ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಅಧಿವೇಶನಕ್ಕೆ ₹10.09 ಕೋಟಿ ವೆಚ್ಚ

Last Updated 19 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಬೆಳಗಾವಿ: ಕಳೆದ ಡಿಸೆಂಬರ್‌ನಲ್ಲಿ ಇಲ್ಲಿಯ ಸುವರ್ಣಸೌಧದಲ್ಲಿ ನಡೆದ ವಿಧಾನ ಮಂಡಲದ ಚಳಿಗಾಲದ ಅಧಿವೇಶನಕ್ಕಾಗಿ ರಾಜ್ಯ ಸರ್ಕಾರ ₹ 10.09 ಕೋಟಿ ವ್ಯಯಿಸಿದೆ. 2013ರ ಅಧಿವೇಶನಕ್ಕೆ ಮಾಡಿದ್ದ ವೆಚ್ಚಕ್ಕಿಂತ ₹ 4.31 ಕೋಟಿ ಕಡಿಮೆ ಖರ್ಚಾಗಿದೆ. ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್, ‘ಕಳೆದ ವರ್ಷದ ಅಂತ್ಯದಲ್ಲಿ ನಡೆದ ವಿಧಾನಮಂಡಲದ ಅಧಿವೇಶನದಲ್ಲಿ ವಿಧಾನಸಭೆಯ ಕಲಾಪದ ಅವಧಿ 50 ಗಂಟೆ 49 ನಿಮಿಷ ಹಾಗೂ ವಿಧಾನ ಪರಿಷತ್‌ ಕಲಾಪದ ಅವಧಿ 38 ಗಂಟೆ 3 ನಿಮಿಷ’ ಎಂದು ಹೇಳಿದರು.

‘ಒಟ್ಟು 88 ಗಂಟೆ ನಡೆದ ಕಲಾಪದ ಸಮಯ ಮತ್ತು ವೆಚ್ಚಕ್ಕೆ ತಾಳೆ ಹಾಕಿದರೆ ಜನಪ್ರತಿನಿಧಿಗಳು ನಡೆಸಿದ ಚರ್ಚೆಯ ಪ್ರತಿ ಗಂಟೆಗೆ ₹ 11.33 ಲಕ್ಷ ವೆಚ್ಚ ಮಾಡಿದಂತಾಗಿದೆ’ ಎಂದರು. ‘ವಿಧಾನಸಭೆ ಮತ್ತು ವಿಧಾನ ಪರಿಷತ್‌ನ ಸದಸ್ಯರಿಗೆ ಪ್ರಯಾಣ ಭತ್ಯೆ, ದಿನ ಭತ್ಯೆ ಹಾಗೂ ಹೆಚ್ಚುವರಿ ವಾಹನ ಭತ್ಯೆಗಾಗಿ ₹ 1.16 ಕೋಟಿ ವ್ಯಯಿಸಲಾಗಿದೆ. ಸ್ಥಳೀಯ ಶಾಸಕರೂ ಪ್ರಯಾಣ ಭತ್ಯೆ, ದಿನಭತ್ಯೆ ಹಾಗೂ ಹೆಚ್ಚುವರಿ ವಾಹನ ಭತ್ಯೆಯನ್ನು ಪಡೆದಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

‘ಕೆಲವು ಶಾಸಕರು, ಸಚಿವರು ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಿ 10 ದಿನಗಳ ಕಾಲ ಸತತ ಬೆಳಗಾವಿಗೆ ಪ್ರಯಾಣ ಮಾಡಿ ಕಲಾಪದಲ್ಲಿ ಭಾಗವಹಿಸಿದ್ದರಿಂದ ಪ್ರಯಾಣ ಭತ್ಯೆಯ ಪ್ರಮಾಣ ಅಧಿಕವಾಗಿದೆ’ ಎಂದರು. ‘ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಿದ್ದ ಶಾಸಕರಿಗೆ ನಿತ್ಯ ₹ 4 ಸಾವಿರ ಹೆಚ್ಚುವರಿ ವಾಹನ ಭತ್ಯೆ, ಬೆಳಗಾವಿಯಲ್ಲಿ ಇದ್ದವರಿಗೆ ₹ 2500 ಹೆಚ್ಚುವರಿ ವಾಹನ ಭತ್ಯೆ ನೀಡಿದ್ದಲ್ಲದೆ, ಪ್ರತ್ಯೇಕವಾಗಿ ಪ್ರಯಾಣ ಭತ್ಯೆ ನೀಡಲಾಗಿದೆ. ಅಧಿವೇಶನ ಭತ್ಯೆಯಾಗಿ ಪ್ರತಿಯೊಬ್ಬರಿಗೆ ನಿತ್ಯ ₹ 1 ಸಾವಿರ ನೀಡಲಾಗಿದೆ’ ಎಂದು ವಿವರಿಸಿದರು.

ಬಾಲಕೃಷ್ಣ, ಅನಿಲ್‌ ಲಾಡ್‌ಗೆ ಹೆಚ್ಚು:  ‘ವಿಧಾನಸಭೆಯ ಸದಸ್ಯರ ಪೈಕಿ ಅತಿ ಹೆಚ್ಚು ಭತ್ಯೆಯನ್ನು ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ (₹ 67280) ಪಡೆದಿದ್ದಾರೆ. ನಂತರದ ಸ್ಥಾನ ಬಳ್ಳಾರಿ ನಗರ ಕ್ಷೇತ್ರದ ಶಾಸಕ ಅನಿಲ್‌ ಲಾಡ್‌ (₹ 67 ಸಾವಿರ) ಅವರದ್ದಾಗಿದೆ. ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ (₹ 26 ಸಾವಿರ ) ಅತಿ ಕಡಿಮೆ ಭತ್ಯೆ ಪಡೆದಿದ್ದಾರೆ.

ವಿಧಾನ ಪರಿಷತ್ ಸದಸ್ಯರಲ್ಲಿ ಮೈಸೂರಿನ ಧರ್ಮಸೇನ ಅವರು ಅತಿ ಹೆಚ್ಚು (₹ 39 ಸಾವಿರ) ಭತ್ಯೆ ಪಡೆದಿದ್ದು, ದಯಾನಂದ (₹ 6 ಸಾವಿರ) ಅತಿ ಕಡಿಮೆ ಭತ್ಯೆ ಪಡೆದಿದ್ದಾರೆ. 10 ದಿನಗಳ ಕಾಲ ನಡೆದ ಚಳಿಗಾಲದ ಅಧಿವೇಶನದ ಕಲಾಪಕ್ಕಾಗಿ ಸಾರ್ವಜನಿಕರ ತೆರಿಗೆ ಹಣವು ಅಧಿಕಾರಿಗಳು, ಶಾಸಕರು, ಸಚಿವರ ಯೋಗಕ್ಷೇಮಕ್ಕೆ ಬಳಕೆ ಯಾಗಿದೆ. ರಾಜ್ಯದ ಅಭಿವೃದ್ಧಿ ಬಗ್ಗೆ ಯಾವುದೇ ಮಹತ್ವದ ಚರ್ಚೆಯಾಗದೇ ಇರುವುದು ವಿಷಾದನಿಯ ಎಂದು ದೂರಿದರು. ಸಮಾಜ ಸೇವಕ ಚನ್ನಪ್ಪ ಅಥಣಿ, ರೈತ ಗುರುಪಾದ ಕುಲಕರ್ಣಿ ಹಾಜರಿದ್ದರು.
*
₹2 ಕೋಟಿ ಸಚಿವಾಲಯದಿಂದ ಮಾಡಿದ ವೆಚ್ಚ
₹1  ಕೋಟಿ ಶಾಸಕರ ಪ್ರಯಾಣ, ದಿನ ಭತ್ಯೆ ,ವಾಹನ ವೆಚ್ಚ
₹90 ಲಕ್ಷ ಅಧಿಕಾರಿಗಳು, ನೌಕರರ  ಭತ್ಯೆ, ಗೌರವಧನ ವೆಚ್ಚ
₹ 7  ಲಕ್ಷ ಸಚಿವರ ಪ್ರಯಾಣ ಭತ್ಯೆ, ದಿನ ಭತ್ಯೆ
*
ಲೋಕೋಪಯೋಗಿ ಇಲಾಖೆ ಮಾಡಿದ ವೆಚ್ಚ
*ಸುವರ್ಣಸೌಧ ಕಟ್ಟಡ ಹಾಗೂ ಗೋಪುರಗಳ ಪಾಚಿ ತೊಳೆಯಲು ₹ 7 ಲಕ್ಷ
*ರೈತರು, ಸಾರ್ವಜನಿಕರ ಪ್ರತಿಭಟನೆಗಾಗಿ ಶಾಮಿಯಾನಾ ಹಾಗೂ ಊಟಕ್ಕಾಗಿ ₹ 70 ಲಕ್ಷ
*ಸಿವಿಲ್ ವಿದ್ಯುತ್ ಕಾಮಗಾರಿಗೆ  ₹ 62.32 ಲಕ್ಷ
*ಗಣ್ಯರು, ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ಮಧ್ಯಾಹ್ನದ ಊಟಕ್ಕೆ ₹ 40 ಲಕ್ಷ
*ಅಧಿವೇಶನಕ್ಕೆ ಅಗತ್ಯ ಸಾಮಾಗ್ರಿ ₹ 12.50 ಲಕ್ಷ (ವಿವರ ಇಲ್ಲ)
*ಕುಡಿಯುವ ನೀರಿಗಾಗಿ ₹ 7 ಲಕ್ಷ
*ಚಹಾ, ತಂಪು ಪಾನೀಯ, ಕುರುಕಲು ತಿಂಡಿಗೆ ₹ 2.50 ಲಕ್ಷ
*ತಾತ್ಕಾಲಿಕ ಶೌ ಚಾಲಯಕ್ಕೆ ₹ 4 ಲಕ್ಷ
*ಸೌಧದ ಒಳಗೆ, ಹೊರಗೆ ನಾಮಫಲಕಕ್ಕಾಗಿ ₹ 5 ಲಕ್ಷ
*ಪುಷ್ಪಾಲಂಕಾರಕ್ಕೆ ₹ 7.50 ಲಕ್ಷ
*ಊಟದ ವಿಭಾಗ ಇಬ್ಭಾಗಕ್ಕೆ ಬಳಸಿದ ಶಾಮಿಯಾನಾಕ್ಕೆ ₹ 15 ಲಕ್ಷ
*
ಜಿಲ್ಲಾಡಳಿತ ಮಾಡಿದ ವೆಚ್ಚ
*349 ವಾಹನಗಳ ಬಾಡಿಗೆ ಹಾಗೂ ಇಂಧನಕ್ಕೆ  ₹ 78.70 ಲಕ್ಷ
*ಶಾಸಕರ, ಅಧಿಕಾರಿಗಳ ಊಟ ಮತ್ತು ವಸತಿಗೆ ₹ 2.76 ಕೋಟಿ
*ಪೊಲೀಸ್ ಸಿಬ್ಬಂದಿ ಊಟಕ್ಕೆ ₹ 75 ಲಕ್ಷ
*ಹಿರಿಯ ಪೊಲೀಸ್ ಅಧಿಕಾರಿಗಳು, ಮಾರ್ಷಲ್, ಭದ್ರತಾ ಸಿಬ್ಬಂದಿಯ ವಸತಿ ಮತ್ತು ಉಪಾಹಾರಕ್ಕೆ ₹ 25.19 ಲಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT