ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಗಾರರ ರಕ್ಷಣೆಗೆ ಧಾವಿಸಿ

Last Updated 25 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಈರುಳ್ಳಿ, ಟೊಮೆಟೊ, ಆಲೂಗಡ್ಡೆಯಂಥ  ಕೆಲವು ಪ್ರಮುಖ ಬೆಳೆ­ಗಳು ರೈತರ ಭವಿಷ್ಯದ ಜತೆ ಕಣ್ಣಾಮುಚ್ಚಾಲೆ ಆಡುತ್ತಿವೆ. ಪ್ರಕೃತಿ ವೈಪರೀತ್ಯ, ಕಳೆ–ಕೀಟ ಬಾಧೆ, ವಿದ್ಯುತ್‌ ಪೂರೈಕೆಯಲ್ಲಿನ ವ್ಯತ್ಯಯದಂಥ ತೊಡರು­ಗಳನ್ನು ಎದುರಿಸಿ ಬೆಳೆ ತೆಗೆದರೂ ದರ ಏರಿಳಿತದ ತೂಗುಗತ್ತಿ ನೆತ್ತಿಯ ಮೇಲೆ ಇದ್ದೇ  ಇರುತ್ತದೆ. ಈ ಬೆಳೆಗಳಿಗೆ ಯಾವಾಗ ಬೆಲೆ ಏರು­ತ್ತದೊ, ಯಾವಾಗ ಕುಸಿಯುತ್ತದೊ ಹೇಳಲಾಗದು.

ಏರಿಳಿತಕ್ಕೆ ಮಿಂಚಿನ ವೇಗ. ಬಹುಪಾಲು ಸಂದರ್ಭಗಳಲ್ಲಿ ಕಾರಣಗಳೂ ಸ್ಪಷ್ಟವಾಗಿ ಹೊರಗೆ ಬರುವುದಿಲ್ಲ. ರಾಜ್ಯದಲ್ಲಿ ಈರುಳ್ಳಿ ಬೆಳೆಗಾರರಿಗೆ ಈಗ ಅಂತಹುದೇ ಹೊಡೆತ ಬಿದ್ದಿದೆ. ಈರುಳ್ಳಿ ಸಗಟು ದರ ದಿಢೀರನೆ ಕುಸಿದಿದೆ. ಬೆಳೆಗಾರರು ಕಂಗಾಲಾ­ಗಿದ್ದಾರೆ. ದಾವಣಗೆರೆ ಮಾರುಕಟ್ಟೆಯಲ್ಲಿ, ಇರುಳು ಕಳೆದು ಬೆಳಗಾಗುವ­ಷ್ಟರಲ್ಲಿ ಬೆಲೆ ಪಾತಾಳ ಮುಟ್ಟಿದೆ. ಇದರಿಂದ ಕುಪಿತರಾದ ರೈತರು, ಮಾರು­ಕಟ್ಟೆ ಆವರಣದ ಮುಖ್ಯ ರಸ್ತೆಯಲ್ಲಿ ಈರುಳ್ಳಿ ಸುರಿದು ಪ್ರತಿಭಟನೆ ನಡೆಸಿ­ದ್ದಾರೆ.

ಮಂಗಳವಾರ ಕ್ವಿಂಟಲ್‌ಗೆ ರೂ 2,750ರ ವರೆಗೂ ಇದ್ದ ಧಾರಣೆ, ಬುಧವಾರದ ವೇಳೆಗೆ ರೂ 1,000ಕ್ಕೆ ಕುಸಿದರೆ, ಆ ಬೆಳೆಯನ್ನೇ ನೆಚ್ಚಿ ಕೂತ ರೈತರ ಸ್ಥಿತಿ ಏನಾಗಬೇಡ? ಬೆಳೆ ಬಂದರೂ ಅದನ್ನು ಒಳ್ಳೆಯ ಬೆಲೆಗೆ ಮಾರಾಟ ಮಾಡಲಾಗದ ತ್ರಿಶಂಕು ಸ್ಥಿತಿಗೆ ಸಿಲುಕಿದ್ದಾರೆ. ಕಳೆದ ವರ್ಷ ತಕ್ಕಮಟ್ಟಿಗೆ ಬೆಲೆ ಸಿಕ್ಕಿತ್ತು. ಅದರಿಂದ  ಉತ್ತೇಜಿತರಾಗಿ, ದುಬಾರಿ ಖರ್ಚು–ವೆಚ್ಚಗಳನ್ನು ಹೇಗೋ ಸರಿದೂಗಿಸಿ ಈರುಳ್ಳಿ ಬೆಳೆದವರಿಗೆ ದರ ಕುಸಿತ ಆಘಾತ ತಂದಿದೆ.

ಆಹಾರ ವಸ್ತುಗಳ ಬೆಲೆ ಏರಿದರೆ ಅದರ ಲಾಭಾಂಶದಲ್ಲಿ ಬೆಳೆಗಾರರಿಗೆ ದೊರೆಯುವ ಪಾಲು ಕನಿಷ್ಠದಲ್ಲಿ ಕನಿಷ್ಠ. ದರ ಕುಸಿದರೆ ಅದರ ಹೊಡೆತ ಮಾತ್ರ ಸಂಪೂರ್ಣವಾಗಿ ರೈತರನ್ನೇ ತಟ್ಟುತ್ತದೆ. ಸದ್ಯದ ಮಾರುಕಟ್ಟೆ ವ್ಯವಸ್ಥೆಯ ದೊಡ್ಡ ಲೋಪ ಇದು. ಹಾಗಂತ ದರ ಕುಸಿತದ ಪ್ರಯೋಜನ  ಗ್ರಾಹಕರಿಗಾದರೂ ವರ್ಗಾವಣೆಯಾಗುವುದೇ ಎಂದು ನೋಡಿದರೆ ಅದೂ ಇಲ್ಲ. ದರ ಕುಸಿತ ವರದಿಯಾದ ದಿನ ದಾವಣಗೆರೆಯಲ್ಲೇ ಕೆ.ಜಿ. ಈರುಳ್ಳಿ ಬೆಲೆ ರೂ 25ರಿಂದ 30 ಇತ್ತು. ಏರಿಳಿತದ ಕಷ್ಟನಷ್ಟಗಳಿಗೆ ಹೊರತಾಗಿ ಲಾಭ ಮಾಡಿಕೊಳ್ಳುತ್ತಿರುವುದು ಮಧ್ಯವರ್ತಿಗಳು. ಇವರ ಮೇಲೆ ಸರ್ಕಾರಕ್ಕೆ ಯಾವ ನಿಯಂತ್ರಣವೂ ಇಲ್ಲ. ಕೆಲವು ವರ್ತಕರು ಮತ್ತು ಕಾಳಸಂತೆಕೋರರು ದರ ನಿಯಂತ್ರಿಸುವಷ್ಟು ಶಕ್ತಿ ಹೊಂದಿರುವುದು ಸುಳ್ಳಲ್ಲ. ಇವರ ಒಳ­ಹೊಡೆತಗಳನ್ನು ತಡೆಯಲು ಯಾವ  ಸರ್ಕಾರಕ್ಕೂ ಇಲ್ಲಿಯವರೆಗೂ ಸಾಧ್ಯ­ವಾಗಿಲ್ಲ.

ಈರುಳ್ಳಿ ಉತ್ಪಾದನೆಯಲ್ಲಿ ರಾಜ್ಯವು ಮಹಾರಾಷ್ಟ್ರದ ನಂತರದ ಎರಡನೇ ಸ್ಥಾನದಲ್ಲಿದೆ. ಆದರೆ ಅಗತ್ಯ ಪ್ರಮಾಣದಲ್ಲಿ ದಾಸ್ತಾನು ಸೌಲಭ್ಯ ಇಲ್ಲ. ಶೀಘ್ರ ಕೊಳೆತು ಹಾಳಾಗುವ ಈರುಳ್ಳಿ ಸಂಗ್ರಹಿಸಿ ಇಡಲು ಶೈತ್ಯಾಗಾರ, ತ್ವರಿತ ಸಾಗಣೆಗೆ ಅಗತ್ಯ ಮೂಲ ಸೌಕರ್ಯ, ಮಾರುಕಟ್ಟೆಗಳಲ್ಲಿ ಪಾರ­ದರ್ಶಕ ಬೆಲೆ ನಿಗದಿ ವ್ಯವಸ್ಥೆ ಕಲ್ಪಿಸಿದರೆ ಬೆಳೆಗಾರರ ಶೋಷಣೆಯನ್ನು  ಸ್ವಲ್ಪ­ಮಟ್ಟಿಗಾದರೂ ನಿವಾರಿಸಬಹುದು. ಬೆಲೆ ಕುಸಿದಾಗ ರೈತರ ರಕ್ಷಣೆಗೆ ಸರ್ಕಾರ ಧಾವಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT