ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳಿತೆರೆಗೆ ಬರಲಿದೆ ಕಥಾನಾಯಕನ ಕಥೆ

Last Updated 26 ನವೆಂಬರ್ 2015, 19:30 IST
ಅಕ್ಷರ ಗಾತ್ರ

‘ಕಥಾನಾಯಕನ ಕಥೆ’– ಹಾಗೆಂದ ಕೂಡಲೇ ಚಿತ್ರರಸಿಕರ ಕಣ್ಣುಗಳಲ್ಲಿ ಮಿನುಗುವ ಬಿಂಬ ರಾಜಕುಮಾರ್ ಅವರದ್ದು. ಕನ್ನಡ ನಾಡಿನ ಸಾಂಸ್ಕೃತಿಕ ರೂಪಕವಾದ ಈ ಬಿಂಬಕ್ಕೆ ಸಿನಿಮಾ ರೂಪು ಕೊಡುವ ಪ್ರಯತ್ನದಲ್ಲಿದ್ದಾರೆ ಮೇಕಪ್‌ ಕೃಷ್ಣ.

ಮೇಕಪ್‌ ಕಲಾವಿದರಾಗಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡ ಕೃಷ್ಣ, ರಾಜಕುಮಾರರ ಕುರಿತು ‘ನಟಸಾರ್ವಭೌಮ’ ಎನ್ನುವ ಕಿರುತೆರೆ ಧಾರಾವಾಹಿ ರೂಪಿಸಿದವರು. ಈಗ ತಮ್ಮ ಅಭಿಮಾನದ ಮುಂದುವರಿದ ಭಾಗವಾಗಿ ರಾಜಕುಮಾರ್ ಅವರ ಬದುಕಿನ ಕಥೆಯನ್ನು ಚಿತ್ರರೂಪಕ್ಕೆ ತರುತ್ತಿದ್ದಾರೆ. ಚಂದ್ರಶೇಖರ ಕಂಬಾರರ ಪುತ್ರ ರಾಜು ಕಂಬಾರ ಚಿತ್ರಕಥೆ ರಚನೆಯಲ್ಲಿ ತೊಡಗಿಕೊಂಡಿದ್ದು, ಜನವರಿ ಅಥವಾ ಫೆಬ್ರುವರಿ ತಿಂಗಳಲ್ಲಿ ‘ಕಥಾನಾಯಕನ ಕಥೆ’ ಸೆಟ್ಟೇರಲಿದೆ.

ರಾಜಕುಮಾರ್ ಹುಟ್ಟಿ ಬೆಳೆದ ಪರಿಸರದಲ್ಲೇ ಸಿನಿಮಾದ ಚಿತ್ರೀಕರಣ ನಡೆಯಲಿದೆ, ಹಿರಿಯ ನಿರ್ಮಾಪಕ ಕೆ.ಸಿ.ಎನ್. ಚಂದ್ರಶೇಖರ್ ಅವರು ಮೇಕಪ್ ಕೃಷ್ಣ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಕಥಾನಾಯಕನ ಕಥೆಯನ್ನು ತೆರೆಗೆ ತರುತ್ತಿರುವ ಮೇಕಪ್ ಕೃಷ್ಣ ಅವರ ಬದುಕಿನ ಕಥೆಯೂ ಸ್ವಾರಸ್ಯಕರವಾಗಿದೆ. ಕೆ.ಎಂ. ಕೃಷ್ಣ ಎನ್ನುವ ಹುಡುಗ ಮೇಕಪ್ ಕೃಷ್ಣ ಆಗಿ ಬೆಳೆದದ್ದು ಒಂದು ಸಾಹಸಗಾಥೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಕುಂಬಳಗೋಡಿಗೆ ಸಮೀಪದ ಕೆ. ಗೊಲ್ಲಹಳ್ಳಿ ಅವರ ಊರು.

ಶಾಲಾ ದಿನಗಳಿಂದಲೇ ಅವರಿಗೆ ಸಿನಿಮಾ ಹುಚ್ಚು. ಹತ್ತನೇ ತರಗತಿ ಫೇಲಾದ ಮಗನನ್ನು ಅಪ್ಪ ಗಳ ಹಿಡಿದುಕೊಂಡು ಊರಲ್ಲೆಲ್ಲ ಅಟ್ಟಾಡಿಸಿಕೊಂಡು ಹೊಡೆದರು. ಈ ಅಪ್ಪನ ಸಹವಾಸವೂ ಊರಿನ ಸಹವಾಸವೂ ಬೇಡವೆಂದು ಮೈಸೂರಿನ ಬಸ್ಸು ಹತ್ತಿದ ಕೃಷ್ಣ ತಲುಪಿದ್ದು ಪ್ರೀಮಿಯರ್ ಸ್ಟುಡಿಯೊ ಪರಿಸರವನ್ನು. ಸ್ಟುಡಿಯೊ ಒಳಗೆ ಸುಲಭಕ್ಕೆ ಪ್ರವೇಶ ದೊರೆತೀತೆ? ಬಾಗಿಲಲ್ಲಿ ನಿಂತು ಹೋಗಿಬರುವವರಿಗೆ ನಮಸ್ಕಾರ ಮಾಡುವುದರಲ್ಲಿ ಎರಡು ದಿನ ಕಳೆಯಿತು. ಕೊನೆಗೆ ಕಾಂಪೌಂಡ್ ಜಿಗಿದು ಒಳಹೋದ ಹುಡುಗನಿಗೆ ಆಶ್ರಯ ಕೊಟ್ಟಿದ್ದು ಸ್ಟುಡಿಯೊದಲ್ಲಿನ ಕ್ಯಾಂಟೀನ್! ಅಲ್ಲಿ ಕಸಮುಸುರೆ ಬಳಿದುಕೊಂಡು ಇದ್ದಾಗಲೇ ಕಲಾ ನಿರ್ದೇಶಕರೊಬ್ಬರ ಸ್ನೇಹವಾಯಿತು.

ಅವರ ನಾಲ್ಕನೇ ಅಸಿಸ್ಟೆಂಟ್ ಆಗಿ ಸೇರಿಕೊಂಡ ಕೃಷ್ಣ, ಮೊದಲು ಕೆಲಸ ಮಾಡಿದ್ದು ಪುಟ್ಟಣ್ಣ ಕಣಗಾಲದ ‘ಧರ್ಮಸೆರೆ’ ಚಿತ್ರಕ್ಕೆ. ಆನಂತರ ನಟ ಸುಂದರ್‌ರಾಜ್ ಪರಿಚಯವಾಗಿ, ಅವರ ಮೂಲಕ ಬೆಂಗಳೂರಿಗೆ ಬಂದರು. ಬಿ.ವಿ. ಕಾರಂತರ ‘ಬೆನಕ’ ರಂಗತಂಡ ಸೇರಿಕೊಂಡರು. ಅಲ್ಲಿ ದೊರೆತದ್ದು ಮೇಕಪ್ ರಾಮಕೃಷ್ಣ ಅವರ ಶಿಷ್ಯತ್ವ. ‘ಬೆನಕ’ ತಂಡದಲ್ಲಿ ಸುಮಾರು ಹತ್ತು ವರ್ಷ ಕೆಲಸ ಮಾಡಿದ ಕೃಷ್ಣ, ಕಾರಂತರ ಜೊತೆ ಸಿನಿಮಾಕ್ಕೂ ದುಡಿದರು. ‘ಗ್ರಹಣ’, ‘ಸಾವಿತ್ರಿ’, ‘ಬಂಗಾರದ ಜಿಂಕೆ’ ಚಿತ್ರಗಳಿಗೆ ಸಹಾಯಕರಾಗಿ ದುಡಿದ ಕೃಷ್ಣ, ಸ್ವತಂತ್ರವಾಗಿ ಮೇಕಪ್ ಕಲಾವಿದರಾಗಿ ಗುರ್ತಿಸಿಕೊಂಡಿದ್ದು ‘ಮೌನಗೀತೆ’ ಸಿನಿಮಾದ ಮೂಲಕ. 

ಸಿನಿಮಾದಲ್ಲಿ ಅವಕಾಶಗಳು ಕುದುರುತ್ತಿರುವಾಗಲೇ ದೂರದರ್ಶನದಲ್ಲಿ ಮುಖ್ಯ ಮೇಕಪ್ ಕಲಾವಿದರಾಗಿ ಸೇರಿಕೊಂಡರು. ಅಲ್ಲಿ ಎರಡು ವರ್ಷ ದುಡಿಯುವಷ್ಟರಲ್ಲಿ ಮತ್ತೆ ಚಿತ್ರರಂಗದ ತುಡಿತ ತೀವ್ರವಾಯಿತು. ಟೀವಿ ಬಿಟ್ಟರು. ಸ್ವಲ್ಪ ಕಾಲ ಜಿ.ವಿ. ಅಯ್ಯರ್ ಅವರ ‘ಕೃಷ್ಣಾವತಾರ’ ಹಿಂದಿ ಧಾರಾವಾಹಿಗೆ ದುಡಿದರು. ಅಲ್ಲಿ ಲಾಭವಿಲ್ಲ ಎಂದುಕೊಂಡು ಮತ್ತೆ ಸಿನಿಮಾ ಕಡೆ ಹೊರಳಿದರು. ‘ಬೆಳ್ಳಿ ಕಾಲುಂಗುರ’, ‘ತಬರನ ಕತೆ’, ‘ಮನೆ’, ‘ಮೂರು ದಾರಿಗಳು’, ‘ನ್ಯಾಯದ ಕಣ್ಣು’, ‘ಮುತ್ತಿನಹಾರ’– ಹೀಗೆ ಅನೇಕ ಸಿನಿಮಾಗಳಿಗೆ ಮೇಕಪ್ ಕಲಾವಿದನಾಗಿ ಕೆಲಸ ಮಾಡಿದರು.

ಮೇಕಪ್ ಕಲಾವಿದರಾಗಿ ಸುಮಾರು 140 ಚಿತ್ರಗಳಿಗೆ ದುಡಿದ ಕೃಷ್ಣ ಅವರಿಗೆ ಹೆಸರು ತಂದುಕೊಟ್ಟಿದ್ದು ಕಿರುತೆರೆಯ ಧಾರಾವಾಹಿ ‘ನಟಸಾರ್ವಭೌಮ’. 52 ವಾರಗಳ (ಕಂತು) ಕಾಲ ರಾಜಕುಮಾರರ ಜೀವನಚರಿತ್ರೆಯನ್ನು ನಿರೂಪಿಸಿದ ಕೀರ್ತಿ ಅವರದು. ಇದಕ್ಕಾಗಿ 36 ತಾಸುಗಳ ಕಾಲ ರಾಜ್ ಸಂದರ್ಶನ ಮಾಡಿದ್ದು ಕೃಷ್ಣ ಅವರ ಜೀವನದ ಅವಿಸ್ಮರಣೀಯ ಕ್ಷಣಗಳು. ಆ ಸವಿನೆನಪುಗಳು ಕೂಡ ‘ಕಥಾನಾಯಕನ ಕಥೆ’ ಚಿತ್ರಕ್ಕೆ ಪ್ರೇರಣೆಯಾಗಿವೆ. ‘ಕಥಾನಾಯಕನ ಕಥೆ’ ಕೃಷ್ಣ ಅವರ ಮಹತ್ವಾಕಾಂಕ್ಷೆಯ ಪ್ರಯತ್ನ. ಇದು ನನ್ನ ಜೀವನದ ಸಾರ್ಥಕತೆಯ ಸಿನಿಮಾ ಎನ್ನುವುದು ಅವರ ಅನಿಸಿಕೆ.

ಮುತ್ತುರಾಜನ ಹುಟ್ಟಿನಿಂದ ಹಿಡಿದು ‘ಬೇಡರ ಕಣ್ಣಪ್ಪ’ ಚಿತ್ರದ ಮೂಲಕ ರಾಜಕುಮಾರ್ ಉದಯದವರೆಗಿನ ಕಥೆ (1930ರಿಂದ 1945ರವರೆಗಿನ ಅವಧಿ) ಸಿನಿಮಾದಲ್ಲಿ ಇರಲಿದೆ. ಈ ಸಿನಿಮಾ ಗೆದ್ದರೆ, ‘ಬೇಡರ ಕಣ್ಣಪ್ಪ’ ಚಿತ್ರದ ನಂತರದ ರಾಜಕುಮಾರರ ಬದುಕನ್ನು ಸಿನಿಮಾಕ್ಕೆ ಅಳವಡಿಸುವ ಉದ್ದೇಶ ಕೃಷ್ಣ ಅವರಿಗಿದೆ. ‘ರಾಜಕುಮಾರ್‌ ಬಗ್ಗೆ ಜನರಿಗೆ ಗೊತ್ತಿಲ್ಲದ ಅನೇಕ ಪ್ರಸಂಗಗಳನ್ನು ಸಿನಿಮಾದಲ್ಲಿ ಅಳವಡಿಸುವ ಪ್ರಯತ್ನ ನಡೆಯುತ್ತಿದೆ. ಸಮಾಜವನ್ನೇ ವಿಶ್ವವಿದ್ಯಾಲಯ ಆಗಿಸಿಕೊಂಡು ರೂಪುಗೊಂಡ ಮೇರು ಕಲಾವಿದನ ಸಾಧನೆಯ ಹಿಂದಿನ ಪ್ರೇರಣೆಗಳನ್ನು ಈ ತಲೆಮಾರಿಗೆ ತಲುಪಿಸುವುದು ನನ್ನ ಉದ್ದೇಶ. ಮುಖ್ಯವಾಗಿ ರಾಜಕುಮಾರರ ಪಿತೃಭಕ್ತಿ ಇಂದಿನವರಿಗೆ ಮಾದರಿಯಾಗಬಲ್ಲದು’ ಎನ್ನುತ್ತಾರೆ ಕೃಷ್ಣ.

ರಾಜಕುಮಾರರ ತಂದೆ ಪುಟ್ಟಸ್ವಾಮಯ್ಯ, ಮಕ್ಕಳಾದ ಮುತ್ತುರಾಜ್, ವರದರಾಜ್, ಶಾರದಮ್ಮ ಅವರ ಪಾತ್ರಗಳು ಸಿನಿಮಾದಲ್ಲಿ ಬರಲಿವೆ. ಇವರುಗಳ ಜೊತೆಗೆ ಗುಬ್ಬಿ ವೀರಣ್ಣ, ಸುಬ್ಬಯ್ಯನಾಯ್ಡು ಅವರ ಪಾತ್ರಗಳೂ ಇರಲಿವೆ. ಈ ಅಪೂರ್ವ ಕಲಾವಿದರ ಪಾತ್ರಗಳಿಗೆ ಜೀವ ತುಂಬುವುದಾದರೂ ಯಾರು? ಪ್ರಸ್ತುತ ಅಂಥ ಕಲಾವಿದರ ತಲಾಷಿನಲ್ಲಿ ಕೃಷ್ಣ ತೊಡಗಿಕೊಂಡಿದ್ದಾರೆ. ರಂಗಭೂಮಿಯಲ್ಲೇನಾದರೂ ಅಂಥ ಪ್ರತಿಭೆಯ ಕಿಡಿಗಳು ಸಿಕ್ಕಾವೆಯೇ ಎಂದು ಕೃಷ್ಣ ಅವರ ಶೋಧ ನಡೆದಿದೆ.

ಅಂದಹಾಗೆ, ‘ಕಥಾನಾಯಕನ ಕಥೆ’ ಎನ್ನುವುದು ‘ವಿಜಯಚಿತ್ರ’ ಸಿನಿಮಾ ಮಾಸಿಕದಲ್ಲಿ ಪ್ರಕಟಗೊಂಡ ರಾಜಕುಮಾರರ ಜೀವನ ಕಥೆ. ಈವರೆಗೆ ರಾಜಕುಮಾರರ ಬಗ್ಗೆ ಸುಮಾರು ಎಪ್ಪತ್ತೈದು ಪುಸ್ತಕಗಳು ಪ್ರಕಟಗೊಂಡಿವೆ. ಆದರೆ, ಅಧಿಕೃತ ಎನ್ನುವ ವಿವರಗಳು ಇರುವುದು ‘ಕಥಾನಾಯಕನ ಕಥೆ’ಯಲ್ಲಿ. ಆ ಶೀರ್ಷಿಕೆಯ ಜೊತೆಗೆ ಕಥೆಯನ್ನೂ ಕಡ ತೆಗೆದುಕೊಂಡಿರುವ ಕೃಷ್ಣ ಅವರು, ‘ನಟಸಾರ್ವಭೌಮ’ ಧಾರಾವಾಹಿ ಸಂದರ್ಭದಲ್ಲಿನ ತಮ್ಮ ಅನುಭವಗಳನ್ನೂ ಚಿತ್ರಕ್ಕೆ ಬಳಸಿಕೊಳ್ಳುತ್ತಿದ್ದಾರೆ.

ರಾಜಕುಮಾರ್ ಇನ್‌ಸ್ಟಿಟ್ಯೂಟ್!
ರಾಜಕುಮಾರ್ ಹೆಸರಿನಲ್ಲಿ ಚಲನಚಿತ್ರ ತರಬೇತಿ ಸಂಸ್ಥೆಯೊಂದನ್ನು ಮೇಕಪ್ ಕೃಷ್ಣ ರೂಪಿಸಿದ್ದಾರೆ. ಸದ್ಯದಲ್ಲೇ ಆರಂಭವಾಗಲಿರುವ ಈ ಸಂಸ್ಥೆ ಕಲಾವಿದರಾಗಲು ಬಯಸುವ ಪ್ರತಿಭೆಗಳನ್ನು ತಿದ್ದಿತೀಡಲಿದೆಯಂತೆ. 6 ತಿಂಗಳ ಕೋರ್ಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT