ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕಿನಾಟದ ಸೂತ್ರಧಾರ

Last Updated 27 ಮೇ 2015, 19:30 IST
ಅಕ್ಷರ ಗಾತ್ರ

ರಂಗಭೂಮಿಯಲ್ಲಿ  ಪ್ರತಿಯೊಂದು ಅಂಶವೂ ತನ್ನದೇ ಆದ ಪ್ರಾಮುಖ್ಯ ಹೊಂದಿದೆ.  ಅಲ್ಲಿ ಸಾಮರ್ಥ್ಯಕ್ಕೆ ತಕ್ಕಂತೆ ಪ್ರತಿಭೆ ಅನಾವರಣವಾಗುವುದರ ಜತೆಗೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. 

ಸಾಮಾನ್ಯವಾಗಿ ರಂಗಭೂಮಿ ಎಂದ ತಕ್ಷಣ ನಮ್ಮ ಕಣ್ಣೆದುರು ಬರುವುದು ನಟರು ನಿರ್ದೇಶಕರು. ಆದರೆ ಅವರನ್ನು ಹೊರತುಪಡಿಸಿಯೂ ರಂಗಭೂಮಿಗೆ ಅನೇಕ ಆಯಾಮಗಳಿವೆ. ಬೆಳಕಿನ ವಿನ್ಯಾಸ ರಂಗಭೂಮಿಯ ಪ್ರಮುಖ ಅಂಗ.

‘ಬೆಳಕಿನ ವಿನ್ಯಾಸ ಎಂದರೆ ಕೇವಲ  ಎಲ್ಲಾ ಕಡೆಯಲ್ಲೂ ಬೆಳಕನ್ನು ಪ್ರತಿಫಲಿಸುವಂತೆ ಮಾಡುವುದಲ್ಲ. ಕಥೆ, ಸನ್ನಿವೇಶ, ಪಾತ್ರ, ಭಾವನೆಗಳಿಗೆ ತಕ್ಕಂತೆ ಬೆಳಕನ್ನು ವಿನ್ಯಾಸ ಮಾಡುವುದು ಒಂದು ಕಲೆ’ ಎನ್ನುತ್ತಾರೆ ಮಂಜು ನಾರಾಯಣ.

ರಂಗಭೂಮಿಯ  ವೇದಿಕೆಯ ಮೇಲೆ ನಿಂತು ನಟನೆಯ ಮೂಲಕ ಪ್ರತಿಭೆ ಪ್ರದರ್ಶಿಸುವಂತೆ,  ತೆರೆಯ ಹಿಂದಿನ ಕಲಾವಿದರು ಅಷ್ಟೇ ಪ್ರತಿಭಾವಂತರಾಗಿರುತ್ತಾರೆ ಎನ್ನುವುದಕ್ಕೆ ಐದು ವರ್ಷಗಳಿಂದ ಬೆಂಗಳೂರಿನಲ್ಲಿ ರಂಗಭೂಮಿಯ ಬೆಳಕಿನ ವಿನ್ಯಾಸದಲ್ಲಿ ತೊಡಗಿಕೊಂಡಿರುವ ಗೌರಿಬಿದನೂರಿನ ಮಂಜು ನಾರಾಯಣ ಕೆ. ಎಲ್‌. ಉತ್ತಮ ನಿದರ್ಶನ.

ಕಳೆದ ಹತ್ತು ವರ್ಷಗಳಿಂದ ರಂಗಭೂಮಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಮಂಜು ನಾರಾಯಣ ಅವರು ಐದು ವರ್ಷಗಳಿಂದ ಬೆಳಕಿನ ವಿನ್ಯಾಸ ವೃತ್ತಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ.

ಬೆಂಗಳೂರಿನ ಬಹುತೇಕ ತಂಡಗಳ ಜೊತೆ ಕೆಲಸ ಮಾಡಿದ ಅನುಭವ ಹೊಂದಿರುವ ಮಂಜು  ಖುದ್ದಾಗಿ ತಾವೇ ಸುಮಾರು 80ಕ್ಕೂ ಹೆಚ್ಚು ನಾಟಕಗಳಿಗೆ ಬೆಳಕಿನ ವಿನ್ಯಾಸ ಮಾಡಿದ್ದಾರೆ.

ಎಂ.ಎ. ಪದವಿ ಪಡೆದಿರುವ ಮಂಜು ಮಧ್ಯದಲ್ಲೇ ತಮ್ಮ ಎಂ.ಫಿಲ್‌. ಪದವಿಯನ್ನು ಕೈಬಿಡಬೇಕಾಯಿತು.  ಮುಂದೆ ಪರಿಸ್ಥಿತಿಯ ಪ್ರಭಾವದಿಂದಾಗಿ  ರಂಗಭೂಮಿಯಲ್ಲಿ ತೊಡಗಿಕೊಳ್ಳಬೇಕಾಯಿತು. ನಂತರ ಥಿಯೇಟರ್‌ ಇನ್‌ ಡಿಪ್ಲೊಮಾ ಪದವಿ ಪಡೆದು, ಬೆಳಕಿನ ವಿನ್ಯಾಸದಲ್ಲಿ ವಿಶೇಷ ತರಬೇತಿ ಪಡೆದರು.

ತಮ್ಮ ಊರಿನಲ್ಲಿ ರಂಗಾಯಣ ತಂಡದ ನಾಟಕಗಳ ಉತ್ಸವ ನಡೆಯುತ್ತಿದ್ದ ವೇಳೆ ಕಲಾವಿದರಿಗೆ ತಿಂಡಿ, ನೀರು ತಂದುಕೊಡುವ ಕೆಲಸಕ್ಕೆ ಸೇರಿಕೊಂಡ ಮಂಜು, ಒಮ್ಮೆ ಒಂದು ನಾಟಕದಲ್ಲಿ ಹೆಣದ ಪಾತ್ರ ಮಾಡಲು ಯಾರೂ ಇಲ್ಲದಿದ್ದಾಗ ಆ ಪಾತ್ರ ಮಾಡಿದರು. ಹೀಗೆ ನಿರ್ಜೀವ ಪಾತ್ರದ ಮೂಲಕ ರಂಗಭೂಮಿಯೊಂದಿಗೆ ನಂಟು ಬೆಳೆಸಿಕೊಂಡ ಮಂಜು ಮತ್ತೆಂದೂ ಈ ಕ್ಷೇತ್ರದ ಸಂಗ ತೊರೆಯಲಿಲ್ಲ. ಮಂಜು ಅವರಿಗೆ ನೇಪಥ್ಯದತ್ತಲೇ ಹೆಚ್ಚಿನ ಒಲವಿತ್ತು. ಅಲ್ಲದೇ ನಟನೆಯಲ್ಲಿ ಹೇಳಿಕೊಳ್ಳುವಂತಹ ಪ್ರಮುಖ ಪಾತ್ರಗಳೂ ಸಿಗಲಿಲ್ಲ.

‘ಕೆಲವೊಮ್ಮೆ ಸಣ್ಣ ಪಾತ್ರಗಳಿಗೆ ಕಲಾವಿದರು ಇಲ್ಲದಿದ್ದಾಗ ನನ್ನನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆದರೆ ಗಂಭೀರ ಪಾತ್ರ ನೀಡಲು ಹಿಂಜರಿಯುತ್ತಿದ್ದರು. ಹಾಗಾಗಿ ನನಗೆ ನಟನೆಯನ್ನು ನೆಚ್ಚಿಕೊಳ್ಳುವುದಕ್ಕಿಂತ ಬೇರೆ ರೀತಿಯಲ್ಲಿ ನನ್ನದೇ ಆದ ಗುರುತನ್ನು ಮೂಡಿಸುವ ಕೆಲಸ ಮಾಡಬೇಕು ಎಂದು ನಿರ್ಧರಿಸಿ ಬೆಳಕಿನ ವಿನ್ಯಾದದಲ್ಲಿ ತರಬೇತಿ ಪಡೆದೆ. ನಂತರ ಸ್ವತಂತ್ರವಾಗಿ ನಾಟಕಗಳಿಗೆ ಬೆಳಕಿನ ವಿನ್ಯಾಸ ಮಾಡುವ ಕೆಲಸದಲ್ಲಿ ತೊಡಗಿಕೊಂಡೆ’ ಎಂದು ನೆನಪಿಸಿಕೊಳ್ಳುತ್ತಾರೆ ಮಂಜು.

‘ಪ್ರತಿಯೊಂದು ಪ್ರದರ್ಶನಕ್ಕೂ ಬೆಳಕಿನ ವಿನ್ಯಾಸ ಬಹಳ ಮುಖ್ಯ. ಕೆಲವೊಮ್ಮೆ ನಾಟಕ ಪ್ರದರ್ಶನಕ್ಕೂ ಮೊದಲೇ ವೇದಿಕೆಯ ವಿನ್ಯಾಸ ಹಾಗೂ ಪಾತ್ರಗಳ ಸ್ಥಾನಗಳ ಬಗ್ಗೆ ನಿರ್ದೇಶಕರು ಸೂಚನೆ ನೀಡುತ್ತಾರೆ. ಅದಕ್ಕೆ ತಕ್ಕಂತೆ ಬೆಳಕಿನ ವಿನ್ಯಾಸ ಮಾಡಬೇಕು’ ಎಂದು ಒಳನೋಟವನ್ನು ವಿವರಿಸುತ್ತಾರೆ.

‘ಕೆಲವೊಮ್ಮೆ ತಾಂತ್ರಿಕ ದೋಷದ ಕಾರಣ ಯೋಜಿತ ವಿನ್ಯಾಸದಲ್ಲಿ ಏರು–ಪೇರು ಆಗುತ್ತದೆ. ಆಗ ವಿನ್ಯಾಸಕಾರ ಸ್ಥಳದಲ್ಲಿಯೇ ತಕ್ಷಣಕ್ಕೆ ಯೋಜಿಸಿ–ಯೋಚಿಸಿ ವಿನ್ಯಾಸವನ್ನು ರೂಪಿಸಬೇಕಾಗುತ್ತದೆ. ಹಾಗೆ ಯಾವುದೇ ತಯಾರಿ ನಡೆಸದೆ ಮಾಡಿದ ನಾಟಕಗಳಲ್ಲಿ ಬೆಳಕಿನ ವಿನ್ಯಾಸ ಪ್ರೇಕ್ಷಕರ ಗಮನ ಸೆಳೆದು ಪ್ರಶಂಸೆಗೂ ಕಾರಣವಾದ ಸಂದರ್ಭಗಳೂ ಉಂಟು’ ಎಂದು ಮಂಜು ನೆನಪಿಸಿಕೊಳ್ಳುತ್ತಾರೆ. 

‘ಕೆಲವೊಮ್ಮ ನಾಳೆ ಪ್ರದರ್ಶನ ಇದ್ದರೆ ಹಿಂದಿನ ದಿನ ಬೆಳಕಿನ ವಿನ್ಯಾಸ ಮಾಡಲು ಕರೆಯುವುದೂ ಇದೆ. ಆಗ ಸ್ಪಾಟ್‌ ಲೈಟಿಂಗ್‌ ಮಾಡಬೇಕಾಗುತ್ತದೆ. ಅದು ನನ್ನ ಆಯ್ಕೆ ಅಲ್ಲ. ಯೋಜಿತ ಬೆಳಕಿನ ವಿನ್ಯಾಸ ಮಾಡುವುದಕ್ಕೇ ನಾನು ಹೆಚ್ಚು ಪಾಶಸ್ತ್ಯ ನೀಡುತ್ತೇನೆ’ ಎನ್ನುತ್ತಾರೆ ಮಂಜು.

ಪ್ರದರ್ಶನವನ್ನು ಗಂಭೀರವಾಗಿ ಪರಿಗಣಿಸುವ ನಾಟಕಗಳಿಗೆ ಹೆಚ್ಚು ಶಿಸ್ತಿನಿಂದ ಬೆಳಕಿನ ವಿನ್ಯಾಸ ಮಾಡಬೇಕು ಎನ್ನುವುದು ಮಂಜು ಅವರ ನಂಬಿಕೆ.

ಈ ಮೊದಲು ಬೆಂಗಳೂರು ಮಾತ್ರವಲ್ಲದೆ ಬೇರೆ ಕಡೆ ನಡೆಯುವ ಪ್ರದರ್ಶನಗಳಿಗೂ ವಿನ್ಯಾಸ ಮಾಡುತ್ತಿದ್ದ ಮಂಜು, ಈಗ ಬೆಂಗಳೂರಿನಲ್ಲಿ ನಡೆಯುವ ಪ್ರದರ್ಶನಗಳಿಗೆ ಮಾತ್ರ ಬೆಳಕಿನ ವಿನ್ಯಾಸ ಮಾಡುತ್ತಿದ್ದಾರೆ.

ನಾಟಕಗಳ ಜೊತೆಗೆ ಕೆಲವೊಮ್ಮೆ ಫ್ಯಾಶನ್‌ ಷೋಗಳಿಗೆ ಬೆಳಕಿನ ವಿನ್ಯಾಸ ಮಾಡಿದ ಅನುಭವವೂ ಇವರಿಗಿದೆ. ಅಲ್ಲದೇ ಅನೇಕ ಕಾರ್ಯಾಗಾರಗಳಲ್ಲಿಯೂ ಇವರು ಬೆಳಕಿನ ವಿನ್ಯಾಸದ ಬಗ್ಗೆ ತರಬೇತಿ ನೀಡಿದ್ದಾರೆ.

‘ಬೆಳಕಿನ ವಿನ್ಯಾಸದಲ್ಲಿ ಕೆಲವು ಮಿತಿಗಳಿವೆ.  ಸ್ಟೇಜ್‌ ಪ್ರಾಕ್ಟೀಸ್‌ ಮಾಡುವಾಗ  ಅದನ್ನು ಮೊದಲೇ ನಾಟಕದ ಉಸ್ತುವಾರಿ ಹೊಂದಿದವರಿಗೆ ತಿಳಿಸುತ್ತೇನೆ. ಆಗ ನಿರೀಕ್ಷಿತ ರೀತಿಯಲ್ಲಿ ಬೆಳಕಿನ ವಿನ್ಯಾಸ ಮಾಡಲು ಸಾಧ್ಯವಾಗುತ್ತದೆ’ ಎಂದು ಅವರು ವಿವರಿಸುತ್ತಾರೆ.

‘ಪಂಚಮುಖಿ, ರಂಗಸ್ಥಳ ಸೇರಿದಂತೆ ಈವೆರೆಗೂ ಹಲವಾರು ತಂಡಗಳೊಂದಿಗೆ  ಕೆಲಸ ಮಾಡಿದ್ದೇನೆ. ಹಾಗಾಗಿ ಬ್ಯಾಕ್‌ ಸ್ಟೇಜ್‌ ಕೆಲಸದಲ್ಲಿ ಕೆಲವು ಮಿತಿಗಳಿದ್ದರೂ ನನಗೆ ತೃಪ್ತಿ ಇದೆ’ ಎನ್ನುವ ಮಂಜು ಅವರಿಗೆ ಈ ಕ್ಷೇತ್ರದಲ್ಲಿಯೇ ಇದ್ದು ಹಿರಿದನ್ನು ಸಾಧಿಸುವ ಅಭಿಲಾಷೆ ಇದೆ.

ರವೀಂದ್ರ ಕಲಾಕ್ಷೇತ್ರದಲ್ಲಿ ಯೋಜಿತ ವಿನ್ಯಾಸಕ್ಕಿಂತ ತಕ್ಷಣದಲ್ಲಿ ಮಾಡುವ ವಿನ್ಯಾಸಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಅದೇ ರಂಗಶಂಕರದಲ್ಲಿ ಇದಕ್ಕೆ ಅವಕಾಶವಿಲ್ಲ. ಎಲ್ಲವನ್ನು ಕ್ರಮವಾಗಿ ರೂಪಿಸಿ, ಪ್ರದರ್ಶನವನ್ನು ಯಶಸ್ವಿಗೊಳಿಸಬೇಕು ಎಂದು ಬಯಸುವ ನಿರ್ದೇಶಕರು ತೆರೆಯ ಮುಂದೆ ಪ್ರದರ್ಶನ ನೀಡುವ ಕಲಾವಿದರ ಪ್ರತಿಭೆಯನ್ನು ಅಳೆಯುವಂತೆ ತೆರೆಯ ಹಿಂದೆ ಕೆಲಸ ಮಾಡುವ ಕಲಾವಿದರ ಕೌಶಲವನ್ನೂ ಅಳೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT