ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕಿನ ಹಬ್ಬದ ಸವಿ ಹೆಚ್ಚಿಸಿದ ಕಜ್ಜಾಯ

Last Updated 24 ಅಕ್ಟೋಬರ್ 2014, 7:31 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಮನೆಯಲ್ಲಿ ಯಾವುದೇ ಸಮಸ್ಯೆ­ಯಿದ್ದರೂ ದೀಪಾವಳಿ ಹಬ್ಬದಂದು ಕಜ್ಜಾಯ ಮಾಡುವುದನ್ನು ಮಾತ್ರ ನಿಲ್ಲಿಸುವುದಿಲ್ಲ. ದೀಪಾವಳಿಗೆ ಕಜ್ಜಾಯವೇ ವಿಶೇಷ ತಿಂಡಿ...’

– ಇದು ನಗರ ಗೃಹಿಣಿ ಮಮತಾ ಅವರ ಮಾತು.
ಮನೆಯ ಕಿರಿದಾದ ಕೋಣೆಯಲ್ಲಿ ನಿಂತು ಕಜ್ಜಾಯ ಸಿದ್ಧಪಡಿಸುತ್ತಿದ್ದ ಅವರು ಕಜ್ಜಾಯದ ವಿಶೇಷತೆಯನ್ನು ಬಿಚ್ಚಿಟ್ಟರು. ‘ಚಿಕ್ಕಬಳ್ಳಾಪುರ–ಕೋಲಾರ ಭಾಗದಲ್ಲಿ ದೀಪಾವಳಿಗೆ ಮಾತ್ರ ಕಜ್ಜಾಯ ಮಾಡುತ್ತಾರೆ. ಇದರ ಹಿಂದೆ ರಾಮಾ­ಯಣ ಕಾಲದ ಕತೆಯಿದೆಯಂತೆ. ಹಬ್ಬದಲ್ಲಿ ಸವಿಯುವುದೇ ಒಂದು ವಿಶೇಷ’ ಎಂದರು.

ದೀಪಾವಳಿ ಹಿನ್ನೆಲೆಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದ ಬಹುತೇಕ ಮನೆಗಳಲ್ಲಿ ಗುರುವಾರ ಕಜ್ಜಾಯ ಸಿದ್ಧಪಡಿಸಲಾಯಿತು. ದೂರದ ಊರುಗಳಿಂದ ನೆಂಟರು ಮತ್ತು ಸ್ನೇಹಿ­ತರು ಜೊತೆಗೂಡಿ ಊಟ ಮಾಡುತ್ತ ಕಜ್ಜಾಯ ಸವಿದರು. ಪುಟಾಣಿ ಮಕ್ಕಳು ಊಟವನ್ನೇ ಮಾಡದೇ ಕಜ್ಜಾಯದಲ್ಲೇ ಹೊಟ್ಟೆ ತುಂಬಿಸಿ­ಕೊಂ­ಡರು. ಕುಟುಂಬ ಸದಸ್ಯರೆಲ್ಲರೂ ಮನೆಯಲ್ಲೇ ಉಳಿದು ಹಳೆಯ ದಿನಗಳನ್ನು ನೆನಪಿಸಿಕೊಂಡು ಹಬ್ಬದ ಆನಂದದ ಕ್ಷಣಗಳನ್ನು ಕಳೆದರು.

ಹಬ್ಬದ ಎರಡನೇ ದಿನದಂದು ಬೆಳಿಗ್ಗೆಯೇ ಕಜ್ಜಾಯ ಸಿದ್ಧಪಡಿಸುತ್ತೇವೆ. ನಂತರ ಕಜ್ಜಾಯ ಜೊತೆ ಕೆಲವಷ್ಟು ಸಿಹಿ ತಿನಿಸು ಮತ್ತು ನೋಮು ದಾರ­ಗಳನ್ನು ದೇವಾಲಯಕ್ಕೆ ಒಯ್ಯುತ್ತೇವೆ. ಅಲ್ಲಿ ಕಜ್ಜಾಯವನ್ನು ದೇವರಿಗೆ ನೈವೇದ್ಯ ಮಾಡಿ, ಕಳೆದ ವರ್ಷದ ನೋಮು ದಾರ ಅರ್ಪಿಸುತ್ತೇವೆ. ಮತ್ತೆ ಹೊಸ ನೋಮು ದಾರ ಕೈಗೆ ಕಟ್ಟಿಕೊಳ್ಳುತ್ತೇವೆ. ಇದು ವರ್ಷಗಳಿಂದ ಹಬ್ಬದಲ್ಲಿ ಆಚರಿಸಿಕೊಂಡು ಬರಲಾಗುತ್ತಿರುವ ಪದ್ಧತಿ ಎಂದು ಗೃಹಿಣಿ ಪುಷ್ಪಲತಾ ‘ಪ್ರಜಾವಾಣಿ’ಗೆ ತಿಳಿಸಿದರು.

ಹೊಸ ಬಟ್ಟೆಗಳನ್ನು ತೊಟ್ಟ ಮಕ್ಕಳು ಎಂದಿ­ನಂತೆ ಹಗಲು–ರಾತ್ರಿ ಪಟಾಕಿ ಮತ್ತು ಸಿಡಿ­ಮದ್ದುಗಳನ್ನು ಸಿಡಿಸಿದರು. ಜಾಗ್ರತೆ ವಹಿಸುವಂತೆ ಪೋಷಕರು ಎಷ್ಟೇ ತಿಳಿ ಹೇಳಿದರೂ ಮಕ್ಕಳು ಮಾತ್ರ ತಮ್ಮ ಪಾಡಿಗೆ ತಾವು ತಮಗೆ ಇಷ್ಟ­ದಂತೆಯೇ ಪಟಾಕಿಗಳನ್ನು ಸಿಡಿಸಿದರು.

ಪಟಾಕಿ ಹಚ್ಚಲು ಭಯಪಡುತ್ತಿದ್ದ ಪುಟಾಣಿ ಮಕ್ಕಳು ಸುರಸುರ ಕಡ್ಡಿ ಹಚ್ಚುವುದರಲ್ಲಿ ಮತ್ತು ಭೂಚಕ್ರ ತಿರುಗಿಸುವುದರಲ್ಲಿ ಸಂಭ್ರಮಪಟ್ಟರು. ಮನೆ ಆವರಣವಲ್ಲದೇ ರಸ್ತೆಗಳಲ್ಲೂ ಸಹ ಮಕ್ಕಳು ಪಟಾಕಿ ಸಿಡಿಸುತ್ತಿದ್ದ ಕಾರಣ ಪಾದಚಾರಿಗಳು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದುದು ಕಂಡು ಬಂತು. ರಾತ್ರಿ ಸರಿ ಹೊತ್ತಿನವರೆಗೆ ಪಟಾಕಿ ಸದ್ದು ಕೇಳುತ್ತಿತ್ತು.

ದೇವಾಲಯಗಳಲ್ಲಿ ವಿಶೇಷ ಪೂಜೆ
ದೀಪಾವಳಿ ಹಿನ್ನೆಲೆಯಲ್ಲಿ ಗುರುವಾರ ಬಹು­ತೇಕ ದೇವಾಲಯ­ಗಳಲ್ಲಿ ಭಕ್ತರ ದಟ್ಟಣೆ ಕಂಡು ಬಂತು. ವಿವಿಧ ಬಡಾವಣೆಗಳಿಂದ ಮಹಿಳೆ­ಯರು ಹೆಚ್ಚಿನ ಸಂಖ್ಯೆ­ಯಲ್ಲಿ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ನಗರದ ಜಾಲಾರಿ ಗಂಗಾಮಾಂಬ– ಈಶ್ವರ ದೇಗುಲ, ರಾಘವೇಂದ್ರಸ್ವಾಮಿ ಮಠ, ಶಿರಡಿ ಸಾಯಿ­ಬಾಬಾ ಮಂದಿರದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು.

ನಮಗೆ ಪಾಲಿಗೆ ಗುರುವಾರ ಶುಭ ದಿನ. ಈ ದಿನದಂದು ದೇವರಲ್ಲಿ ಏನೇ ಬೇಡಿಕೆಯಿಟ್ಟರೂ ಅದು ಫಲಿಸುತ್ತದೆ ಎಂಬ ನಂಬಿಕೆಯಿದೆ. ಅದ­ಕ್ಕಾ­ಗಿಯೇ ಬೆಳಿಗ್ಗೆಯೇ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಲೆಂದೇ ಗಂಗಮ್ಮಗುಡಿ ರಸ್ತೆಯ ಜಾಲಾರಿ ಗಂಗಾಮಾಂಭ ದೇವಾಲಯಕ್ಕೆ ಕುಟುಂಬ ಸದಸ್ಯರೊಂದಿಗೆ ಬಂದಿದ್ದೇನೆ ಎಂದು ಗೃಹಿಣಿ ನಾಗಲಕ್ಷ್ಮಿ ತಿಳಿಸಿದರು.

ಮನೆಯಲ್ಲಿ ಪ್ರತಿ ದಿನವೂ ಪೂಜೆ ಮಾಡು­ತ್ತೇವೆ. ಆದರೆ ಹಬ್ಬದ ದಿನದಂದು ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿದಾಗಲೇ ಮನಸ್ಸಿಗೆ ಸಮಾ­ಧಾನ. ಹಬ್ಬದ ದಿನದಂದು ದೇವರ ಕೃಪೆಗೆ ಪಾತ್ರ­ರಾದರೆ, ಜೀವನ ಪೂರ್ತಿ ಒಳ್ಳೆಯ­ದಾಗು­ತ್ತದೆಯೆಂದು ಹಿರಿಯರು ಹೇಳುತ್ತಾರೆ. ಅದನ್ನೆ ಪಾಲಿಸುತ್ತಿದ್ದೇನೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT