ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಟ್ಟದ ಮೇಲೆಲ್ಲಾ ಬೀಜ ಬಿತ್ತಿ

Last Updated 20 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಸಸಿಗಳನ್ನು ನೆಟ್ಟು ಅರಣ್ಯವನ್ನು ಹಸಿರೀಕರಣಗೊಳಿಸುವ ಕೆಲಸವನ್ನು ಅರಣ್ಯ ಇಲಾಖೆ ಮೊದಲಿನಿಂದಲೂ ಮಾಡುತ್ತಾ ಬಂದಿದೆ. ಆದರೆ ನೂರಾರು ಎಕರೆ ಪ್ರದೇಶಕ್ಕೆ ಒಮ್ಮಲೇ ಬೀಜ ಬಿತ್ತಿ ಅರಣ್ಯ ಬೆಳೆಸುವ ವಿನೂತನ ಪ್ರಯತ್ನಕ್ಕೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೊಡಿಯಾಲ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ತಂಡ ಮುನ್ನುಡಿ ಬರೆದಿದೆ.

ತಮ್ಮ ಕಾಲೇಜಿನಿಂದ ನಾಲ್ಕಾರು ಕಿ.ಮೀ. ದೂರದ ಮುತ್ತುರಾಯನ ಬೆಟ್ಟ ಪ್ರದೇಶದ ಅರಣ್ಯಕ್ಕೆ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳ ತಂಡ ವಿವಿಧ ಮರಗಳ ಬೀಜಗಳನ್ನು ಬಿತ್ತಿದ್ದಾರೆ. ಹೊಂಗೆ, ಹಿಪ್ಪೆ, ಕಮರ (ಕರಾಚಿ) ಹಾಗೂ ಶ್ರೀಗಂಧದ ಬೀಜಗಳನ್ನು ಅರಣ್ಯದಲ್ಲಿ ಬಿತ್ತನೆ ಮಾಡಲಾಗಿದೆ. ಹದವಾದ ಮಳೆ ಬಿದ್ದು ಅರಣ್ಯ ಪ್ರದೇಶ ಬಿತ್ತನೆಗೆ ಯೋಗ್ಯವಾಗಿದ್ದ ಸಮಯದಲ್ಲಿ 150 ಕೆ.ಜಿಗೂ ಹೆಚ್ಚು ಬೀಜಗಳನ್ನು ಬಿತ್ತಲಾಗಿದೆ. ಅರಣ್ಯ ಇಲಾಖೆಯಿಂದ ಪಡೆದ, ಮೊಳಕೆ ಒಡೆಯುವ ಸಾಮರ್ಥ್ಯವುಳ್ಳ ಆರೋಗ್ಯ ಪೂರ್ಣ ಬೀಜಗಳನ್ನು ಬೆಟ್ಟದಲ್ಲಿ ಹಾಕಲಾಗಿದೆ. ಮರ, ಗಿಡಗಳು ವಿರಳವಾಗಿದ್ದ ಕುರುಚಲು ಬೆಟ್ಟ ಪ್ರದೇಶವನ್ನು ಬಿತ್ತನೆ ಕಾರ್ಯಕ್ಕೆ ಈ ತಂಡ ಆಯ್ಕೆ ಮಾಡಿಕೊಂಡಿತ್ತು.

100 ಹೆಕ್ಟೇರ್‌ನಲ್ಲಿ ಬಿತ್ತನೆ
ಮಳೆಯಿಂದ ಮೆದುವಾಗಿದ್ದ ಮಣ್ಣನ್ನು ಮೊದಲೇ ಚೂಪು ಮಾಡಿಕೊಂಡಿದ್ದ ಕೋಲಿನಿಂದ ತಿವಿದು ಕುಳಿ ಮಾಡಿದ ನಂತರ ಶ್ರಮದಾನಿಗಳು ಅದರಲ್ಲಿ ಬೀಜ ಹಾಕಿ ಮುಚ್ಚಿದರು. ಎಲ್ಲಿ ಮಣ್ಣು ಹೆಚ್ಚು ಮೆದುವಾಗಿರುತ್ತದೆಯೋ ಅಂತಹ ಸ್ಥಳದಲ್ಲಿ, 10ರಿಂದ 12 ಅಡಿ ಅಂತರದಲ್ಲಿ ಬೀಜ ಹಾಕಲಾಯಿತು. ಪ್ರತಿಯೊಬ್ಬ ಶ್ರಮದಾನಿಯೂ ಸೊಂಟಕ್ಕೆ ಬೀಜದ ಚೀಲವನ್ನು ಕಟ್ಟಿಕೊಂಡು, ಕೈಯಲ್ಲಿ ಕೋಲು ಹಿಡಿದು ಬೆಟ್ಟವನ್ನು ಏರುತ್ತಾ, ಇಳಿಯುತ್ತಾ ಎಡ– ಬಲಕ್ಕೆ ತಿರುಗುತ್ತಾ ಎಲ್ಲೆಲ್ಲಿ ಬೀಜ ಬಿತ್ತಲು ಸಾಧ್ಯವೋ ಅಲ್ಲಿ ಬೀಜಗಳನ್ನು ಹುದುಗಿಸಿದರು.

50 ಮಂದಿ ವಿದ್ಯಾರ್ಥಿಗಳ ಈ ತಂಡ ಸತತ 5 ತಾಸು (250 ಶ್ರಮದ ಗಂಟೆಗಳ ಕಾಲ) ಬೆಟ್ಟಕ್ಕೆ ಬೀಜ ಹಾಕಿತು. ಅರಣ್ಯ ಬೆಳೆಸುವ ಕುರಿತು ಪುಕ್ಕಟೆ ಭಾಷಣ ಕೇಳುವುದಕ್ಕಿಂತ ಅರಣ್ಯ ಬೆಳೆಸುವ ಕಾಯಕವೇ ಲೇಸು ಎಂಬುದನ್ನು ಈ ತಂಡ ಮಾಡಿ ತೋರಿಸಿತು.
ಚಿಕ್ಕಹಾರೋಹಳ್ಳಿ, ಬಳ್ಳೇಕೆರೆ ಹಾಗೂ ಬೆಟ್ಟಹಳ್ಳಿ ಗ್ರಾಮಗಳ ನಡುವೆ ಹಬ್ಬಿ ನಿಂತಿರುವ ಮುತ್ತುರಾಯನ ಬೆಟ್ಟದ ಸುಮಾರು 100 ಹೆಕ್ಟೇರ್‌ (250 ಎಕರೆ) ಪ್ರದೇಶದಲ್ಲಿ ವಿವಿಧ ಮರಗಳ ಬೀಜ ಬಿತ್ತುವ ಕಾರ್ಯ ನಡೆಯಿತು.

ಚಿಕ್ಕಹಾರೋಹಳ್ಳಿ ತುದಿಯಿಂದ ಬಿತ್ತನೆ ಕಾರ್ಯ ಆರಂಭಿಸಿದ ಈ ತಂಡ ಪಾಪಾಸು ಕಳ್ಳಿ, ಜಾಲಿ, ಲಂಟಾನದಂತಹ ಅಪಾಯಕಾರಿ ಮುಳ್ಳು ಕಂಟಿಗಳು, ಚೂಪಾದ ನುರುಜು ಕಲ್ಲುಗಳನ್ನೂ ಲೆಕ್ಕಿಸದೆ ಬೀಜ ಬಿತ್ತಿತು. ಹಾವು, ಹಲ್ಲಿ ಮರಿಗಳು, ಓತಿಕ್ಯಾತ ಇತರ ಜೀವಿಗಳು ಕಾಣಿಸಿಕೊಂಡರೂ ಅಂಜದೆ, ಅಳುಕದೆ ತಮ್ಮ ಕಾರ್ಯವನ್ನು ಮಾಡಿದರು. ಹೆಣ್ಣು ಮಕ್ಕಳು ಕಡಿದಾದ ಈ ಬೆಟ್ಟದಲ್ಲಿ ಸಾರ್ಥಕ ಭಾವನೆಯಿಂದ ಬೀಜ ಬಿತ್ತಿದರು. ನೆಲ ಮಟ್ಟದಿಂದ ಸುಮಾರು 800 ಮೀಟರ್‌ ಎತ್ತರದ ಬೆಟ್ಟದ ತುದಿಯವರೆಗೆ ಬೀಜಗಳನ್ನು ಪೂರೈಸಲು ಇಬ್ಬರು ಉತ್ಸಾಹಿಗಳನ್ನು ಗೊತ್ತು ಮಾಡಲಾಗಿತ್ತು.

ಆರ್‌ಎಫ್‌ಓ ಮಾರ್ಗದರ್ಶನ
ಮುತ್ತುರಾಯನ ಬೆಟ್ಟದಂತಹ ಕಗ್ಗಾಡಿನಲ್ಲಿ ಬೀಜ ಬಿತ್ತುವ ಮಹತ್ವದ ಕಾರ್ಯಕ್ಕೆ ವಲಯ ಅರಣ್ಯಾಧಿಕಾರಿ ಮರಿಸ್ವಾಮಿ ಸ್ಥಳದಲ್ಲಿದ್ದು, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಬೀಜಗಳನ್ನು ಹಾಕಬೇಕಾದ ಸ್ಥಳ, ಅಂತರ ಹಾಗೂ ಬೆಟ್ಟ ಹತ್ತುವ ವಿಧಾನ ಕುರಿತು ಸಲಹೆ ನೀಡಿದರು. ಕುರುಚಲು ಅರಣ್ಯದ ಹಸಿರೀಕರಣಕ್ಕಾಗಿ ಬೀಜ ಬಿತ್ತುವ ಕಾರ್ಯ ಸಮರೋಪದಿಯಲ್ಲಿ ನಡೆಯಲು ಪ್ರೇರಣೆ ನೀಡಿದರು.

‘ಒಬ್ಬ ವ್ಯಕ್ತಿ ಒಂದು ದಿನಕ್ಕೆ 20ರಿಂದ 25 ಸಸಿಗಳನ್ನು ನೆಡಲು ಮಾತ್ರ ಸಾಧ್ಯ. ಇಂತಹ ಎತ್ತರದ, ತೀರಾ ಕಡಿದಾದ ಬೆಟ್ಟ ಪ್ರದೇಶದಲ್ಲಿ ಅದೂ ದುಸ್ತರ. ಗುಂಡಿ ತೆಗೆದು, ಸಸಿ ನೆಟ್ಟು ನೀರು ಹಾಕಲೇಬೇಕು. ಅರಣ್ಯದಲ್ಲಿ ನೇರವಾಗಿ ಬೀಜಗಳನ್ನೇ ಬಿತ್ತುವ ಪದ್ಧತಿ ಬಹಳ ಸುಲಭ. ಎತ್ತರದ ಪ್ರದೇಶಕ್ಕೆ ಬೀಜಗಳನ್ನು ಸಾಗಿಸುವುದು, ಕೋಲಿನಿಂದ ಕುಳಿ ಮಾಡಿ ಅದರಲ್ಲಿ ಬೀಜ ಹಾಕಿ ಮಣ್ಣು ಮುಚ್ಚುವುದು ಎಲ್ಲವೂ ಸಲೀಸು. ಒಬ್ಬ ವ್ಯಕ್ತಿ ಒಂದು ದಿನದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಬೀಜಗಳನ್ನು ಹಾಕಲು ಸಾಧ್ಯವಿದೆ.

ಇದರಲ್ಲಿ ಶೇ 25ರಷ್ಟು ಬೀಜಗಳು ಮೊಳಕೆ ಬಂದರೂ ಪ್ರಯತ್ನ ಸಫಲವಾದೀತು’ ಎಂಬುದು ಮರಿಸ್ವಾಮಿ ಅವರ ಮಾತು. ‘ಮರಗಳು ವಿರಳವಾಗಿರುವ ಅರಣ್ಯದಲ್ಲಿ ಹಸಿರೀಕರಣಗೊಳಿಸುವುದು, ದೀರ್ಘಾವಧಿಯಲ್ಲಿ ಪ್ರಾಣಿ, ಪಕ್ಷಿಗಳಿಗೆ ಆಶ್ರಯ ಒದಗಿಸುವುದು ಹಾಗೂ ಭೂ ಸವಕಳಿಯನ್ನು ತಡೆಗಟ್ಟುವುದು ಈ ಬೀಜ ಬಿತ್ತನೆಯ ಮುಖ್ಯ ಉದ್ದೇಶ’ ಎಂದು ಎನ್‌ಎಸ್‌ಎಸ್‌ ಶಿಬಿರಾಧಿಕಾರಿ ಸಿ.ಎನ್‌. ಕಾಂತರಾಜು ಬೀಜ ಬಿತ್ತುತ್ತಲೇ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT