ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆವರಿನಿಂದ ರೋಗಪತ್ತೆಗೆ ಸ್ಮಾರ್ಟ್‌ಚಿಪ್‌

Last Updated 26 ಮೇ 2015, 19:30 IST
ಅಕ್ಷರ ಗಾತ್ರ

ಎಲ್ಲ ಕ್ಷೇತ್ರಗಳಂತೆ ವೈದ್ಯಕೀಯ ಕ್ಷೇತ್ರದಲ್ಲೂ ಕ್ರಾಂತಿಕಾರಕ ಸಂಶೋಧನೆ, ಬದಲಾವಣೆ ನಡೆಯತ್ತಿವೆ. ಬದಲಾದ ಜೀವನಶೈಲಿಯಲ್ಲಿ ಅನಾರೋಗ್ಯ ಕಾಡುವ ಮುನ್ನ ಆರೋಗ್ಯ ರಕ್ಷಿಸಿಕೊಳ್ಳುವ ಆತುರ ಇಂದಿನ ತುರ್ತು ಎನಿಸಿದೆ!

ಈ ನಿಟ್ಟಿನಲ್ಲಿ ಅಗಣಿತ ಸ್ಮಾರ್ಟ್‌ಫೋನ್ ಆ್ಯಪ್‌ಗಳು ಹಾಗೂ ಧರಿಸಬಲ್ಲ ಡಿವೈಸ್‌ಗಳ ಮೂಲಕ ತಂತ್ರಜ್ಞಾನ ಕ್ಷೇತ್ರವೂ ಆರೋಗ್ಯದ ಮೇಲೆ ನಿಗಾ ಇಡಲು ಜನರಿಗೆ ನೆರವಾಗುತ್ತಿದೆ. ಅದೇ ಬಗೆಯ ಸಾಧನದ ಪರಿಚಯ ಇಲ್ಲಿದೆ.

‘ಸ್ಮಾರ್ಟ್‌ ಚಿಪ್‌’
ವ್ಯಕ್ತಿಯೊಬ್ಬರ ಆರೋಗ್ಯದ ಬಗ್ಗೆ ಮಾಹಿತಿ ಪಡೆಯಲು ಸ್ಟೆತಸ್ಕೋಪ್‌ನಿಂದ ಹೃದಯ ಬಡಿತ ಮತ್ತು ಪುಪ್ಪುಸದಲ್ಲಿನ ಉಸಿರಾಟದ ಏರಿಳಿತ, ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆ.... ಹೀಗೆ ಹಲವು ಪರೀಕ್ಷೆಗಳ  ಮೊರೆ ಹೋಗಲಾಗುತ್ತದೆ. ಆದರೆ, ವ್ಯಕ್ತಿಯ ಬೆವರನ್ನು ಬಳಸಿಕೊಂಡು ಆತನ ಆರೋಗ್ಯ ಸ್ಥಿತಿಯ ಬಗ್ಗೆ ಮಹತ್ವದ ಮಾಹಿತಿಗಳನ್ನು ನೀಡುವಂತಹ ಅತ್ಯಾಧುನಿಕ ತಂತ್ರಜ್ಞಾನ  ಇದೀಗ ಅಭಿವೃದ್ಧಿಯಾಗುತ್ತಿದೆ. ಇದು ದೇಹದ ಮೇಲೆ ಧರಿಸಬಹುದಾದಂತಹ ಪುಟ್ಟ ಸಾಧನದ ಸ್ವರೂಪದಲ್ಲಿರುತ್ತದೆ!

ಸ್ವಿಟ್ಜರ್‌ಲೆಂಡಿನ ಲೂಸಾನೆಯ  ಇಪಿಎಫ್‌ಎಲ್ ವಿಶ್ವವಿದ್ಯಾಲಯದ ನ್ಯಾನೋ ಎಲೆಕ್ಟ್ರಾನಿಕ್  ಡಿವೈಸ್ ಪ್ರಯೋಗಾಲಯದಲ್ಲಿ (ನ್ಯಾನೋ ಲ್ಯಾಬ್) ಈ ಸಾಧನ ಜೀವತಳೆದಿದೆ.

ಗಾತ್ರದಲ್ಲಿ ಅತ್ಯಂತ ಪುಟ್ಟದಾಗಿರುವ ಈ ಸಾಧನ, ನೋಡಲು ಥೇಟ್‌ ‘ಎಲೆಕ್ಟ್ರಾನಿಕ್ ಸ್ಟ್ಯಾಂಪ್‌’ನಂತೆ ಇದೆ.  ವ್ಯಕ್ತಿ ಇದನ್ನು ತೋಳಿಗೆ ಧರಿಸಿಕೊಂಡರೆ, ಜಾಗಿಂಗ್ ಮಾಡುವಾಗ ಜಿನುಗುವ ಬೆವರನ್ನು ಅಳೆದು–ತೂಗಿ ನೋಡಿ ಆ ವ್ಯಕ್ತಿಯ ದೇಹದಲ್ಲಿನ ನಿರ್ಜಲೀಕರಣ, ಒತ್ತಡ ಅಥವಾ ಸುಸ್ತಿನ ಪ್ರಮಾಣದ ಮಾಹಿತಿ ಒದಗಿಸುತ್ತದೆಯಂತೆ.

‘ಒಬ್ಬ ವ್ಯಕ್ತಿಯ ಬೆವರಿನಲ್ಲಿರುವ ಅಯಾನಿಕ್ (ವಿದ್ಯುದಾವೇಶವುಳ್ಳ ಪರಮಾಣು/ಪರಮಾಣ ಪುಂಜ) ಸಮತೋಲನವು ಆತನ ಆರೋಗ್ಯ ಸ್ಥಿತಿಯ ಬಗ್ಗೆ ಮಹತ್ವದ ಮಾಹಿತಿ  ನೀಡಬಲ್ಲದು’ ಎನ್ನುತ್ತಾರೆ ನ್ಯಾನೋ ಲ್ಯಾಬ್‌  ನಿರ್ದೇಶಕ ಆ್ಯಡ್ರಿಯನ್ ಇಯೊನೆಸ್ಕ್ಯು.

ಹೀಗಿದೆ ಚಿಪ್‌
ಇದು ಸಾಮಾನ್ಯ ಚಿಪ್‌ ಅಲ್ಲ. ಇದರಲ್ಲಿ ಸಾಕಷ್ಟು ಸಂವೇದಕಗಳಿವೆ. ಈ ಸಾಧನವು ಟ್ರಾನ್ಸಿಸ್ಟರ್ಸ್‌ ಆಧಾರಿತವಾಗಿದೆ. ಅವು ತೀರಾ ಚಿಕ್ಕದಾಗಿವೆ. ಅಂದರೆ ಮೈನಸ್‌ 20 ನ್ಯಾನೋಮೀಟರ್‌ಗಳಷ್ಟು ತೆಳುವಾಗಿವೆ (ಅರ್ಥಾತ್‌ ತಲೆಯ ಒಂದು ಕೂದಲಿಗಿಂತ 100ರಿಂದ 1000 ಪಟ್ಟು ಕಡಿಮೆ ತೆಳುವಾಗಿದೆ).

‘ಇದರಿಂದ ಸಂವೇದಕಗಳ ಇಡೀ ಜಾಲವನ್ನು ಒಂದೇ ಚಿಪ್‌ನಲ್ಲಿ ಅಳವಡಿಸುವುದು  ಸಾಧ್ಯವಾಗಿದೆ’ ಎನ್ನುತ್ತಾರೆ ಇಯೊನೆಸ್ಕ್ಯು.
ಅಲ್ಲದೇ, ಈ ಪುಟ್ಟ ಚಿಪ್‌ನಲ್ಲಿ ಮೈಕ್ರೊ ಕೊಳವೆಯೊಂದಿದೆ. ಅದರ ಮೂಲಕ ಸಾಗುವ ಬೆವರನ್ನು ಸಂವೇದಕಗಳ ಸಹಾಯದಿಂದ ವಿಶ್ಲೇಷಣೆಗೆ ಒಳಪಡಿಸಿ, ತರ್ಕಿಸಿ ಮಹತ್ವದ ಮಾಹಿತಿ ನೀಡುತ್ತದೆ. ‘ಈ ಸಾಧನದ ಮೂಲಕ ಕೇವಲ  ನಿರ್ಜಲೀಕರಣ ಮಾತ್ರವಲ್ಲ,  ಬೆವರಿನಲ್ಲಿರುವ ಕ್ಯಾಲ್ಸಿಯಂ, ಸೋಡಿಯಂ ಅಥವಾ ಪೊಟ್ಯಾಷಿಯಂ ಕೂಡ ಪತ್ತೆ ಮಾಡಬಹುದು’ ಅಂತಾರೆ ಇಯೊನೆಸ್ಕ್ಯು.
ಅಂದಹಾಗೆ ಈ ಚಿಪ್‌ ಇನ್ನೂ ಅಭಿವೃದ್ಧಿ ಹಂತದಲ್ಲಿದೆ. ಈ ಸಾಧನದ ಬಗ್ಗೆ ಎಸಿಎಸ್ ನ್ಯಾನೋ ಜರ್ನಲ್‌ನಲ್ಲಿ ವರದಿ ಪ್ರಕಟಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT