ಅದರಲ್ಲಿದೆ.

* ಒಣಗಿದ ಬೆಂಡೆ ಬೀಜಗಳನ್ನು ಹುರಿದು ಹುಡಿ ಮಾಡಿ ತಯಾರಿಸುವ ಕಷಾಯ ಮೂತ್ರದ ಸಮಸ್ಯೆಗಳನ್ನು ಗುಣಪಡಿಸುತ್ತದೆ. ಮಾನವ ದೇಹದ ಪೋಷಣೆಗೆ ಅಗತ್ಯವಾದ ಖಾದ್ಯತೈಲವೂ ಅದರಲ್ಲಿ ಸಿಗುತ್ತದೆ. ಲಿನೋಲಿಯಿಕ್ ಆಮ್ಲ, ಬೀಟಾ ಕ್ಯಾರೊಟಿನ್, ಕ್ಸಾಂಥಿನ್ ಮತ್ತು ಮೊಟ್ಟೆಯ ಹಳದಿಗೆ ಸಮಾನವಾದ ಫ್ಲೇವನಾಯ್ಡ್ ಇರುವ ಬೀಜ ಸಾಕಷ್ಟು ರೋಗನಿರೋಧಕವಾಗಿದೆ, ಪುರುಷರ ಅನೈಚ್ಛಿಕ ವೀರ್ಯಸ್ರಾವವನ್ನು ಅದು ಗುಣಪಡಿಸುತ್ತದೆ. ಸಂತತಿ ನರವ್ಯೂಹದ ನಳಿಕೆಗಳ ದೋಷ ನಿವಾರಿಸುವ ಫೋಲೇಟ್ ಕೂಡ ಬೀಜಗಳಲ್ಲಿದೆ. ಹುರಿದ ಬೀಜದ ಸೇವನೆ ಬೆವರನ್ನು ಉತ್ತೇಜಿಸುತ್ತದೆ. ಸ್ನಾಯುಗಳ ಸೆಳೆತಕ್ಕೆ ಮದ್ದಾಗುತ್ತದೆ.

* ಬೇಯಿಸಿದ ಅರ್ಧ ಕಪ್ ಬೆಂಡೆಯಿಂದ 13ಮಿಲಿಗ್ರಾಂ ಸಿ ಜೀವಸತ್ವ ಸಿಗುತ್ತದೆ. ಖಿನ್ನತೆ, ದುರ್ಬಲ ಭಾವನೆಗಳನ್ನು ನಿವಾರಿಸಲು ಬೆಂಡೆ ಸಹಕಾರಿ. ಕರುಳಿನ ತ್ಯಾಜ್ಯಗಳನ್ನು ಹೊರದೂಡಲು ಬಹು ಉಪಯುಕ್ತವೂ ಹೌದು. ಚರ್ಮ ಮತ್ತು ಕೂದಲಿನ ಮೃದುತ್ವ ಹೆಚ್ಚಿಸುತ್ತದೆ. ಗರ್ಭಿಣಿ ಹಾಗೂ ಎಳೆಯ ಮಕ್ಕಳಿಗೂ ಅದು ಅನುಪಮ ಆಹಾರವೆನಿಸಿದೆ.

*ಬೆಂಡೆಯ ಪೋಷಕಾಂಶಗಳನ್ನು ಪೂರ್ಣವಾಗಿ ಪಡೆಯಲು ಅದನ್ನು ಮೂರು ಇಂಚಿಗಿಂತ ಸಣ್ಣದಾಗಿ ಕತ್ತರಿಸಬೇಡಿ. ಮುಚ್ಚಳ ಹಾಕಿ ಕಡಮೆ ಉರಿಯಲ್ಲಿ ಹದವಾಗಿ ಬೇಯಿಸಿ. ಹಿತ್ತಾಳೆ, ತಾಮ್ರ, ಕಬ್ಬಿಣದ ಪಾತ್ರೆಗಳಲ್ಲಿ ಬೇಯಿಸಬಾರದು. ಬೆಂಡೆಯ ಹೊರಭಾಗದ ಭಿರುಸುತನ ಇಷ್ಟವಾಗದಿದ್ದರೆ ಬಟ್ಟೆಯಿಂದ ಉಜ್ಜಿ ತೆಗೆಯಬಹುದು. ಫ್ರಿಜ್‌ನಲ್ಲಿರಿಸುವ ಬದಲು ಕಾಗದದ ಚೀಲ ಅಥವಾ ಪಾಲಿಥಿನ್ ಹಾಳೆಗಳಲ್ಲಿ ಸುತ್ತಿಡುವುದು ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT