ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲ್ಟ್‌ ವರಸೆ

Last Updated 1 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನಮ್ಮ ದೈನಂದಿನ ವೇಷಭೂಷಣದ ಭಾಗವಾಗಿರುವ ಬೆಲ್ಟ್‌ ಅಥವಾ ಸೊಂಟಪಟ್ಟಿ (ಸುತ್ತು ಪಟ್ಟಿ, ನಡುಪಟ್ಟಿ ಎಂದೂ ಕರೆಯಲಾಗುತ್ತದೆ) ಕುರಿತಾಗಿ ಈ ಬಾರಿ ಮಾತಾಡೋಣ. (ಯಾಂತ್ರಿಕ ಕ್ಷೇತ್ರದಲ್ಲಿ ಕೂಡ ಬೆಲ್ಟ್‌ನ ಬಳಕೆ ಇದೆ. ಆದರೆ ಇಲ್ಲಿ ಅದನ್ನು ಪ್ರಸ್ತಾಪಿಸುತ್ತಿಲ್ಲ). ಮಾನವ ಜಗತ್ತಿಗೆ ಬೆಲ್ಟ್‌ನ ಪರಿಚಯ ಆಗಿದ್ದು ಇತ್ತೀಚೆಗೇನಲ್ಲ. ಕಂಚಿನ ಯುಗದಲ್ಲೇ (ಕ್ರಿ.ಪೂ 3000- ಕ್ರಿ.ಪೂ 1000) ಬೆಲ್ಟ್‌ನ ಮೂಲ ರೂಪ ಬಳಕೆಯಲ್ಲಿತ್ತು. ಗಮನಿಸಬೇಕಾದ ಸಂಗತಿ ಎಂದರೆ, ಅಂದಿನ ಜನರು ಫ್ಯಾಷನ್‌ ಉದ್ದೇಶಕ್ಕೆ ಇದನ್ನು ಬಳಸುತ್ತಿರಲಿಲ್ಲ. ತಮ್ಮ ಅಗತ್ಯ ಸಲಕರಣೆಗಳನ್ನು ಹಿಡಿದುಕೊಳ್ಳುವುದಕ್ಕಾಗಿ ಸೊಂಟಕ್ಕೆ ಪಟ್ಟಿ ಕಟ್ಟಿಕೊಳ್ಳುತ್ತಿದ್ದರು. ಇವುಗಳ ಬಳಕೆ ಪುರುಷರಲ್ಲೇ ಹೆಚ್ಚಾಗಿತ್ತು ಎಂದು ಹೇಳುತ್ತದೆ ಚರಿತ್ರೆ. ಪ್ರಾಣಿಗಳ ಚರ್ಮವನ್ನು ರಾಸಾಯನಿಕ ವಸ್ತುಗಳಿಂದ ಸಂಸ್ಕರಿಸಿ ಬೆಲ್ಟ್‌ ತಯಾರಿಸುವ ವಿಧಾನ ಅಭಿವೃದ್ಧಿಯಾಗುವವರೆಗೂ ಮರದ ತೊಗಟೆಯೇ ಬೆಲ್ಟ್‌ ಆಗಿತ್ತು! ಉಡುಪಿನ ಭಾಗವಾಗಿ ನೇಯ್ದ ಬಟ್ಟೆಯನ್ನೂ ಸೊಂಟದ ಪಟ್ಟಿಯನ್ನಾಗಿ ಕಟ್ಟಿಕೊಳ್ಳುತ್ತಿದ್ದ ಕ್ರಮವೂ ಇತ್ತು.

ಬೆಲ್ಟ್‌, ಅಂದಿನ ಕಾಲದ ಯುದ್ಧ ಸಂಸ್ಕೃತಿಯ ಭಾಗವಾಗಿತ್ತು. ಪ್ರಾಚೀನ ರೋಮ್‌ನಲ್ಲಿ ಕತ್ತಿಮಲ್ಲರು ತಮ್ಮ ಆಯುಧಗಳನ್ನು ಇಟ್ಟುಕೊಳ್ಳಲು ಚರ್ಮದಿಂದ ಮಾಡಿದ ವಿಶೇಷ ಬೆಲ್ಟ್‌ ಉಪಯೋಗಿಸುತ್ತಿದ್ದರು. ಈ ಬೆಲ್ಟ್‌ಗಳು ಗಾತ್ರದಲ್ಲಿ ದೊಡ್ಡದಾಗಿದ್ದು, ಇವುಗಳಲ್ಲಿ ಐದಾರು ಆಯುಧಗಳನ್ನು ಇಡಲಾಗುತ್ತಿತ್ತು. ಅಲಂಕಾರಕ್ಕಾಗಿ ಚರ್ಮವನ್ನು ನಿರ್ದಿಷ್ಟ ಅಳತೆಗೆ ಕತ್ತರಿಸಿ ಬೆಲ್ಟ್‌ನ ಕೆಳಗೆ ಇಳಿಬಿಡಲಾಗುತ್ತಿತ್ತು. ಈ ಕತ್ತಿಮಲ್ಲರು ತಮ್ಮ ಭುಜಕ್ಕೂ ಬೆಲ್ಟ್‌ ಕಟ್ಟಿಕೊಳ್ಳುತ್ತಿದ್ದರು. ಸೈನಿಕರು ಕಡ್ಡಾಯವಾಗಿ ಧರಿಸಬೇಕಾಗಿದ್ದ ವಸ್ತುಗಳಲ್ಲಿ ಬೆಲ್ಟ್‌ ಕೂಡ ಒಂದಾಗಿತ್ತು. ಆ ಕಾಲದಲ್ಲಿ ಸೊಂಟದ ಪಟ್ಟಿಯು ಶಕ್ತಿ, ಪಾರುಪತ್ಯದ ಸಂಕೇತವಾಗಿತ್ತು.

ಸೈನಿಕರು ಮಾತ್ರವಲ್ಲ, ಅಂದಿನ ಚಕ್ರವರ್ತಿಗಳು ತಮ್ಮ ಆಯುಧವನ್ನು ಇಟ್ಟುಕೊಳ್ಳಲು ಮೊರೆ ಹೋಗುತ್ತಿದ್ದುದು ಸೊಂಟದ ಪಟ್ಟಿಗೇ. ಆದರೆ ಅವರ ಈ ಸೊಂಟದ ಪಟ್ಟಿಯನ್ನು ಚಿನ್ನದಿಂದ ಮಾಡಲಾಗುತ್ತಿತ್ತು, (ಭಾರತವನ್ನು ಆಳಿದ ರಾಜರ ಪೋಷಾಕುಗಳನ್ನು ಊಹಿಸಿ. ಪಟ್ಟದ ಕತ್ತಿಯನ್ನು ಅವರು ಸೊಂಟದ ಪಟ್ಟಿಯಲ್ಲಿ ಇಟ್ಟುಕೊಳ್ಳುತ್ತಿದ್ದುದನ್ನು ಚಲನಚಿತ್ರ ಅಥವಾ ಛಾಯಾಚಿತ್ರಗಳಲ್ಲಿ ಕಾಣಬಹುದು).
ಪುರುಷರಿಗಷ್ಟೇ ಮೀಸಲಾಗಿದ್ದ ಬೆಲ್ಟ್‌ ಮಹಿಳೆಯರಿಗೆ ದೊರಕಿದ್ದು ಮಧ್ಯಕಾಲೀನ ಯುಗದಲ್ಲಿ. ಇದು ಫ್ಯಾಷನ್‌ ಜಗತ್ತಿಗೆ ಕಾಲಿರಿಸಿದ್ದು ಕೂಡ ಆಗಲೇ. ಇದರ ಶ್ರೇಯ ಸಲ್ಲಬೇಕಾಗಿರುವುದು ಆ ಕಾಲದ ಶ್ರೀಮಂತ ಮಹಿಳೆಯರಿಗೆ. ದಿರಿಸಿನೊಂದಿಗೆ ಸೊಂಟದ ಪಟ್ಟಿಯನ್ನು ಹಾಕಿಕೊಂಡರೆ ವೇಷಭೂಷಣ ಇನ್ನಷ್ಟು ಕಳೆಗಟ್ಟುತ್ತದೆ ಎಂಬ ಕಾರಣಕ್ಕೆ ವಿವಿಧ ವಿನ್ಯಾಸದ ಬೆಲ್ಟ್‌ಗಳನ್ನು ಧರಿಸಲು ಅವರು ಆರಂಭಿಸಿದರು. ಈ ಸೊಂಟದ ಪಟ್ಟಿಗಳಿಗೆ ಬಾಲದಂತಹ ರಚನೆ ಇರುತ್ತಿತ್ತು. ಇವುಗಳು ಮುಂಭಾಗದಲ್ಲಿ ನೇತಾಡುತ್ತಿದ್ದರಿಂದ ಮಹಿಳೆಯರು ತೊಟ್ಟ ಉಡುಗೆಯ ಸೌಂದರ್ಯ ಹೆಚ್ಚಾಗುತ್ತಿತ್ತು.

ಆಧುನಿಕ ಬೆಲ್ಟ್‌ ಬಳಕೆಯಾಗಿದ್ದು ಮೊದಲ ವಿಶ್ವ ಮಹಾ ಸಮರದಲ್ಲಿ. ಈ ಸಂದರ್ಭದಲ್ಲಿ ಸೈನಿಕರು ತಮ್ಮ ಸೇನಾ ಕವಚವನ್ನು ರಕ್ಷಿಸುವುದಕ್ಕಾಗಿ ಸೊಂಟದ ಪಟ್ಟಿ ಧರಿಸುತ್ತಿದ್ದರು. ಎದೆ ಮತ್ತು ಭುಜ ಎದ್ದು ಕಾಣಬೇಕು ಎಂಬ ಉದ್ದೇಶದಿಂದ ಸೇನಾಧಿಕಾರಿಗಳು ಹೆಚ್ಚು ಬಿಗಿಯಾದ ಬೆಲ್ಟ್‌ಗಳನ್ನೂ ಧರಿಸುತ್ತಿದ್ದರಂತೆ. ತಾವು ಸಮರ್ಥರು ಎಂಬುದನ್ನು ಮತ್ತೊಬ್ಬರಿಗೆ ತೋರಿಸಿಕೊಳ್ಳುವುದು
ಇದರ ಹಿಂದಿನ ಉದ್ದೇಶ.

1920ರವರೆಗೆ ಬೆಲ್ಟ್‌ ಸೇನೆಯ ಮತ್ತು ಅಲಂಕಾರಿಕಾ ಉದ್ದೇಶಕ್ಕೆ ಮಾತ್ರ ಬಳಸಲಾಗುತ್ತಿತ್ತು. ನಂತರ ಅದು ಪುರುಷರ ದಿನನಿತ್ಯದ ಉಡುಪಿನ ಭಾಗವಾಗಲು ಆರಂಭವಾಯಿತು. ಪ್ಯಾಂಟ್‌ಗಳಲ್ಲಿ ಲೂಪ್‌ಗಳನ್ನು (ಬೆಲ್ಟ್‌ ಸಿಕ್ಕಿಸುವ ಕುಣಿಕೆ) ಅಳವಡಿಸಲು ಜವಳಿ ಉದ್ಯಮಿಗಳು ಆರಂಭಿಸಿದರು. (ಇದಕ್ಕೂ ಮೊದಲು ಜನರು ಬೆಲ್ಟ್‌ ಬದಲಾಗಿ ತೂಗುಲಾಡಿ (ಸಸ್ಪೆಂಡರ್‌) ಧರಿಸುತ್ತಿದ್ದರು). ಆಧುನಿಕ ಕಾಲದಲ್ಲಿ ಬೆಲ್ಟ್‌ ಜನಪ್ರಿಯತೆ ಗಳಿಸಿದ್ದರ ಹಿಂದೆ ಹಾಲಿವುಡ್‌ ಚಿತ್ರಗಳ ಪಾಲೂ ಇದೆ. 20ನೇ ಶತಮಾನದಲ್ಲಿ ಅಮೆರಿಕ ಸಿನಿಮಾಗಳಲ್ಲಿ ಬಳಸಿದ ಬೆಲ್ಟ್‌ ಬಕಲ್‌ಗಳು ಪ್ರಸಿದ್ಧಿಯಾದವು. ಇದರ ಆಧಾರದಲ್ಲಿ ಥರಾವರಿ ಬಕಲ್‌ಗಳನ್ನು ಹೊಂದಿದ ಬೆಲ್ಟ್‌ಗಳು ಮಾರುಕಟ್ಟೆಗೆ ಬಂದವು.

ಈಗ ಬೆಲ್ಟ್‌ ಆಧುನಿಕ ಫಾರ್ಮಲ್‌ ಡ್ರೆಸ್‌ ಕೋಡ್‌ನ ಅವಿಭಾಜ್ಯ ಅಂಗ. ಬೆಲ್ಟ್‌ ರಹಿತ ಫ್ಯಾಷನ್‌ ಜಗತ್ತನ್ನು ಇಂದು ಊಹಿಸಲೂ ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಅದು ನಮ್ಮ ದೈನಂದಿನ ಬದುಕಿನ ಭಾಗವಾಗಿ ಮಾರ್ಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT