ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ಹೀರುವ ಬೇರು ಹುಳು

Last Updated 2 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬೇರು ಹುಳುಗಳು ಅಡಿಕೆ, ತಾಳೆ, ತೆಂಗು, ಕಬ್ಬು, ಬಾಳೆ, ನೆಲಗಡಲೆ, ಭತ್ತ, ಗೋಧಿ, ಜೋಳ, ಗೆಣಸು, ತೇಗದ ಮರ ಇತ್ಯಾದಿ ಬೆಳೆಗಳ ಮೇಲೆ ದಾಳಿಮಾಡಿ ಅವುಗಳನ್ನು ಸಂಪೂರ್ಣ ನಾಶ ಮಾಡುತ್ತವೆ.

ನೆಲಗಡಲೆ ಬೆಳೆಯ ಪ್ರತಿ ಚದರ ಮೀಟರಿಗೆ ಒಂದು ಬೇರು ಹುಳು 80 ರಿಂದ 100 ಪ್ರತಿಶತ ಬೆಳೆ ಹಾನಿಮಾಡಬಲ್ಲದು. ಜುಲೈನಿಂದ ಸೆಪ್ಟೆಂಬರ್ ತಿಂಗಳಲ್ಲಿ ಇವುಗಳಿಂದಾಗುವ ಹಾನಿಯ ತೀವ್ರತೆ ಹೆಚ್ಚು. ಏಕೆಂದರೆ, 2ನೇ ಮತ್ತು 3ನೇ ಹಂತದ ಬೇರು ಹುಳುಗಳಿಗೆ ಹೆಚ್ಚು ಹೆಚ್ಚು ಆಹಾರ ಬೇಕಾಗುತ್ತದೆ. ಹಾಗಾಗಿ ಎಲ್ಲಾ ರೀತಿಯ ಬೆಳೆಗಳ ಬೇರುಗಳನ್ನು ತಿಂದು ಮುಗಿಸುತ್ತವೆ. ಯಾವುದೇ ಬೆಳೆಗಳ ಒಟ್ಟು ಉತ್ಪಾದನೆಯ ಸರಾಸರಿ ಶೇ 30ಕ್ಕಿಂತಲೂ ಹೆಚ್ಚು ಪ್ರಮಾಣ ನಷ್ಟ ಉಂಟುಮಾಡಬಲ್ಲವು.

ಬೇರು ಹುಳು ಪರಿಚಯ

ನಮ್ಮ ಪರಿಸರದಲ್ಲಿ ಮೂರು ವಿವಿಧ ರೀತಿಯ ಬೇರು ಹುಳುಗಳು ಕಂಡು ಬರುತ್ತವೆ. ಇವು ಬೇರೆ ಬೇರೆ ಋತುಮಾನಗಳಲ್ಲಿ, ಬೇರೆ ಬೇರೆ ಪ್ರದೇಶ ಅಥವಾ ಪರಿಸರದಲ್ಲಿ ಮತ್ತು ಬೇರೆ ಬೇರೆ ಬೆಳೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ನಮ್ಮಲ್ಲಿ ಸಾಮಾನ್ಯವಾಗಿ ಹೊಲೊಟ್ರೆಕಿಯಾ ಸರೇಟಾ ಎಂದು ವೈಜ್ಞಾನಿಕವಾಗಿ ಕರೆಯಲಾಗುವ ಬೇರು ಹುಳು ಮುಂಗಾರಿನ ಮೊದಲ ಮಳೆಯಾದ ತಕ್ಷಣ ಕಂಡು ಬರುತ್ತವೆ. ಹೊರ ಬಂದ ದುಂಬಿಗಳು ಬೇವು, ಹುಣಸೆ, ಬಾರೆ, ಪೇರಲ, ಜಾಲಿ ಇನ್ನಿತರ ಮರಗಳ ಮೇಲೆ ಗುಂಪಾಗಿ ಕಾಣುತ್ತವೆ. ಅದೇ ರಾತ್ರಿ ದುಂಬಿಗಳು ಸಂಗಾತಿಗೆ ಹುಡುಕಾಟ ನಡೆಸುತ್ತವೆ. ಹೆಣ್ಣು ದುಂಬಿ ತನ್ನ ದೇಹದಿಂದ ಸಾಂಗತ್ಯ ಮೋಹಕ ಹಾರ್ಮೋನನ್ನು ಹೊರಸೂಸಿ, ಗಂಡನ್ನು ಆಕರ್ಷಿಸುತ್ತದೆ ಮತ್ತು ಸಂಗಾತಿಯೊಂದಿಗೆ ಸಂಯೋಗ ಹೊಂದಿ ಸಂತಾನಾಭಿವೃದ್ಧಿಯಲ್ಲಿ ತೊಡಗುತ್ತವೆ.

ನಂತರ ಮಣ್ಣನ್ನು 3 ರಿಂದ 5 ಇಂಚು ಆಳ ಕೊರೆದು, ಮಣ್ಣಿನ ಕುಡಿಕೆ ಮಾಡಿ, ಒಂದೊಂದು ಕುಡಿಕೆಯಲ್ಲಿ ಒಂದೊಂದೇ ಮೊಟ್ಟೆ ಇಡುತ್ತದೆ. ಒಂದು ರಾತ್ರಿಗೆ 3 ರಿಂದ 5 ಮೊಟ್ಟೆ ಇಡುತ್ತದೆ. ಎರಡು ವಾರಗಳ ಕಾಲ ಗಂಡು ದುಂಬಿಯ ಜೊತೆ ಬೆರೆತು ನಿರಂತರ ಸಂತಾನಾಭಿವೃದ್ಧಿಯಲ್ಲಿ ತೊಡಗುತ್ತವೆ. ಹೀಗೆ ಪ್ರತಿ ರಾತ್ರಿ ಮಣ್ಣಿನಿಂದ ಹೊರ ಬಂದು ನಸುಕಿನ ಜಾವ ಮತ್ತೆ ಮಣ್ಣಿನಲ್ಲೇ ವಾಸಿಸುತ್ತವೆ.  ಮೊಟ್ಟೆಗಳು 7 ರಿಂದ 10 ದಿನಗಳಲ್ಲಿ ಪಕ್ವವಾಗಿ (ವಾತಾವರಣದ ಉಷ್ಣಾಂಶ ಮತ್ತು ತೇವಾಂಶಗಳಲ್ಲಾಗುವ  ಬದಲಾವಣೆಗಳನ್ನಾಧರಿಸಿ) ಮರಿಯಾಗುತ್ತವೆ.

ಮರಿಹುಳು 4–5 ಸೆಂ.ಮೀ. ಉದ್ದವಿದ್ದು, ಬಿಳಿ ಅಥವಾ ತಿಳಿ ಹಳದಿ ದೇಹ ಮತ್ತು ಕಪ್ಪು ಅಥವಾ ಕೆಂಪು ತಲೆ ಹೊಂದಿರುತ್ತವೆ. ಈ ಹುಳು ಬೆಳೆಯುತ್ತಾ ಸುಮಾರು 7 ರಿಂದ 8 ತಿಂಗಳ ಕಾಲಗಳಲ್ಲಿ 3 ಹಂತಗಳನ್ನು ಮುಗಿಸಿ ತನ್ನ ಪ್ರೌಢಾವಸ್ಥೆಯಿಂದ ಕೋಶಾವಸ್ಥೆಗೆ (ಪ್ಯೂಪಾ) ಹೋಗಲು ಮಣ್ಣಿನಲ್ಲಿ ತೇವಾಂಶವಿರುವ ಜಾಗದಲ್ಲಿ 3 ರಿಂದ 6 ಇಂಚು ಕೊರೆದು ಆಳದಲ್ಲಿ, ಮಣ್ಣಿನ ಕುಡಿಕೆ ಮಾಡಿ ಕೋಶಾವಸ್ಥೆಗೆ ಹೊಗುತ್ತದೆ.

ಕೋಶಾವಸ್ಥೆಯಲ್ಲಿ ಕೀಟಗಳು ನಿಷ್ಕ್ರಿಯವಾಗಿರುತ್ತವೆ ಮತ್ತು ಜೀವವಿರುವ ನಿರ್ಜೀವ ಕೋಶವಾಗಿರುತ್ತದೆ. 3ರಿಂದ 4 ವಾರಗಳ ನಂತರ ಕೋಶಾವಸ್ಥೆಯಿಂದ ವಯಸ್ಕ ದುಂಬಿಯಾಗಿ ಹೊರಬರುತ್ತದೆ. ವಯಸ್ಕ ದುಂಬಿ ಕಂದು, ಕಡುಗೆಂಪು ಅಥವಾ ಕಪ್ಪು ದೇಹ ಮತ್ತು ಉದ್ದನೆಯ ಕಾಲುಗಳು ಚಿಕ್ಕ ಮುಳ್ಳುಗಳನ್ನು ಹೊಂದಿರುತ್ತದೆ ಮತ್ತು ತನ್ನ ಸಂಪೂರ್ಣ ಜೀವನಚಕ್ರ 11ರಿಂದ 12 ತಿಂಗಳುಗಳಲ್ಲಿ (ವಾತಾವರಣದಲ್ಲಾಗುವ ಬದಲಾವಣೆಗಳನ್ನಾಧರಿಸಿ) ಮುಗಿಯುತ್ತದೆ.

ಹಾನಿಯ ಲಕ್ಷಣಗಳು
ಬೇರು ಹುಳುಗಳು ಸಾಮಾನ್ಯವಾಗಿ ಮರಳು ಮಿಶ್ರಿತ ಕೆಂಪು ಮಣ್ಣಿನಲ್ಲಿ ಹೆಚ್ಚಾಗಿ ವಾಸಿಸುತ್ತವೆ, ಮೊಟ್ಟೆಯಿಂದ ಹೊರಬಂದ ಚಿಕ್ಕ ಮರಿಹುಳು (ಗ್ರಬ್ಸ್)ಗಳು ಹಸಿರು ಹುಲ್ಲಿನ ಬೇರು, ತಿಪ್ಪೆಗಳಲ್ಲಿರುವ ಸಾವಯವ ಹ್ಯೂಮಸ್ ಅಥವಾ ಅರೆಕೊಳೆತ ಕೃಷಿ ತ್ಯಾಜ್ಯಗಳನ್ನು ತಿನ್ನುತ್ತವೆ. ನಂತರ ಗಿಡಗಳ ಎಳೆಯ ಅಥವಾ ಮೆದು/ಮೃದುವಾದ ಬೇರುಗಳನ್ನು (ಉದಾ: ಬಾಳೆ, ಕಬ್ಬು, ಗೆಣಸು, ನೆಲಗಡಲೆ ಇತ್ಯಾದಿ) ತಿನ್ನುತ್ತವೆ. 

2ನೇ ಮತ್ತು 3ನೇ ಹಂತದ ಬೇರು ಹುಳುಗಳನ್ನು ಅದರ ಹೊಟ್ಟೆಬಾಕತನಕ್ಕಾಗಿ ‘ತಿನ್ನುವ ಯಂತ್ರ’ ಎಂದು ಕರೆಯುತ್ತಾರೆ. ಈ ಹಂತದಲ್ಲಿ ಬೆಳವಣಿಗೆಗೆ ಹೆಚ್ಚು ಆಹಾರ ಬೇಕಾದ್ದರಿಂದ ಈ ಹುಳುಗಳು ಸಿಕ್ಕ ಎಲ್ಲಾ ಗಿಡ ಮರಗಳ (ಅಡಿಕೆ, ತಾಳೆ, ತೆಂಗು, ಕೋಕೊ, ತೇಗ, ಬೇವು, ಜಾಲಿ ಇತ್ಯಾದಿ) ಎಳೆಯ, ಬಲಿತ ಬೇರುಗಳ ಜೊತೆಗೆ ಕೆಲವಾರು ಜಾತಿಯ ಗಿಡಗಳ ಬುಡವನ್ನು ತಿಂದುಹಾಕುತ್ತವೆ, ಬೇರುಗಳು ಇಲ್ಲವಾದಾಗ ಗಿಡಗಳಿಗೆ ಸರಿಯಾದ ಪೋಷಕಾಂಶ ದೊರೆಯದೆ ಸೊರಗುತ್ತವೆ ಮತ್ತು ಬೇರುಗಳಿಗೆ ಹಾನಿಯಾದ ಗಿಡದ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ, ನಂತರ ಎಲೆಗಳು ಒಣಗಿ ಕೆಳಗೆ ಬೀಳುತ್ತವೆ. ಕಾಲಾಂತರದಲ್ಲಿ ಸಂಪೂರ್ಣ ಗಿಡ ಬಾಡಿ ಹೋಗುತ್ತವೆ. ಇದರಿಂದ ರೈತನಿಗೆ ಅತೀ ಹೆಚ್ಚು ನಷ್ಟವಾಗುತ್ತದೆ.

ಬೇರು ಹುಳುಗಳ ನಿರ್ವಹಣೆ
ಬೇರು ಹುಳುಗಳ ನಿಯಂತ್ರಣ ಅತೀ ಕಷ್ಟಕರ ಎನ್ನಬಹುದು, ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಸ್ವಲ್ಪ ಮಟ್ಟಿಗೆ ನಿರ್ವಹಣೆ ಮಾಡಬಹುದು.

*ಬೇಸಿಗೆಯಲ್ಲಿ ಮಳೆಯಾಗುವ ಮುಂಚೆ ಮತ್ತು ಮಳೆಯಾದ ತಕ್ಷಣ, ಆಳವಾಗಿ ಉಳುಮೆ ಮಾಡಬೇಕು. ಈ ರೀತಿ ಮಾಡುವುದರಿಂದ ಮಣ್ಣಿನಲ್ಲಿ ಹುದುಗಿರುವ ಹುಳುಗಳು, ಕೋಶಾವಸ್ಥೆಯ ಕೀಟಗಳು ಮತ್ತು ಮೊಟ್ಟೆಗಳು ಸಹ ಮೇಲೆ ಬರುತ್ತವೆ, ಇವುಗಳನ್ನು ಕೀಟಭಕ್ಷಕಪಕ್ಷಿಗಳು ಹೆಕ್ಕಿ ತಿನ್ನುತ್ತವೆ ಮತ್ತು ಸೂರ್ಯನ ಬಿಸಿಲಿನ ಶಾಖದಿಂದಲೂ ಹುಳುಗಳು ಸಾಯುತ್ತವೆ. ಉಳುಮೆ ಮಾಡುವಾಗ ಮತ್ತು ಭೂಮಿ ಅಗೆಯುವಾಗ ಮೇಲೆ ಕಾಣುವ ಕೀಟಗಳನ್ನು ಹಿಡಿದು ನಾಶಪಡಿಸುವುದು.

*ಪ್ರಖರ ಬಲ್ಬ್ ಬೆಳಕಿನ ಬಲೆ/ ಲೈಟ್ ಟ್ರಾಫ್: ಪ್ರಥಮ ಮಳೆಯಾದ ತಕ್ಷಣ ಸಂಜೆಯ ಮಬ್ಬುಗತ್ತಲಲ್ಲಿ ಸುಮಾರು 6.30 ರಿಂದ 7.30ರ ಸಮಯದಲ್ಲಿ ಈ ಹುಳುಗಳು ಕೋಶಾವಸ್ಥೆಯಿಂದ ವಯಸ್ಕ ದುಂಬಿಯಾಗಿ ಮಣ್ಣಿನಿಂದ ಹೊರಬರುತ್ತವೆ.
ಈ ಸಮಯದಲ್ಲಿ ರಾತ್ರಿ ವೇಳೆ ಪ್ರಕಾಶಮಾನವಾದ ಬಲ್ಬ್ ಗಳನ್ನು ಹೊಲ, ತೋಟಗಳಲ್ಲಿ ಅಳವಡಿಸಿ ಕೆಳಗೆ ನೀರು ನಿಲ್ಲಿಸಿ (ಮಣ್ಣಿನಿಂದ ಸಣ್ಣ ತೊಟ್ಟಿ ನಿರ್ಮಿಸಿಕೊಳ್ಳಬಹುದು) ನೀರಿಗೆ ಸ್ವಲ್ಪ ಸೋಪಿನ ಪುಡಿ ಅಥವಾ ಶಾಂಪೂ ಅಥವಾ ಸೀಮೆಎಣ್ಣೆ ಅಥವಾ ಕೀಟನಾಶಕ ಹಾಕಿದರೆ ಬೆಳಕಿಗೆ ಆಕರ್ಷಿತವಾಗಿ ಬಂದ ದುಂಬಿಗಳು ನೀರಿಗೆ ಬಿದ್ದು ಸಾಯುತ್ತವೆ.

* ಮುಂಗಾರಿನ ಮೊದಲ ಮಳೆಯಾದ ದಿನದಂದು ಬೇವು, ಹುಣಸೆ, ಬಾರೆ, ಪೇರಲ, ಜಾಲಿ ಮರಗಳ ಸಣ್ಣ ಟೊಂಗೆಗಳನ್ನು ತಂದು ಬದುವಿನ ಗುಂಟ ಹಾಕಬೇಕು ಮತ್ತು ಇವುಗಳಿಗೆ ಆಕರ್ಷಿತವಾಗಿ ಬಂದ ದುಂಬಿಗಳು ಕೀಟನಾಶಕ ಬಳಸಿ ನಾಶಪಡಿಸಬಹುದು ಅಥವಾ ಹಿಡಿದು ಕೊಲ್ಲಬಹುದು.

* ಬಾಧಿತ ಪ್ರದೇಶದಲ್ಲಿ ಬೆಳೆ ರಕ್ಷಣೆಗೆ 24 ತಾಸುಗಳ ಕಾಲ ಜಮೀನಿನಲ್ಲಿ ನೀರು ನಿಲ್ಲಿಸುವುದರಿಂದಲೂ ಈ ಹುಳುಗಳನ್ನು ನಿಯಂತ್ರಿಸಬಹುದು.

* ಬೆಳೆ ಬದಲಾವಣೆ ಮಾಡಿ ಬೇರು ಹುಳು ನಿರ್ವಹಣೆ ಮಾಡಬಹುದು. ಉದಾಹರಣೆಗೆ, ಕಬ್ಬಿನ ನಂತರ ಭತ್ತ ಬೆಳೆಯುವುದು, ನೆಲಗಡಲೆ ನಂತರ ಮುಸುಕಿನ ಜೋಳ ಬೆಳೆಯುವುದು ಇತ್ಯಾದಿ.

* ಪ್ರತಿ ಎಕರೆಗೆ ಮೆಟಾರೈಜಿಯಂ ಅನಿಸೋಪ್ಲಿಯೇ 5 ಕೆ.ಜಿ.ಯನ್ನು 500 ಕೆ.ಜಿ. ತಿಪ್ಪೆ ಗೊಬ್ಬರದಲ್ಲಿ ಮಿಶ್ರಣಮಾಡಿ ಬೆಳೆ ನಾಟಿ ಮಾಡುವ ಸಮಯದಲ್ಲಿ
ಗದ್ದೆ / ಹೊಲಕ್ಕೆ ಹಾಕಬೇಕು. ನಂತರ ಮಣ್ಣಿನಲ್ಲಿ ಸ್ವಲ್ಪ ಮಟ್ಟಿಗೆ ತೇವಾಂಶವಿರುವ ಹಾಗೆ ನೋಡಿಕೊಳ್ಳಬೇಕು.

* ಗೊಣ್ಣೆ ಹುಳುಗಳು ಹಾವಳಿ ತುಂಬಾ ಹೆಚ್ಚಿದ್ದರೆ ಮಾತ್ರ ಕೀಟನಾಶಕ ಬಳಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT