ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕಿನ ಸಂದೇಶ ಆಧರಿಸಿ ಶೋಧ

ಎಎನ್‌32 ವಿಮಾನ ಪತ್ತೆಗೆ ‘ಸಾಗರ್‌ ನಿಧಿ’ ನೌಕೆ ಬಳಕೆ
Last Updated 26 ಜುಲೈ 2016, 19:42 IST
ಅಕ್ಷರ ಗಾತ್ರ

ನವದೆಹಲಿ:  ವಾಯುಪಡೆಯ ಎಎನ್‌–32 ವಿಮಾನದ ಶೋಧ ಕಾರ್ಯಾಚರಣೆಯಲ್ಲಿ ನಿರತವಾಗಿರುವ ತಂಡಗಳಿಗೆ ಸಮುದ್ರದ ತಳಭಾಗದಲ್ಲಿ ನಾಲ್ಕೈದು ಸಲ ಬೆಳಕಿನ ಮಿನುಗುವಿಕೆ ಗಮನಕ್ಕೆ ಬಂದಿದೆ ಎಂದು ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ಮಂಗಳವಾರ ಹೇಳಿದ್ದಾರೆ.

‘ಈ ಬೆಳಕನ್ನು ಎಎನ್‌–32 ವಿಮಾನ ಹೊರಸೂಸಿದೆಯೇ ಎಂಬುದನ್ನು ಪತ್ತೆಹಚ್ಚಬೇಕಿದೆ. ಈ ಮಿನುಗುವಿಕೆ ಆಧರಿಸಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈಗಲೇ ಖಚಿತವಾಗಿ ಏನನ್ನೂ ಹೇಳಲಾಗದು’ ಎಂದು ಅವರು ಮಂಗಳವಾರ ರಾಜ್ಯಸಭೆಗೆ ತಿಳಿಸಿದರು.

‘ಹಲವು ವಿಮಾನಗಳು ಮತ್ತು ನೌಕೆಗಳು ಶೋಧ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ. ಕಳೆದ ಐದು ದಿನಗಳಲ್ಲಿ ಕೆಲವು ಸುಳಿವುಗಳು ದೊರೆತಿದ್ದವು. ಅದರ ಆಧಾರದಲ್ಲಿ ಶೋಧ ಕಾರ್ಯ ಮುಂದುವರಿಸಲಾಗಿತ್ತು. ಆದರೆ ಯಾವುದೂ ಫಲಪ್ರದವಾಗಿಲ್ಲ. ಹೊಸದಾಗಿ ಏನಾದರೂ ಸುಳಿವು ಲಭಿಸುವುದೇ ಎಂಬುದರ ಮೇಲೆ ಗಮನ ಕೇಂದ್ರೀಕರಿಸಲಾಗಿದೆ’ ಎಂದು ವಿವರಿಸಿದ್ದಾರೆ.

‘ಸಾಗರ್‌ ನಿಧಿ’ ನೆರವು:  ಶೋಧ ಕಾರ್ಯಾಚರಣೆಗೆ ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆಯ (ಎನ್‌ಐಒಟಿ) ಅತ್ಯಾಧುನಿಕ ನೌಕೆ ‘ಸಾಗರ್‌ ನಿಧಿ’ಯ ನೆರವನ್ನು ಪಡೆಯಲು ನಿರ್ಧರಿಸಲಾಗಿದೆ ಎಂದು ಪರಿಕ್ಕರ್‌ ತಿಳಿಸಿದರು. ಈ ನೌಕೆಯನ್ನು ಮಾರಿಷಸ್‌ನಿಂದ ಕರೆಸಲಾಗಿದೆ.

ಸಮುದ್ರದ ತಳಭಾಗಕ್ಕೆ ತೆರಳಿ ಶೋಧ ನಡೆಸುವ ಸಾಮರ್ಥ್ಯವನ್ನು ಈ ನೌಕೆ ಹೊಂದಿದೆ. ‘ಸಾಗರ್‌ ನಿಧಿ ನೌಕೆ ಶೋಧ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿದೆ. ಅದರೆ ಇಂತಹ ನೌಕೆ ಕಾರ್ಯಾಚರಣೆ ನಡೆಸಬೇಕಾದರೆ ಒಂದು ನಿರ್ದಿಷ್ಟ ಸ್ಥಳವನ್ನು ಗುರುತಿಸುವುದು ಅಗತ್ಯ’ ಎಂದರು.

‘ಸಮುದ್ರದ ತಳಭಾಗಕ್ಕೆ ಸಾಗಬಲ್ಲ ನೌಕೆಗಳು ತನ್ನಿಷ್ಟದಂತೆ ಶೋಧ ಕಾರ್ಯಾಚರಣೆ ನಡೆಸಲು ಸಾಧ್ಯವಿಲ್ಲ. ಒಂದು ನಿರ್ದಿಷ್ಟ ಪ್ರದೇಶವನ್ನು ಗುರುತಿಸಿ ಅಲ್ಲಿ ಶೋಧ ನಡೆಸಲು ಈ ನೌಕೆಯ ನೆರವು ಪಡೆಯಬಹುದು. ಈ ಹಿಂದೆ ಡಾರ್ನಿಯರ್‌ ವಿಮಾನ ಅಪಘಾತಕ್ಕೀಡಾಗಿದ್ದ ಸಂದರ್ಭ ಜಲಾಂತರ್ಗಾಮಿ ನೌಕೆಯು ಒಂದು ಸ್ಥಳವನ್ನು ಗುರುತಿಸಿತ್ತು. ಆ ಬಳಿಕ ನಾವು ಸಮುದ್ರದ ತಳಭಾಗಕ್ಕೆ ಸಾಗಬಲ್ಲ ನೌಕೆಯನ್ನು ಅಲ್ಲಿಗೆ ಕಳುಹಿಸಿದ್ದೆವು’ ಎಂದು  ವಿವರಿಸಿದರು.

ಚೆನ್ನೈನಿಂದ ಪೋರ್ಟ್‌ಬ್ಲೇರ್‌ಗೆ ಪ್ರಯಾಣಿಸುತ್ತಿದ್ದ ಎಎನ್‌–32 ವಿಮಾನ ಜುಲೈ 22ರಂದು  ಕಣ್ಮರೆಯಾಗಿತ್ತು.

ದೋಷ ಸರಿಪಡಿಸಲಾಗಿತ್ತು: ಕಣ್ಮರೆಯಾಗಿರುವ ವಿಮಾನದಲ್ಲಿ ಈ ತಿಂಗಳ ಆರಂಭದಲ್ಲಿ ಮೂರು ಸಲ ತಾಂತ್ರಿಕ ದೋಷ ಕಂಡುಬಂದಿತ್ತು ಎಂಬ ವರದಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಅವೆಲ್ಲವೂ ಸಣ್ಣಮಟ್ಟಿನ ದೋಷಗಳಾಗಿದ್ದವು. ಅಂತಹ ತಾಂತ್ರಿಕ ತೊಂದರೆ ಸಾಮಾನ್ಯವಾಗಿ ಎಲ್ಲ ವಿಮಾನಗಳಲ್ಲೂ ಕಾಣಿಸಿಕೊಳ್ಳುತ್ತವೆ. ಆ ದೋಷಗಳನ್ನು ಸರಿಪಡಿಸಲಾಗಿತ್ತು’ ಎಂದರು.

ಅಲ್ಲಗಳೆದ ಪರಿಕ್ಕರ್‌ (ಪಿಟಿಐ ವರದಿ): ಈ ಹಿಂದೆ ಸಮುದ್ರಕ್ಕೆ ಅಪ್ಪಳಿಸಿದ್ದ ಡಾರ್ನಿಯರ್‌ ವಿಮಾನ ತುರ್ತು ಸಂದೇಶ ಕಳುಹಿಸಿರಲಿಲ್ಲ ಎಂಬ ಕರಾವಳಿ ಪಡೆಯ ಹಿರಿಯ ಅಧಿಕಾರಿಯ ಹೇಳಿಕೆಯನ್ನು ರಕ್ಷಣಾ ಸಚಿವರು ಅಲ್ಲಗಳೆದಿದ್ದಾರೆ.

‘ಡಾರ್ನಿಯರ್‌ ವಿಮಾನದ ಇಎಲ್‌ಟಿ ಸಾಧನ ಹೊರಡಿಸಿದ್ದ ಸಂಕೇತವನ್ನು (ಶಬ್ದ) ಜಲಾಂತರ್ಗಾಮಿ ನೌಕೆ ಗುರುತಿಸಿತ್ತು. ಅದರ ಆಧಾರದಲ್ಲಿ ಶೋಧ ಕಾರ್ಯಾಚಣೆ ನಡೆಸಿ ವಿಮಾನವನ್ನು ಪತ್ತೆ ಮಾಡಲಾಗಿತ್ತು. ಎಎನ್‌–32 ವಿಮಾನದ ಇಎಲ್‌ಟಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಲಾಗದು. ಆದರೆ ಶೋಧ ಕಾರ್ಯಾಚರಣೆ ನಡೆಸುತ್ತಿರುವ ತಂಡಕ್ಕೆ ಇದುವರೆಗೆ ಅದರ ಸಂಕೇತ ಗುರುತಿಸಲು ಆಗಿಲ್ಲ’ ಎಂದರು.

ಪ್ರತಿಕೂಲ ಹವಾಮಾನ ಕಾರಣವೇ?
ವಿಮಾನ ಕಣ್ಮರೆಯಾಗಲು ಕಾರಣ ಏನು ಎಂಬುದನ್ನು ಈಗಲೇ ನಿರ್ಧರಿಸಲು ಸಾಧ್ಯವಿಲ್ಲ ಎಂದು ವಾಯುಪಡೆ ಮೂಲಗಳು ತಿಳಿಸಿವೆ. ಆದರೆ ಕೆಟ್ಟ ಹವಾಮಾನ ಕಾರಣವಾಗಿರಲೂಬಹುದು ಎಂಬ ಸೂಚನೆ ಲಭಿಸಿದೆ.

‘ವಿಮಾನ ಸಾಗುವ ಹಾದಿಯಲ್ಲಿ ಪ್ರತಿಕೂಲ ಹವಾಮಾನವಿತ್ತು. ಆದರೆ ಅದನ್ನು ಎದುರಿಸಲು ಪೈಲಟ್‌ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದರು’ ಎಂದು ಮೂಲಗಳು ಹೇಳಿವೆ.

ಮುಖ್ಯಾಂಶಗಳು
* ಐದು ದಿನಗಳ ಬಳಿಕವೂ ಪತ್ತೆಯಾಗದ ವಿಮಾನ

* ಮುಂದುವರೆದ ಶೋಧ
* ಕರಾವಳಿ ಪಡೆ ಅಧಿಕಾರಿ ಹೇಳಿಕೆ ಅಲ್ಲಗಳೆದ ಸಚಿವ ಪರಿಕ್ಕರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT