ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳಿತೊರೆಯಲ್ಲಿ ಹೊಸನೀರು

‘ಸಿನಿಮಾಹಬ್ಬ’ ಮುಗಿದ ನಂತರ ಸಿಹಿಕಹಿ ನೆನಪುಗಳು...
Last Updated 11 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಕನ್ನಡ ಚಿತ್ರರಂಗ ಈಗ ತುರ್ತು ಚಿಕಿತ್ಸಾ ಘಟಕದಲ್ಲಿದೆ!
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಮದುಮಗನಂತೆ ಕಂಗೊಳಿಸುತ್ತಿರುವ ಎಸ್‌.ವಿ. ರಾಜೇಂದ್ರಸಿಂಗ್‌ ಬಾಬು, ಒಂದು ವಾರದ ಹಿಂದಷ್ಟೇ ನಡೆದ ‘ಬೆಂಗಳೂರು ಸಿನಿಮೋತ್ಸವ’ದ ಉದ್ಘಾಟನಾ ಸಮಾರಂಭದಲ್ಲಿ ಆಡಿದ ಮಾತಿದು. ಆದರೆ ಅವರ ಮಾತನ್ನು ಅಣಕಿಸುವಂತೆ, ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಸಿನಿಮಾಗಳು ಸಹೃದಯರ ಗಮನಸೆಳೆದವು, ಚರ್ಚೆಗೊಳಗಾದವು. ಸಿನಿಮಾಹಬ್ಬದಲ್ಲಿ ಪ್ರದರ್ಶನಗೊಂಡ ಚಿತ್ರಗಳ ಹಿನ್ನೆಲೆಯಲ್ಲಿ ಹೇಳುವುದಾದರೆ, ಪ್ರಸ್ತುತ ಕನ್ನಡ ಚಿತ್ರರಂಗದಲ್ಲಿ ಹೊಸನೀರೊಂದು ಹರಿಯುತ್ತಿದೆ. ಸಿನಿಮಾಪ್ರೀತಿಯ ಹೊಸ ತಲೆಮಾರೊಂದು ‘ಕಟ್ಟುವೆವು ನಾವು...’ ಎನ್ನುವ ಉತ್ಸಾಹದಲ್ಲಿದೆ.

ಕೆಲವು ಉದಾಹರಣೆಗಳನ್ನು ನೋಡಿ: ‘ಪ್ರಕೃತಿ’ ಸಿನಿಮಾದ ಪಂಚಾಕ್ಷರಿ, ‘ಉಳಿದವರು ಕಂಡಂತೆ’ ಚಿತ್ರದ ರಕ್ಷಿತ್‌ ಶೆಟ್ಟಿ, ‘ಅಗಸಿ ಪಾರ್ಲರ್‌’ನ ಮಹಾಂತೇಶ್‌ ರಾಮದುರ್ಗ, ‘ಅತ್ತಿಹಣ್ಣು ಮತ್ತು ಕಣಜ’ದ ಪ್ರಕಾಶ್‌ಬಾಬು, ‘ಹಜ್‌’ನ ನಿಖಿಲ್‌ ಮಂಜು ಲಿಂಗಯ್ಯ, ‘ಹರಿವು’ ಚಿತ್ರದ ಮಂಜುನಾಥ್ ಎಸ್‌. ಮಂಸೋರೆ ಹಾಗೂ ‘ಚಿತ್ರಮಂದಿರದಲ್ಲಿ’ ಸಿನಿಮಾದ ವೆಂಕಟಾಚಲ– ಇವರೆಲ್ಲ ಮೊದಲ ಚುಂಬನದಲ್ಲೇ ಸಿಹಿ ಸೂರೆಗೊಂಡ ಸಾಹಸಿಗಳು. ‘ಇಂಗಳೆ ಮಾರ್ಗ’ದ ವಿಶಾಲ್‌ ರಾಜ್‌, ‘ಸಚಿನ್‌ ತೆಂಡೂಲ್ಕರ್‌ ಅಲ್ಲ’ ಸಿನಿಮಾದ ಮೋಹನ್‌ ಹಾಗೂ ‘ಹಗ್ಗದ ಕೊನೆ’ಯ ದಯಾಳ್‌ ಅವರು ತೀರಾ ಹೊಸ ಮುಖಗಳಲ್ಲದೇ ಹೋದರೂ ಪ್ರಯೋಗಶೀಲ ಸಿನಿಮಾಗಳ ಮಟ್ಟಿಗೆ ಅವರು ಹೊಸಬರೇ. ಈ ಹೊಸಬರ ಜೊತೆಗೆ ಹಿರಿತನಕ್ಕೆ ಬಡ್ತಿ ಪಡೆದಿರುವ ಪಿ. ಶೇಷಾದ್ರಿ ಅವರ ‘ಡಿಸೆಂಬರ್‌ 1’ ಹಾಗೂ ಕವಿತಾ ಲಂಕೇಶ್‌ರ ‘ಕರಿಯ ಕಣ್‌ ಬಿಟ್ಟ’ ಚಿತ್ರಗಳನ್ನು ಉಲ್ಲೇಖಿಸಬೇಕು.

ಕಳೆದೆರಡು ವರ್ಷಗಳ ಅವಧಿಯಲ್ಲಿ ಕನ್ನಡ ಚಿತ್ರರಂಗದಲ್ಲಿ ನಡೆದ ಪ್ರಯೋಗಗಳ ಕೆನೆಯಾಗಿ ಮೇಲಿನ ಚಿತ್ರಗಳು ಗಮನಸೆಳೆಯುತ್ತವೆ. ಈ ಚಿತ್ರಗಳ ಪೈಕಿ ‘ಪ್ರಕೃತಿ’ ಹಾಗೂ ‘ಡಿಸೆಂಬರ್‌ 1’ (ಅತ್ಯುತ್ತಮ ಪ್ರಾದೇಶಿಕ ಚಿತ್ರ) ಚಿತ್ರಗಳು ರಾಷ್ಟ್ರಪ್ರಶಸ್ತಿ ಕಣದಲ್ಲೂ ಗುರ್ತಿಸಿಕೊಂಡಿರುವುದು ಗಮನಾರ್ಹ.

ಹೊಸ ಫಸಲಿನ ಹಿನ್ನೆಲೆಯಲ್ಲಿ ಕೆಲವು ಕುತೂಹಲಕಾರಿ ಅಂಶಗಳನ್ನು ಗುರ್ತಿಸಬಹುದಾಗಿದೆ. ಮೊದಲನೆಯದು, ಕನ್ನಡ ಸಾಹಿತ್ಯದೊಂದಿಗಿನ ನಂಟಿನ ನವೀಕರಣದಂತೆ ಕೆಲವು ಚಿತ್ರಗಳನ್ನು ನೋಡಬಹುದು. ‘ಪ್ರಕೃತಿ’ ಚಿತ್ರ ಯು.ಆರ್‌. ಅನಂತಮೂರ್ತಿ ಅವರ ಅದೇ ಹೆಸರಿನ ಪ್ರಸಿದ್ಧ ಕಥೆಯನ್ನು ಆಧರಿಸಿದ್ದು. ‘ಹಗ್ಗದ ಕೊನೆ’ ಪರ್ವತವಾಣಿ ಅವರ ನಾಟಕದ ಚಿತ್ರರೂಪ. ‘ಇಂಗಳೆ ಮಾರ್ಗ’ ಸರಜೂ ಕಾಟ್ಕರ್‌ ಅವರ ‘ದೇವರಾಯ’ ಕಾದಂಬರಿಯನ್ನು ಆಧರಿಸಿದ ಸಿನಿಮಾ. ಇನ್ನು ‘ಕರಿಯ ಕಣ್‌ ಬಿಟ್ಟ’, ‘ಡಿಸೆಂಬರ್‌ 1’ ಹಾಗೂ ‘ಹರಿವು’ ಸಿನಿಮಾಗಳಿಗೆ ಪತ್ರಿಕಾ ವರದಿಗಳು ಪ್ರೇರಣೆಯಾಗಿವೆ.

ಕನ್ನಡದಲ್ಲಿ ಪ್ರಯೋಗಶೀಲ ಸಿನಿಮಾಗಳೆಂದರೆ ತಾಂತ್ರಿಕವಾಗಿ ದುರ್ಬಲವಾದವು ಎನ್ನುವ ಮಾತಿದೆ. ಆದರೆ, ಈ ಮಾತನ್ನು ತಕ್ಕಮಟ್ಟಿಗೆ ಸುಳ್ಳು ಮಾಡಿರುವುದು ಹೊಸಬರ ಅಗ್ಗಳಿಕೆ. ಚಿತ್ರಕಥೆ, ಛಾಯಾಗ್ರಹಣ ಹಾಗೂ ಸಂಕಲನ– ಮೂರು ಕಾರಣದಿಂದಲೂ ‘ಪ್ರಕೃತಿ’ ಗಮನಸೆಳೆಯುತ್ತದೆ. ಚಿತ್ರಿಕೆಗಳನ್ನು ನಿರೂಪಿಸುವಲ್ಲಿ ‘ಅತ್ತಿಹಣ್ಣು’ ಚಿತ್ರದ ಪ್ರಕಾಶ್‌ ಬಾಬು ಗಮನಸೆಳೆಯುತ್ತಾರೆ. ‘ಹಜ್‌’ ಸಿನಿಮಾ ತನ್ನ ಚಿತ್ರಕಥೆ ಹಾಗೂ ನಿರೂಪಣೆಯಲ್ಲಿನ ಸರಳತೆಯಿಂದಾಗಿ ಗಮನಸೆಳೆಯುತ್ತದೆ. ರಕ್ಷಿತ್ ಶೆಟ್ಟಿ ಅವರ ವಿಕ್ಷಿಪ್ತತೆ ‘ಉಳಿದವರು ಕಂಡಂತೆ’ ಚಿತ್ರದಲ್ಲಿ ಎದ್ದುಕಾಣುತ್ತದೆ.

‘ಚಿತ್ರಮಂದಿರದಲ್ಲಿ’ ಸಿನಿಮಾದಲ್ಲಿ ಹೊಸತನದ ತುಡಿತವನ್ನು ಹಾಗೂ ಸ್ವಾತಂತ್ರ್ಯಪೂರ್ವದ ಕಥೆಯನ್ನು ಸಮಕಾಲೀನಗೊಳಿಸಿರುವಲ್ಲಿ ‘ಹಗ್ಗದ ಕೊನೆ’ಯ ಯಶಸ್ಸನ್ನು ಗುರ್ತಿಸಬಹುದು.

‘ಇಂಗಳೆ ಮಾರ್ಗ’, ‘ಅಗಸಿ ಪಾರ್ಲರ್‌’ ಹಾಗೂ ‘ಹರಿವು’ ಬೇರೆಬೇರೆ ಕಾರಣಗಳಿಗಾಗಿ ಗಮನಸೆಳೆಯುತ್ತವೆ. ದೇವರಾಯ ಎನ್ನುವ ದಲಿತ ಚಳವಳಿಯ ಮುಖಂಡನ ಏಳುಬೀಳುಗಳನ್ನು ‘ಇಂಗಳೆಮಾರ್ಗ’ ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿದೆ. ಈ ಹೊತ್ತಿಗೆ ಕೂಡ ಅತ್ಯಂತ ಪ್ರಸ್ತುತ ಎನ್ನಬಹುದಾದ ಕಥೆ, ಆಶಯ ಈ ಚಿತ್ರದ್ದು. ‘ಅಗಸಿ ಪಾರ್ಲರ್‌’ ಚಿತ್ರದಲ್ಲಿ ಕೂಡ ದಲಿತ ಪ್ರಜ್ಞೆ ಅಂತರ್ಜಲದಂತೆ ಕೆಲಸಮಾಡಿದೆ. ಈ ಚಿತ್ರದ ಅಗ್ಗಳಿಕೆ ಇರುವುದು ಜಾಗತೀಕರಣ ಸಂದರ್ಭದ ವ್ಯಾಪಾರಿ ಸ್ಪರ್ಧೆ ಹಾಗೂ ಮಾನವೀಯ ಸಂಬಂಧಗಳನ್ನು ಒಟ್ಟಿಗೆ ಚಿತ್ರಿಸಿರುವಲ್ಲಿ. ಇನ್ನು ಮಂಸೋರೆ ಅವರ ‘ಹರಿವು’ ಜಡವಾಗುತ್ತಿರುವ ಭಾವಕೋಶಗಳನ್ನು ಮಿಡಿಸುವ ಹಂಬಲದ ಪ್ರಯತ್ನ.
ಹೊಸಬರ ಪ್ರಯತ್ನಗಳು ಮಹತ್ವಾಕಾಂಕ್ಷೆಯಿಂದ ಕೂಡಿದ್ದರೂ ಅವು ಸಿನಿಮಾ ವ್ಯಾಕರಣ ಹಾಗೂ ಬಜೆಟ್‌ ಕೊರತೆಯ ನಿಶ್ಶಕ್ತಿಯಿಂದ ಬಳಲುತ್ತಿರುವುದನ್ನೂ ಗಮನಿಸಬೇಕು. ಅನೇಕ ಸಿನಿಮಾಗಳು ತಾಂತ್ರಿಕವಾಗಿ ಇನ್ನಷ್ಟು ಉತ್ತಮವಾಗಬೇಕಿತ್ತು ಎನ್ನಿಸುವ ವೇಳೆಗೇ, ಅವುಗಳ ಬಜೆಟ್‌ ಮಿತಿಯೂ ನೆನಪಾಗುತ್ತದೆ. ತಮ್ಮ ಕನಸುಗಳೊಂದಿಗೆ ರಾಜಿ ಮಾಡಿಕೊಂಡು ಸಿನಿಮಾ ಮಾಡಿದ ಈ ಚಿತ್ರಪ್ರೇಮಿಗಳನ್ನು ಕಾಡುವ ಮತ್ತೊಂದು ಪ್ರಶ್ನೆ– ‘ಬಂಡವಾಳ ವಾಪಸ್‌ ಪಡೆಯುವುದು ಹೇಗೆ?’.

ಪಂಚಾಕ್ಷರಿ, ಮಂಸೋರೆ, ಮಹಾಂತೇಶ್, ನಿಖಿಲ್‌– ಇವರಿಗೆಲ್ಲ ಚಿತ್ರಮಂದಿರಗಳಿಗೆ ದುಬಾರಿ ಬಾಡಿಗೆ ತೆತ್ತು ತಮ್ಮ ಸಿನಿಮಾಗಳನ್ನು ತೆರೆಕಾಣಿಸುವುದು ಸಾಧ್ಯವಿಲ್ಲ. ಇಂಥ ಸಂದರ್ಭದಲ್ಲಿ ಹಾಕಿದ ಬಂಡವಾಳ ವಾಪಸ್ಸಾತಿಗೆ ಪ್ರಶಸ್ತಿ ಹಾಗೂ ಸಬ್ಸಿಡಿಯ ದಾರಿಯನ್ನು ಕಾಯುವುದು ಅವರಿಗೆ ಅನಿವಾರ್ಯ. ಪ್ರಶಸ್ತಿಯ ಜೊತೆಗೆ ದೊರೆಯುವ ಮೊತ್ತ ದೊಡ್ಡದೇನಲ್ಲ. ಅಲ್ಲದೆ ಏಳೆಂಟು ಒಳ್ಳೆಯ ಚಿತ್ರಗಳು ಕಣದಲ್ಲಿರುವಾಗ ಎಲ್ಲ ಚಿತ್ರಗಳಿಗೂ ಪ್ರಶಸ್ತಿ ದೊರಕುವುದು ಸಾಧ್ಯವಿಲ್ಲ... ಇನ್ನು ಸಬ್ಸಿಡಿಯಿಂದ ದೊರೆಯುವ 10 ಲಕ್ಷ ರೂಪಾಯಿ ಕೂಡ ಸಿನಿಮಾದ ಬಂಡವಾಳಕ್ಕೆ ಹೋಲಿಸಿದರೆ ದೊಡ್ಡ ಮೊತ್ತವಲ್ಲ. ಹೀಗಾಗಿ, ಒಳ್ಳೆಯ ಸಿನಿಮಾ ಮಾಡುವುದು ನಷ್ಟದ ಬಾಬತ್ತು ಎನ್ನುವುದು ಅನೇಕ ಸಂದರ್ಭಗಳಲ್ಲಿ ಕಹಿಸತ್ಯವಾಗಿರುತ್ತದೆ.

ಪ್ರಸ್ತುತ ರಾಜ್ಯ ಸರ್ಕಾರ ಪ್ರತಿ ವರ್ಷ ನೂರು ಕನ್ನಡ ಚಿತ್ರಗಳಿಗೆ ತಲಾ ಹತ್ತು ಲಕ್ಷ ರೂಪಾಯಿ ಸಹಾಯಧನ ನೀಡುತ್ತಿದೆ. ಹೀಗೆ ಎಲ್ಲ ಚಿತ್ರಗಳಿಗೂ ಹಣವನ್ನು ಹಂಚುವ ಬದಲು ಗುಣಮಟ್ಟದ ಹತ್ತು ಹದಿನೈದು ಸಿನಿಮಾಗಳಿಗೆ ಹೆಚ್ಚು ಮೊತ್ತವನ್ನು ನೀಡುವಂತಾದರೆ, ಪ್ರಯೋಗಶೀಲ ಸಿನಿಮಾ ಪ್ರಯತ್ನಗಳಿಗೆ ಶಕ್ತಿಮದ್ದಾಗಿ ಪರಿಣಮಿಸಬಹುದು.

ಮತ್ತೆ ಚಿತ್ರೋತ್ಸವದ ಮಾತು. ಆರ್ಥಿಕ ಸಂಕಷ್ಟಗಳ ನಡುವೆಯೂ ಕನ್ನಡ ಚಿತ್ರರಂಗದ ಪ್ರಯೋಗಶೀಲ ಚಿತ್ರಗಳ ಈ ಹೊತ್ತಿನ ಬೆಳೆ ಗಮನಾರ್ಹ ಎನ್ನುವುದು ಕನ್ನಡ ಚಿತ್ರರಂಗದ ನಾಳೆಗಳ ಬಗ್ಗೆ ನಿರೀಕ್ಷೆ ಹುಟ್ಟಿಸುವಂತಿದೆ. ಇಂಥ ಸಂದರ್ಭದಲ್ಲಿ– ‘ಕನ್ನಡ ಚಿತ್ರರಂಗ ತುರ್ತು ಚಿಕಿತ್ಸಾ ಘಟಕದಲ್ಲಿದೆ’ ಎನ್ನುವ ಚಲನಚಿತ್ರ ಅಕಾಡೆಮಿ ಅಧ್ಯಕ್ಷರ ಮಾತನ್ನು ಹೇಗೆ ಅರ್ಥೈಸಿಕೊಳ್ಳುವುದು? ಬಹುಶಃ ಅವರ ಆತಂಕ ಕಮರ್ಷಿಯಲ್‌ ಚಿತ್ರಗಳ ಆರೋಗ್ಯದ ಬಗ್ಗೆ ಇರಬೇಕು. ಅವರ ಕಾಳಜಿಯನ್ನು ಅನುಮಾನಿಸಬೇಕಿಲ್ಲ. ಕೋಟಿ ಕೋಟಿ ರೂಪಾಯಿ ಬಜೆಟ್‌ನ ಚಿತ್ರಗಳು ಪ್ರೇಕ್ಷಕರ ನಿರುತ್ಸಾಹದಿಂದಾಗಿ ಸೋಲುತ್ತಿರುವ ದಿನಗಳಿವು. ಈ ಸೋಲಿನ ಬಗ್ಗೆ ಅನುಕಂಪ ತೋರಬಹುದಾದರೂ, ಅದರ ಹೊಣೆಯನ್ನು ಚಿತ್ರರಂಗದ ಹೆಗಲಿಗೇ ವರ್ಗಾಯಿಸಬೇಕಾಗಿದೆ. ಅಭಿರುಚಿ, ಪ್ರೇಕ್ಷಕರ ಕುರಿತ ಬದ್ಧತೆ, ಸ್ವಂತಿಕೆ, ನೈತಿಕತೆ, ಮಹತ್ವಾಕಾಂಕ್ಷೆ– ಯಾವುದೂ ಇಲ್ಲದೆ, ವ್ಯಾಪಾರೀ ಉದ್ದೇಶಗಳೇ ಮುಖ್ಯವಾದ ಚಿತ್ರಗಳು ಆಸ್ಪತ್ರೆ ಸೇರುವುದು ಸ್ವಯಂಕೃತ ಅಪರಾಧವೇವಲ್ಲದೆ ಬೇರೇನಲ್ಲ. ಅಂಥ ದುರಂತಗಳ ಬಗ್ಗೆ ಸರ್ಕಾರವಾಗಲೀ ಸಹೃದಯರಾಗಲೀ ತಲೆಕೆಡಿಸಿಕೊಳ್ಳಬೇಕೆಂದು ಅಪೇಕ್ಷಿಸುವುದು ಔಚಿತ್ಯಪೂರ್ಣವೂ ಅಲ್ಲ.

ಎಂಟು ಹತ್ತು ಕೋಟಿ ರೂಪಾಯಿ ಬಜೆಟ್‌ನ ‘ಹೊಡಿ ಬಡಿ’ ಚಿತ್ರದ ನಿರ್ಮಾಪಕನಿಗೆ ಹತ್ತು ಲಕ್ಷ ರೂಪಾಯಿ ಸಬ್ಸಿಡಿ ನೀಡುವ ಪ್ರಯತ್ನ ಸಾರ್ವಜನಿಕ ಹಣದ ಪೋಲೆನ್ನುವುದರಲ್ಲಿ ಅನುಮಾನವಿಲ್ಲ. ಕಲಾತ್ಮಕ ಪ್ರಯತ್ನಗಳ ಹಾಗೂ ಈ ನೆಲದ ಅಸ್ಮಿತೆಯನ್ನು ಒಳಗೊಂಡ ಸೃಜನಶೀಲ ಪ್ರಯೋಗಗಳನ್ನಷ್ಟೇ ಬೆಂಬಲಿಸಬೇಕಾದುದು ಸರ್ಕಾರದ ನೈತಿಕ ಜವಾಬ್ದಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT