ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳಿ ಬೆಳಕಿನಲ್ಲಿ ನೆಹರೂ ತಾರಾಲಯ

ಸಂಘ ಸಂಗಡ
Last Updated 24 ನವೆಂಬರ್ 2014, 19:30 IST
ಅಕ್ಷರ ಗಾತ್ರ

ರಾತ್ರಿ ಹೊತ್ತು ಆಕಾಶ ನೋಡುವುದೇ ಒಂದು ಖುಷಿ. ಕಣ್ಣು ಹಾಯಿಸಿದಲ್ಲೆಲ್ಲ ನೀಲಿ ಹೊದಿಕೆ, ಅಲ್ಲಲ್ಲಿ ಕಪ್ಪು ಮೋಡಗಳ ಸಾಲು, ಮೋಡಗಳ ನಡುವೆ ಚಂದಿರನ ಕಣ್ಣಾಮುಚ್ಚಾಲೆ, ಮೋಡ ಚಲಿಸಿ ಆಕಾಶ ತುಸು ನಿಚ್ಚಳವಾಗುತ್ತಿದ್ದಂತೆ ಬಿಚ್ಚಿಕೊಳ್ಳುವ ನಕ್ಷತ್ರ ಲೋಕ...
ಕೇವಲ ಕಣ್ಣಿಗೆ ಬಣ್ಣ ಕಟ್ಟುವ ಲೋಕ ಇದಲ್ಲ, ಜೊತೆಗೆ ಮನಸ್ಸಿಗೂ–ಮಿದುಳಿಗೂ ಕೆಲಸ ಹಚ್ಚುವ ಜಾಣ ಜಗತ್ತು ಖಗೋಳ ವಿಜ್ಞಾನ.

ಸಾವಿರಾರು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಪ್ರಾಧ್ಯಾಪಕರಿಗೆ, ಸಂಶೋಧಕರಿಗೆ ಖಗೋಳ ವಿಜ್ಞಾನದ ಹಸಿವು ಹೆಚ್ಚಿಸುತ್ತ, ಅವರ ಪ್ರಶ್ನೆಗಳಿಗೆ ವೈಜ್ಞಾನಿಕ ಉತ್ತರ ಒದಗಿಸುತ್ತ ಬಂದಿರುವ ಜವಾಹರಲಾಲ್ ನೆಹರೂ ತಾರಾಲಯಕ್ಕೆ ಈಗ 25ರ ಹರೆಯ.
ನವೆಂಬರ್ 18, 1989ರಲ್ಲಿ ಬೃಹತ್ ಬೆಂಗಳೂರು ನಗರ ಪಾಲಿಕೆ (ಅಂದಿನ ಬೆಂಗಳೂರು ನಗರ ಕಾರ್ಪೊರೇಷನ್) ಇದನ್ನು ನಿರ್ಮಿಸಿತು. 1992ರಲ್ಲಿ ತಾರಾಲಯದ ಉಸ್ತುವಾರಿಯನ್ನು ಬೇಸ್‌ ಸಂಸ್ಥೆಗೆ (ಬೆಂಗಳೂರು ಅಸೋಸಿಯೇಷನ್‌ ಫಾರ್‌ ಸೈನ್ಸ್‌ ಎಜುಕೇಷನ್‌) ವಹಿಸಲಾಯಿತು. 

ವಿದ್ಯಾರ್ಥಿಗಳು, ಶಿಕ್ಷಕರು, ಸಂಶೋಧಕರು ಮಾತ್ರವಲ್ಲದೆ ಸಾಮಾನ್ಯ ವಿಜ್ಞಾನಾಸಕ್ತರಿಗೂ ಅರ್ಥವಾಗುವ ಅನೌಪಚಾರಿಕ ವಿಜ್ಞಾನ ಶಿಕ್ಷಣವನ್ನು ಹರಡುವುದು, ಶಾಲೆಯಲ್ಲಿನ ಸಾಂಪ್ರದಾಯಿಕ ಪಾಠಗಳ ನಂತರವೂ ಉಳಿದುಕೊಳ್ಳುವ ಪ್ರಶ್ನೆಗಳನ್ನು ಪ್ರಾಯೋಗಿಕವಾಗಿ ವಿವರಿಸುವುದು ಕೇಂದ್ರದ ಉದ್ದೇಶ.

ಇಲ್ಲಿ ತರಬೇತಿ, ಕಾರ್ಯಾಗಾರ ಹಾಗೂ ಶಿಬಿರಗಳ ಪ್ರಯೋಜನ ಪಡೆದ ಸುಮಾರು 35 ಅಭ್ಯರ್ಥಿಗಳು ದೇಶ–ವಿದೇಶಗಳಲ್ಲಿ ಪಿಎಚ್.ಡಿ. ಮಾಡುತ್ತಿದ್ದಾರೆ. ಅನೇಕರು ರಾಮನ್ ಸಂಶೋಧನಾ ಸಂಸ್ಥೆ, ಭಾರತೀಯ ವಿಜ್ಞಾನ ಸಂಸ್ಥೆ, ವನ್ಯ ಜೀವಿಗಳ ಸಂಶೋಧನಾ ಸಂಸ್ಥೆ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ, ಮಿಚಿಗನ್ ಸ್ಟೇಟ್ ಯೂನಿವರ್ಸಿಟಿ, ಸ್ಟೇಟ್ ಯೂನಿವರ್ಸಿಟಿ ಆಫ್ ನ್ಯೂಯಾರ್ಕ್, ಬಫಲೋ ಯೂನಿವರ್ಸಿಟಿ ಆಫ್ ಫ್ಲಾರಿಡಾ ವಿಶ್ವವಿದ್ಯಾಲಯ ಸೇರಿದಂತೆ ಅನೇಕ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಸೈನ್ಸ್ ಪಾರ್ಕ್
ವೈಜ್ಞಾನಿಕ ತತ್ವಗಳನ್ನು ವಿವರಿಸುವ 25 ಕ್ರಿಯಾಶೀಲ ಮಾದರಿಗಳನ್ನು ಈ ಪಾರ್ಕ್ ಹೊಂದಿದ್ದು, ಪ್ರತಿ ಮಾದರಿಯ ಪಕ್ಕದಲ್ಲಿ ಅದಕ್ಕೆ ಸಂಬಂಧಿಸಿದ ವೈಜ್ಞಾನಿಕ ಪರಿಕಲ್ಪನೆಯ ಬಗ್ಗೆ ಸಂಕ್ಷಿಪ್ತ ಮಾಹಿತಿ ಇದೆ. ಇದರಿಂದ ಮಾದರಿಯನ್ನು ಮುಟ್ಟಿ ನೋಡುವ, ಪರಿಶೀಲಿಸುವ ಜೊತೆಗೆ ಅದರ ವೈಜ್ಞಾನಿಕ ಮಾಹಿತಿಯನ್ನೂ ಪಡೆಯಲು ಸಾಧ್ಯವಾಗುತ್ತದೆ. ಬೆಳ್ಳಿ ಹಬ್ಬದ ನೆನಪಿನಲ್ಲಿ ಈ ವರ್ಷ ಮತ್ತೆರಡು ಮಾದರಿಗಳನ್ನು ಸೇರಿಸಲಾಗಿದೆ.

ಸ್ಕೈ ಥಿಯೇಟರ್‌
ಆಕಾಶವನ್ನು ಹೋಲುವ ಬೃಹತ್ ಪರದೆಯುಳ್ಳ ಸ್ಕೈ ಥಿಯೇಟರ್‌ ಈ ಕೇಂದ್ರದ ಪ್ರಮುಖ ಆಕರ್ಷಣೆ. ಇಲ್ಲಿ ಸುಮಾರು 250 ಪ್ರೇಕ್ಷಕರು ಒಟ್ಟಿಗೆ ಕುಳಿತು ಸ್ವಾರಸ್ಯಕರ ಆಕಾಶ ಲೋಕವನ್ನು ನೋಡಬಹುದು. ನಕ್ಷತ್ರಮಂಡಲದ ರಾಶಿಗಳ ವೈಚಿತ್ರ್ಯಗಳನ್ನು ಹಾಗೂ ನೀಹಾರಿಕೆಗಳ ಚಮತ್ಕಾರವನ್ನು ವೀಕ್ಷಿಸಬಹುದು.

ಇಲ್ಲಿ ‘ನಮ್ಮ ಸೌರವ್ಯೂಹ’ (ಮಧ್ಯಾಹ್ನ 2.30) ಮತ್ತು ಕೆಂಪು ಗ್ರಹ ಮಂಗಳ (ಮಧ್ಯಾಹ್ನ 3.30) ಎಂಬ ಎರಡು ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ (ಪ್ರತಿ ಸೋಮವಾರ ಮತ್ತು ತಿಂಗಳ ಎರಡನೇ ಮಂಗಳವಾರವನ್ನು ಹೊರತುಪಡಿಸಿ).

ಸೌರವ್ಯೂಹ ಚಿತ್ರದಲ್ಲಿ ಸುಮಾರು 25ಕ್ಕೂ ಹೆಚ್ಚು 3ಡಿ ಅನಿಮೇಷನ್‌ಗಳನ್ನು ಬಳಸಿಕೊಳ್ಳಲಾಗಿದೆ. ಇವು ಪ್ರೇಕ್ಷಕರಿಗೆ ಸೌರವ್ಯೂಹದ ಎಲ್ಲ ಸದಸ್ಯರನ್ನು ಪರಿಚಯಿಸುವುದರ ಜೊತೆಗೆ ಬಾಹ್ಯಾಕಾಶದ ಅನುಭವವನ್ನು ಮೂಡಿಸುತ್ತದೆ.

ಮಂಗಳ, ನಿರಂತರವಾಗಿ ಬದಲಾಗುವ ಅದರ ಪ್ರಕಾಶ ಹಾಗೂ ಚಲನೆ, ಮಂಗಳನ ಮೇಲ್ಮೈ ಲಕ್ಷಣಗಳು ಮುಂತಾದ ಸಂಗತಿಯನ್ನು ವಿವರವಾಗಿ ಬಿಚ್ಚಿಡುವ ‘ಕೆಂಪು ಗ್ರಹ’ ಚಿತ್ರ ಇತ್ತೀಚಿನ ಸೇರ್ಪಡೆ.

ಗ್ರಂಥಾಲಯ
ವಿಜ್ಞಾನ ಮತ್ತು ಗಣಿತ ವಿಷಯಗಳಿಗೆ ಸಂಬಂಧಿಸಿದ ವಿಶೇಷ ಮತ್ತು ಅಪರೂಪದ ಪುಸ್ತಕ ಭಂಡಾರ ಹೊಂದಿದೆ ಈ ಕೇಂದ್ರದ ಗ್ರಂಥಾಲಯ. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಜೀವಶಾಸ್ತ್ರ ಮತ್ತು ಖಗೋಳ ಶಾಸ್ತ್ರೀಯ ಪಠ್ಯಪುಸ್ತಕಗಳು ಇಲ್ಲಿವೆ. ನ್ಯೂ ಸೈಂಟಿಸ್ಟ್, ಕರೆಂಟ್ ಸೈನ್ಸ್, ಪ್ಲಾನೆಟರಿ ರಿಪೋರ್ಟ್‌ನಂತಹ ನಿಯತಕಾಲಿಕಗಳ ಒಡನಾಟ ಇಲ್ಲಿ ಲಭ್ಯ.
 
ಪ್ರಯೋಗಾಲಯ
ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪ್ರಯೋಗಾಲಯವನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರೌಢಶಾಲಾ ಮಕ್ಕಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ವಾರಾಂತ್ಯದ ಪ್ರಾಥಮಿಕ ಸಂವಾದ ಕಾರ್ಯಕ್ರಮಗಳಿಗೆ ಉಪಯುಕ್ತವಾಗಿದೆ.

ಪ್ರದರ್ಶನ ಸಭಾಂಗಣ
ಆಕರ್ಷಕವಾದ ಬಣ್ಣಗಳಲ್ಲಿ ಖಗೋಳ ಛಾಯಾಚಿತ್ರಗಳು, ವ್ಯಂಗ್ಯಚಿತ್ರಗಳು, ವರ್ಣಚಿತ್ರಗಳು ಹಾಗೂ 3ಡಿ ಮಾದರಿಗಳನ್ನು ಹೊಂದಿರುವ ಸಭಾಂಗಣ ಈ ಕೇಂದ್ರದ ಇನ್ನೊಂದು ಆಕರ್ಷಣೆ. ಅವುಗಳಿಗೆ ಸಂಬಂಧಿಸಿದ ಮಾಹಿತಿಯೂ ಜೊತೆಯಲ್ಲಿರುವುದರಿಂದ ಪ್ರತಿಯೊಬ್ಬರೂ ಖಗೋಳ ವಿಸ್ಮಯಗಳನ್ನು ಕಣ್ಣಾರೆ ಕಂಡು ಅರ್ಥ ಮಾಡಿಕೊಳ್ಳಬಹುದು. ಐಸ್ ಕ್ಯಾಪ್ ಆವರ್ತಕ ರಚನೆ, ಮಂಗಳನ ಅಕ್ಷಾಂಶ, ಮಂಗಳನ ಮೇಲ್ಮೈ ವೈಶಿಷ್ಟ್ಯಗಳು ಸೇರಿದಂತೆ ಅನೇಕ ಚಿತ್ರ–ಮಾಹಿತಿ ಇಲ್ಲಿದೆ.

ಹಗಲು ಹೊತ್ತಲ್ಲಿ ನಕ್ಷತ್ರ ಕಂಡೆ
ಹಗಲು ಹೊತ್ತಿನಲ್ಲಿ ನಕ್ಷತ್ರಗಳು ಮಿನುಗುವುದನ್ನು ನೋಡಿದೆ. ಪುಸ್ತಕದಲ್ಲಿ ಓದಿದ್ದ ಗ್ರಹಗಳು, ನಕ್ಷತ್ರಗಳು, ಆಕಾಶ ಕಾಯಗಳು ನಿಜವಾಗಿ ಕಣ್ಣ ಮುಂದೆ ಬಂದಾಗ ಏನೋ ಸಂತೋಷ. ಇನ್ನು ಮುಂದೆ ಪಾಠ ಮಾಡುವಾಗ ಇಂಥವುಗಳನ್ನೆಲ್ಲ ಕಣ್ಣ ಮುಂದೆ ತಂದುಕೊಳ್ಳಬಹುದು.
– ಮನೋಜ್ ಕುಮಾರ್, ಜಿಎಚ್ ಪಿ ಎಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸೋಲೂರು, ದೇವನಹಳ್ಳಿ ತಾಲ್ಲೂಕು

ಮಾದರಿ ತಾರಾಲಯ
ಆಗ ದೇಶದ ನಾನಾ ಭಾಗಗಳಲ್ಲಿ ಸಾಕಷ್ಟು ತಾರಾಲಯಗಳಿದ್ದವು. ಅವುಗಳಿಗಿಂತ ವಿಭಿನ್ನವೂ, ವಿಶಿಷ್ಟವೂ ಆದ ತಾರಾಲಯವನ್ನು ರೂಪಿಸುವ ಹೊಣೆ ನನ್ನ ಹೆಗಲೇರಿತ್ತು. ಕೈಗೆ ಸಿಕ್ಕಿದ್ದು ಖಾಲಿ ಕಟ್ಟಡ. ಅದನ್ನು ಸುಸಜ್ಜಿತ ವಿಜ್ಞಾನ ಕೇಂದ್ರವನ್ನಾಗಿ ಮಾಡಬೇಕಾಗಿತ್ತು. ಈ ಬಗ್ಗೆ ನನಗೆ ಹಿಂದಿನ ಅನುಭವವೇನೂ ಇರಲಿಲ್ಲ. ಆದರೆ, ಇದನ್ನು ಮಾದರಿ ತಾರಾಲಯವಾಗಿ ಮಾಡಬೇಕೆನ್ನುವ ತುಡಿತ ಮಾತ್ರ ಇತ್ತು. ಒಂದೊಂದೇ ವಿಭಿನ್ನ ಕಾರ್ಯಕ್ರಮಗಳನ್ನು, ಪ್ರದರ್ಶನಗಳನ್ನು ರಚಿಸುತ್ತ ಬಂದ ಫಲವೇ ಇಂದಿನ ಈ ತಾರಾಲಯ.
ವಿಜ್ಞಾನದ ಎಬಿಸಿಡಿ ಕಲಿಯುತ್ತಿರುವ ಪುಟ್ಟ ಮಕ್ಕಳಿಂದ ಹಿಡಿದು ಸಂಶೋಧನಾ ವಿದ್ಯಾರ್ಥಿಗಳವರೆಗೆ ಎಲ್ಲಾ ವರ್ಗದವರಿಗೂ ಉಪಯುಕ್ತವಾಗುವ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ವಿಜ್ಞಾನವನ್ನು ಜನಪ್ರಿಯಗೊಳಿಸುವ ಈ ಪ್ರಯತ್ನದ ಹಿಂದೆ ಸಾಕಷ್ಟು ಜನರ ಪರಿಶ್ರಮವಿದೆ.
–ಡಾ.ಸಿ.ವಿ.ವಿಶ್ವೇಶ್ವರ, ತಾರಾಲಯದ ಸಂಸ್ಥಾಪಕ ನಿರ್ದೇಶಕ

ಜನಾಕರ್ಷಣೆಯ ವಿಜ್ಞಾನ ಮಾದರಿಗಳು
ಸೈನ್ಸ್ ಪಾರ್ಕ್‌ನಲ್ಲಿ ಅತ್ಯಂತ ವಿಶೇಷವಾದ ವಿಜ್ಞಾನ ಮಾದರಿಗಳಿವೆ. ಕಳೆದ ಹದಿನೈದು ವರ್ಷಗಳಲ್ಲಿ ಸುಮಾರು 300ಕ್ಕೂ ಹೆಚ್ಚು ಪ್ರಾಯೋಗಿಕ ಮಾದರಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇವುಗಳಲ್ಲಿ ಹೆಚ್ಚಿನ ಮಾದರಿಗಳನ್ನು ಬಿಚ್ಚಿ, ಮರುಜೋಡಣೆ ಮಾಡಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇವುಗಳನ್ನು ವಿದ್ಯಾರ್ಥಿಗಳಿಗೆ ತೋರಿಸಲು ಶಾಲೆಗಳಿಗೆ ತೆಗೆದುಕೊಂಡು ಹೋಗಲಾಗುತ್ತದೆ.

ಭಾರತದಲ್ಲೇ ಪ್ರಥಮ ಬಾರಿಗೆ ತಾರಾಲಯವೊಂದು ಸ್ವಂತವಾಗಿ ನಿರ್ಮಿಸಿಕೊಂಡ ಫುಲ್ ಡೋಮ್ ಪ್ರದರ್ಶನ ‘ನಮ್ಮ ಸೌರವ್ಯೂಹ’.
ಕಳೆದ ಎರಡು ದಶಕಗಳಿಂದ ತನ್ನದೇ ಸ್ವಂತ ಪ್ರದರ್ಶನಗಳನ್ನು ನೀಡುತ್ತ ಬಂದಿರುವ ಕೇಂದ್ರ ಪ್ರತಿವರ್ಷ ಸುಮಾರು ಎರಡು ಲಕ್ಷ ಜನರನ್ನು ಆಕರ್ಷಿಸುತ್ತಿದೆ. ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಪ್ರದರ್ಶನಗಳು ಲಭ್ಯ. ಇತ್ತೀಚೆಗೆ ಶ್ರವಣ ದೋಷ ಉಳ್ಳ ಮಕ್ಕಳಿಗಾಗಿ ಅಡಿಬರಹದ ವ್ಯವಸ್ಥೆಯನ್ನೂ ಮಾಡಲಾಗಿದೆ.
–ನಿರ್ದೇಶಕಿ ಡಾ.ಬಿ.ಎಸ್.ಶೈಲಜಾ

ಜೆಎನ್‌ಪಿ ಕ್ಲಬ್
ಹೆಚ್ಚು ಹೆಚ್ಚು ವಿದ್ಯಾರ್ಥಿಗಳು, ಅಧ್ಯಾಪಕರು, ಸಂಶೋಧಕರನ್ನು ಆಕರ್ಷಿಸುವ ಉದ್ದೇಶದಿಂದ 2009ರಲ್ಲಿ ಜೆಎನ್‌ಪಿ ಕ್ಲಬ್ ಸ್ಥಾಪಿಸಲಾಗಿದೆ. 1421 ಸದಸ್ಯರು ಕ್ಲಬ್‌ನ ಸದಸ್ಯತ್ವ ಪಡೆದಿದ್ದಾರೆ. ಅಂತರರಾಷ್ಟ್ರೀಯ ಸದಸ್ಯರ ಸಂಖ್ಯೆ ಈ ವರ್ಷ 76ಕ್ಕೆ ಏರಿದೆ. ಶಾಲೆ, ಕಾಲೇಜು, ಸಂಸ್ಥೆಗಳು ವಾರ್ಷಿಕ ರೂ. 2000 ಹಾಗೂ ವೈಯಕ್ತಿಕವಾಗಿ ರೂ. 100 ಶುಲ್ಕದಲ್ಲಿ ಸದಸ್ಯತ್ವ ಪಡೆಯಬಹುದು. ಅವರಿಗೆ ಟಿಕೆಟ್ ದರದಲ್ಲಿ ರಿಯಾಯಿತಿ ನೀಡುವ ಜೊತೆಗೆ ತಾರಾಲಯದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮದ ಬಗ್ಗೆ ಮಾಹಿತಿ ಕಳುಹಿಸಲಾಗುವುದು.
–ಜಂಟಿ ನಿರ್ದೇಶಕ ಪ್ರಮೋದ್ ಜಿ. ಗಲಗಲಿ

ಕಾರ್ಯಕ್ರಮಗಳು
*ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಸೀಡ್ (Science Education in Early Development) ಕಾರ್ಯಕ್ರಮ.

*ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಾರಾಂತ್ಯದ ವಿಜ್ಞಾನ ಕಾರ್ಯಕ್ರಮ ‘ಸಾ’ (SOW–Science over weekends)
*ಪದವಿ ವಿದ್ಯಾರ್ಥಿಗಳಿಗಾಗಿ ಸಂಶೋಧನಾ ಶಿಕ್ಷಣ ಕಾರ್ಯಕ್ರಮ ರೀಪ್. (REAP–Research Education Advancement Programme in Physical Sciences)
*ವಿದ್ಯಾರ್ಥಿಗಳಿಗೆ ವಾರಾಂತ್ಯದ ಸಂವಾದ–ಚರ್ಚೆ, ಸಮಾವೇಶಗಳು, ಮೇಳಗಳು, ಕಾರ್ಯಾಗಾರ, ಶಿಬಿರಗಳು
*ಪ್ರತಿ ತಿಂಗಳ ಮೊದಲ ಭಾನುವಾರ ‘ನಿಮ್ಮ ಗ್ರಹಗಳನ್ನು ತಿಳಿಯಿರಿ’, ಮೂರನೇ ಭಾನುವಾರ ವಿಜ್ಞಾನ ಚಲನಚಿತ್ರ ಪ್ರದರ್ಶನ ‘ಸೈನ್ಸ್ ಫಿಲ್ಮ್’
*3ನೇ ತರಗತಿ ಮುಗಿಸಿದ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಏಪ್ರಿಲ್ ಮೊದಲ ವಾರದಲ್ಲಿ ಬೇಸಿಗೆ ಚಟುವಟಿಕೆಗಳು
*ವಿಜ್ಞಾನ ಶಿಕ್ಷಕರಿಗಾಗಿ ವಿವಿಧ ಶೈಕ್ಷಣಿಕ ಶಿಬಿರಗಳು, ತರಬೇತಿ ಕಾರ್ಯಕ್ರಮಗಳು

*ಶುಲ್ಕ: ದೊಡ್ಡವರಿಗೆ ರೂ. 35, ಮಕ್ಕಳಿಗೆ ರೂ. 20
*ಬೆಳ್ಳಿ ಹಬ್ಬದ ಪ್ರಯುಕ್ತ ಡಿ.10ರಿಂದ ಜನವರಿ 11ರವರೆಗೆ ಪ್ರತಿದಿನ ಬೆಳಿಗ್ಗೆ 10.30ಕ್ಕೆ ಕನ್ನಡದಲ್ಲಿ ವಿಜ್ಞಾನ ಪ್ರದರ್ಶನ ನಡೆಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT